ಬೆಂಗಳೂರು : ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಸಾಮಾಜಿಕ ಜಾಲತಾಣ ವಿಭಾಗ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬ ಆರೋಪ ಪಕ್ಷದ ಕಾರ್ಯಕರ್ತರ ವಲಯದಲ್ಲಿಯೇ ಕೇಳಿಬಂದಿತ್ತು. ಇದರ ನಡುವಲ್ಲೇ ಕಾಂಗ್ರೆಸ್ ಹೈಕಮಾಂಡ್ ಕರ್ನಾಟಕ ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣ ವಾರ್‌ರೂಮ್‌ಗೆ ಮಾಜಿ ಐಎಎಸ್ ಅಧಿಕಾರಿ ಶಶಿಕಾಂತ್ ಸೆಂಥಿಲ್ (Sasikanth Senthil) ಅವರನ್ನು ನೇಮಕ ಮಾಡಿದೆ.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿದ್ದ ಶಶಿಕಾಂತ್ ಸೆಂಥಿಲ್ ಅವರು ಐಎಎಸ್ ಹುದ್ದೆಗೆ ರಾಜೀನಾಮೆಯನ್ನು ನೀಡಿದ್ದರು. ಈ ವೇಳೆಯಲ್ಲಿಯೇ ಅವರು ರಾಜಕೀಯಕ್ಕೆ ಎಂಟ್ರಿ ಕೊಡ್ತಾರೆ ಅನ್ನೋ ಮಾತುಗಳು ಕೇಳಿಬಂದಿದ್ದವು. ಆದ್ರೀಗ ಶಶಿಕಾಂತ್ ಸೆಂಥಿಲ್ ಅವರು ಕರ್ನಾಟಕದ ಸಕ್ರೀಯ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಸೊರಗಿ ಹೋಗಿರುವ ಕಾಂಗ್ರೆಸ್‌ನ ಸಾಮಾಜಿಕ ಜಾಲತಾಣದ ಮುಖ್ಯಸ್ಥ ಹುದ್ದೆಗೆ ಇದೀಗ ಹೈಕಮಾಂಡ್ ಮಾಜಿ ಐಎಎಸ್ ಅಧಿಕಾರಿ ಓರ್ವರನ್ನು ತಂದು ಕೂರಿಸಿದೆ. ಅಲ್ಲದೇ ಘಟಕದಲ್ಲಿ ಸುನಿಲ್ ಗುಣಗೋಲು ಉಪ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಪಕ್ಷದ ಹೈಕಮಾಂಡ್ ಆದೇಶದಲ್ಲಿ ತಿಳಿಸಿದೆ.
ರಾಜ್ಯದಲ್ಲಿನ ಬಿಜೆಪಿ ಆಡಳಿತ ವೈಫಲ್ಯವನ್ನು ಜನರಿಗೆ ತಲುಪಿಸುವಲ್ಲಿ ಕಾಂಗ್ರೆಸ್ ಪಕ್ಷ ವಿಫಲವಾಗುತ್ತಿದೆ. ಇದಕ್ಕೆ ಪ್ರಮುಖವಾಗಿ ಕಾರಣವಾಗುತ್ತಿರುವುದು ಸಾಮಾಜಿಕ ಜಾಲತಾಣ ವಿಭಾಗ ಅನ್ನೋ ಅಭಿಪ್ರಾಯ ಸ್ವತಃ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ಆಂತರಿಕ ಸಮೀಕ್ಷೆಯಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ. ಇದೇ ಕಾರಣದಿಂದಲೇ ಹೊಸ ನೇಮಕಾತಿ ನಡೆದಿದೆ ಎಂದು ತಿಳಿದು ಬಂದಿದೆ.
ಬಿಜೆಪಿ ರಾಜ್ಯದಲ್ಲಿ ಬಹಳಷ್ಟು ಜನ ವಿರೋಧಿ ವಿಷಯಗಳನ್ನು ಹೊಂದಿಕೊಂಡಿದ್ದು, ಆದರೆ ಅದನ್ನು ಪರಿಣಾಮಕಾರಿಯಾಗಿ ಜನಸಾಮಾನ್ಯರಿಗೆ ಮುಟ್ಟಿಸುವಲ್ಲಿ ಸಾಮಾಜಿಕ ಜಾಲತಾಣ ಘಟಕ ಸಂಪೂರ್ಣ ವಿಫಲವಾಗಿದೆ ಎಂದು ಬಹುತೇಕ ಕಾರ್ಯಕರ್ತರ ಅಭಿಪ್ರಾಯವಾಗಿದೆ. ಈ ಅಂಶವನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಎಂಟು ತಿಂಗಳಿಗೆ ಪಕ್ಷವನ್ನು ಸದೃಢವಾಗಿ ಜನರ ಬಳಿ ತಲುಪಿಸಲು, ಈ ಹೊಸ ನೇಮಕಾತಿ ನಡೆದಿದೆ ಎಂದು AICC ಮೂಲಗಳನ್ನು ಉಲ್ಲೇಖಿಸಿ ವರದಿಯಾಗಿದೆ.
ಹಲವಾರು ಜಿಲ್ಲೆ ಹಾಗೂ ಪ್ರಧಾನ ಕಾರ್ಯದರ್ಶಿಗಳ ನೇಮಕಾತಿಯಲ್ಲೂ ಬಹಳಷ್ಟು ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಸಾಮಾಜಿಕ ಜಾಲತಾಣವನ್ನು ಬಿಜೆಪಿಯ ವಿರುದ್ಧ ಇನ್ನಷ್ಟು ಸದೃಢಗೊಳಿಸಲು ಈ ನೇಮಕಾತಿ ನಡೆದಿದೆ ಎಂದು ವಿಶ್ಲೇಷಿಸಲಾಗಿದೆ. ಕಾಂಗ್ರೆಸ್ಸಿಗಿಂತ ಎಡ ಹಾಗೂ ಪ್ರಗತಿಪರರ ಸಾಮಾಜಿಕ ಜಾಲತಾಣ ಹೆಚ್ಚು ಪರಿಣಾಮಕಾರಿಯಾಗಿತ್ತು ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಎಡ ಹಾಗೂ ಪ್ರಗತಿಪರರು ಬಿಜೆಪಿಗೆ ಸರಿಯಾದ ಉತ್ತರ ನೀಡಲು ಯಶಸ್ವಿಯಾಗಿದ್ದಾರೆ ಆದರೆ ಕಾಂಗ್ರೆಸ್ ವಿಫಲವಾಗಿದೆ ಎಂದು ವಿಶ್ಲೇಷಕರು ಅಭಿಪ್ರಾಯ ಪಡುತ್ತಾರೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಈ ಹೊಸ ನೇಮಕಾತಿ ಹೈ ಕಮಾಂಡ್ ನಿಂದ ನಡೆದಿದೆ.

ಇದನ್ನೂ ಓದಿ : siddaramaiah : ಅಹಿಂದ ಮತ ಸೆಳೆಯಲು ಕಾಂಗ್ರೆಸ್ ಮಾಸ್ಟರ್ಪ್ಲಾನ್ : ಕೋಲಾರದಿಂದ ಸಿದ್ದರಾಮಯ್ಯ ಕಣಕ್ಕಿಳಿಯುವ ಸಾಧ್ಯತೆ
ಇದನ್ನೂ ಓದಿ : Zameer Ahmed Khan : ಇಡಿ, ಐಟಿ ಬಳಿಕ ಎಸಿಬಿ ವಾರ್ : ಜಮೀರ್ ವಿರುದ್ಧ ದಾಖಲಾದ FIR ನಲ್ಲೇನಿದೆ ಗೊತ್ತಾ ?
EX IAS Officer Sasikanth Senthil appointed as head of KPCC social media war room