ಸಾಲಿಗ್ರಾಮದ ಕೆನರಾ ಬ್ಯಾಂಕ್‌ನಲ್ಲಿ ಸತ್ತ ವ್ಯಕ್ತಿಗೆ ಸಿಗುತ್ತೆ ಜೀವಂತ ವ್ಯಕ್ತಿಯ ಎಫ್‌ಡಿ ಹಣ !

ಕೋಟ : Saligrama Canara Bank Branch : ಇಂದಿನ ಕಾಲದಲ್ಲಿ ಬ್ಯಾಂಕ್‌ಗಳಲ್ಲಿ ಎಫ್‌ಡಿ ಇಟ್ಟ ಹಣ ಖಾತೆದಾರರ ಕೈ ಸೇರುತ್ತೆ ಅನ್ನೋದನ್ನು ಖಚಿತವಾಗಿ ಹೇಳುವುದು ಕಷ್ಟ ಸಾಧ್ಯ. ಯಾಕೆಂದ್ರೆ ಜೀವಂತ ಇರುವ ವ್ಯಕ್ತಿಯ ಹೆಸರಿನಲ್ಲಿದ್ದ ಎಫ್‌ಡಿ ಹಣವನ್ನು ಸತ್ತ ವ್ಯಕ್ತಿಯ ಮನೆಯವರಿಗೆ ನೀಡಿರುವ ಘಟನೆ ಉಡುಪಿ ಜಿಲ್ಲೆಯ ಸಾಲಿಗ್ರಾಮದ ಕೆನರಾ ಬ್ಯಾಂಕ್‌ ಶಾಖೆಯಲ್ಲಿ (Saligrama Canara Bank Branch) ನಡೆದಿದೆ. ಹೌದು, ಉಡುಪಿ ಜಿಲ್ಲೆಯ ಸಾಲಿಗ್ರಾಮದಲ್ಲಿರುವ ಕೆನರಾ ಬ್ಯಾಂಕ್‌ ( ಹಿಂದಿನ ಸಿಂಡಿಕೇಟ್‌ ಬ್ಯಾಂಕ್) ನಲ್ಲಿ ಪಾರಂಪಳ್ಳಿ ಪಡುಕೆರೆಯ ನಿವಾಸಿಯಾಗಿರುವ ಶೀನ ಮರಕಾಲ ಎಂಬವರು 2012 ರಲ್ಲಿ ಇಪ್ಪತ್ತು ಸಾವಿರ ಹಣವನ್ನ ಎಫ್‌ಡಿ ಇಟ್ಟಿದ್ದಾರೆ. ನಂತರ ತಾವು ದುಡಿದ ಹಣ ಕಷ್ಟಕಾಲಕ್ಕೆ ನೆರವಿಗೆ ಬರುತ್ತೆ ಅಂತಾ ನಂಬಿ ವರ್ಷಂಪ್ರತಿ ಎಫ್ ಡಿ ಹಣವನ್ನು ರಿನೀವಲ್‌ ಮಾಡುತ್ತಲೇ ಬಂದಿದ್ದರು. 2022 ರಲ್ಲಿ ಇಟ್ಟಿದ್ದ ಎಫ್‌ಡಿ ಹಣ 2023ರ ಜನವರಿ ತಿಂಗಳಿನಲ್ಲಿ ಮೆಚ್ಯುರಿಟಿ ಯಾಗಿತ್ತು. ಹೀಗಾಗಿ ಮಾರ್ಚ್‌ 2ನೇ ತಾರೀಕು ಶೀನ ಮರಕಾಲ ಅವರು ಬ್ಯಾಂಕಿಗೆ ಹೋಗಿ ಎಸ್‌ಬಿ ಖಾತೆಯಿಂದ 3 ಸಾವಿರ ರೂಪಾಯಿ ಹಣವನ್ನು ನೀಡುವಂತೆ ಕೇಳಿದ್ದಾರೆ. ಆದರೆ ನಿಮ್ಮ ಹೆಸರಲ್ಲಿ ಈಗ ಬ್ಯಾಂಕ್‌ ಖಾತೆಯೇ ಇಲ್ಲ, ನೀವು ಸತ್ತು ಹೋಗಿದ್ದೀರಿ ಎಂದು ಬ್ಯಾಂಕ್‌ ಸಿಬ್ಬಂದಿ ಹೇಳಿದ್ದಾರೆ. ಇದನ್ನು ಕೇಳಿದ ಶೀನ ಮರಕಾಲ ಅವರು ಅರೆಕ್ಷಣ ಶಾಕ್‌ ಆಗಿದ್ದಾರೆ. ನಂತರ ತಾನು ಎಫ್‌ಡಿ ಇರಿಸಿದ ಹಣದ ಬಗ್ಗೆ ವಿಚಾರಿಸಿದಾಗ ಹಣವನ್ನು ಬೇರೆಯೊಬ್ಬರಿಗೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಶೀನ ಮರಕಾಲ ಅವರು ಜೀವಂತವಾಗಿದ್ದಾರೆ. ಆದರೆ ಶೀನ ಮರಕಾಲ ಅವರು ಮೃತಪಟ್ಟಿದ್ದಾರೆ ಎಂದು ತಿಳಿಸಿ, ಅವರ ಹೆಸರಿನಲ್ಲಿದ್ದ ಮರಣ ಪ್ರಮಾಣ ಪತ್ರವನ್ನು ನೀಡಿ ಎಫ್‌ಡಿ ಇಟ್ಟಿದ್ದ 2 ಲಕ್ಷಕ್ಕೂ ಅಧಿಕ ಹಣವನ್ನು ಲಪಟಾಯಿಸಲಾಗಿದೆ. ಅಲ್ಲದೇ ಶೀನ ಮರಕಾಲ ಅವರ ಖಾತೆಯಲ್ಲಿದ್ದ ಹಣವನ್ನೂ ಬ್ಯಾಂಕ್‌ ಸಿಬ್ಬಂದಿ ಮರಣ ಪ್ರಮಾಣ ಪತ್ರ ನೀಡಿದ್ದ ವ್ಯಕ್ತಿಗೆ ನೀಡಿದ್ದಾರೆ. ಜೊತೆಗೆ ಶೀನ ಮರಕಾಲ ಅವರ ಖಾತೆಯನ್ನೇ ಸಂಪೂರ್ಣವಾಗಿ ರದ್ದುಗೊಳಿಸಿದ್ದಾರೆ. ಇದರಿಂದಾಗಿ ಶೀನ ಮರಕಾಲ ಅವರಿಗೆ ಬರುತ್ತಿದ್ದ ವೃದ್ದಾಪ್ಯ ವೇತನ, ಕಿಸಾನ್‌ ಸಮ್ಮಾನ ಯೋಜನೆಯ ಹಣ ಸಂದಾಯವಾಗುತ್ತಿಲ್ಲ ಎಂದು ಶೀನ ಮರಕಾಲ ಅವರ ಪುತ್ರ ಗೋಪಾಲ ಅವರು ಅಳಲು ತೋಡಿಕೊಂಡಿದ್ದಾರೆ. ಅಲ್ಲದೇ ಠೇವಣಿ ಇಟ್ಟಿರುವ ಬಗ್ಗೆ ಯಾವುದೇ ದಾಖಲಾತಿಯನ್ನು ನೀಡದೇ ಇದ್ದರೂ ಕೂಡ ಹಣವನ್ನು ಹೇಗೆ ಕೊಟ್ಟಿದ್ದೀರಿ ಎಂದು ಬ್ಯಾಂಕಿನವರನ್ನು ಪ್ರಶ್ನಿಸಿದ್ದಾರೆ.

ಅಷ್ಟಕ್ಕೂ ಆಗಿದ್ದೇನು ?

ಗಿಳಿಯಾರು ಗ್ರಾಮದ ನಿವಾಸಿಯಾಗಿರುವ ಶೀನ ಮರಕಾಲ ಮೃತಪಟ್ಟಿದ್ದರು. ಹೀಗಾಗಿ ಅವರ ಮಗ ಕೆನರಾ ಬ್ಯಾಂಕ್‌ಗೆ ಬಂದು ತಂದೆಯ ಖಾತೆ ಹಾಗೂ ಇಟ್ಟಿರುವ ಹಣದ ಬಗ್ಗೆ ಮಾಹಿತಿ ಕೇಳಿದ್ದಾರೆ. ಈ ವೇಳೆಯಲ್ಲಿ ನಿರ್ಲಕ್ಷ್ಯ ತೋರಿದ ಬ್ಯಾಂಕ್‌ ಸಿಬ್ಬಂದಿಗಳು ಮರಣ ಪ್ರಮಾಣ ಪತ್ರವನ್ನು ಪಡೆದುಕೊಂಡು, ಜೀವಂತವಾಗಿ ಇರುವ ಪಾರಂಪಳ್ಳಿ ಗ್ರಾಮದ ಶೀನ ಮರಕಾಲ ಅವರ ಖಾತೆಯ ವಿವರ ಹಾಗೂ ಎಫ್‌ಡಿ ಇಟ್ಟಿರುವ ಹಣದ ಮಾಹಿತಿಯನ್ನು ನೀಡಿದ್ದಾರೆ. ಅಲ್ಲದೇ ಕೇವಲ ಮರಣ ಪ್ರಮಾಣ ಪತ್ರವನ್ನು ಇಟ್ಟುಕೊಂಡು ಜೀವಂತ ಇರುವ ಶೀನ ಮರಕಾಲ ಅವರ ಎಫ್‌ಡಿ ಹಾಗೂ ಖಾತೆಯಲ್ಲಿ ಇರಿಸಿರುವ ಹಣ ಸೇರಿದಂತೆ ಒಟ್ಟು 2 ಲಕ್ಷಕ್ಕೂ ಅಧಿಕ ಹಣವನ್ನು ಕೊಟ್ಟಿದ್ದಾರೆ.

ಬ್ಯಾಂಕ್‌ ಸಿಬ್ಬಂದಿಯ ನಿರ್ಲಕ್ಷ್ಯ, ಗ್ರಾಹಕರಿಗೆ ಆತಂಕ !

ಜೀವಂತ ಇರುವ ವ್ಯಕ್ತಿಯ ಹಣವನ್ನು ಸತ್ತ ವ್ಯಕ್ತಿಯ ಮನೆಯವರಿಗೆ ನೀಡುವ ವೇಳೆಯಲ್ಲಿ ಬ್ಯಾಂಕ್‌ ಸಿಬ್ಬಂದಿಗಳು ಸರಳ ನಿಯಮವನ್ನೇ ಉಲ್ಲಂಘಿಸಿದ್ದಾರೆ. ಖಾತೆದಾರರ ಹೆಸರನ್ನಷ್ಟೇ ನೋಡಿ, ವಿಳಾಸವನ್ನೇ ಪರಿಶೀಲಿಸದೇ ಮತ್ತು ಬ್ಯಾಂಕಿನಲ್ಲಿ ಠೇವಣಿ ಇಟ್ಟಿರುವ ದಾಖಲೆ ಪತ್ರಗಳನ್ನೂ ಪರಿಶೀಲಿಸದೇ ಯಾರದೋ ಹಣವನ್ನು ಇನ್ಯಾರಿಗೋ ನೀಡಲಾಗಿದೆ. ಈ ಬಗ್ಗೆ ನ್ಯೂಸ್‌ ನೆಕ್ಸ್ಟ್‌ ಬ್ಯಾಂಕಿನ ಮ್ಯಾನೇಜರ್‌ ಅವರನ್ನು ಸಂಪರ್ಕಿಸಿದಾಗ ತಮ್ಮ ಅಧಿಕಾರಿಗಳ ಕಡೆಯಿಂದ ಪ್ರಮಾದವಾಗಿರುವುದು ನಿಜ. ಈ ಕುರಿತು ಪ್ರಧಾನ ಕಚೇರಿಗೆ ಮೌಖಿಕ ದೂರನ್ನು ಸಲ್ಲಿಸಿದ್ದೇವೆ. ಅಲ್ಲದೇ ಹಣ ಪಡೆದಿರುವ ವ್ಯಕ್ತಿ ಮಾರ್ಚ್‌ ೪ರಂದು ಬೆಳಗ್ಗೆ ೧೦ ಗಂಟೆಗೆ ಪಡೆದ ಎಲ್ಲಾ ಹಣವನ್ನು ಹಿಂದಿರುಗಿಸುವುದಾಗಿ ಒಪ್ಪಿಕೊಂಡಿದ್ದಾರೆ. ಈ ಪ್ರಮಾದಕ್ಕೆ ಕೇವಲ ಮ್ಯಾನೇಜರ್‌ ಮಾತ್ರವಲ್ಲ ಇತರ ಅಧಿಕಾರಿಗಳು ಕೂಡ ಕಾರಣರಾಗಿರುತ್ತಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ : ಕೆಎಸ್‌ಡಿಎಲ್‌ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ

ಇದನ್ನೂ ಓದಿ : ಹತ್ರಾಸ್ ಪ್ರಕರಣ : ಒಬ್ಬನನ್ನು ಅಪರಾಧಿ ಎಂದು ಮೂವರನ್ನು ಬಿಡುಗಡೆ ಮಾಡಿದ ನ್ಯಾಯಾಲಯ

Comments are closed.