Forest fire in Belthangadi: ಬೆಳ್ತಂಗಡಿಯಲ್ಲಿ ಕಾಡ್ಗಿಚ್ಚಿಗೆ ಹೈರಾಣಾದ ಸಿಬ್ಬಂದಿ : ವನ್ಯಜೀವಿಗಳು ಬೆಂಕಿಗಾಹುತಿ

ಬೆಳ್ತಂಗಡಿ: (Forest fire in Belthangadi) ತಾಲೂಕಿನ ಸುತ್ತಮುತ್ತ ಕಳೆದ ಹತ್ತು ದಿನಗಳಿಂದ ನಿರಂತರವಾಗಿ ಕಾಡ್ಗಿಚ್ಚು ಕಾಣಿಸಿಕೊಳ್ಳುತ್ತಿದ್ದು, ಈ ಪ್ರಕರಣ ಜನಸಾಮಾನ್ಯ ಹಾಗೂ ಅರಣ್ಯ ಇಲಾಖೆಯ ನಿದ್ದೆ ಕೆಡಿಸಿದೆ. ಬೆಂಕಿಯ ಕೆನ್ನಾಲಿಗೆಗೆ ಪರಿಸರ ನಾಶವಾಗಿದ್ದು ಸಹಸ್ರಾರು ವನ್ಯಜೀವಿಗಳು ಬಲಿಯಾಗಿದ್ದು, ಕಾಡ್ಗಿಚ್ಚು ನಿಯಂತ್ರಣಕ್ಕೆ ಬಾರದೇ ಸಿಬ್ಬಂದಿಗಳು ಹೈರಾಣಾಗಿದ್ದಾರೆ.

ಕಿಡಿಗೇಡಿಗಳು ಹಚ್ಚಿದ ಒಂದು ಕಿಡಿ ಸಂಪೂರ್ಣ ಕಾಡನ್ನೇ ವ್ಯಾಪಿಸಿ ಅರಣ್ಯ ಪ್ರದೇಶವನ್ನು ಬಲಿ ತೆಗೆದುಕೊಂಡಿದ್ದು, ದಿನದಿಂದ ದಿನಕ್ಕೆ ಬೆಂಕಿ ವ್ಯಾಪಕವಾಗಿ ಹರಡುತ್ತಿದೆ. ಕುದುರೆಮುಖ ರಾಷ್ಟ್ರೀಯ ಉದ್ಯಾನದ ಕಡೆಯಿಂದ ಇಪ್ಪತ್ತು ದಿನಗಳ ಹಿಂದೆ ಆರಂಭವಾದ ಬೆಂಕಿ ಚಾರ್ಮಾಡಿಯ ಆಲೆಖಾನ್‌ ಹೊರಟ್ಟಿ, ಶಿಶಿಲ, ಶಿಬಾಜೆಯ ಅರಣ್ಯ ಪ್ರದೇಶದಲ್ಲಿ ಹರಡಿಕೊಂಡು ನೆರಿಯಾದ ಕಡೆ ಮುಖ ತೋರಿ ರೌದ್ರಾವತಾರ ತಾಳಿದೆ. ಶಿಶಿಲದ ಭಂಡಿಹೊಳೆಯಲ್ಲಿ ಜನವಸತಿ ಪ್ರದೇಶದ ವರೆಗೂ ಆವರಿಸಿದ ಬೆಂಕಿ ಪರಿಸರದಲ್ಲಿ ಭೀತಿಯ ವಾತಾವರಣ ಸೃಷ್ಟಿಸಿತ್ತು.

ಅಗ್ನಿಶಾಮಕ ದಳ, ಅರಣ್ಯ ಇಲಾಖೆ ಸಿಬ್ಬಂದಿ ಬೆಂಕಿ ಪ್ರಕರಣಗಳಿಂದ ಹೈರಾಣಾಗುತ್ತಿದ್ದು, ಒಂದು ಕಡೆ ಬೆಂಕಿಯನ್ನು ಹತೋಟಿಗೆ ತರುವ ಮೊದಲು ಇನ್ನೊಂದು ಕಡೆ ಬೆಂಕಿ ಕಂಡುಬರುತ್ತಿದೆ. ಒಂದು ಕಡೆ ಕಾರ್ಯಾಚರಣೆ ಪೂರ್ಣಗೊಳಿಸಿ ಇನ್ನೊಂದು ಕಡೆ ತೆರಳುವಾಗ ಹೆಚ್ಚಿನ ನಾಶ ಸಂಭವಿಸುತ್ತಿದೆ. ಕಳೆದ ಹದಿನೈದು ದಿನಗಳಿಂದ ಸಿಬ್ಬಂದಿಗಳು ಸತತ ಕಾರ್ಯಾಚರಣೆ ನಡೆಸುತ್ತಿದ್ದು, ಹಲವು ಅಧಿಕಾರಿಗಳು ಆರೋಗ್ಯ ಸಮಸ್ಯೆಗೆ ತುತ್ತಾಗಿದ್ದಾರೆ. ರಜಾದಿನಗಳಲ್ಲೂ ಕಾಡನ್ನು ರಕ್ಷಿಸುವ ಸಲುವಾಗಿ ದುಡಿಯುವ ಅನಿವಾರ್ಯತೆ ಬಂದೊದಗಿದೆ. ಈ ಬೆಂಕಿ ಪ್ರಕರಣಗಳಿಂದ ವನ್ಯಜೀವಿಗಳು ನೆಲೆ ಕಳೆದುಕೊಂಡಿದ್ದು ದಿಕ್ಕಾಪಾಲಾಗಿದ್ದು, ಹಲವು ವನ್ಯಜೀವಿಗಳು ಬಲಿಯಾಗಿವೆ.

ಇದನ್ನೂ ಓದಿ : ಹಿಂದುಳಿದ ವರ್ಗದವರಿಗೆ ಗುಡ್ ನ್ಯೂಸ್: 1.41 ಲಕ್ಷ ಫಲಾನುಭವಿಗಳಿಗೆ ಸಹಾಯಧನ ಬಿಡುಗಡೆ ಮಾಡಿದ ಸಿಎಂ ಬೊಮ್ಮಾಯಿ

ಅರಣ್ಯ ಇಲಾಖೆ ಬಳಿ ಬೆಂಕಿ ನಂದಿಸುವ ಅಗತ್ಯ ಸಲಕರಣೆಗಳ ಕೊರತೆ ಸಿಬ್ಬಂದಿಗಳ ಕೊರತೆ ಸಾಕಷ್ಟಿದೆ. ಅಗ್ನಿಶಾಮಕ ದಳದಲ್ಲಿ ಅಗತ್ಯಕ್ಕೆ ಬೇಕಾದಷ್ಟು ವಾಹನಗಳ ಸಂಖ್ಯೆಯೂ ಇಲ್ಲ. ಸಾರ್ವಜನಿಕರು ಸಹಕರಿಸುವ ಕಾರಣದಿಂದ ಒಂದಷ್ಟು ಸುಲಭವಾಗುತ್ತಿದೆ ಎಂಬ ಮಾತು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ. ಸರಕಾರ ತಕ್ಷಣವೇ ಇದರ ಬಗ್ಗೆ ಗಮನ ಹರಿಸಿ ಅರಣ್ಯ ಪ್ರದೇಶವನ್ನು ಕಾಪಾಡಲು ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ.

Forest fire in Belthangadi: Forest fire in Belthangadi Hirana personnel : Wild animals caught fire

Comments are closed.