ಅನ್ ಲಾಕ್ ನಿಂದ ಸೋಂಕು ಹೆಚ್ಚಳವಾದ್ರೆ ಮತ್ತೆ ಕಠಿಣ ಕ್ರಮ ಜಾರಿ : ಸಚಿವ ಸುಧಾಕರ್

ಬೆಂಗಳೂರು : ರಾಜ್ಯದಲ್ಲಿ 19 ಜಿಲ್ಲೆಗಳಲ್ಲಿ ಸೋಮವಾರದಿಂದ ಅನ್ ಲಾಕ್ ಜಾರಿ ಮಾಡಲಾಗುತ್ತಿದೆ. ಒಂದೊಮ್ಮೆ ಕೊರೊನಾ ಸೋಂಕು ಹೆಚ್ಚಳವಾದ್ರೆ ಸರಕಾರ ಮತ್ತೆ ಕಠಿಣ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಲಿದೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಅವರು ಹೇಳಿದ್ದಾರೆ.

ಬೆಂಗಳೂರಲ್ಲಿ ಮಾದ್ಯಮದವರೊಂದಿಗೆಮಾತನಾಡಿದ ಅವರು, ಅಳೆದು ತೂಗಿ ರಾಜ್ಯದಲ್ಲಿ ಅನ್ ಲಾಕ್ ಆದೇಶ ಜಾರಿ ಮಾಡಲಾಗಿದೆ. ಲಾಕ್ ಡೌನ್ ಜಾರಿಯಿಂದಾಗಿ ರಾಜ್ಯದಲ್ಲಿ ಆರ್ಥಿಕ ನಷ್ಟ ಸಂಭವಿಸಿದೆ. ಹೀಗಾಗಿಯೇ ಹಲವು ವಿನಾಯಿತಿಗಳನ್ನು ನೀಡಲಾಗಿದೆ. ಶೇ.10ಕ್ಕಿಂತ ಹೆಚ್ಚು ಸೋಂಕಿರುವ ಜಿಲ್ಲೆಗಳನ್ನು ಗಂಭಿರವಾಗಿ ಪರಿಗಣಿಸಬೇಕು. ಅಲ್ಲದೇ ಶೇ.5ರಷ್ಟು ಸೋಂಕು ಇರುವ ಜಿಲ್ಲೆಗಳ ಜನರೂ ಕೂಡ ಮೈ ಮರೆಯಬಾರದು. ಹೊರ ಜಿಲ್ಲೆ, ರಾಜ್ಯಗಳಿಂದ ಬರುವವರನ್ನು ಹೆಚ್ಚು ಟೆಸ್ಟ್ ಗೆ ಒಳಪಡಿಸಬೇಕು. ಅಲ್ಲದೇ ಹೆಚ್ಚೆಚ್ಚು ಟೆಸ್ಟ್ ಮಾಡುವ ಮೂಲಕ ಸೋಂಕು ನಿಯಂತ್ರಣಕ್ಕೆ ತರಬಹುದು ಎಂದಿದ್ದಾರೆ.

ಕೊರೊನಾ ಸೋಂಕು ಕಡಿಮೆಯಿರುವ ಜಿಲ್ಲೆಗಳಲ್ಲಿ ಅನ್ ಲಾಕ್ ಪ್ರಕ್ರಿಯೆ ಜಾರಿಯಲ್ಲಿದೆ. ಅನ್ ಲಾಕ್ ನಂತರದಲ್ಲಿ ಜನರು ಎಚ್ಚರಿಕೆ ಯಿಂದ ಇರಬೇಕು. ಕೊರೊನಾ ಲಸಿಕೆಯ ಎರಡು ಡೋಸ್ ಪಡೆಯುವವರೆಗೆ ಅತೀ ಎಚ್ಚರಿಕೆ ಅಗತ್ಯ, ಲಸಿಕೆ ಹಾಕಿಸಿಕೊಳ್ಳುವ ವರೆಗೆ ಯಾರೂ ಕೂಡ ಮೈ ಮರೆಯಬಾರದು. ಅಲ್ಲದೇ ಶೇ.70ರಷ್ಟು ಲಸಿಕೆ ಕಂಪ್ಲೀಟ್ ಆದ ನಂತರದಲ್ಲಿ ಎಲ್ಲರೂ ಆರಾಮಾಗಿ ಇರಬಹುದು ಎಂದಿದ್ದಾರೆ.

ಗ್ರಾಮದಲ್ಲಿ 5 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡ್ರೆ ಇಡೀ ಗ್ರಾಮವನ್ನೇ ಸಿಲ್ ಡೌನ್ ಮಾಡಬೇಕು. ಅಲ್ಲದೇ ಕೊರೊನಾ ಸೋಂಕು ಬಂದ ವ್ಯಕ್ತಿಗಳನ್ನು ಕೂಡಲೇ ಕೋವಿಡ್ ಕೇರ್ ಸೆಂಟರ್ ಗೆ ದಾಖಲು ಮಾಡಬೇಕು. ಮುಂದಿನ ಮೂರ್ನಾಲ್ಕು ತಿಂಗಳಲ್ಲಿ ಎಲ್ಲರಿಗೂ ಲಸಿಕೆ ನೀಡಲಾಗುತ್ತದೆ. ರಾಜ್ಯ ಸರಕಾರ ಸಾವಿನ ಸಂಖ್ಯೆಯನ್ನು ಮುಚ್ಚಿಟ್ಟಿಲ್ಲ ಎಂದಿದ್ದಾರೆ.

Comments are closed.