Kannada Rajyotsava 2022: ‘ಕರ್ನಾಟಕ ರತ್ನ’ ಪ್ರಶಸ್ತಿಯ ವಿಶೇಷತೆಗಳು: ಈವರೆಗೆ ಗೌರವ ಸ್ವೀಕರಿಸಿರುವ ‘ರತ್ನ’ಗಳು ಇವರೇ ನೋಡಿ..

Kannada Rajyotsava 2022: ಇಂದು ಕನ್ನಡ ನಾಡಿಗೆ ಹುಟ್ಟುಹಬ್ಬದ ಸಂಭ್ರಮ. ಕನ್ನಡ ರಾಜ್ಯೋತ್ಸವ ಇಂದು ಅಪರೂಪದ, ಅದ್ಭುತ ಕ್ಷಣಗಳಿಗೆ ಸಾಕ್ಷಿಯಾಗಿದೆ. ವಿಧಾನಸೌಧದ ಆವರಣದಲ್ಲಿ ಕಳೆದ ವರ್ಷ ನಮ್ಮನ್ನಗಲಿದ ನಗುವಿನ ದೊರೆ, ಅಭಿಮಾನಿಗಳ ಹೃದಯ ಸಾಮ್ರಾಟ, ಯುವರತ್ನ, ಕನ್ನಡದ ಕಣ್ಮಣಿ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಪುನೀತ್ ಪತ್ನಿ ಅಶ್ವಿನಿ ಅವರು ಈ ಗೌರವವನ್ನು ಸ್ವೀಕರಿಸಿ ಭಾವುಕರಾದರು. ಮಳೆಯನ್ನೂ ಲೆಕ್ಕಿಸದೇ ಲಕ್ಷಾಂತರ ಅಭಿಮಾನಿಗಳು ಈ ಅಪರೂಪದ ದೃಶ್ಯವನ್ನು ಕಣ್ತುಂಬಿಕೊಂಡ್ರು.

ಇದನ್ನೂ ಓದಿ: Appu Karnataka Ratna: ಕನ್ನಡದ ‘ಯುವರತ್ನ’ನಿಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ಪ್ರದಾನ; ಗೌರವ ಸ್ವೀಕರಿಸಿದ ಪತ್ನಿ ಅಶ್ವಿನಿ

ಅಂದಹಾಗೆ ರಾಜ್ಯದ ಅತ್ಯುನ್ನತ ಪ್ರಶಸ್ತಿ ಕರ್ನಾಟಕ ರತ್ನಕ್ಕೆ ಅದರದ್ದೇ ಆದ ಸ್ಥಾನಮಾನವಿದೆ. ವಿಶೇಷತೆಗಳಿವೆ.. ಹಾಗಿದ್ರೆ ಏನಿದರ ವಿಶೇಷತೆ ಅನ್ನೋದಾದ್ರೆ,

ದೇಶದಲ್ಲಿ ಭಾರತ ರತ್ನ ಹೇಗೆ ಉನ್ನತಮಟ್ಟದ ಪ್ರಶಸ್ತಿಯೋ ಹಾಗೆಯೇ ಕರ್ನಾಟಕ ರತ್ನ ಪ್ರಶಸ್ತಿಯು ನಮ್ಮ ರಾಜ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿ ಆಗಿದೆ. ಯಾವುದೇ ಕ್ಷೇತ್ರದಲ್ಲಿ ಅಸಾಧಾರಣ ಸಾಧನೆ ಮಾಡಿದ ನಾಗರಿಕರು ಈ ಪ್ರಶಸ್ತಿಗೆ ಬಾಜನರಾಗಿರುತ್ತಾರೆ. ಅಂಥ ಸಾಧಕರನ್ನು ಗುರುತಿಸಿ ಕರ್ನಾಟಕ ರಾಜ್ಯ ಸರ್ಕಾರ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸುತ್ತದೆ. 1992ರಲ್ಲಿ ಕರ್ನಾಟಕ ರತ್ನ ಪ್ರಶಸ್ತಿಯನ್ನು ಪ್ರಾರಂಭಿಸಲಾಯ್ತು. ರಾಜ್ಯದ ಇಬ್ಬರು ಆ ವರ್ಷ ಕರ್ನಾಟಕ ಪ್ರಶಸ್ತಿಗೆ ಬಾಜನರಾಗಿದ್ದರು.

  • ಸಿನಿಮಾ ಕ್ಷೇತ್ರದಲ್ಲಿನ ಅಪಾರ ಸಾಧನೆಗೆ ಡಾ.ರಾಜ್ ಕುಮಾರ್ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿನ ಸೇವೆಗೆ ಕುವೆಂಪು ಅವರಿಗೆ ಮೊತ್ತಮೊದಲ ಬಾರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
  • ಇದಾದ ಬಳಿಕ 1999ರಲ್ಲಿ ರಾಜಕೀಯ ಕ್ಷೇತ್ರದಲ್ಲಿನ ತಮ್ಮ ಸಾಧನೆಗೆ ಎಸ್.ನಿಜಲಿಂಗಪ್ಪ ಅವರಿಗೆ ಕರ್ನಾಟಕ ರತ್ನ ಬಿರುದನ್ನು ನೀಡಿ ಸನ್ಮಾನಿಸಲಾಯಿತು.
  • ಮುಂದಿನ ವರ್ಷ ಅಂದರೆ 2000ನೇ ಇಸವಿಯಲ್ಲಿ ವಿಜ್ಞಾನ ಕ್ಷೇತ್ರದಲ್ಲಿನ ಸಾಧನೆಗೆ ಸಿ.ಎನ್.ಆರ್.ರಾವ್ ಅವರು ಕರ್ನಾಟಕ ರತ್ನ ಪ್ರಶಸ್ತಿಗೆ ಬಾಜನರಾದರು.
  • 2001ರಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಅವಿರತ ಸೇವೆಗೆ ಡಾ.ದೇವಿಪ್ರಸಾದ್ ಶೆಟ್ಟಿ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
  • ಆ ಬಳಿಕ 2005ರಲ್ಲಿ ಸಂಗೀತ ಕ್ಷೇತ್ರದಲ್ಲಿ ಸಾಧನೆಗೈದ ಭೀಮಸೇನ ಜೋಶಿ ಅವರು ಕರ್ನಾಟಕ ರತ್ನ ಗೌರವವನ್ನು ಪಡೆದರು.
  • ಅದಾದ 2 ವರ್ಷಗಳ ಬಳಿಕ 2007ರಲ್ಲಿ ಸಾಮಾಜಿಕ ಸೇವೆಗಾಗಿ ತನ್ನ ಜೀವನವನ್ನೇ ಮುಡುಪಿಟ್ಟ ಸಿದ್ದಗಂಗಾ ಮಠದ ನಡೆದಾಡುವ ದೇವರೆಂದೇ ಖ್ಯಾತಿ ಪಡೆದಿದ್ದ ಶ್ರೀ ಶಿವಕುಮಾರ ಸ್ವಾಮಿಗಳು ಕರ್ನಾಟಕ ರತ್ನ ಪ್ರಶಸ್ತಿ ಸ್ವೀಕರಿಸಿದರು.
  • 2008ರಲ್ಲಿ ಸಾಹಿತ್ಯ ಕ್ಷೇತ್ರದಲ್ಲಿನ ಸೇವೆಗೆ ದೇ.ಜವರೇಗೌಡ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.
  • 2009ರಲ್ಲಿ ಸಾಮಾಜಿಕ ಸೇವೆಗಾಗಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗಡೆ ಅವರು ಕರ್ನಾಟಕ ರತ್ನ ಪ್ರಶಸ್ತಿಗೆ ಬಾಜನರಾದರು.

ಇದನ್ನೂ ಓದಿ: Kannada Rajyotsava 2022: ಅಂದು ಇವರಿಲ್ಲದಿದ್ದರೆ ಕನ್ನಡದ ಭವಿಷ್ಯ ಏನಾಗುತ್ತಿತ್ತೋ.. ಅಷ್ಟಕ್ಕೂ ಯಾರೀ ಕನ್ನಡದ ಕಣ್ವ..

ಕರ್ನಾಟಕದಲ್ಲಿ ಇದುವರೆಗೂ 9 ಮಂದಿ ಈ ಉನ್ನತ ಗೌರವಕ್ಕೆ ಬಾಜನರಾಗಿದ್ದಾರೆ. ಇದೀಗ ಸಿನಿಮಾ ಹಾಗೂ ಸಾಮಾಜಿಕ ಸೇವೆ ಈ ಎರಡೂ ಕ್ಷೇತ್ರಗಳಲ್ಲೂ ಸಾಕಷ್ಟು ಕೊಡುಗೆಗಳನ್ನು ನೀಡಿ ಮರೆಯಾಗಿರುವ ದ್ರುವತಾರೆ ಪುನೀತ್ ರಾಜ್ ಕುಮಾರ್ ಅವರಿಗೆ ಈ ಬಾರಿ ಕರ್ನಾಟಕ ರತ್ನ ನೀಡಿ ಗೌರವಿಸಲಾಗಿದೆ. ಅಲ್ಲದೇ ಇದೇ ಮೊದಲ ಬಾರಿಗೆ ಮರಣೋತ್ತರವಾಗಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ಮಾತ್ರವಲ್ಲದೇ ಮೊದಲ ಬಾರಿಗೆ ಕನ್ನಡ ರಾಜ್ಯೋತ್ಸವದಂದೇ ಅಪ್ಪು ಅವರಿಗೆ ಕರ್ನಾಟಕ ರತ್ನ ನೀಡಲಾಗಿದೆ. ಕರ್ನಾಟಕ ರತ್ನ ಪ್ರಶಸ್ತಿಯು 50 ಗ್ರಾಂ ತೂಕದ ಚಿನ್ನದ ಪದಕ, ಸನ್ಮಾನ ಪತ್ರ, ನೆನಪಿನ ಕಾಣಿಕೆ ಹಾಗೂ ಒಂದು ಶಾಲನ್ನು ಒಳಗೊಂಡಿರುತ್ತದೆ.

Kannada Rajyotsava 2022: Highlights of the ‘Karnataka Ratna’ Award: Here are the ‘Ratnas’ who have received the honor so far

Comments are closed.