Appu Karnataka Ratna: ಕನ್ನಡದ ‘ಯುವರತ್ನ’ನಿಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ಪ್ರದಾನ; ಗೌರವ ಸ್ವೀಕರಿಸಿದ ಪತ್ನಿ ಅಶ್ವಿನಿ

ಬೆಂಗಳೂರು: Appu Karnataka Ratna: ಬೆಂಗಳೂರಿನ ವಿಧಾನಸೌಧವು ಇಂದು ಅಕ್ಷರಶಃ ಅದ್ಭುತ ಕ್ಷಣಗಳಿಗೆ ಸಾಕ್ಷಿಯಾಗಿತ್ತು. ಕರ್ನಾಟಕದ ಯುವರತ್ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಮರಣೋತ್ತರವಾಗಿ ರಾಜ್ಯದ ಶ್ರೇಷ್ಠ ಗೌರವವಾಗಿರುವ ಕರ್ನಾಟಕ ರತ್ನ ಪ್ರಶಸ್ತಿಯನ್ನು ಸಮರ್ಪಿಸಲಾಯಿತು. ಅಪ್ಪು ಪತ್ನಿ ಅಶ್ವಿನ್ ಪುನೀತ್ ರಾಜ್ ಕುಮಾರ್ ಅವರು ಸಿಎಂ ಬೊಮ್ಮಾಯಿ ಅವರಿಂದ ಪ್ರಶಸ್ತಿಯನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಇನ್ಫೋಸಿಸ್ ಸಂಸ್ಥಾಪಕಿ ಸುಧಾಮೂರ್ತಿ, ಸಿನಿಲೋಕದ ದಿಗ್ಗಜರಾದ ತಮಿಳು ನಟ ರಜನೀಕಾಂತ್, ಜ್ಯೂನಿಯರ್ ಎನ್.ಟಿ.ಆರ್. ಶಿವರಾಜ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ಹಲವು ದಿನಗಳಿಂದ ಈ ಕ್ಷಣಕ್ಕಾಗಿ ಕಾಯುತ್ತಿದ್ದ ಲಕ್ಷಾಂತರ ಅಭಿಮಾನಿಗಳ ಸಮ್ಮುಖದಲ್ಲಿ ಕನ್ನಡದ ಕಣ್ಮಣಿಗೆ ಕರ್ನಾಟಕ ರತ್ನ ಬಿರುದು ನೀಡಿ ಗೌರವಿಸಲಾಯ್ತು. ಕಾರ್ಯಕ್ರಮ ಆರಂಭವಾಗುತ್ತಿದ್ದಂತೆಯೇ ಶುರುವಾದ ವರುಣನ ಆಗಮನ ಪುನೀತ್‍ಗೆ ಆಶೀರ್ವಾದ ಮಾಡಿದಂತಿತ್ತು. ಮಳೆಯನ್ನೂ ಲೆಕ್ಕಿಸದೇ ಕೊಡೆ ಹಿಡಿದುಕೊಂಡೇ ಜನರು ಅಪರೂಪದ ದೃಶ್ಯವನ್ನು ಕಣ್ತುಂಬಿಕೊಂಡರು.

ಪ್ರಶಸ್ತಿ ನೀಡಿದ ಬಳಿಕ ಮಾತನಾಡಿದ ಸಿಎಂ ಬೊಮ್ಮಾಯಿ ಅವರು, ‘ಅಪ್ಪು ನಮ್ಮ ನಡುವಲ್ಲೇ ಇದ್ದಾರೆ. ಆಕಾಶದಿಂದ ಮಳೆಯ ರೂಪದಲ್ಲಿ ಬಂದು ಶುಭಕೋರಿದ್ದಾರೆ. ಕರ್ನಾಟಕ ರತ್ನಕ್ಕೆ ಕರ್ನಾಟಕ ರತ್ನ ಬಿರುದು ನೀಡುವ ಸೌಭಾಗ್ಯ ಒದಗಿ ಬಂದಿದೆ. ಇದೇ ನಮ್ಮ ಪುಣ್ಯ. ಮತ್ತೆ ಹುಟ್ಟಿ ಬಾ ಅಪ್ಪು’ ಎಂದರು. ಮಾತು ಮುಂದುವರಿಸಿದ ಅವರು ‘ಮಳೆಯನ್ನೂ ಲೆಕ್ಕಿಸದೇ ನೆರೆದಿರುವ ಜನರನ್ನು ನೋಡಿದರೆ ಅಪ್ಪು ಮೇಲೆ ಅಭಿಮಾನಿಗಳಿಗೆ ಇರುವ ಪ್ರೀತಿ ಎಂಥದ್ದು ಎಂದು ಗೊತ್ತಾಗುತ್ತದೆ. ಈ ವರ್ಷದ ರಾಜ್ಯೋತ್ಸವ ಸದಾ ನೆನಪಿಟ್ಟುಕೊಳ್ಳುವ ಕಾರ್ಯಕ್ರಮ. ಕನ್ನಡ ರಾಜ್ಯೋತ್ಸವದಂದೇ ಕರ್ನಾಟಕ ರತ್ನ ಪ್ರಶಸ್ತಿ ನೀಡುತ್ತಿರುವುದು ಇದೇ ಮೊದಲ ಬಾರಿಗೆ ಎಂದ ಸಿಎಂ, ನಿಜವಾದ ರತ್ನನಿಗೆ ಕರ್ನಾಟಕ ರತ್ನ ಪ್ರಶಸ್ತಿ ಸಿಕ್ಕಿದೆ. ಅತ್ಯಂತ ಕಿರಿಯ ವಯಸ್ಸಿನ ಅಪ್ಪುಗೆ ಈ ಗೌರವ ನೀಡುತ್ತಿರುವುದು ಹೆಮ್ಮೆ ತಂದಿದೆ’ ಎಂದರು.

ಅಪ್ಪು ಕಲಿಯುಗದ ಮಾರ್ಕಂಡೇಯ, ಪ್ರಹ್ಲಾದ, ನಚಿಕೇತ ಎಂದ ತಲೈವಾ:

ಬಳಿಕ ಸ್ಪಷ್ಟ ಕನ್ನಡದಲ್ಲೇ ಮಾತನಾಡಿದ ಸೂಪರ್ ಸ್ಟಾರ್ ರಜನಿಕಾಂತ್, ಅಪ್ಪು ದೇವರ ಮಗು ಎಂದು ಕೊಂಡಾಡಿದರು. ‘ಅಪ್ಪು ದೇವರ ಮಗು..ಆ ಮಗು ಒಂದಷ್ಟು ನಮ್ಮ ಜೊತೆಗಿದ್ದು, ಆಟವಾಡಿ ತನ್ನ ಪ್ರತಿಭೆಯನ್ನು ತೋರಿಸಿ ಮತ್ತೆ ದೇವರ ಬಳಿ ಹೋಗಿ ಸೇರಿದೆ. ಅಪ್ಪು ಎಲ್ಲಿಯೂ ಹೋಗಿಲ್ಲ. ನಮ್ಮ ನಡುವಲ್ಲೇ ಇದ್ದಾನೆ. ಸಿನಿಮಾದ ಮೂಲಕ, ಸಮಾಜಸೇವೆ ಮೂಲಕ ಅಮರನಾಗಿ ಇರುತ್ತಾನೆ ಎಂದ ತಲೈವಾ ಅಪ್ಪು ಜೊತೆಗಿನ ಒಡನಾಟವನ್ನು ಸ್ಮರಿಸಿದರು. ಅಲ್ಲದೇ ಶ್ರೇಷ್ಠ ಪ್ರಶಸ್ತಿಯನ್ನು ಅಪ್ಪುಗೆ ನೀಡಿದ್ದಕ್ಕಾಗಿ ಎಲ್ಲಾ ಅಭಿಮಾನಿಗಳ ಪರವಾಗಿ ಕರ್ನಾಟಕ ಸರ್ಕಾರಕ್ಕೆ ಧನ್ಯವಾದ’ ತಿಳಿಸಿದರು.

ಆ ಬಳಿಕ ಮಾತನಾಡಿದ ಜ್ಯೂನಿಯರ್ ಎನ್‍ಟಿಆರ್, ಗೆಳೆಯ ಅಪ್ಪುವನ್ನು ನೆನೆದು ಭಾವುಕರಾದರು. ‘ಒಬ್ಬ ಮನುಷ್ಯನಿಗೆ ಪರಂಪರೆ ಹಾಗೆಯೇ ಉಪನಾಮ ಅನ್ನೋದು ಹಿರಿಯರಿಂದ ಬರುತ್ತೆ. ಅದೇ ವ್ಯಕ್ತಿತ್ವ ಅನ್ನೋದು ಸ್ವಂತ ಸಂಪಾದನೆ. ಕೇವಲ ವ್ಯಕ್ತಿತ್ವದಿಂದ, ಅಹಂ ಇಲ್ಲದೇ, ನಗು ಮೊಗದಲ್ಲೇ, ಯುದ್ಧವಿಲ್ಲದೇ ಇಡೀ ರಾಜ್ಯ ಗೆದ್ದ ರಾಜ ಯಾರಾದರೂ ಇದ್ದಾರೆ ಎಂದರೆ ಅವರು ಪುನೀತ್ ರಾಜ್ ಕುಮಾರ್ ಒಬ್ಬರೇ ಎಂದರು. ಪುನೀತ್ ಸೂಪರ್ ಸ್ಟಾರ್ ಆಫ್ ಕರ್ನಾಟಕ. ಒಳ್ಳೆ ತಂದೆಯಾಗಿ, ಮಗುವಾಗಿ, ಮಗನಾಗಿ, ಸ್ನೇಹಿತನಾಗಿ, ಕಲಾವಿದನಾಗಿ ಎಲ್ಲದಕ್ಕಿಂತ ಹೆಚ್ಚಾಗಿ ಒಳ್ಳೆಯ ಮನುಷ್ಯನಾಗಿ ಇದ್ದರು. ಅವರ ನಗುವಲ್ಲಿದ್ದ ಶ್ರೀಮಂತಿಕೆಯನ್ನು ನಾನು ಎಲ್ಲಿಯೂ ನೋಡಿಲ್ಲ. ಅದಕ್ಕೆ ಅವರಿಗೆ ನಗುವಿನ ಒಡೆಯ ಅನ್ನೋದು. ಕರ್ನಾಟಕ ರತ್ನದ ಅರ್ಥವೇ ಪುನೀತ್ ರಾಜ್ ಕುಮಾರ್’ ಎಂದರು.

ಇದನ್ನೂ ಓದಿ: ಕರ್ನಾಟಕ ಬಿಜೆಪಿಯಲ್ಲಿ ಭರ್ಜರಿ ಸರ್ಜರಿ : ಹೊಸ ಅಭ್ಯರ್ಥಿಗಳಿಗೆ ಟಿಕೆಟ್ ಫೈನಲ್, ಹಾಲಿ ಶಾಸಕರಿಗೆ ಟೆನ್ಶನ್

ಇದನ್ನೂ ಓದಿ: Animal Cruelty:ನಾಯಿ ಬೊಗಳಿದ್ದಕ್ಕೆ ಚಾಕುವಿನಿಂದ ಇರಿದು ಕೊಂದ ದುಷ್ಕರ್ಮಿಗಳು : ವಿಡಿಯೋ ವೈರಲ್​​, ಆರೋಪಿಗಳ ಬಂಧನ

Appu Karnataka Ratna: Puneeth Rajkumar conferred Karnataka Ratna award posthumously

Comments are closed.