ಕರಾವಳಿಯ ಹಿಂದುತ್ವದ ಫೈರ್‌ ಬ್ರ್ಯಾಂಡ್‌ ಸುನಿಲ್‌ ಕುಮಾರ್‌ ತೇಜೋವಧೆಗೆ ಸಂಚು

karkala parashurama theme park : ರಾಜ್ಯ ಸರಕಾರ ಪರಶುರಾಮ ಥೀಮ್‌ ಪಾರ್ಕ್‌ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿದೆ. ಇದರ ಹಿಂದೆ ಕಾಂಗ್ರೆಸ್‌ ನಾಯಕರ ಷಡ್ಯಂತ್ರ ಅಡಗಿದೆ ಅನ್ನೋ ಆರೋಪ ಕೇಳಿಬಂದಿದೆ.

karkala parashurama theme park : ಕಾರ್ಕಳದಲ್ಲಿ ನಿರ್ಮಾಣಗೊಂಡಿರುವ ಪರುಶುರಾಮ ಥೀಮ್‌ ಪಾರ್ಕ್‌ ಸದ್ಯ ವಿವಾದ ಕೇಂದ್ರವಾಗಿದೆ. ಕಾಂಗ್ರೆಸ್‌ ನಾಯಕರು ವಿಧಾನಸಭಾ ಚುನಾವಣಾ ಸೋಲಿನ ಬೆನ್ನಲ್ಲೇ ಶಾಸಕ ಸುನಿಲ್‌ ಕುಮಾರ್‌ (V Sunil Kumar) ವಿರುದ್ದ ಆರೋಪ ಮಾಡುತ್ತಲೇ ಇದ್ದಾರೆ. ಇದರ ಮುಂದುವರಿದ ಭಾಗವಾಗಿ ರಾಜ್ಯ ಸರಕಾರ ಕಾರ್ಕಳ  ಪರಶುರಾಮ ಥೀಮ್‌ ಪಾರ್ಕ್‌ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿದೆ. ಇದರ ಹಿಂದೆ ಕಾಂಗ್ರೆಸ್‌ ನಾಯಕರ ಷಡ್ಯಂತ್ರ ಅಡಗಿದೆ ಅನ್ನೋ ಆರೋಪ ಕೇಳಿಬಂದಿದೆ.

karkala parashurama theme park investigation to CID. Congress conspiracy against Karkala Sunil Kumar
Image Credit to Original Source

ಉಡುಪಿ – ಕಾರ್ಕಳ ಹೆದ್ದಾರಿಯ ಬೈಲೂರು ಗ್ರಾಮದ ಉಮಿಕಲ್‌ ಬೆಟ್ಟದಲ್ಲಿ ಪರಶುರಾಮ ಥೀಮ್‌ ಪಾರ್ಕ್‌ ನಿರ್ಮಾಣವಾಗಿತ್ತು. 450 ಅಡಿ ಎತ್ತರದ ಬೆಟ್ಟದ ಮೇಲೆ ಪರಶುರಾಮನ ಮೂರ್ತಿಯನ್ನು ಪ್ರತಿಷ್ಟಾಪಿಸುವ ಮೂಲಕ ಕರಾವಳಿ ಮಾತ್ರವಲ್ಲದೇ ಕರ್ನಾಟಕ ಪ್ರವಾಸೋದ್ಯಮದ ಪ್ರಮುಖ ಕೇಂದ್ರವನ್ನಾಗಿಸೋ ನಿಟ್ಟಿನಲ್ಲಿ ಕಾರ್ಕಳ ಶಾಸಕ ಸುನಿಲ್‌ ಕುಮಾರ್‌ ಕನಸು ಕಂಡಿದ್ದರು.

ವಿಧಾನಸಭಾ ಚುನಾವಣೆಗೂ ಮೊದಲೇ ಪರಶುರಾಮ ಥೀಮ್‌ ಪಾರ್ಕ್ ಉದ್ಘಾಟನೆಗೊಂಡು ನೂರಾರು ಮಂದಿಗೆ ಉದ್ಯೋಗ ಲಭಿಸಿತ್ತು. ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು ಮಾತ್ರವಲ್ಲದೇ ಕರ್ನಾಟಕ ರಾಜ್ಯದಾದ್ಯಂತ ಜನರು ಪರಶುರಾಮ ಥೀಮ್‌ ಪಾರ್ಕ್‌ ಕಣ್ತುಂಬಿಕೊಳ್ಳಲು ಆಗಮಿಸುತ್ತಿದ್ದರು. ಆದ್ರೆ ಚುನಾವಣೆ ಮುಗಿದು ಫಲಿತಾಂಶ ಹೊರಬೀಳುತ್ತಿದ್ದಂತೆಯೇ ಪರಶುರಾಮ್‌ ಥೀಮ್‌ ಪಾರ್ಕ್‌ ಪರಿಸ್ಥಿತಿಯೇ ಬದಲಾಗಿ ಹೋಗಿತ್ತು.

ಕಳೆದ ಜೂನ್‌ ತಿಂಗಳಿನಿಂದ ಪರಶುರಾಮ ಥೀಮ್‌ ಪಾರ್ಕ್‌ಗೆ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿತ್ತು. ಇದರಿಂದಾಗಿ ನಿತ್ಯವೂ ಸಾವಿರಾರು ಮಂದಿ ಪ್ರವಾಸಿಗರು ಉಮಿಕಲ್‌ ಬೆಟ್ಟಕ್ಕೆ ಬಂದು ವಾಪಾಸಾಗುತ್ತಿದ್ದಾರೆ. ಕಾಂಗ್ರೆಸ್‌ ನಾಯಕರು ಪರಶುರಾಮ ಥೀಮ್‌ ಪಾರ್ಕ್‌ ಹಗರಣದಲ್ಲಿ ಶಾಸಕ ಸುನಿಲ್‌ ಕುಮಾರ್‌ ವಿರುದ್ದ ಆರೋಪ ಮಾಡಿದ್ದಾರೆಯೇ ವಿನಃ ಪರಶುರಾಮ ಮೂರ್ತಿಯನ್ನು ತಂದು ನಿಲ್ಲಿಸುವ ಕೆಲಸ ಮಾಡಿಲ್ಲ ಅನ್ನೋದು ಸ್ಥಳೀಯರ ಆರೋಪ.

karkala parashurama theme park investigation to CID. Congress conspiracy against Karkala Sunil Kumar
Image Credit to Original Source

ಪರಶುರಾಮ ಥೀಮ್‌ ಪಾರ್ಕ್‌ ಅನ್ನು ಸುಮಾರು 15 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆಯಂತೆ. 33 ಅಡಿ ಎತ್ತರದ ಪರಶುರಾಮ ಮೂರ್ತಿ ಬರೋಬ್ಬರಿ 15 ಟನ್‌ ತೂಕವಿದೆ. ಆದರೆ ವಿಧಾನಸಭಾ ಚುನಾವಣೆಯ ಬೆನ್ನಲ್ಲೇ ಕಂಚಿನ ಮೂರ್ತಿ ನಕಲಿ ಎಂದು ಕಾಂಗ್ರೆಸ್‌ ನಾಯಕರು ಆರೋಪ ಮಾಡುತ್ತಿದ್ದಾರೆ. ಕಾಂಗ್ರೆಸ್‌ ನಾಯಕರ ಒತ್ತಡದಿಂದಾಗಿಯೇ ಕಳೆದ ಏಳು ತಿಂಗಳಿನಿಂದಲೂ ಥೀಮ್‌ ಪಾರ್ಕ್‌ಗೆ ಬೀಗ ಬಿದ್ದಿದೆ.

ಪರಶುರಾಮ ಥೀಮ್‌ ಪಾರ್ಕ್‌ ವಿಚಾರದಲ್ಲಿ ತನ್ನ ಮೇಲೆ ಬಂದಿರುವ ಆರೋಪಕ್ಕೆ ಸುನಿಲ್‌ ಕುಮಾರ್‌ ಸ್ಪಷ್ಟನೆಯನ್ನು ಕೊಟ್ಟಿದ್ದರು. ಪ್ರವಾಸೋದ್ಯಮ ಇಲಾಖೆಯ ವತಿಯಿಂದ ಉಡುಪಿಯ ನಿರ್ಮಿತಿ ಕೇಂದ್ರ ಪರಶುರಾಮ ಥೀರ್ಮ್‌ ಪಾರ್ಕ್‌ ನಿರ್ಮಾಣ ಮಾಡಿತ್ತು. ಉಡುಪಿ ಜಿಲ್ಲಾಡಳಿತ, ಕಾರ್ಕಳ ತಾಲೂಕು ಆಡಳಿತ, ನಿರ್ಮಿತಿ ಕೇಂದ್ರ, ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿಯೇ ಥೀಮ್‌ ಪಾರ್ಕ್‌ ಕಾಮಗಾರಿ ನಡೆದಿತ್ತು.

ವಿಧಾನಸಭಾ ಚುನಾವಣೆಗೆ ಮೊದಲೇ ಕಾಮಗಾರಿ ಮುಗಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಶಾಸಕರು ಸೂಚಿಸಿರುವುದರಲ್ಲಿ ಯಾವುದೇ ತಪ್ಪಿಲ್ಲ. ತನ್ನ ಅಧಿಕಾರದ ಅವಧಿಯಲ್ಲಿಯೇ ತನ್ನ ಕನಸಿನ ಯೋಜನೆ ಸಾಕಾರಗೊಳ್ಳಬೇಕು ಅನ್ನೋ ಕಾರಣಕ್ಕೆ ಈ ರೀತಿಯಾಗಿ ಸೂಚಿಸಿದ್ದಾರೆ. ಶಾಸಕರು ಸೂಚಿಸಿರೋ ಕಾರಣಕ್ಕೆ ತರಾತುರಿಯಲ್ಲಿ ಕಾಮಗಾರಿ ಮುಗಿಸಿದ್ದೇವೆ ಅನ್ನೋದು ಎಷ್ಟು ಸರಿ. ಯಾವುದೇ ಸರಕಾರಿ ಯೋಜನೆಯ ಸಕಾಲದಲ್ಲಿ ಪೂರ್ಣಗೊಳಿಸುವಂತೆ ತಾಕೀತು ಮಾಡುವುದು ಜನಪ್ರತಿನಿಧಿಯಾದವರ ಕರ್ತವ್ಯ. ಇದೇ ಕಾರ್ಯವನ್ನು ಸುನಿಲ್‌ ಕುಮಾರ್‌ ಮಾಡಿದ್ದಾರೆ ಎನ್ನುತ್ತಾರೆ ಸ್ಥಳೀಯರು.

ಇದನ್ನೂ ಓದಿ : ಬಿಜೆಪಿ ಅಸಮಾಧಾನಕ್ಕೆ ಸೈಲೆಂಟ್‌ ಆಗಿಯೇ ಮದ್ದೆರೆದ ರಾಜ್ಯಾಧ್ಯಕ್ಷ : ಬಿಎಸ್‌ ಯಡಿಯೂರಪ್ಪ ಹಾದಿಯಲ್ಲೇ ಪುತ್ರ ಬಿವೈ ವಿಜಯೇಂದ್ರ

ಪರಶುರಾಮ ಥೀಮ್‌ ಪಾರ್ಕ್‌ ಕಾಮಗಾರಿಯ ವಿಚಾರದಲ್ಲಿ ಅವ್ಯವಹಾರ ನಡೆದಿದ್ದರೇ ಕಾಮಗಾರಿ ನಡೆಸಿದ ಅಧಿಕಾರಿಗಳ ವಿರುದ್ದ ಕ್ರಮಕೈಗೊಳ್ಳುವ ಬದಲು ಕೇವಲ ಶಾಸಕರನ್ನು ಗುರಿಯಾಗಿಸುವುದು ಎಷ್ಟು ಸರಿ ಅನ್ನೋ ಹಲವರ ಪ್ರಶ್ನೆ. ಸುನಿಲ್‌ ಕುಮಾರ್‌ ಸದ್ಯ ಕರಾವಳಿ ಭಾಗದ ಪ್ರಭಾವಿ ರಾಜಕೀಯ ಮುಖಂಡರಾಗಿ ಗುರುತಿಸಿ ಕೊಂಡಿದ್ದಾರೆ. ರಾಜ್ಯ ಮಟ್ಟದಲ್ಲಿಯೂ ಉತ್ತಮ ಹುದ್ದೆಯಲ್ಲಿದ್ದಾರೆ. ಸದ್ಯ ಕಾರ್ಕಳದಲ್ಲಿ ಕಾಂಗ್ರೆಸ್‌ ನೆಲೆ ಕಂಡುಕೊಳ್ಳುವುದು ಕಷ್ಟ. ಇದೇ ಕಾರಣದಿಂದಾಗಿ ಸುನಿಲ್‌ ಕುಮಾರ್‌ ಅವರನ್ನು ಥೀಮ್‌ ಪಾರ್ಕ್‌ ವಿಚಾರದಲ್ಲಿ ಟಾರ್ಗೆಟ್‌ ಮಾಡಲಾಗುತ್ತಿದೆ ಎಂಬ ಮಾತುಗಳು ಕೇಳಿಬಂದಿದೆ.

karkala parashurama theme park investigation to CID. Congress conspiracy against Karkala Sunil Kumar
Image Credit to Original Source

ಸಂಘ ಪರಿವಾರದ ಶಿಸ್ತಿನ ಸಿಪಾಯಿ ಸುನಿಲ್‌ ಕುಮಾರ್‌ ಕಂಡ್ರೆ ಕಾಂಗ್ರೆಸ್‌ ನಾಯಕರಿಗ್ಯಾಕೆ ಭಯ ?

ಕಾರ್ಕಳ ಕರ್ನಾಟಕದಲ್ಲಿ ಹಿಂದುತ್ವದ ಶಕ್ತಿ ಕೇಂದ್ರ. ಕಾಂಗ್ರೆಸ್‌ ಭದ್ರಕೋಟೆ ಆಗಿರುವ ಕಾರ್ಕಳ ವಿಧಾನಸಭಾ ಕ್ಷೇತ್ರ ಸುನಿಲ್‌ ಕುಮಾರ್‌ ಅವರಿಂದಾಗಿಯೇ ಬಿಜೆಪಿಯ ಭದ್ರಕೋಟೆಯಾಗಿದೆ. ಸದ್ಯ ಕಾರ್ಕಳ ಸುನಿಲ್‌ ಕುಮಾರ್‌ ಅವರನ್ನು ಸೋಲಿಸೋದು ಸುಲಭದ ಮಾತಲ್ಲ. ಸಂಘಪರಿವಾರ, ಬಿಜೆಪಿಯ ಹಿರಿಯ ನಾಯಕರಿಗೆ ಸುನಿಲ್‌ ಕುಮಾರ್‌ ಶಿಸ್ತಿನ ಸಿಪಾಯಿ. ಎಂದಿಗೂ ಸುನಿಲ್‌ ಕುಮಾರ್‌ ಸಂಘದ ನಿಯಮಗಳನ್ನು ಮೀರಿದವರಲ್ಲ. ಇದೇ ಕಾರಣದಿಂದಲೇ ಅವರಿಗೆ ರಾಜ್ಯಮಟ್ಟದಲ್ಲಿಯೂ ಉನ್ನತ ಹುದ್ದೆಗಳು ದೊರೆಯುತ್ತಿದೆ.

ಕಾರ್ಕಳ ಸುನಿಲ್‌ ಕುಮಾರ್‌ ರಾಜಕೀಯವಾಗಿ ಎತ್ತರದ ಸ್ಥಾನಕ್ಕೇರುತ್ತಿರುವುದು ಕಾರ್ಕಳದ ಕಾಂಗ್ರೆಸ್‌ ನಾಯಕರಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ಎಷ್ಟೇ ಆರೋಪಗಳನ್ನು ಮಾಡಿದ್ರೂ ಕೂಡ ಎಲ್ಲವನ್ನೂ ಸುನಿಲ್‌ ಕುಮಾರ್‌ ಸಮರ್ಥವಾಗಿ ಎದುರಿಸಿದ್ದಾರೆ. ಥೀಮ್‌ ಪಾರ್ಕ್‌ ವಿಚಾರದಲ್ಲಿಯೂ ಖಡಕ್‌ ಉತ್ತರವನ್ನೇ ನೀಡಿದ್ದಾರೆ. ಸುನಿಲ್‌ ಕುಮಾರ್‌ ಉನ್ನತ ಹುದ್ದೆಗೇರಿದ್ರೆ ಕಾರ್ಕಳದಲ್ಲಿ ಕಾಂಗ್ರೆಸ್‌ ಗೆಲುವು ಅಸಾಧ್ಯ. ಜೊತೆಗೆ ಕಾರ್ಕಳ ಮಾತ್ರವಲ್ಲದೇ ಉಡುಪಿ ಜಿಲ್ಲೆಯ ಇತರ ಕ್ಷೇತ್ರಗಳಲ್ಲಿಯೂ ಬಿಜೆಪಿ ಗೆಲುವು ತಂದುಕೊಡುವ ತಾಕತ್ತು ಸುನಿಲ್‌ ಕುಮಾರ್‌ ಅವರಿಗಿದೆ. ಇದೇ ಕಾರಣಕ್ಕೆ ಅವರ ವಿರುದ್ದ ಕಾಂಗ್ರೆಸ್‌ ನಾಯಕರು ಆರೋಪಿಸುತ್ತಿದ್ದಾರೆಂಬ ಮಾತುಗಳು ಕೇಳಿಬರುತ್ತಿದೆ.

karkala parashurama theme park investigation to CID. Congress conspiracy against Karkala Sunil Kumar
Image Credit to Original Source

ಚುನಾವಣೆ ಹೊತ್ತಲೇ ಸಿಐಡಿ ತನಿಖೆ : ಹಿಂದಿದ್ಯಾ ಕಾಂಗ್ರೆಸ್‌ ಷಡ್ಯಂತ್ರ ?

ರಾಜ್ಯದಲ್ಲಿ ಕಾಂಗ್ರೆಸ್‌ ಸರಕಾರ ಅಧಿಕಾರಕ್ಕೆ ಬಂದು ಹಲವು ತಿಂಗಳುಗಳೇ ಕಳೆದಿದೆ. ಇದುವರೆಗೂ ಯಾವುದೇ ತನಿಖೆಗೆ ಮನಸ್ಸು ಮಾಡದ ಕಾಂಗ್ರೆಸ್‌ ನಾಯಕರು ಇದೀಗ ಲೋಕಸಭಾ ಚುನಾವಣೆಯ ಹೊತ್ತಲ್ಲೇ ಪರಶುರಾಮ ಥೀಮ್‌ ಪಾರ್ಕ್‌ ಅನ್ನು ಅಸ್ತ್ರವಾಗಿಸಿಕೊಳ್ಳಲು ಷಡ್ಯಂತ್ರ ಹೂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಇನ್ನು ಲೋಕಸಭಾ ಚುನಾವಣೆಗೆ ಬಿಜೆಪಿಯನ್ನು ಎದುರಿಸಲು ಕಾಂಗ್ರೆಸ್‌ ಪಕ್ಷಕ್ಕೆ ಕರಾವಳಿಯಲ್ಲಿ ಯಾವುದೇ ಅಸ್ತ್ರವಿಲ್ಲ. ಸುನಿಲ್‌ ಕುಮಾರ್‌ ಅವರನ್ನು ವಿವಾದದಲ್ಲಿ ಸಿಲುಕಿಸಿದ್ರೆ ಬಿಜೆಪಿಗೆ ಮುಜುಗರ ತರಿಸಬಹುದು ಅನ್ನೋ ಕಾಂಗ್ರೆಸ್‌ ಲೆಕ್ಕಾಚಾರ. ಹಿಂದುತ್ವದ ಶಕ್ತಿ ಕೇಂದ್ರ ಎನಿಸಿರುವ ಕಾರ್ಕಳದ ಪರಶುರಾಮ ಥೀಮ್‌ ಪಾರ್ಕ್‌ ಅನ್ನು ಚುನಾವಣಾ ಅಸ್ತ್ರವಾಗಿಸಲು ಕೆಲವು ಕಾಂಗ್ರೆಸ್‌ ನಾಯಕರು ಮುಂದಾಗಿದ್ದಾರೆಂಬ ಮಾತುಗಳು ಕೇಳಿಬರುತ್ತಿದೆ.

ಕಾಂಗ್ರೆಸ್‌ ರಾಜಕೀಯದಿಂದ ಬೀದಿಗೆ ಬಿದ್ದ ನೂರಾರು ಮಂದಿಯ ಬದುಕು !

ಕಾರ್ಕಳದಲ್ಲಿ ಪರಶುರಾಮ ಥೀಮ್‌ ಪಾರ್ಕ್‌ ಆರಂಭಗೊಂಡು ಕರಾವಳಿಯ ಪ್ರವಾಸಿ ತಾಣವಾಗಬೇಕಿತ್ತು. ನಿತ್ಯವೂ ಸಾವಿರಾರು ಮಂದಿ ಈ ಥೀಮ್‌ ಪಾರ್ಕ್‌ಗೆ ಆಗಮಿಸಬೇಕಿತ್ತು. ಇದರಿಂದಾಗಿ ಸಾವಿರಾರು ಜನರು ಉದ್ಯೋಗ ದೊರಕುತ್ತಿತ್ತು. ಸಾವಿರಾರು ಕುಟುಂಬಗಳ ಜೀವನ ನಿರ್ವಹಣೆ ಸಾಧ್ಯವಾಗುತ್ತಿತ್ತು. ಆದ್ರೆ ಸದ್ಯ ಪರಿಸ್ಥಿತಿ ಭಿನ್ನವಾಗಿದೆ.

ಇದನ್ನೂ ಓದಿ : ಅಂದು ಸಾಮಾನ್ಯ ಪತ್ರಕರ್ತ. ಇಂದು ಫೈಯರ್‌ ಬ್ರ್ಯಾಂಡ್‌ ಶಾಸಕ : ಆರ್‌ಎಸ್‌ಎಸ್‌, ಬಿಜೆಪಿ ಮನಗೆದ್ದ ಕಾರ್ಕಳ ಶಾಸಕ ವಿ ಸುನೀಲ್ ಕುಮಾರ್‌

ಕಾರ್ಕಳ – ಉಡುಪಿ ಹೆದ್ದಾರಿಯ ಬೈಲೂರು ಗ್ರಾಮದ ಉಮಿಕಲ್‌ ಬೆಟ್ಟದಲ್ಲಿ ೪೫೦ ಅಡಿ ಎತ್ತರದಲ್ಲಿ ಪರಶುರಾಮ ಥೀಮ್‌ ಪಾರ್ಕ್‌ ನಿರ್ಮಾಣವಾಗುವ ಸುದ್ದಿ ಕೇಳುತ್ತಲೇ. ಹತ್ತಾರು ಮಂದಿ ಉಮಿಕಲ್‌ ಬೆಟ್ಟದ ಸುತ್ತಮುತ್ತಲೂ ಜಮೀನು ಖರೀದಿಸಿದ್ದರು. ಅಂಗಡಿ ಮುಂಗಟ್ಟುಗಳನ್ನು ತೆರೆದು ಭವಿಷ್ಯದ ಕನಸು ಕಂಡಿದ್ದರು. ಆದ್ರೀಗ ಕರಾವಳಿಯ ಪ್ರವಾಸೋದ್ಯಮಕ್ಕೆ ಮುಕುಣಮಣಿಯಂತೆ ಆಗಬೇಕಾಗಿದ್ದ ಪಾರ್ಕ್‌ಗೆ ನಿರ್ಬಂಧ ಬಿದ್ದಿರುವುದು ನೂರಾರು ಜನರಿಗೆ ಕಣ್ಣೀರು ತರಿಸಿದೆ.

ಕಾಂಗ್ರೆಸ್‌ ಸರಕಾರವಿದ್ರೂ ಕಂಚಿನ ಪ್ರತಿಮೆ ನಿರ್ಮಾಣವಾಗಿಲ್ಲ ಯಾಕೆ ?

ಪರಶುರಾಮ ಥೀಮ್‌ ಪಾರ್ಕ್‌ನಲ್ಲಿ ನಿರ್ಮಾಣಗೊಂಡಿರುವ ಕಂಚಿನ ಪ್ರತಿಮೆಯ ಅರ್ಧ ಭಾಗವನ್ನು ದುರಸ್ಥಿಯ ನೆಪದಲ್ಲಿ ನಿರ್ಮಿತಿ ಕೇಂದ್ರ ಕತ್ತರಿಸಿದೆ. ಶೀಘ್ರದಲ್ಲಿಯೇ ಮೂರ್ತಿಯನ್ನು ಪುನರ್‌ ಸ್ಥಾಪಿಸುವುದಾಗಿ ಅಧಿಕಾರಿಗಳು ಹೇಳುತ್ತಲೇ ಇದ್ದಾರೆ. ಆದರೆ ಇದುವರೆಗೂ ಪರಶುರಾಮನನ್ನು ನೋಡಲು ಸಾಧ್ಯವಾಗಿಲ್ಲ.

ಇನ್ನೊಂದೆಡೆಯಲ್ಲಿ ಕಂಚಿನ ಪ್ರತಿಮೆಯನ್ನು ಮರುಸ್ಥಾಪನೆ ಮಾಡಲು ಬಾಕಿ ಉಳಿದಿರುವ 5 ಕೋಟಿ ರೂಪಾಯಿಯನ್ನು ಬಿಡುಗಡೆ ಮಾಡುವಂತೆ ನಿರ್ಮಿತಿ ಕೇಂದ್ರದ ಅಧಿಕಾರಿಗಳು ರಾಜ್ಯ ಸರಕಾರವನ್ನು ಆಗ್ರಹಿಸಿದ್ದರು. ಈ ಮೂಲಕ ಸರಕಾರ ಹಣ ನೀಡದ ಕಾರಣಕ್ಕೆ ಮೂರ್ತಿ ಪುನರ್‌ ಸ್ಥಾಪನೆ ಆಗಿಲ್ಲ ಅನ್ನೋದು ಬಯಲಾಗಿತ್ತು. ಕಾಂಗ್ರೆಸ್‌ ಸರಕಾರ ಬಾಕಿ ಪಾವತಿ ಮಾಡುವ ಮೂಲಕ ಪರಶುರಾಮ ಮೂರ್ತಿಯನ್ನು ಪುನರ್‌ ಸ್ಥಾಪನೆ ಮಾಡಿದ್ರೆ ವಿವಾದದ ಸತ್ಯಾಸತ್ಯತೆ ಹೊರ ಬೀಳಲಿದೆ.

ಇದನ್ನೂ ಓದಿ : ಪ್ರಧಾನ ಮಂತ್ರಿ ಶ್ರಮ ಯೋಗಿ ಮನ್-ಧನ್ ಯೋಜನೆ : ದಿನಕ್ಕೆ ರೂ 2 ಉಳಿಸಿದ್ರೆ, ಪ್ರತೀ ವರ್ಷ ಸಿಗುತ್ತೆ ರೂ 36,000

ಪರಶುರಾಮ ಮೂರ್ತಿಯನ್ನು ತೆಗೆದಿರುವುದು ನಿರ್ಮಿತಿ ಕೇಂದ್ರದವರೇ ಎಂದು ಅಧಿಕಾರಿಗಳು ಹೇಳುತ್ತಿದ್ದರೂ ಕೂಡ ಸುನಿಲ್‌ ಕುಮಾರ್‌ ಅವರ ವಿರುದ್ದ ಕಾಂಗ್ರೆಸ್‌ ನಾಯಕರ ಆರೋಪ ಇನ್ನೂ ನಿಂತಿಲ್ಲ. ಸರಕಾರ ಬಾಕಿ ಪಾವತಿ ಮಾಡುವ ಮೂಲಕ ಪರಶುರಾಮ ಮೂರ್ತಿಯ ನಿರ್ಮಾಣದ ಕಾರ್ಯ ಮಾಡಬೇಕು. ಆದರೆ ಸರಕಾರ ಮೂರ್ತಿ ಸ್ಥಾಪನೆಗೆ ಮನಸ್ಸು ಮಾಡುತ್ತಿಲ್ಲ.

ಕರಾವಳಿಯನ್ನು ಪರಶುರಾಮನ ಕ್ಷೇತ್ರ ಎಂದು ಕರೆಯುತ್ತಾರೆ. ಬೆಟ್ಟದ ಮೇಲೆ ಪರಶುರಾಮ ಮೂರ್ತಿಯ ಸ್ಥಾಪನೆಯ ಹಿಂದೆ ಸಾಕಷ್ಟು ಧಾರ್ಮಿಕ ನಂಬಿಕೆಯೂ ಇತ್ತು. ವಿಶಾಲವಾದ ಬೆಟ್ಟದ ಮೇಲೆ ಪರಶುರಾಮನ ಪುತ್ಥಳಿ, ಆರ್ಟ್‌ ಗ್ಯಾಲರಿ, ಬಯಲು ರಂಗ ಮಂದಿರ ಜೊತೆಗೆ ಭಜನಾ ಮಂದಿರ ನಿರ್ಮಾಣ ಮಾಡಲಾಗಿತ್ತು. ಉತ್ತರ ಕನ್ನಡದ ಹೊನ್ನಾವರ ತಾಲೂಕಿನ ಕೃಷ್ಣ ನಾಯ್ಕ ಅವರು ಪರಶುರಾಮನ ಕಂಚಿನ ಮೂರ್ತಿಯನ್ನು ನಿರ್ಮಾಣ ಮಾಡಿದ್ದರು.

ಇದನ್ನೂ ಓದಿ : ಬೆಂಗಳೂರು ಉತ್ತರಕ್ಕೆ ಸದಾನಂದ ಗೌಡರ ಬದಲು ಸಿಟಿ ರವಿಗೆ ಟಿಕೆಟ್‌ ! ಹೈಕಮಾಂಡ್‌ಗೆ ತಲೆನೋವಾದ ಸಿಟಿ ರವಿ – ಶೋಭಾ ಟಿಕೆಟ್‌ ಫೈಟ್‌

ಪರಶುರಾಮನ ಮೂರ್ತಿಗೆ ಕಂಚಿನ ಜೊತೆಗೆ ಉಕ್ಕು ಬೆರೆಸಿ ಕಡಿಮೆ ಖರ್ಚಿನಲ್ಲಿ ಮೂರ್ತಿ ತಯಾರಿಸಲಾಗಿದೆ. ಜೊತೆಗೆ ಫೈಬರ್‌ ಬಳಕೆ ಮಾಡಲಾಗಿದೆ ಅನ್ನೋದು ಸದ್ಯದ ಆರೋಪ. ಜಿಲ್ಲಾಧಿಕಾರಿಗಳು, ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಕಾಮಗಾರಿ ನಡೆದಿದ್ದರೂ ಕೂಡ ಶಾಸಕರ ಮೇಲೆ ಆರೋಪ ಮಾಡುತ್ತಿರುವುದು ಎಷ್ಟು ಸರಿ ಅನ್ನೋ ಪ್ರಶ್ನೆ ಎದ್ದಿದೆ. ಕರಾವಳಿಯಲ್ಲಿ ಪರಶುರಾಮ ಥೀಮ್‌ ಪಾರ್ಕ್‌ ಆರಂಭವಾಗುವುದಕ್ಕೆ ಲಕ್ಷಾಂತರ ಮಂದಿ ಸಂಭ್ರಮಿಸಿದ್ದರು. ಆದ್ರೀಗ ಪರಶುರಾಮ ಚುನಾವಣಾ ಅಸ್ತ್ರವಾಗಿದ್ದಾನೆ ಅಂತ ಹಲವರು ಬೇಸರ ವ್ಯಕ್ತಪಡಿಸಿದ್ದಾರೆ.

karkala parashurama theme park investigation to CID. Congress conspiracy against Karkala Sunil Kumar

Comments are closed.