ಕರ್ನಾಟಕ ವಿಧಾನಸಭಾ ಚುನಾವಣೆ 2023 : ಯಾರೇ ಗೆದ್ದರೂ ಈ ಬಾರಿಯೂ ಜೆಡಿಎಸ್‌ ಕಿಂಗ್‌ ಮೇಕರ್‌ ?

ಬೆಂಗಳೂರು : ವಿಧಾನಸಭಾ ಚುನಾವಣೆ ಕರ್ನಾಟಕದಲ್ಲಿ ರಂಗು ಪಡೆದುಕೊಂಡಿದೆ. ರಾಜಕೀಯ ಪಕ್ಷಗಳ ನಾಯಕರು ಅಬ್ಬರದ ಪ್ರಚಾರದ ನಡುವಲ್ಲೇ ಪರಸ್ಪರ ಕೆಸರೆರೆಚಾಟದಲ್ಲಿ ತೊಡಗಿದ್ದಾರೆ. ಇನ್ನೊಂದೆಡೆಯಲ್ಲಿ ಯಾವ ಪಕ್ಷ ಈ ಬಾರಿ ಅಧಿಕಾರಕ್ಕೆ ಬರುತ್ತೆ ಅನ್ನೋ ಲೆಕ್ಕಾಚಾರವೂ ಶುರುವಾಗಿದೆ. ಈ ನಡುವಲ್ಲೇ ಹಲವು ಸುದ್ದಿ ಸಂಸ್ಥೆಗಳು ನೀಡಿರುವ ಸಮೀಕ್ಷೆಗಳ ಪ್ರಕಾರ ಯಾವುದೇ ಪಕ್ಷಗಳು ಸ್ವತಂತ್ರ ಬಲದಲ್ಲಿ ಅಧಿಕಾರಕ್ಕೆ ಬರುವುದು ಕಷ್ಟ ಸಾಧ್ಯ ಎನ್ನಲಾಗುತ್ತಿದೆ. ಕಳೆದ ಚುನಾವಣೆಗೆ ಹೋಲಿಸಿದ್ರೆ ಈ ಬಾರಿ ಅಧಿಕ ಸ್ಥಾನಗಳನ್ನು ಗೆಲ್ಲುವ ಮೂಲಕ ಜೆಡಿಎಸ್‌ ಕಿಂಗ್‌ ಮೇಕರ್‌ (JDS Kingmaker) ಆಗುವುದು ಖಚಿತ ಅನ್ನೋ ಮಾತುಗಳು ಕೇಳಿಬರುತ್ತಿವೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಜೆಡಿಎಸ್‌ ಪಕ್ಷದ ಜೊತೆ ಸೇರಿ ಸರಕಾರ ರಚಿಸಿತ್ತು. ಜೆಡಿಎಸ್- ಕಾಂಗ್ರೆಸ್‌ ಸಮ್ಮಿಶ್ರ ಸರಕಾರದಲ್ಲಿ ಎಚ್.ಡಿ.ಕುಮಾರಸ್ವಾಮಿ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರದ ಗದ್ದುಗೆಗೆ ಏರಿದ್ದರು. ನಂತರದಲ್ಲಿ ಕಾಂಗ್ರೆಸ್‌ ಶಾಸಕರ ಮುನಿಸು ಸರಕಾರದ ಪತನಕ್ಕೆ ಕಾರಣವಾಗಿತ್ತು. ಆಪರೇಷನ್‌ ಕಮಲದ ಮೂಲಕ ಕಾಂಗ್ರೆಸ್‌ ಶಾಸಕರನ್ನು ತನ್ನೆಡೆಗೆ ಸೆಳೆದ ಬಿಜೆಪಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದಿತ್ತು. ಅರ್ಧದಲ್ಲಿಯೇ ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಕೆಳಗಿಳಿಸಿದ ಬಿಜೆಪಿ ಬಸವರಾಜ್‌ ಬೊಮ್ಮಾಯಿ ಅವರನ್ನು ಸಿಎಂ ಸ್ಥಾನದಲ್ಲಿ ಕುಳ್ಳಿರಿಸಿ ಅವಧಿ ಪೂರ್ಣ ಅಧಿಕಾರ ನಡೆಸಿತ್ತು.

ಬಿಜೆಪಿ ನಾಯಕರ ನಡುವಿನ ಆಂತರಿಕ ಕಚ್ಚಾಟ, ಬಿ.ಎಸ್.ಯಡಿಯೂರಪ್ಪ ಚುನಾವಣಾ ರಾಜಕೀಯದಿಂದ ದೂರವಾಗಿರುವುದು, ಟಿಕೆಟ್‌ ಸಿಗದ ನಾಯಕರ ಅಸಮಾಧಾನ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಮೇಲೆ ಹೊಡೆತ ಬೀಳುವ ಸಾಧ್ಯತೆಯಿದೆ. ಇನ್ನೊಂದೆಡೆಯಲ್ಲಿ ಕಾಂಗ್ರೆಸ್‌ ಪಕ್ಷದಲ್ಲಿಯೂ ಟಿಕೆಟ್‌ ಸಿಗದೇ ಪಕ್ಷಾಂತರ ಮಾಡಿರುವ ನಾಯಕರ ಸಂಖ್ಯೆಗೇನೂ ಕಡಿಮೆಯಿಲ್ಲ. ಜೊತೆಗೆ ಸಿಎಂ ಕುರ್ಚಿಗಾಗಿ ಡಿಕೆ ಶಿವಕುಮಾರ್‌ ಹಾಗೂ ಸಿದ್ದರಾಮಯ್ಯ ನಡುವಿನ ತಿಕ್ಕಾಟ ಚುನಾವಣೆಯ ಮೇಲೆ ನೇರ ಪರಿಣಾಮ ಬೀರುವುದು ಖಚಿತ ಅನ್ನೋದು ರಾಜಕೀಯ ಪಂಡಿತರ ಲೆಕ್ಕಾಚಾರ. ಇದನ್ನೂ ಓದಿ : HD Kumaraswamy : ಒಂದೇ ಕಲ್ಲಿಗೆ ಎರಡು ಹಕ್ಕಿ : ಮುಸ್ಲೀಂ ಮತ ಓಲೈಕೆಗೆ ಇಬ್ರಾಹಿಂಗೆ ರಾಜ್ಯಾಧ್ಯಕ್ಷ ಪಟ್ಟ

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಅನಾರೋಗ್ಯಕ್ಕೆ ತುತ್ತಾಗಿದ್ದು, ಈ ಬಾರಿಯ ಚುನಾವಣೆಯ ಸಂಪೂರ್ಣ ಹೊಣೆ ಇದೀಗ ಎಚ್.ಡಿ.ಕುಮಾರಸ್ವಾಮಿ ಅವರ ಹೆಗಲೇರಿದೆ. ಜೆಡಿಎಸ್‌ ಪಕ್ಷದಲ್ಲೀಯೂ ಟಿಕೆಟ್‌ ಸಿಗದ ನಾಯಕರ ಅಸಮಾಧಾನಕ್ಕೇನು ಕಡಿಮೆಯಿಲ್ಲ. ಆದರೆ ಬಿಜೆಪಿ, ಕಾಂಗ್ರೆಸ್‌ ತೊರೆದ ಹಲವು ನಾಯಕರು ಜೆಡಿಎಸ್‌ ಸೇರಿದಂತೆ ವೈ.ಎಸ್.ವಿ. ದತ್ತ ಸೇರಿದಂತೆ ಹಲವು ನಾಯಕರು ಜೆಡಿಎಸ್‌ ಪಕ್ಷಕ್ಕೆ ಮರಳಿರುವುದು ತೆನೆಹೊತ್ತ ರೈತ ಮಹಿಳೆಗೆ ಹೊಸ ಹುರುಪು ತಂದಂತಿದೆ. ಚುನಾವಣಾ ಪ್ರಚಾರದ ನಡುವಲ್ಲೇ ಅನಾರೋಗ್ಯಕ್ಕೆ ತುತ್ತಾಗಿರುವ ಮಾಜಿ ಸಿಎಂ ಕುಮಾರಸ್ವಾಮಿ ಆಸ್ಪತ್ರೆಯಿಂದಲೇ ಚುನಾವಣೆ ತಂತ್ರಗಾರಿಕೆ ನಡೆಸುತ್ತಿದ್ದಾರೆ. ಆದರೆ ರೇವಣ್ಣ ಕುಟುಂಬದ ನಡುವಿನ ವೈಮಸ್ಸು ಚುನಾವಣೆಯ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಅನ್ನೋದು ಚುನಾವಣಾ ಫಲಿತಾಂಶದ ನಂತರವಷ್ಟೇ ಗೊತ್ತಾಗಬೇಕಾಗಿದೆ. ಇದನ್ನೂ ಓದಿ : Krishnamurthy Acharya : ಡಿಕೆಶಿಯ ರಾಜಿ ಸಂಧಾನಕ್ಕೆ ಒಪ್ಪುವರೇ ಕೃಷ್ಣಮೂರ್ತಿ ಆಚಾರ್ಯ ?

ಹಲವು ಸುದ್ದಿ ಸಂಸ್ಥೆಗಳು ನಡೆಸಿರುವ ಸಮೀಕ್ಷೆಗಳ ಪ್ರಕಾರ ಅಂಕಿ ಸಂಖ್ಯೆಗಳನ್ನು ಅವಲೋಕಿಸಿದ್ರೆ, ಆಡಳಿತರೂಢ ಬಿಜೆಪಿ 90 ರಿಂದ 105 ಸ್ಥಾನಗಳನ್ನು ಪಡೆಯಲಿದೆ. ಇನ್ನು ಕಾಂಗ್ರೆಸ್‌ ಪಕ್ಷ 81 ರಿಂದ 90 ಸ್ಥಾನಕ್ಕೆ ತೃಪ್ತಿಪಟ್ಟು ಕೊಳ್ಳಬೇಕಾಗಿದೆ. ಎರಡನೇ ವಿರೋಧ ಪಕ್ಷವಾಗಿರುವ ಜೆಡಿಎಸ್‌ ಈ ಬಾರಿಯ ಚುನಾವಣೆಯಲ್ಲಿ 29 ರಿಂದ 50 ಸ್ಥಾನಗಳನ್ನು ಗಳಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಈ ಬಾರಿಯ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ನಿಶ್ಚಳ ಬಹುಮತ ಬಾರದೇ ಇದ್ರೆ ಜೆಡಿಎಸ್‌ ಮತ್ತೊಮ್ಮೆ ರಾಜ್ಯದಲ್ಲಿ ಕಿಂಗ್‌ ಮೇಕರ್‌ (JDS Kingmaker ) ಆಗಲಿದೆ. ಆದರೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಸಿಎಂ ಕುಮಾರಸ್ವಾಮಿ ಯಾವ ಪಕ್ಷವನ್ನು ಕೈ ಹಿಡಿಯಲಿದ್ದಾರೆ ಅನ್ನೋದು ಸದ್ಯದ ಕುತೂಹಲ.

Comments are closed.