Praveen Nettaru wife : ನುಡಿದಂತೆ ನಡೆದ ಬಿಜೆಪಿ ಸರ್ಕಾರ: ಪ್ರವೀಣ್ ನೆಟ್ಟಾರು ಪತ್ನಿಗೆ ಸರಕಾರಿ ಉದ್ಯೋಗ

ಬೆಂಗಳೂರು : ಚುನಾವಣೆ ಹೊತ್ತಿನಲ್ಲಿ ತನ್ನ ವಾಗ್ದಾನಗಳನ್ನು ಈಡೇರಿಸಿಕೊಳ್ಳುವ ಮೂಲಕ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಕಾರ್ಯಕರ್ತರ ಮನವೊಲಿಸುವ ಪ್ರಯತ್ನ ಮುಂದುವರೆಸಿದೆ. ಜುಲೈ 26 ರಂದು ಹತ್ಯೆಯಾದ ಬಿಜೆಪಿ ಯುವಮೋರ್ಚಾ ದಕ್ಷಿಣ ಕನ್ನಡ ಕಾರ್ಯಕಾರಿಣಿ ಸದಸ್ಯ ಪ್ರವೀಣ್ ನೆಟ್ಟಾರು ಪತ್ನಿಗೆ ಸರ್ಕಾರ ಸಿ ಗ್ರೇಡ್ ಗುತ್ತಿಗೆ ಉದ್ಯೋಗ ನೀಡಿದೆ. ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಪತ್ನಿ (Praveen Nettaru wife) ನೂತನ ಕುಮಾರಿಗೆ ಸಿಎಂ ಸಚಿವಾಲಯದಲ್ಲಿ ಸಿ ದರ್ಜೆಯ ಗುತ್ತಿಗೆ ನೌಕರಿ ನೀಡಿ ಸರ್ಕಾರ ಗುರುವಾರ ಆದೇಶ ಹೊರಡಿಸಿದೆ.

ಜುಲೈ26 ರಂದು ತನ್ನ ಕೋಳಿಮಾಂಸದ ಅಂಗಡಿ ಬಳಿ ನಿಂತಿದ್ದ ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತ ಪ್ರವೀಣ್ ನೆಟ್ಟಾರುವನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ್ದರು. ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯದಲ್ಲೇ ಪ್ರವೀಣ್ ನೆಟ್ಟಾರು ಸಾವನ್ನಪ್ಪಿದ್ದರು. ಈ ಹತ್ಯೆ ಬಳಿಕ ಬಿಜೆಪಿ ಸರ್ಕಾರ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಬಿಜೆಪಿ ತನ್ನ ಕಾರ್ಯಕರ್ತರನ್ನು ರಕ್ಷಿಸಿಕೊಳ್ಳುವಲ್ಲಿ ವಿಫಲವಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿತ್ತು.

ಅಲ್ಲದೇ ಮನೆಯ ದುಡಿಯುವ ಮಗನನ್ನು ಕಳೆದುಕೊಂಡ ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ಸರ್ಕಾರ ಸಹಾಯಹಸ್ತ ನೀಡಬೇಕೆಂಬ ಆಗ್ರಹವೂ ವ್ಯಕ್ತವಾಗಿತ್ತು. ಸ್ವತಃ ಸಿಎಂ ಬಸವರಾಜ್ ಬೊಮ್ಮಾಯಿ ಪ್ರವೀಣ್ ನಿವಾಸಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದರು. ಇದಾದ ಬಳಿಕ ಸಪ್ಟೆಂಬರ್ 10 ರಂದು ದೊಡ್ಡಬಳ್ಳಾಪುರದಲ್ಲಿ ನಡೆದ ಜನಸ್ಪಂದನಾ ಸಭೆಯಲ್ಲಿ ಪ್ರವೀಣ್ ನೆಟ್ಟಾರು ಕುಟುಂಬದ ನೆರವಿಗಾಗಿ ಪ್ರವೀಣ್ ಪತ್ನಿ ನೂತನಕುಮಾರಿಗೆ ಸರ್ಕಾರಿ ಉದ್ಯೋಗ ನೀಡುವುದಾಗಿ ಘೋಷಿಸಿದ್ದರು.

ಘೋಷಣೆ ಮಾಡಿದಂತೆ ಈಗ ಸಿಎಂ ಕಾರ್ಯಾಲಯದಲ್ಲಿ ಉದ್ಯೋಗ ನೀಡಲಾಗಿದೆ. ಗುತ್ತಿಗೆ ಆಧಾರದಲ್ಲಿ ಸಹಾಯಕ ಸಿ ದರ್ಜೆ ಹುದ್ದೆ ನೀಡಿದ್ದು, 30,350 ರೂಪಾಯಿ ವೇತನ ನಿಗದಿಪಡಿ ಸಿಸರ್ಕಾರ ಆದೇಶ ಹೊರಡಿಸಿದೆ. ಅಲ್ಲದೇ ತಿಂಗಳ ಒಳಗೆ ಅವರ ಎಲ್ಲ ಶೈಕ್ಷಣಿಕ ದಾಖಲೆಗಳನ್ನು ಒದಗಿಸುವಂತೆ ಸೂಚಿಸಲಾಗಿದೆ. ಆದರೆ ನೂತನಾ ಅವರಿಗೆ ಕೇವಲ ಗುತ್ತಿಗೆ ಆಧಾರದಲ್ಲಿ ಕೆಲಸ ನೀಡಿರೋದು ಈಗ ಬಿಜೆಪಿ ಕಾರ್ಯಕರ್ತರ ಅಸಮಧಾನಕ್ಕೆ ಕಾರಣವಾಗಿದ್ದು, ಬಿಜೆಪಿ ಸರ್ಕಾರ ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ಶಾಶ್ವತವಾದ ಪರಿಹಾರ ಒದಗಿಸಬೇಕೆಂದು ಆಗ್ರಹಿಸಿದ್ದಾರೆ‌.

ಇದನ್ನೂ ಓದಿ : Siddaramaiah : ಆರ್​​ಎಸ್​ಎಸ್ ಬ್ಯಾನ್​ ಮಾಡಿ ಎನ್ನುವ ಸಿದ್ದರಾಮಯ್ಯ ಸೂಕ್ತ ಕಾರಣ ನೀಡಲಿ : ಹೆಚ್​ಡಿಕೆ

ಇದನ್ನೂ ಓದಿ : ಪ್ರವೀಣ್‌ ನೆಟ್ಟಾರು ಮನೆಗೆ ಕಾಂಗ್ರೆಸ್‌ ನಾಯಕರ ಭೇಟಿ : ಧಿಕ್ಕಾರ ಕೂಗಿದ ಸಂಬಂಧಿಕರು

Karnataka BJP government has given a government job to the wife of BJP activist Praveen Nettaru

Comments are closed.