ಸುನಿಲ್‌ ಕುಮಾರ್‌ ಆರ್ಭಟಕ್ಕೆ ನಲುಗಿದ ಸರಕಾರ : ವಿಪಕ್ಷ ನಾಯಕನಾಗಿ ಎಡವಿದ್ರಾ ಆರ್‌.ಅಶೋಕ್‌ ?

ಬೆಳಗಾವಿ ಅಧಿವೇಶನ (Belagavi session) : ಇದೇ ಮೊದಲ ಬಾರಿಗೆ ಆರ್‌.ಅಶೋಕ್‌ (opposition leader R Ashok) ಪ್ರತಿಪಕ್ಷ ನಾಯಕರಾಗಿ ಸದನದಲ್ಲಿ ಸರಕಾರವನ್ನು ಎದುರಿಸುತ್ತಿದ್ದಾರೆ. ಆದರೆ ಸದನದಲ್ಲಿ ಈ ಬಾರಿ ಸರಕಾರಕ್ಕೆ ತಲೆನೋವಾಗಿರುವುದು ಕಾರ್ಕಳದ ಬಿಜೆಪಿ ಶಾಸಕ ಸುನಿಲ್‌ ಕುಮಾರ್ ( V Sunil Kumar).‌ ಆದರೆ ವಿಪಕ್ಷ ನಾಯಕರಾಗಿ ಆರ್.‌ ಅಶೋಕ್‌ ಸಪ್ಪೆ ಅನಿಸಿದಂತಿದೆ.

ಬೆಳಗಾವಿ ಅಧಿವೇಶನ (Belagavi session) ಹಲವು ವಿಚಾರಗಳಿಗೆ ಬಾರೀ ಸದ್ದು ಮಾಡುತ್ತಿದೆ. ಇದೇ ಮೊದಲ ಬಾರಿಗೆ ಆರ್‌.ಅಶೋಕ್‌ (opposition leader R Ashok) ಪ್ರತಿಪಕ್ಷ ನಾಯಕರಾಗಿ ಸದನದಲ್ಲಿ ಸರಕಾರವನ್ನು ಎದುರಿಸುತ್ತಿದ್ದಾರೆ. ಆದರೆ ಸದನದಲ್ಲಿ ಈ ಬಾರಿ ಸರಕಾರಕ್ಕೆ ತಲೆನೋವಾಗಿರುವುದು ಕಾರ್ಕಳದ ಬಿಜೆಪಿ ಶಾಸಕ ಸುನಿಲ್‌ ಕುಮಾರ್ ( V Sunil Kumar).‌ ಆದರೆ ವಿಪಕ್ಷ ನಾಯಕರಾಗಿ ಆರ್.‌ ಅಶೋಕ್‌ ಸಪ್ಪೆ ಅನಿಸಿದಂತಿದೆ.

ರಾಜ್ಯ ಬಿಜೆಪಿಗೆ ಆಡಳಿತದ ದೃಷ್ಟಿಯಿಂದ ಒಂದು ಬಿರುದು ಮತ್ತೊಂದು ಕಳಂಕ ಒಟ್ಟೊಟ್ಟಿಗೆ ಅಂಟಿದೆ. ಅದೇನೆಂದರೆ ರಾಜ್ಯ ಬಿಜೆಪಿ ಆಡಳಿತ ಪಕ್ಷವಾಗುವುದಕ್ಕಿಂತ ವಿಪಕ್ಷವಾಗಿ ಉತ್ತಮ ಕಾರ್ಯ ಮಾಡುತ್ತದೆ ಹೀಗಾಗಿ ಬಿಜೆಪಿ ವಿಪಕ್ಷ ಸ್ಥಾನಕ್ಕೆ ಸೂಕ್ತ ನ್ಯಾಯ ನೀಡುತ್ತದೆ ಎಂದು ಅನೇಕರು ಹೇಳುತ್ತಾರೆ. ವಾಸ್ತವವಾಗಿ ಈ ಮಾತು ಸತ್ಯಕ್ಕೆ ಹತ್ತಿರವೂ ಇದೆ.

ಬಿಬಿ ಶಿವಪ್ಪ, ಬಿಎಸ್ ಯಡಿಯೂರಪ್ಪ, ದಿ.ಅನಂತ್ ಕುಮಾರ್, ಈಶ್ವರಪ್ಪ ಅವರ ಆದಿಯಾಗಿ ಬಿಜೆಪಿ ವಿಪಕ್ಷವಾಗಿ ನಡೆದು ಕೊಂಡಿತ್ತು. ಅದ್ರಲ್ಲೂ ಬಿಎಸ್ ಯಡಿಯೂರಪ್ಪ ನಿಂತು ಗುಡುಗುಗಿದರೆ ವಿಧಾನಸೌಧ ನಡುಗುವುದು ಅನ್ನುವ ವಾಕ್ಯ ಸುಮ್ಮನೆ ಪ್ರಾಸಕ್ಕಾಗಿ ಜನ್ಮತಾಳಿದ್ದಲ್ಲ.

Karnataka Congress Government Shaken by Sunil Kumar R. Ashok failed as the leader of the opposition in Belagavi session
image Credit to Original Source

ಆದರೆ ಇತ್ತಿಚೆಗೆ ಸೋತ ಬಿಜೆಪಿಯ ಮನೆಯೊಳಗಿನ ವಾತಾವರಣ, ಆಯ್ಕೆ ಪ್ರಕ್ರಿಯೆ ಇದ್ಯಾವುದು ಹೋರಾಟ ಮಾಡುವ ಬಿಜೆಪಿಯಂತಾಗಲಿ, ಅಥವಾ ಹೋರಾಟ_ಮಾಡಿದ ಬಿಜೆಪಿಯಂತೆಯೂ ಕಾಣುತ್ತಿಲ್ಲ. ಈ ಮಾತಿಗೆ ಸ್ಪಷ್ಟ ಉದಾಹರಣೆಯಾಗಿ ಕಾಣುತ್ತಿರುವುದು ಅಂತೆ ಕಂಡಿದ್ದು ಪ್ರಸ್ತುತ ನಡೆಯುತ್ತಿರುವ ಬೆಳಗಾವಿ ಚಳಿಗಾಲದ ಅಧಿವೇಶನ.

ಸಭೆ ನಡೆಸಿಲ್ಲ, ಶಾಸಕಾಂಗ ಮೀಟಿಂಗ್‌ ನಡೆಸಿಲ್ಲ

ಅಧಿವೇಶನ ನಡೆಯುವಾಗ ಆಡಳಿತ ಪಕ್ಷವೇ ಆಗಿರಲಿ, ಇಲ್ಲಾ ವಿಪಕ್ಷವೇ ಆಗರಿಲಿ. ಸದನದಲ್ಲಿ ಮಾಡಬೇಕಾದ ಚರ್ಚೆ, ತೆಗೆದುಕೊಳ್ಳಬೇಕಾದ ನಿರ್ಣಯ ಸಂಘಟಿತವಾಗಿರಬೇಕು. ಆದರೆ ಅದ್ಯಾವುದನ್ನೂ ಕೂಡ ವಿಪಕ್ಷವಾಗಿ ಬಿಜೆಪಿ ಮಾಡಿದಂತೆ ಕಾಣುತ್ತಿಲ್ಲ. ಸದನ ನಡೆಯುತ್ತಿದೆ ಒಂದು ಸಭೆ ಮಾಡೋಣ, ಹಿರಿಯ/ಕಿರಿಯ ಶಾಸಕರ ಜೊತೆ ಕುಳಿತು ಅಭಿಪ್ರಾಯ ಪಡೆದು, ಸದನದಲ್ಲಿ ಹೇಗೆ ವಿಷಯ ಎತ್ತೋಣ ಎಂದು ಎಲ್ಲರನ್ನೂ ವಿಶ್ವಾಸಕ್ಕೆ ಪಡೆಯುವ ಜವಾಬ್ದಾರಿಯನ್ನು ಶಾಸಕಾಂಗ ನಾಯಕನಾಗಿ ಅಶೋಕ್ ಮಾಡಬೇಕಿದೆ.

ಇದನ್ನೂ ಓದಿ : ಉತ್ತರದಲ್ಲಿ ಬಿಜೆಪಿ ದಿಗ್ವಿಜಯ : ಟ್ರೆಂಡ್‌ ಆಗ್ತಿದೆ ಮೋದಿ ಗ್ಯಾರಂಟಿ

ಆದರೆ ಈ ಕಾರ್ಯವನ್ನು ವಿಪಕ್ಷ ನಾಯಕರು ಮಾಡಿಲ್ಲ. ಈ ಹಿಂದೆ ಸಿದ್ದರಾಮಯ್ಯನವರು ವಿಪಕ್ಷ ನಾಯಕರಾಗಿದ್ದಾಗ ಶಾಸಕಾಂಗ ಸಭೆ ಮಾತ್ರವಲ್ಲ, ಅದನ್ನು ಹೊರತು ಪಡಿಸಿ ಹಿರಿಯ ಶಾಸಕರನ್ನು ಒಗ್ಗೂಡಿಸಿ ಸದನ ಆರಂಭ ಆಗುವ ಒಂದು ತಾಸು ಮೊದಲು ಸಭೆ ನಡೆಸಿ ಸರಕಾರವನ್ನು ಕಟ್ಟಿ ಹಾಕುವ ಪ್ಲಾನ್ ನಡೆಸುತ್ತಿದ್ದರು. ಆದರೆ ಅದ್ಯಾವುದನ್ನೂ ಆರ್.ಅಶೋಕ್ ವಿಪಕ್ಷ ನಾಯಕನಾದ ಮೇಲೆ ಮಾಡಿಲ್ಲ.ಯಾರು ಹೇಗೆ ಮಾತನಾಡಬೇಕು,ಯಾವ ವಿಷಯ ಹೈಪ್ ಮಾಡಬೇಕು ಎನ್ನೋದು ಸ್ವತಃಹ ಅಶೋಕ್ ಅವರಿಗೆ ಗೊತ್ತಿದ್ದಂತೆ ಕಾಣುತ್ತಿತ್ತು

ವಿರೋಧ ಪಕ್ಷದ ನಾಯಕರಾಗಿರುವ ಆರ್.ಅಶೋಕ್ ‌ಸತತ ಏಳು ಬಾರಿ ಶಾಕರಾಗಿ ಆಯ್ಕೆಯಾಗಿದ್ದಾರೆ. ಉಪಮುಖ್ಯಮಂತ್ರಿಯಾಗಿ, ಗೃಹ ಸಚಿವರಾಗಿ, ಆರೋಗ್ಯ, ಸಾರಿಗೆ, ಕಂದಾಯ ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ. ರಾಜಕೀಯದಲ್ಲಿ ಅಪಾರವಾದ ಅನುಭವೂ ಇದೆ. ಆದರೆ ಆರ್‌.ಅಶೋಕ್‌ ವಿಪಕ್ಷ ನಾಯಕರಾಗಿ ಚಾಪು ಮೂಡಿಸುತ್ತಾರಾ? ಈ ಪ್ರಶ್ನೆಗೆ ಉತ್ತರವನ್ನು ಈಗಲೇ ಹೇಳೋದು ಕಷ್ಟ. ಅದಕ್ಕೆ ಕಾರಣ ಏನು ? ಪ್ರಮುಖವಾಗಿ ಆರ್‌.ಅಶೋಕ್‌ ಅವರು ಮಾತನಾಡುವಾಗ ಕನ್ನಡ ಸ್ಪಷ್ಟವಾಗಿಲ್ಲ. ಅದು ಸುಧಾರಣೆಯಾಗಬೇಕಾಗಿದೆ.

ಇನ್ನು ಸದನದಲ್ಲಿ ಮಾತನಾಡುವ ವೇಳೆಯಲ್ಲಿ ಆರ್‌.ಅಶೋಕ್‌ಗೆ ಭಾಷೆಯ ಹಿಡಿತ ಸಿಗುತ್ತಿಲ್ಲ. ವಾಕ್ಯ ರೂಪದಲ್ಲಿ ವಿಚಾರ ಪ್ರಸ್ತಾಪ ಮಾಡುವಾಗ ಸೆಂಟೆನ್ಸ್ ಫಾರ್ಮೆಶನ್ ಇದ್ದರೆ ಕೇಳುಗರಿಗೂ ನೋಡುಗರಿಗೂ ಖುಷಿ ನೀಡುತ್ತದೆ ಮತ್ತು ಗಮನವಿಟ್ಟು ಕೇಳಬೇಕು ಎನಿಸುತ್ತದೆ. ನಿರರ್ಗಳವಾಗಿ ಗಂಟೆ ಗಟ್ಟಲೆ ಬೋರ್ ಆಗದ ರೀತಿ ಮಾತನಾಡುವ, ಆಡಳಿತ ಪಕ್ಷವನ್ನು ಶಬ್ದಗಳಿಂದ ಚುಚ್ಚುವ ತಿಳಿ ಹಾಸ್ಯದಿಂದ ಕೆದಕುವ, ಆಕ್ರೋಶದಿಂದ ಎದೆಯುಬ್ಬಿಸಿ ಪ್ರಶ್ನಿಸುವ ಗತ್ತು ಗಾಂಭೀರ್ಯವನ್ನು ಅಶೋಕ್ ಇನ್ನಷ್ಟೇ ತೋರಬೇಕಿದೆ.

ಸದನದಲ್ಲಿ ವಿಪಕ್ಷ ನಾಯಕರಾದವರ ಮಾತಿಗೆ ಉಳಿದ ಶಾಸಕರ ಬೆಂಬಲ ಸಿಗುವ ವಾತಾವರಣವನ್ನು ಸೃಷ್ಟಿಸಬೇಕಾಗಿದೆ. ಈ ಬಾರಿ ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ವಿಪಕ್ಷ ನಾಯಕ ಆರ್.ಅಶೋಕ್‌ ಅವರಿಗಿಂತ ಕಾರ್ಕಳ ಶಾಸಕ ಸುನಿಲ್‌ ಕುಮಾರ್‌ ಮಿಂಚಿದ್ದೇ ಹೆಚ್ಚು. ಸುನೀಲ್ ಒಂದು ವಾರದ ಕಲಾಪದಲ್ಲಿ ಆರಂಭದ ಎರಡು – ಮೂರು ದಿನ ಬಹಳ ಪರಿಣಾಕಾರಿಯಾಗಿ ಮಾತನಾಡಿದ್ದಾರೆ.

ವಿಧಾನಸಭಾ ಮುಖ್ಯ ಸಚೇತಕರಾಗಿ ಕೆಲಸ ಮಾಡಿದ ಅನುಭವ ಇರುವ ವಿ ಸುನಿಲ್‌ ಕುಮಾರ್‌ ಬಿಜೆಪಿ ಪಕ್ಷಕ್ಕೆ ಆಗುವ ಮುಜುಗರವನ್ನು ಹಲವು ಬಾರಿ ತಪ್ಪಿಸಿದ್ದಾರೆ. ಸಂಘ ಪರಿವಾರದ ಹಿನ್ನೆಲೆಯಲ್ಲಿ ಬೆಳೆದು ಬಂದಿರುವ ಕಾರಣಕ್ಕೆ ಸರಕಾರವನ್ನು ತಮ್ಮ ಮಾತಿನಲ್ಲೇ ಕಟ್ಟಿಹಾಕುವಷ್ಟು ಸಾಮರ್ಥ್ಯ ಹೊಂದಿದ್ದಾರೆ. ಈ ಬಾರಿಯ ಬೆಳಗಾವಿಯ ಅಧಿವೇಶನದಲ್ಲಿಯೂ ಅದು  ಸಾಬೀತಾಗಿದೆ. ಅಷ್ಟೇ ಅಲ್ಲಾ ತಮ್ಮ ಖಡಕ್‌ ಮಾತುಗಳಿಂದಲೇ ಕಾಂಗ್ರೆಸ್‌ ಸರಕಾರಕ್ಕೆ ನಡುಕ ಹುಟ್ಟಿಸುವ ಕಾರ್ಯವನ್ನು ಸುನಿಲ್‌ ಕುಮಾರ್‌ ಮಾಡಿದ್ದಾರೆ.

Karnataka Congress Government Shaken by Sunil Kumar R. Ashok failed as the leader of the opposition in Belagavi session
image Credit to Original Source

ಜೊತೆ ಜೊತೆಗೆ ಅರಗ ಜ್ಞಾನೇಂದ್ರ, ಆಗಾಗ ವಿಜಯೇಂದ್ರ, ಮತ್ತೆ ಮತ್ತೆ ಡಾ. ಅಶ್ವತ್ ನಾರಾಯಣ್ ಮಾತನಾಡುವ ಪ್ರಯತ್ನ ಮಾಡಿದ್ದಾರೆ. ಈ ಮೂಲಕ ಸದನದಲ್ಲಿ ವಿಪಕ್ಷ ನಾಯಕ ಯಾರು ಎನ್ನುವ ಗೊಂದಲ ಉಂಟು ಮಾಡುವಂತಿತ್ತು. ಅಷ್ಟೇ ಅಲ್ಲಾ ತಾವೂ ಕೂಡ ಇನ್ನೂ ವಿಪಕ್ಷ ನಾಯಕನ ರೇಸ್‌ನಲ್ಲಿ ಇದ್ದೇವೆ ಎಂದು ಹೇಳುವಂತೆ ಭಾಸವಾಗುತ್ತಿತ್ತು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು, ಬೆಳಗಾವಿಯಲ್ಲಿ ನಡೆದ ಬಿಜೆಪಿ ಕಾರ್ಯಕರ್ತ ಪ್ರಥ್ವಿಸಿಂಗ್‌ ಚೂರಿ ಇರಿತ ಪ್ರಕರಣವನ್ನು ಸದನದಲ್ಲಿ ಪ್ರಸ್ತಾಪ ಮಾಡಿದ್ದರು. ಸರಕಾರದ ಪರ ಗೃಹಸಚಿವ ಜಿ.ಪರಮೇಶ್ವರ್‌ ಅವರು ನಾಳೆ ಉತ್ತರ ಕೊಡ್ತಾರೆ ಎಂದು ಸಿದ್ದರಾಮಯ್ಯ ಜಾರಿಕೊಳ್ಳುವ ಯತ್ನ ಮಾಡಿದ್ರು. ಅದಕ್ಕೆ ಆರ್‌.ಅಶೋಕ್‌ ಕನ್ವಿನ್ಸ್ ಆಗುವ ಹಂತದಲ್ಲಿ ಇದ್ದರು.

ಆಚೆ ನೋಡಿ ಈಚೆ ತಿರುಗುವಾಗಲೇ ಬಿವೈ ವಿಜಯೇಂದ್ರ ಸದನದ ಬಾವಿಗೆ ಇಳಿದಾಗಿತ್ತು. ಇದೊಂದೆ ಘಟನೆ ಸಾಕು ವಿಪಕ್ಷದಲ್ಲಿ ಹೊಂದಾಣಿಕೆ ಇಲ್ಲಾ ಅನ್ನೋದನ್ನು ತೋರಿಸುತ್ತಿದೆ. ಪರಸ್ಪರ ಮಾತುಕತೆ ನಡೆಸದೇ ಕೈಗೊಂಡ ತೀರ್ಮಾನ ಅನ್ನೋದನ್ನು ಸಾರಿ ಹೇಳುತ್ತಿದೆ. ಅಷ್ಟಕ್ಕೂ ನಿಜವಾದ ಸಮಸ್ಯೆ ಏನು? ಅಶೋಕ್ ಆಯ್ಕೆಯನ್ನು ಒಂದಿಷ್ಟು ಮಂದಿ ಒಪ್ಪಿಲ್ಲ. ವಿಜಯೇಂದ್ರ ರಾಜ್ಯಾಧ್ಯಕ್ಷ ಆಗಿರೋದನ್ನು ಕೆಲವರು ಸಹಿಸಿಕೊಂಡಿಲ್ಲ. ಸಮಸ್ಯೆಯ ಮೂಲವೇ ಇದು.

ಇದನ್ನೂ ಓದಿ : ಬಿಜೆಪಿಗೆ ಬಿಎಸ್‌ ಯಡಿಯೂರಪ್ಪ ಅನಿವಾರ್ಯ : ಕರ್ನಾಟಕ ರಾಜ್ಯ ಬಿಜೆಪಿಗೆ ಬಿವೈ ವಿಜಯೇಂದ್ರ ಅಧ್ಯಕ್ಷ

ವಿಪಕ್ಷ ನಾಯಕ ಯಾರೆ ಆಗಿರಲಿ, ಅವರ ತೀರ್ಮಾನಕ್ಕೆ ಸದನದಲ್ಲಿ ಪಾರ್ಟಿಯ ಅಧ್ಯಕ್ಷರೇ ಆಗಿರಲಿ. ಶಾಸಕರೇ ಆಗಿರಲಿ. ಗೌರವ ನೀಡಬೇಕಾಗಿರುವುದು ಪ್ರತಿಯೊಬ್ಬರ ಕರ್ತವ್ಯ. ಆರ್‌. ಅಶೋಕ್‌ ಅವರನ್ನು ವಿರೋಧ ಪಕ್ಷದ ನಾಯಕ ಎಂದು ಬಿಜೆಪಿ ಹೈಕಮಾಂಡ್‌ ತೀರ್ಮಾನಿಸಿದೆ. ಆದರೆ ಆರ್‌.ಅಶೋಕ್‌ ವಿಪಕ್ಷ ನಾಯಕ ಅನ್ನೋದನ್ನು ಕೆಲವರು ಒಪ್ಪುತ್ತಿಲ್ಲ ಅನ್ನೋದು ಮೊಗಸಾಲೆಯಲ್ಲೂ ಪ್ರತಿಧ್ವನಿಸಿದೆ.

ಬೆಂಗಳೂರಿನ ‌ಯಲಹಂಕ ಶಾಸಕ ಎಸ್ ಆರ್ ವಿಶ್ವನಾಥ್, ಆರ್ ಅಶೋಕ್ ಎದುರಲ್ಲೇ ನಿಮ್ಮದು ಅಡ್ಜೆಸ್ಟ್’ಮೆಂಟ್ ಪಾಲಿಟಿಕ್ಸ್ ಎಂದು ಜರಿದಿದ್ದಾರೆ. ಇನ್ನು ಅಭಯ್ ಪಾಟೀಲ್ ಸಿಟ್ಟಾಗಿ ಯಾರ್ರಿ ಆತ ಮೊದಲ ಬಾರಿ ಗೆದ್ದವ ನಮಗೆ ಬುದ್ದಿ ಹೇಳುತ್ತಾನ ಎಂದು ಜಯನಗರ ಶಾಸಕ ಸಿ ಕೆ ರಾಮಮೂರ್ತಿಗೆ ಜಾಡಿಸಿದರು. ಆ ಘಟನೆಗೆ ಮೊಗಸಾಲೆಯಲ್ಲಿ‌ ಇದ್ದ ಪತ್ರಕರ್ತರೆಲ್ಲಾ ಸಾಕ್ಷಿ ಆಗಿದ್ದರು.

ಒಬ್ಬ ವಿಪಕ್ಷ ನಾಯಕನಿಗೆ ನೀಡಬೇಕಾದ ಕನಿಷ್ಠ ಗೌರವ ನೀಡದೇ ಇದ್ದದ್ದು ಉತ್ತಮ‌ವಾದ ಬೆಳವಣಿಗೆ ಎಂದು ಅನಿಸಿಲಿಲ್ಲ. ನೀವು ಪಾರ್ಟಿ ವೇದಿಕೆಯಲ್ಲಿ ಮಾತನಾಡಬೇಕಾದ ವಿಚಾರವನ್ನು ಪತ್ರಕರ್ತರ ಎದುರು ಆಡಳಿತ ಪಕ್ಷದ ಮುಂದೆಯೆ ಜಗಳ ಆಡಿಕೊಂಡರೆ ವಿಪಕ್ಷ ನಾಯರನ್ನು ಆಡಳಿತ ಪಕ್ಷ ಹೇಗೆ ತಾನೆ ಸೀರಿಯಸ್ ಆಗಿ ತೆಗೆದುಕೊಳ್ಳಬಹುದು.?

Karnataka Congress Government Shaken by Sunil Kumar R. Ashok failed as the leader of the opposition in Belagavi session
image Credit to Original Source

ವಿಪಕ್ಷ ನಾಯಕನ ಸ್ಥಾನಕ್ಕೆ ಆರ್‌.ಅಶೋಕ್‌ ಅನಿವಾರ್ಯವಾಗಿದ್ದರೇ ?

ಈಗಿನ ರಾಜಕೀಯ ವ್ಯವಸ್ಥೆಯಲ್ಲಿ ಜಾತಿಯಿಂದಲೇ ಸ್ಥಾನಮಾನ‌‌ ನಿಗದಿ ಆಗುವಾಗ ಎಷ್ಟೊ ಬಾರಿ ಗಟ್ಟಿ ಕಾಳುಗಳು ಇದ್ದಲ್ಲೆ ಇದ್ದು, ಮೊಳಕೆಯೂ ಒಡೆಯದೆ, ಕೇವಲ‌ ಜೊಳ್ಳು ಕಾಳು ಗಾಳಿಯಲ್ಲಿ ಹಾರಾಡಿ ಹಾರಾಡಿ ಇಡಿ ಊರು ಸುತ್ತಿ ಬರುತ್ತದೆ. ಹಾಗೆ ನೋಡಿದರೆ ಗೆದ್ದಿರುವ ಕೇವಲ 66 ಬಿಜೆಪಿ‌ ಶಾಸಕರ ಪೈಕಿ ಸದನ‌ ಕಲಿಗಳು ಎನಿಸಿಕೊಂಡವರು ವಿರಳ. ಮಾತನಾಡುವ ಶಕ್ತಿ ಇದ್ದವರಿಗೆ ಅವಕಾಶ ಸಿಕ್ಕಿಲ್ಲ.‌

ದಿ ಬೆಸ್ಟ್ ಪಾರ್ಲಿಮೆಂಟೆರಿಯನ್ ಎನಿಸಿಕೊಂಡಿದ್ದ‌ ಮಾಧುಸ್ವಾಮಿ ಅವರು ಗೆದ್ದಿಲ್ಲ. ಇನ್ನು ಹೊಸ ತಲೆ ಮಾರಿನಲ್ಲಿ ಸದನದ ಒಳಗು‌ ಹೊರಗು ಅತ್ಯುತ್ತಮವಾಗಿ ಮಾತನಾಡುವ ಛಾತಿ ಉಳ್ಳ ಸಿಟಿ ರವಿ ಅವರು ಈ ಬಾರಿ ಶಾಸಕರಾಗಿಲ್ಲ. ಕಾಯ್ದೆ ಕಾನೂನು ಬಗ್ಗೆ ತಿಳುವಳಿಕೆ ಇದ್ದ ಪಿ ರಾಜೀವ್ ಚುನಾವಣೆಯಲ್ಲಿ ಆರಸಿ ಬಂದಿಲ್ಲ. ಬೊಮ್ಮಾಯಿ‌ ಅವರು ಇದ್ದರು ವಿಪಕ್ಷ ನಾಯಕನಾಗಿ‌ ಮಾಡಿಲ್ಲ.

ಗೋವಿಂದ ಕಾರಜೋಳರಿಗೆ ಮಾತುಗಾರಿಕೆ ಅನುಭವ ಜಾತಿ ಇತ್ತಾದರೂ, ಅವರನ್ನು ಕ್ಷೇತ್ರದ ಜನ ಸೋಲಿಸಿದ್ದಾರೆ. ಈಗ ಇದ್ದವರಲ್ಲಿ ಉತ್ತಮ ಆಯ್ಕೆ ಸುನೀಲ್ ಕುಮಾರ್ ಆಗಬಹುದಿತ್ತು ಎನ್ನೋದು ಅನೇಕ ಅಭಿಪ್ರಾಯ ಕೂಡ ಹೌದು. ಸುನೀಲ್ ಕುಮಾರ್ ಗೆ ಭಾಷೆಯ ಮೇಲೆ ಹಿಡಿತ, ಸದನದಲ್ಲಿ ವಿಪಕ್ಷವಾಗಿ ಹೇಗೆ ವಾಗ್ದಾಳಿ ಮಾಡಬೇಕು, ಹೇಗೆ ಸಂಘಟಿಸಬೇಕು ಎನ್ನೋದು ಸಚೇತಕನಾಗಿ ಅನುಭವ ಇದೆ.

ಇದನ್ನೂ ಓದಿ : ಹಾದಿ ಬೀದಿಯಲ್ಲಿ ಪಕ್ಷದ ವಿಚಾರ ಚರ್ಚೆ ಬೇಡ: ರಾಜ್ಯ ಕಾಂಗ್ರೆಸ್ಸಿಗರಿಗೆ ಹೈಕಮಾಂಡ್ ಚಾಟಿ

ಕಂಠದ ಜೊತೆಗೆ ಪಕ್ಷಕ್ಕೆ ಬೇಕಾದ ಸೈದ್ಧಾಂತಿಕ ಬದ್ಧತೆ ಸುನೀಲ್’ಗೆ ಮೈಗೂಡಿದೆ. ಸಂಘ ಪರಿವಾರದಲ್ಲಿ ಗುರುತಿಸಿಕೊಂಡು, ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರಾಗಿ ಕೆಲಸ ಮಾಡಿ ಶಾಸಕರಾಗಿ ಆಯ್ಕೆಯಾದವರು. ಸಂಘ ಹಾಗೂ ಪಕ್ಷದ ಜೊತೆಗೆ ಉತ್ತಮ ಒಡನಾಟ ಹೊಂದಿದ್ದರೂ ಕೂಡ, ಅವರನ್ನು ವಿಪಕ್ಷದ ನಾಯಕನಾಗುವ ಯೋಗ ಬಂದಿಲ್ಲ.

ಬಿವೈ ವಿಜಯೇಂದ್ರ ರಾಜ್ಯಾಧ್ಯಕ್ಷ ಆಗಿರುವಾಗ, ವಿಜಯೇಂದ್ರ ಅವರಿಗಿಂತ ವಯಸ್ಸಿನಲ್ಲಿ ಚಿಕ್ಕವರಾಗಿರುವ ಸುನಿಲ್‌ ಕುಮಾರ್‌ ಅವರನ್ನು ಆಯ್ಕೆ ಮಾಡಿದರೆ ಮತ್ತೊಂದು ಪವರ್‌ ಸೆಂಟರ್‌ ಆಗುತ್ತದೆ ಎಂದು ಯೋಚಿಸುವ ಮನಸ್ಸುಗಳು ಇದ್ದಾಗ ಹೇಗೆ ತಾನೇ ಸುನಿಲ್‌ ಕುಮಾರ್‌ ಅಷ್ಟು ಬೇಗ ವಿಪಕ್ಷ ನಾಯಕರಾಗುತ್ತಾರೆ.

ಬಿಜೆಪಿಯ ಹಿರಿಯ ನಾಯಕ ಬಸನಗೌಡ ಪಾಟೀಲ್‌ ಯತ್ನಾಳ್ ಫೇಮಸ್ ಹೌದು. ಆದರೆ ದಿನ ಬೆಳಗಾದರೆ ಮಾಧ್ಯಮಕ್ಕೆ ಬಂದು ಮಾತಾನಡುವ ಅವರ ನಡೆ ವಿಪಕ್ಷ ನಾಯಕ ಆಗದಂತೆ ಮಾಡಿರಬಹುದು. ಎಲ್ಲದರಲ್ಲೂ ಅಪಾರ ಅನುಭನ ಜ್ಞಾನ ತಿಳುವಳಿಕೆ ಸಮಯ ಪ್ರಜ್ಞೆ ಉಳ್ಳ ಸುರೇಶ್ ಕುಮಾರ್ ಅವರು ಅತ್ಯುತ್ತಮ ಆಯ್ಕೆ ಆಗುತ್ತಿದ್ದರು.

ಆದರೆ ಅವರಿಗೆ ರಾಜಕೀಯಕ್ಕೆ ಬೇಕಾದ ಸಮುದಾಯ, ವೋಟ್ ಬ್ಯಾಂಕ್ ಇಲ್ಲ ಎನ್ನೋದು ರಾಜಕೀಯ ಲೆಕ್ಕಾಚಾರ!ಈ ಎಲ್ಲಾ ಕಾರಣಕ್ಕೆ ಹಿರಿಯರಾದ ಅಶೋಕ್ ಆಯ್ಕೆಗೆ ಯಡಿಯೂರಪ್ಪ ಕೂಡ ಜೈ ಎಂದರು. ಆದರೆ ಅಶೋಕ್ ಅವರು ವಿಪಕ್ಷ ನಾಯಕನಾಗಿ ಸಕ್ಸಸ್ ಆಗ್ತಾರಾ ಎನ್ನೋದನ್ನ ಕಾಲವೇ ಹೇಳಬೇಕು.

ಅಂದು ವೀರೇಂದ್ರ ಪಾಟೀಲರು ಹೇಳಿದ್ದೇನು ?

ವಿಧಾನಸಭಾ ಚುನಾವಣೆಯಲ್ಲಿ 135 ಸ್ಥಾನಗಳನ್ನು ಜಯಿಸಿ ಭರ್ಜರಿ ಸಂಖ್ಯೆಯೊಂದಿಗೆ ಆಡಳಿತ ಪಕ್ಷದ ಸಾಲಿನಲ್ಲಿ ಕುಳಿತಿರುವ ಕಾಂಗ್ರೆಸ್ಗೆ ವಿಪಕ್ಷಗಳ ಭಯವಿಲ್ಲ. ಆದರೆ ಆಡಳಿತ ಪಕ್ಷಕ್ಕೆ ರಾಜಕೀಯ ಆತಂಕ ಇರುವುದು ಸ್ವಪಕ್ಷಗಳ ಶಾಸಕರಿಂದ ಮಾತ್ರ. ಇದಕ್ಕೆ 1989 ರಲ್ಲಿ ಎರಡನೇ ಬಾರಿ ವಿರೇಂದ್ರ ಪಾಟೀಲರು ಸಿಎಂ ಆಗಿದ್ದಾಗ ಪತ್ರಿಕೆಯೊಂದಕ್ಕೆ ಸಂದರ್ಶನ ನೀಡಿದ್ದಾಗ ಹೀಗೆ ಹೇಳಿದ್ದರಂತೆ‌.

ನಾನು 1968 ರಲ್ಲಿ ಮುಖ್ಯಮಂತ್ರಿ ಆದಾಗ ಯಾರು ಮಂತ್ರಿಯಾಗಲು ಕೇಳಿಕೊಳ್ಳುತ್ತಿರಲಿಲ್ಲ. ಯಾರನ್ನೇ ಮಂತ್ರಿ ಮಾಡಿದರೂ ಉಳಿದವರು ಆಕ್ಷೇಪ, ಭಿನ್ನಮತ ಪ್ರದರ್ಶನ ಮಾಡುತ್ತಿರಲಿಲ್ಲ. ಮೊನ್ನೆ ನಾನು 160 ಶಾಸಕರನ್ನು ಒಬ್ಬೊಬ್ಬರನ್ನಾಗಿ ಕರೆದು, ನಿಮ್ಮ ಜಿಲ್ಲೆಯಿಂದ ಯಾರನ್ನು ಮಂತ್ರಿ ಮಾಡೋಣ ಅಂತ ಕೇಳಿದೆ. ಅವರ ಉತ್ತರ ಏನು ಗೊತ್ತೆ? ನಾನಿಲ್ವೆ ಸಾರ್ ? ನನ್ನನ್ನು ಬಿಟ್ಟು ಬೇರೆಯವರನ್ನಾದರೂ ಯಾಕೆ ಮಾಡುತ್ತೀರಿ ? ಪ್ರತಿಯೊಬ್ಬರೂ ಹೀಗೆ ಹೇಳಿದರು.

ನನಗೆ ವಿರೋಧ ಪಕ್ಷದ ಭಯವಿಲ್ಲ.! ನಮ್ಮಲ್ಲಿಯೇ ಇರುವ ಅನೇಕ ಶಾಸಕರು ತಲೆ ನೋವಾಗಿದ್ದಾರೆ‌ ವೀರೇಂದ್ರ ಪಾಟೀಲರು 34 ವರ್ಷಗಳ ಹಿಂದೆ ಹೇಳಿದ್ದ ಮಾತು ಈಗ ಆಡಳಿತ ಪಕ್ಷ ಮತ್ತು ವಿಪಕ್ಷ ಅನುಭವಿಸುತ್ತಿದೆ.ಕಾಂಗ್ರೆಸ್ ನಲ್ಲಿ ದಿನಕ್ಕೊಬ್ಬ ಶಾಸಕ ಸಚಿವರ ಮೇಲೆ ಮುಗಿ ಬೀಳುತ್ತಾ ಪತ್ರ ವ್ಯವಹಾರ ನಡೆಸುತ್ತಿದ್ದರೆ, ವಿಪಕ್ಷವಾದ ಬಿಜೆಪಿಯಲ್ಲಿ ಅನೇಕ ಶಾಸಕರೇ ವಿಪಕ್ಷ ನಾಯಕನ ದನಿಗೆ ದನಿಗೂಡಿಸುತ್ತಿಲ್ಲ.

ವಿಪಕ್ಷ ನಾಯಕ ಶಾಸಕರ ವಿಶ್ವಾಸಕ್ಕೆ ಪಡೆಯುತ್ತಿಲ್ಲ. ಯಾವುದೇ ಪಕ್ಷವಿರಲಿ, ಆ ಪಕ್ಷಕ್ಕೆ ವಿಪಕ್ಷಗಳಿಗಿಂತ ಸ್ವಪಕ್ಷೀಯರದ್ದೇ ಭಯ, ಆತಂಕ. ಸದ್ಯದ ಬೆಳಗಾವಿಯ ಪರಿಸ್ಥಿತಿ ಹೇಗಿದೆ ಎಂದರೆ ಕೆಲವರು ಸದನ ಬಾವಿಗೆ ಹೋಗಿ ಕುಳಿತರೆ ,ಇನ್ನು ಕೆಲವರು ಮೊಗಸಾಲೆಗೆ ಹೋಗಿ ವಿಪಕ್ಷ ನಾಯನಕನಿಗೆ ಬೈಯ್ಯುತ್ತಾ ಕುಳಿತಿದ್ದಾರೆ.

  • ರವಿ ಶಿವರಾಮ್

Karnataka Congress Government Shaken by Sunil Kumar , R. Ashok failed as the leader of the opposition in Belagavi session ?

Comments are closed.