ಬಿಜೆಪಿ ವಿರುದ್ಧ ಮುಂದುವರೆಯಲಿದೆ ಕೈ ಸಮರ : ಫೆ.24 ರಿಂದ ಮೇಕೆದಾಟು ಪಾದಯಾತ್ರೆ ಆರಂಭಿಸಲು ಡಿಕೆಶಿ ಚಿಂತನೆ

ಬೆಂಗಳೂರು : ರಾಜ್ಯ ರಾಜಕೀಯದಲ್ಲಿ ತೀವ್ರ ಸಂಚಲನ ಮೂಡಿಸಿದ್ದ ಮೇಕೆದಾಟು ಪಾದಯಾತ್ರೆಗೆ (mekedatu padayatra) ಮತ್ತೊಮ್ಮೆ ಚಾಲನೆ‌ ನೀಡಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಿದ್ಧವಾಗಿದ್ದಾರೆ. ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ರಾಮನಗರದ ಕಾವೇರಿ ಸಂಗಮದಿಂದ ಪಾದಯಾತ್ರೆ ಆರಂಭಿಸಿದ್ದರು. ಅಲ್ಲಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ಗೆ ನಡೆಯಬೇಕಿದ್ದ ಪಾದಯಾತ್ರೆ ಹೆಚ್ಚಿದ ಕೊರೋನಾ ಕಾರಣಕ್ಕೆ ರಾಮನಗರದಲ್ಲೇ ಅಂತ್ಯ ಕಂಡಿತ್ತು.

ರಾಜ್ಯದಲ್ಲಿ ನೆನೆಗುದಿಗೆ ಬಿದ್ದಿರೋ ಮೇಕದಾಟು ಯೋಜನೆ ಜಾರಿಗೆ ಆಗ್ರಹಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ‌.ಶಿವಕುಮಾರ್ ನೇತೃತ್ವದಲ್ಲಿ ಜನವರಿ 9 ರಿಂದ ಪಾದಯಾತ್ರೆ ಹಮ್ಮಿಕೊಳ್ಳಲಾಗಿತ್ತು. ಜನವರಿ 9 ರಂದು ಆರಂಭವಾಗಿದ್ದ ಪಾದಯಾತ್ರೆ ಒಟ್ಟು 9 ದಿನಗಳ ಕಾಲ ನಡೆದು ಜನವರಿ 20 ರಂದು ನಗರದ ಬಸವನಗುಡಿಯ ನ್ಯಾಶನಲ್ ಕಾಲೇಜು ಮೈದಾನದಲ್ಲಿ ಸಮಾರೋಪ ಸಮಾರಂಭದೊಂದಿಗೆ ಕೊನೆಗೊಳ್ಳಬೇಕಿತ್ತು. ಆದರೆ ಈ ಪಾದಯಾತ್ರೆ ಕೊನೆಗೊಳ್ಳುವ ಮುನ್ನವೇ ರಾಜ್ಯದಲ್ಲಿ ಕೊರೋನಾ ಪ್ರಕರಣಗಳು ಏರಿಕೆ ಕಂಡಿದ್ದವು. ಪ್ರತಿನಿತ್ಯ ರಾಜ್ಯದಲ್ಲಿ ಸಾವಿರಾರು ಪ್ರಕರಣಗಳು ದಾಖಲಾಗಲಾರಂಭಿಸಿದ್ದವು.‌ ಹೀಗಾಗಿ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಕಠಿಣ ಕ್ರಮ ರೂಪಿಸಿತ್ತು.

ಹೀಗಾಗಿ ಪಾದಯಾತ್ರೆ ಈ ಸಾಂಕ್ರಾಮಿಕರೋಗ ಹರಡುವ ಮಾಧ್ಯಮವಾಗಬಹುದೆಂಬ ಆತಂಕ ಎದುರಾಗಿದ್ದರಿಂದ ಅನಿರ್ವಾಯವಾಗಿ ಡಿಕೆಶಿ ಪಾದಯಾತ್ರೆ ಆರಂಭಿಸಿದ ಕೆಲವೇ ದಿನದಲ್ಲಿ ರಾಮನಗರದಲ್ಲೇ ಪಾದಯಾತ್ರೆ ಸ್ಥಗಿತಗೊಳಿಸಿದ್ದರು. ಈಗ ಕೊರೋನಾ ಪ್ರಕರಣಗಳಲ್ಲಿ ತೀವ್ರ ಪ್ರಮಾಣದ ಇಳಿಕೆಯಾಗಿದ್ದು ಸರ್ಕಾರ ಕೊರೋನಾ ನಿಯಮಗಳನ್ನು ಸಡಿಲಿಸಿದೆ.ಹೀಗಾಗಿ ಕಾಂಗ್ರೆಸ್‌ ಮತ್ತೊಮ್ಮೆ ಪಾದಯಾತ್ರೆಗೆ ಸಜ್ಜಾಗುತ್ತಿದೆ. ಮೂಲಗಳ ಮಾಹಿತಿ ಪ್ರಕಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ..ಶಿವಕುಮಾರ್, ಈಗಾಗಲೇ ಫೆ.24 ರಿಂದ ಪಾದಯಾತ್ರೆ-2 ಆರಂಭಿಸಲು ಮುಂದಾಗಿದ್ದಾರಂತೆ. ಈ ಬಗ್ಗೆ ಡಿಕೆಶಿ, ನಿನ್ನೆ ನಡೆದ ಕಾಂಗ್ರೆಸ್ ಹಿರಿಯ ನಾಯಕರ ಸಭೆಯಲ್ಲಿ ಚರ್ಚೆ ನಡೆಸಿದ್ದು, ವಿಪಕ್ಷ ನಾಯಕ ಸಿದ್ದರಾಮಯ್ಯ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಸಭೆಯ ನೇತೃತ್ವ ವಹಿಸಿದ್ದರು.

ಫೆ. 20 ರಂದು ಸರ್ಕಾರದಿಂದ ಕೋವಿಡ್ ಸಭೆ ನಡೆಸಲಿದೆ. ಈ ಸಭೆಯ ಬಳಿಕ ಅಳಿದುಳಿದ ಕೋವಿಡ್ ಮಾರ್ಗಸೂಚಿ ಬದಲಾವಣೆ ಆಗಬಹುದು. ಹೀಗಾಗಿ ಸಭೆಯ ನಿರ್ಣಯಗಳನ್ನು ನೋಡಿಕೊಂಡು ಪಾದಯಾತ್ರೆ ದಿನಾಂಕ ನಿಗದಿ ಪಡಿಸಲು ಕೆಪಿಸಿಸಿ ಹಾಗೂ ಡಿಕೆಶಿ ಪ್ಲ್ಯಾನ್ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಕಾಂಗ್ರೆಸ್ ಬಿಜೆಪಿ ವಿರುದ್ಧ ಪ್ರಬಲವಾದ ಪಾದಯಾತ್ರೆ ಅಸ್ತ್ರ ಮತ್ತೊಮ್ಮೆ ಪ್ರಯೋಗಿಸಲು ಡಿಕೆಶಿ ಸಿದ್ಧವಾಗಿದ್ದಾರೆ. ಎಲ್ಲ ಅಂದುಕೊಂಡಂತೆ ಆದರೇ ಫೆ.24 ರಿಂದ ಮತ್ತೆ ರಾಜ್ಯದಲ್ಲಿ ಪಾದಯಾತ್ರೆ ಪಾಲಿಟಿಕ್ಸ್ ಆರಂಭವಾಗೋ ಮುನ್ಸೂಚನೆ ಲಭ್ಯವಾಗಿದೆ.

ಇದನ್ನೂ ಒದಿ : ಮೇಕೆದಾಟು ಪಾದಯಾತ್ರೆ: ಡಿ ಕೆ ಶಿವಕುಮಾರ್ 5 ದಿನ ಹರಿಸಿದ ಬೆವರಿಗಾದರೂ ಲಾಭವಾಯಿತೇ?

ಇದನ್ನೂ ಓದಿ :  ಬಿಜೆಪಿ ಗೂಡು ತೊರೆದ್ರಾ 20 ಶಾಸಕರು : ಸಿದ್ಧವಾಯ್ತು ಡಿಕೆ ಶಿವಕುಮಾರ್ ಮಾಸ್ಟರ್ ಪ್ಲ್ಯಾನ್

( Congress party again ready to go for mekedatu padayatra in Karnataka )

Comments are closed.