ಬೈಂದೂರಲ್ಲಿ ಪೂಜಾರಿ Vs ಬಂಟರ ಕದನ; ಗೋಪಾಲ ಪೂಜಾರಿ ಎದುರು ಗೆಲ್ತಾರಾ ಗುರುರಾಜ್‌ ಗಂಟಿಹೊಳೆ ?

ಬೈಂದೂರು : (Gopal Poojari vs Gururaj Gantiholi) ಕರಾವಳಿ ಭಾಗದಲ್ಲಿಯೇ ಬೈಂದೂರು ವಿಧಾನಸಭಾ ಕ್ಷೇತ್ರ (Byndoor Assembly constituency) ಹಲವು ವಿಚಾರ ಗಳಿಂದಾಗಿ ಈ ಬಾರಿ ಕುತೂಹಲ ಮೂಡಿಸಿದೆ. ಕ್ಷೇತ್ರದಲ್ಲಿ ಈಗಾಗಲೇ ಚುನಾವಣಾ ಪ್ರಚಾರದ ಅಬ್ಬರ ಜೋರಾಗಿದೆ. ಕಾಂಗ್ರೆಸ್‌ ಪಕ್ಷ ಹಳೆಹುಲಿ ಗೋಪಾಲ ಪೂಜಾರಿ (Gopal Poojari) ಸ್ಪರ್ಧೆ ಮಾಡಿದ್ರೆ ಇತ್ತ ಬಿಜೆಪಿಯಿಂದ ಯುವ ಮುಖಂಡ ಗುರುರಾಜ್‌ ಗಂಟಿಹೊಳೆ (Gururaj Gantiholi) ಅವರನ್ನು ಕಣಕ್ಕೆ ಇಳಿಸಿದೆ. ಇನ್ನು ಜೆಡಿಎಸ್‌ ಅಭ್ಯರ್ಥಿ ಕಣದಲ್ಲಿದ್ದರೂ ಕೂಡ ಸ್ಪರ್ಧೆ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಿದೆ. ಕ್ಷೇತ್ರದಲ್ಲಿ ಈ ಬಾರಿ ಪೂಜಾರಿ ಹಾಗೂ ಬಂಟರ ನಡುವಿನ ಕಾದಾಟ ಎಂದೇ ಬಿಂಬಿತವಾಗುತ್ತಿದೆ.

ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಈ ಬಾರಿ ಹೊಸ ಪ್ರಯೋಗವನ್ನು ಮಾಡಿದೆ. ಹಾಲಿ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಅವರ ಬದಲು ಆರ್‌ಎಸ್‌ಎಸ್‌ ಹಿನ್ನೆಲೆಯುಳ್ಳ ಗುರುರಾಜ್‌ ಗಂಟಿಹೊಳೆ ಅವರಿಗೆ ಪಕ್ಷದ ಟಿಕೆಟ್‌ ನೀಡುವ ಮೂಲಕ ಬಿಜೆಪಿಯ ಕೆಲ ನಾಯಕರಿಗೆ ಶಾಕ್‌ ಕೊಟ್ಟಿದೆ. ಪ್ರಮುಖವಾಗಿ ಬಿಜೆಪಿ ಪಕ್ಷದಲ್ಲಿ ಬಿ.ಎಂ.ಸುಕುಮಾರ್‌ ಶೆಟ್ಟಿ ಶಾಸಕರಾಗಿ ಸಾಕಷ್ಟು ಅಭಿವೃದ್ದಿ ಕಾರ್ಯಗಳನ್ನು ಮಾಡಿದ್ದರೂ ಕೂಡ ಕೆಲವೊಂದು ವಿಚಾರಗಳು ಅವರಿಗೆ ಮುಳುವಾಗಿತ್ತು. ಮೂಲ ಬಿಜೆಪಿ ಕಾರ್ಯಕರ್ತರು ಸುಕುಮಾರ್‌ ಶೆಟ್ಟಿ ಅವರಿಗೆ ಟಿಕೆಟ್‌ ನೀಡಲು ವಿರೋಧ ವ್ಯಕ್ತಪಡಿಸಿದ್ದರು. ಇದೇ ಕಾರಣಕ್ಕೆ ಬಿಜೆಪಿ ಹೊಸ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿ ರಾಜಕೀಯ ದಾಳ ಉರುಳಿಸಿದೆ.

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಈಗಾಗಲೇ ಕ್ಷೇತ್ರಕ್ಕೆ ಭೇಟಿ ನೀಡಿದ್ದು, ರೋಡ್‌ ಶೋ ನಡೆಸುವ ಮೂಲಕ ಬಿಜೆಪಿ ಕಾರ್ಯಕರ್ತರಿಗೆ ಹುರುಪುಕೊಟ್ಟಿದ್ದಾರೆ. ಸದ್ಯದಲ್ಲೇ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಕೂಡ ಆಗಮಿಸಿ ಪ್ರಚಾರ ಕಾರ್ಯ ನಡೆಸಲಿದ್ದಾರೆ. ಇನ್ನೊಂದೆಡೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ಬಿ.ವೈ. ರಾಘವೇಂದ್ರ ಕ್ಷೇತ್ರದ ಸಂಸದರು, ಹೀಗಾಗಿ ಬೈಂದೂರು ಕ್ಷೇತ್ರ ರಾಘವೇಂದ್ರ ಹಾಗೂ ಬಿ.ಎಸ್.ಯಡಿಯೂರಪ್ಪ ಅವರ ಪ್ರತಿಷ್ಠೆಯ ಕ್ಷೇತ್ರವಾಗಿದೆ. ಈ ಬಾರಿಯ ಚುನಾವಣೆ ಯಲ್ಲಿ ಗೆಲುವು ಕಾಣುವ ಮೂಲಕ ಬೈಂದೂರಿನಲ್ಲಿ ಹೊಸ ಇತಿಹಾಸ ಬರೆಯಲು ಮೂಲ ಬಿಜೆಪಿ ಕಾರ್ಯಕರ್ತರು ಕಸರತ್ತು ನಡೆಸುತ್ತಿದ್ದಾರೆ. ಗುರುರಾಜ್‌ ಗಂಟಿಹೊಳೆ ಆರ್‌ಎಸ್‌ಎಸ್‌ ಪ್ರಚಾರಕರಾಗಿದ್ದು, ಸಂಘ ಪರಿವಾರದ ಜೊತೆಗೆ ಉತ್ತಮ ನಂಟು ಹೊಂದಿದ್ದಾರೆ.

ಇನ್ನು ಗೋಪಾಲ ಪೂಜಾರಿ ಅವರು ಕ್ಷೇತ್ರದಲ್ಲಿ ನಾಲ್ಕು ಬಾರಿ ಶಾಸಕರಾಗಿದ್ದವರು. ಶಾಸಕರಾಗಿದ್ದ ಅವಧಿಯಲ್ಲಿ ಸಾಕಷ್ಟು ಅಭಿವೃದ್ದಿ ಕಾರ್ಯಗಳನ್ನು ಕೈಗೊಂಡಿದ್ದಾರೆ. ಕಳೆದ ಚುನಾವಣೆಯ ಸೋಲಿನ ಅನುಕಂಪ ಈ ಬಾರಿಯ ಚುನಾವಣೆಯಲ್ಲಿ ವರ್ಕೌಟ್‌ ಆಗುತ್ತೆ ಅನ್ನೋ ಲೆಕ್ಕಾಚಾರದಲ್ಲಿದ್ದಾರೆ ಗೋಪಾಲ ಪೂಜಾರಿ. ರಾಜ್ಯದಲ್ಲಿ ಕಾಂಗ್ರೆಸ್‌ ಸರಕಾರ ಅಧಿಕಾರಕ್ಕೆ ಬರುತ್ತೆ ಗೋಪಾಲ ಪೂಜಾರಿ ಅವರು ಗೆದ್ದು ಸಚಿವರಾಗ್ತಾರೆ ಅನ್ನೋ ಪ್ರಚಾರವೂ ಸದ್ದಿಲ್ಲದೇ ನಡೆಯುತ್ತಿದೆ. ಈಗಾಗಲೇ ಕ್ಷೇತ್ರದಲ್ಲಿ ಹ್ಯಾಮ್ಲೆಟ್‌ ಪ್ರಚಾರ ನಡೆಸುವ ಮೂಲಕ ಬೈಂದೂರು ಕ್ಷೇತ್ರದಲ್ಲಿ ಮತ್ತೆ ಶಾಸಕರಾಗುವ ಕನಸು ಕಾಣುತ್ತಿದ್ದಾರೆ.

ಈಗಾಗಲೇ ಬಿಜೆಪಿಯಲ್ಲಿ ಟಿಕೆಟ್‌ ಆಕಾಂಕ್ಷಿತರಾಗಿದ್ದ ಕೆಲವರು ಕಾಂಗ್ರೆಸ್‌ ಸೇರಿದ್ದಾರೆ. ಇನ್ನೊಂದೆಡೆಯಲ್ಲಿ ಶಾಸಕ ಬಿ.ಎಂ.ಸುಕುಮಾರ್‌ ಶೆಟ್ಟಿ ಅವರು ಬಿಜೆಪಿ ವಿರುದ್ದ ಮುನಿಸಿಕೊಂಡಿರುವುದು ತಮಗೆ ವರದಾನವಾಗಲಿದೆ ಅನ್ನೋ ಲೆಕ್ಕಾಚಾರದಲ್ಲಿದ್ದಾರೆ ಕಾಂಗ್ರೆಸ್‌ ನಾಯಕರು. ಬಿಜೆಪಿ ನಡೆಸುವ ಪ್ರಚಾರ ತಂತ್ರಕ್ಕೆ ಪ್ರತಿಯಾಗಿ ಕಾಂಗ್ರೆಸ್‌ ಪ್ರಚಾರ ನಡೆಸುತ್ತಿದೆ. ಆದರೆ ಬೈಂದೂರು ಕ್ಷೇತ್ರದಲ್ಲಿ ಗೋಪಾಲ ಪೂಜಾರಿ ಅವರಿಗೆ ಗೆಲುವು ಅಷ್ಟು ಸುಲಭದ ತುತ್ತಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮೊದಲ ಬಾರಿ ಸ್ಪರ್ಧೆ ಮಾಡಿದ್ದ ಬಿ.ಎಂ.ಸುಕುಮಾರ ಶೆಟ್ಟಿ ಅವರ ವಿರುದ್ದ ಸುಮಾರು 20 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಸೋಲನ್ನು ಕಂಡಿದ್ದರು. ಕಳೆದ ಚುನಾವಣೆಯಲ್ಲಿಯೂ ಹಿಂದುತ್ವ ವರ್ಕೌಟ್‌ ಆಗಿತ್ತು. ಈ ಬಾರಿಯೂ ಬಿಜೆಪಿ ಹಿಂದುತ್ವದ ಲಾಭ ಪಡೆಯಲು ಹವಣಿಸುತ್ತಿದೆ. ಭಜರಂಗದಳ ನಿಷೇಧವನ್ನೇ ಬಿಜೆಪಿ ನಾಯಕರು ಪ್ರಮುಖ ಅಸ್ತ್ರವನ್ನಾಗಿಸಿಕೊಳ್ಳಲು ಮುಂದಾಗಿದ್ದಾರೆ. ಪರಮೇಸ್‌ ಮೇಸ್ತ ಪ್ರಕರಣದಂತೆಯೇ ಭಜರಂಗದಳ ನಿಷೇಧ ಘೋಷಣೆ ವರ್ಕೌಟ್‌ ಆದ್ರೆ ಬಿಜೆಪಿಗೆ ಭರ್ಜರಿ ಲಾಭವಾಗುವುದಂತೂ ಖಚಿತ.

ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿನ ಇತಿಹಾಸವನ್ನು ಮೆಲಕು ಹಾಕಿದ್ರೆ, ಕ್ಷೇತ್ರದಲ್ಲಿ ಬಿಜೆಪಿ ಇನ್ನೂ ಸತತವಾಗಿ ಗೆಲುವು ಕಂಡಿಲ್ಲ. ಕಾಂಗ್ರೆಸ್‌ ಹಾಗೂ ಬಿಜೆಪಿ ಕ್ಷೇತ್ರದಲ್ಲಿ ಸಮಾನ ಅವಕಾಶವನ್ನು ಪಡೆದುಕೊಂಡಿದೆ. ಕ್ಷೇತ್ರದಲ್ಲಿ ಬಿಲ್ಲವ ಸಮುದಾಯದ ಮತಗಳು ಅತೀ ಹೆಚ್ಚು ಸಂಖ್ಯೆಯಲ್ಲಿದ್ದು, ಎರಡನೇ ಸ್ಥಾನದಲ್ಲಿ ಬಂಟ ಸಮುದಾಯದ ಮತಗಳಿವೆ. ಕ್ಷೇತ್ರ ದಲ್ಲಿ ಒಟ್ಟು 2,05,319 ಮತದಾರರಿದ್ದು, ಈ ಪೈಕಿ ಬಿಲ್ಲವರು 47,000, ಬಂಟ್ಸ್ ಸಮುದಾಯದವರು 35,000, ಮೊಗವೀರ ಸಮುದಾಯದವರು 30,000, ಮುಸ್ಲಿಂಮರು 18,000, ರಾಮಕ್ಷತ್ರಿಯ 15,000, ದೇವಾಡಿಗ 14,000,ಗಾಣಿಗರು 12,000, ಪರಿಶಿಷ್ಟ ಜಾತಿ 13,000, ಬ್ರಾಹ್ಮಣ 9,000 ಮತದಾರರು ಇದ್ದಾರೆ. ಬೈಂದೂರು ಕ್ಷೇತ್ರದಲ್ಲಿ ಮೊಗವೀರರು, ಮುಸ್ಲೀಮರು, ರಾಮಕ್ಷತ್ರಿಯ, ದೇವಾಡಿಗ, ಗಾಣಿಗ ಮತದಾರರು ನಿರ್ಣಾಯಕರಾಗಿದ್ದಾರೆ. ಮೊಗವೀರ ಸಮುದಾಯ ಯಾರ ಪರ ಮತ ಚಲಾಯಿಸುತ್ತೋ ಅವರು ಗೆಲುವು ಕಾಣುವ ಸಾಧ್ಯತೆಯಿದೆ.

ಬಿಜೆಪಿ ಅಭ್ಯರ್ಥಿಯ ಪರ ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ಪ್ರಚಾರ ಕಾರ್ಯ ನಡೆಯುತ್ತಿದೆ. ಆದರೆ ಕಾಂಗ್ರೆಸ್‌ ನಾಯಕರು ಮಾತ್ರ ಸಾಮಾಜಿಕ ಜಾಲತಾಣದಿಂದ ದೂರವೇ ಉಳಿದಂತೆ ಕಂಡು ಬರುತ್ತಿದೆ. ಮೊಬೈಲ್‌ ನೆಟ್‌ವರ್ಕ್‌ ಸಮಸ್ಯೆಯ ಕುಂಟು ನೆಪವೊಡ್ಡಿ ಡಿಜಿಟಲ್‌ ತಂತ್ರಜ್ಞಾನದ ಬದಲು ಮನೆ ಮನೆ ಪ್ರಚಾರಕ್ಕೆ ಹೆಚ್ಚಿನ ಆಧ್ಯತೆ ನೀಡಿದ್ದಾರೆ. ಆದರೆ ಕಡಿಮೆ ಅವಧಿಯಲ್ಲಿ ಎಲ್ಲಾ ಮತದಾರರನ್ನು ತಲುಪುವುದು ಅಷ್ಟು ಸುಲಭದ ಮಾತಲ್ಲ. ಇನ್ನು ಬಿಜೆಪಿ ಮನೆ ಮನೆ ಪ್ರಚಾರದ ಜೊತೆಗೆ ಡಿಜಿಟಲ್‌ ತಂತ್ರಜ್ಞಾನವನ್ನು ಸರಿಯಾಗಿ ಬಳಸಿಕೊಳ್ಳುವ ಮೂಲಕ ಮತದಾರರನ್ನು ತಲುಪುವ ಕಾರ್ಯವನ್ನು ಮಾಡುತ್ತಿದೆ. ಇದು ಬಿಜೆಪಿಗೆ ಪ್ಲಸ್‌ ಆಗುವ ಸಾಧ್ಯತೆಯೂ ಇದೆ.

ಇದನ್ನೂ ಓದಿ : ಕುಂದಾಪುರ ಬಿಜೆಪಿ ಅಭ್ಯರ್ಥಿ ಕಿರಣ್ ಕೊಡ್ಗಿ ಅವರಿಗೆ ಅಭಯ ನೀಡಿದ ಪಂಜುರ್ಲಿ ದೈವ

ಇದನ್ನೂ ಓದಿ : ಮೋದಿ ಮೆಗಾ ರೋಡ್ ಶೋ: ಮೂರು ದಿನ ರಾಜ್ಯದಲ್ಲಿ ಪ್ರಧಾನಿ ಮತಬೇಟೆ

Karnataka Election 2023 Byndoor Assembly constituency Gopal Poojari vs Gururaj Gantiholi fight

Comments are closed.