KSRTC : ವಿಲೀನ್ ವಾಗುತ್ತಾ ಕರ್ನಾಟಕ ರಾಜ್ಯ ಸಾರಿಗೆ ನಿಗಮ: ನಷ್ಟ ತಪ್ಪಿಸಿಕೊಳ್ಳಲು ಸಿದ್ಧವಾಯ್ತು ಮಾಸ್ಟರ್ ಪ್ಲ್ಯಾನ್

ಬೆಂಗಳೂರು : ಕೊರೋನಾ ಹಾಗೂ ಸರ್ಕಾರದ ಕಠಿಣ ನಿಯಮಗಳಿಂದ ರಾಜ್ಯದಲ್ಲಿ ವ್ಯಾಪಾರ ವಹಿವಾಟು ಕ್ಷೇತ್ರಗಳು ತೀವ್ರ ಆರ್ಥಿಕ ನಷ್ಟದಲ್ಲಿದ್ದು ಇದಕ್ಕೆ ಸರ್ಕಾರದ ಸಾರಿಗೆ ಕ್ಷೇತ್ರ ಹೊರತಾಗಿಲ್ಲ. ಲಾಕ್ ಡೌನ್, ವೀಕೆಂಡ್ ಕರ್ಪ್ಯೂ, ನೈಟ್ ಕರ್ಪ್ಯೂನಿಂದಾಗಿ ನಾಲ್ಕು ಸಾರಿಗೆ ನಿಗಮಗಳು ನಷ್ಟದ ಭೀತಿಯಲ್ಲಿದ್ದು, ನೌಕರರಿಗೆ ಸಂಬಳ ಕೊಡಲಾಗದ ಸ್ಥಿತಿ ತಲುಪಿವೆ. ಹೀಗಾಗಿ ರಾಜ್ಯದ ನಾಲ್ಕು ಸಾರಿಗೆ ನಿಗಮಗಳನ್ನು (KSRTC) ವಿಲೀನಗೊಳಿಸುವ ಪ್ರಸ್ತಾಪ ಸರ್ಕಾರದ ಮುಂದಿದೆ ಎನ್ನಲಾಗುತ್ತಿದೆ.

ಈಗಾಗಲೇ ಆರ್ಥಿಕ ಸಂಕಷ್ಟ ದಿಂದ ಕಂಗಾಲಾಗಿರುವ ಕೆಎಸ್ಆರ್ಟಿಸಿ,ಬಿಎಂಟಿಸಿ,ಕಲ್ಯಾಣ ಕರ್ನಾಟಕ ಸಾರಿಗೆ ಹಾಗೂ ವಾಯುವ್ಯ ಸಾರಿಗೆ ನಿಗಮಗಳನ್ನು ಒಂದೇ ನಿಗಮವಾಗಿ ಬದಲಾಯಿಸಲು ರಾಜ್ಯ ಸಾರಿಗೆ ಇಲಾಖೆಗೆ ಸಲಹೆ ನೀಡಲಾಗಿದೆ. ನಾಲ್ಕು ಸಾರಿಗೆ ನಿಗಮಗಳನ್ನ ವಿಲೀನಮಾಡಿ , ಒಂದೇ‌ ನಿಗಮ ರಚಿಸುವಂತೆ ಟ್ರಾನ್ಪೋರ್ಟ್ ಫೆಡರೇಶನ್ ಸಲಹೆ ನೀಡಿದ್ದು, ಸಾರಿಗೆ ನಿಗಮಗಳ‌ ಪುನರಚನಾ ಸಮಿತಿಗೆ ಸಾರಿಗೆ ನೌಕರರ ಸಂಘದಿಂದ ಸಲಹೆ ನೀಡಲಾಗಿದೆ. ಐಎಎಸ್‌ ಅಧಿಕಾರಿ ಎಂ.ಆರ್.ಶ್ರೀನಿವಾಸ್ ಮೂರ್ತಿ ನೇತೃತ್ವದ ಒನ್ ಮ್ಯಾನ್ ಕಮಿಟಿ ಅಧ್ಯಯನ ನಡೆಸಿದ್ದು, ಬಳಿಕ ಈ ವರದಿ ಸಿದ್ಧಪಡಿಸಿದೆ. ಕೊರೊನಾ ಬಂದಾಗಿಂದ ಸಾರಿಗೆ ನಿಗಮಗಳಲ್ಲಿ ಆರ್ಥಿಕ ಪರಿಸ್ಥಿತಿ ಕುಗ್ಗಿಹೋಗಿದ್ದು, ಬಸ್ ಗಳ‌ ನಿರ್ವಹಣೆ, ಡಿಪೋಗಳ ಖರ್ಚು ವೆಚ್ಚ , ನೌಕರರ ಸಂಬಳಕ್ಕೂ ಹಣವಿಲ್ಲದೇ ನಿಗಮಗಳ ಪರದಾಡುವ ಸ್ಥಿತಿ ನಾಲ್ಕು ನಿಗಮದಲ್ಲಿದೆ.

ಇದುವರೆಗೂ ಕೊರೋನಾದಿಂದ ಸಾರಿಗೆ ನಿಗಮಗಳಿಗೆ ಒಟ್ಟು 4500 ಕೋಟಿ ನಷ್ಟವಾಗಿದ್ದು, 1997 ರಿಂದ ಇಲ್ಲಿಯವರೆಗೂ ಪಿಎಫ್, ಎಲ್ ಐಸಿ, ನಿವೃತ್ತಿ ವೇತನ ಸೇರಿ 1.700 ಕೋಟಿ ನೌಕರರಿಗೆ ಬಾಕಿ ಇದೆ. ಕೊರೋನಾದ ಬಳಿಕ ನೌಕರರಿಗೆ ಅರ್ಧದಷ್ಟು ಸಂಬಳ ನೀಡಿ ಉಳಿದ ಹಣವನ್ನು ಬಾಕಿ ಉಳಿಸಿಕೊಳ್ಳಲಾಗುತ್ತಿದೆ. ಹೀಗಾಗಿ ನಾಲ್ಕು ನಿಮಗಳನ್ನೂ ವಿಲಿನ ಗೊಳಿಸಿ, ಆಡಳಿತ ವಿಭಾಗದ ನಷ್ಟ ಸೇರಿದಂತೆ ಹಲವು ನಷ್ಟ ತಪ್ಪಿಸಿ ಅದರಲ್ಲೇ ಸಂಬಳ ಸೇರಿದಂತೆ ವಿವಿಧ ಖರ್ಚುಗಳನ್ನು ನಿಭಾಯಿಸುವಂತೆ ಅಧ್ಯಯನ ಕಮಿಟಿಗೆ ಸಲಹೆ ನೀಡಲಾಗಿತ್ತು.

ಇದಲ್ಲದೇ ನಾಲ್ಕು ನಿಗಮ‌ಗಳನ್ನು ಮರ್ಜ್ ಮಾಡುವಂತೆ ಎಕ್ಸಪರ್ಟ್ ಕಮಿಟಿಗೆ ಕೆಎಸ್ಆರ್ಟಿಸಿ ಸ್ಟಾಫ್ ಅಂಡ್ ವರ್ಕರ್ಸ್ ಫೆಡರೇಶನ್ ನ ಅಧ್ಯಕ್ಷ ಅನಂತ್ ಸುಬ್ಬರಾವ್ ಕೂಡಾ ಸಲಹೆ ನೀಡಿದ್ದಾರಂತೆ. 1961 ರಲ್ಲಿ ಆರಂಭವಾಗಿದ್ದ ಕೆಎಸ್ಆರ್ಟಿಸಿ 1997 ರಲ್ಲಿ ನಾಲ್ಕು‌ ನಿಗಮಗಳಾಗಿ ವಿಂಗಡಣೆಯಾಗಿತ್ತು. ಆದರೆ ಈ ವಿಂಗಡನೆ ವೇಳೆಯೂ ಫೆಡರೇಶನ್ ಪ್ರತ್ಯೇಕ ನಿಗಮ ಬೇಡ ಎಂದು ಮನವಿ ಮಾಡಿತ್ತು. ಆದರೂ ರಚನೆಯಾದ ನಾಲ್ಕು ವಿಭಾಗಗಳಿಂದ ಆರ್ಥಿಕ ನಷ್ಟ ಹೆಚ್ಚಿದ್ದು, ಆಡಳಿತಾತ್ಮಕವಾದ ವೆಚ್ಚವೇ ಅಧಿಕವಾಗಿದೆ. ಹೀಗಾಗಿ ವಿಲೀನವೇ ಸೂಕ್ತ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಆದರೆ ಇದಕ್ಕೆ ಸರ್ಕಾರ ಹಾಗೂ ಸಾರಿಗೆ ಇಲಾಖೆ ಯಾವ ರೀತಿ ಸ್ಪಂದಿಸಲಿದೆ ಕಾದು ನೋಡಬೇಕಿದೆ.

ಇದನ್ನೂ ಓದಿ : ಆದಾಯ ಬರುತ್ತಿಲ್ಲ, ಸಂಬಳಕ್ಕೂ ದುಡ್ಡಿಲ್ಲ: ಇದು ಬಿಎಂಟಿಸಿಯ ಕಣ್ಣೀರ ಕತೆ

ಇದನ್ನೂ ಓದಿ : ನಷ್ಟದ ಹೊರೆ ತಪ್ಪಿಸಲು ಬಿಎಂಟಿಸಿ ಸರ್ಕಸ್ : ಇಳಿಕೆಯಾಗಲಿದೆ ವೋಲ್ವೋ ಪ್ರಯಾಣ ದರ

( four Transport Corporation merger in KSRTC, staff federation seeks merger )

Comments are closed.