ಕೆ.ಆರ್.ಎಸ್ ಆಣೆಕಟ್ಟಿನ ಸುರಕ್ಷತೆಗೆ ಸಂಕಷ್ಟ ಒಡ್ಡುತ್ತಿರುವ ಅಕ್ರಮ ಗಣಿಗಾರಿಕೆ ವಿರುದ್ಧ ಸಮರ ಸಾರಿರುವ ಸಂಸದೆ ಸುಮಲತಾ ನಡೆ ಅಕ್ರಮ ಗಣಿಗಾರಿಕೆ ಮಾಲೀಕರ ಎದೆಯಲ್ಲಿ ನಡುಕ ಮೂಡಿಸಿದೆ. ಈ ಕುರಿತು ಸಂಸತ್ತಿನಲ್ಲಿ ಮಾತನಾಡಲು ಅವಕಾಶ ಕೋರಿರುವ ಸಂಸದೆ ಸ್ಪೀಕರ್ ಗೆ ಮನವಿ ಮಾಡಿದ್ದಾರೆ.

ಅಕ್ರಮ ಗಣಿಗಾರಿಕೆಯಿಂದ ಕೆ.ಆರ್.ಎಸ್ ಜಲಾಶಯಕ್ಕೆ ಅಪಾಯ ಉಂಟಾಗುತ್ತಿದೆ. ಈ ಬಗ್ಗೆ ಸಂಸತ್ತಿನಲ್ಲಿ ಮಾತನಾಡಲು ಅವಕಾಶ ನೀಡುವಂತೆ ಕೋರಿ ಲೋಕಸಭಾ ಸ್ಪೀಕರ್ ಓಂಬಿರ್ಲಾಗೆ ಸಂಸದೆ ಸುಮಲತಾ ಮನವಿ ಸಲ್ಲಿಸಿದ್ದಾರೆ.

ರಾಜ್ಯದಲ್ಲಿ ಕೆಲವು ದಿನಗಳಿಂದ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದ್ದ ಕೆ.ಆರ್.ಎಸ್. ಬಿರುಕು ಹಾಗೂ ಗಣಿಗಾರಿಕೆ ವಿಚಾರ ಇದೀಗ ದೆಹಲಿಯಲ್ಲೂ ಧ್ವನಿಸಲಿದೆ. ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಸುಮಲತಾ ನಡುವೆ ತೀವ್ರ ಸಮರಕ್ಕೆ ಕಾರಣವಾಗಿದ್ದ ಈ ಪ್ರಕರಣ ಇದೀಗ ಅಕ್ರಮ ಗಣಿಗಾರಿಕೆಕೋರರಿಗೆ ಆತಂಕ ತಂದಿದೆ.

ಕೆ.ಆರ್. ಎಸ್ ಸುತ್ತಮುತ್ತ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎಂದು ಆರೋಪಿಸಿರುವ ಸಂಸದೆ ಸುಮಲತಾ ಈಗಾಗಲೇ, ಕೇಂದ್ರ ಜಲಶಕ್ತಿ ಸಚಿವರಿಗೂ ಮನವಿ ಸಲ್ಲಿಸಿದ್ದು, ಸೂಕ್ತ ಉನ್ನತ ಮಟ್ಟದ ತನಿಖೆ ನಡೆಸಲು ಆದೇಶಿಸುವಂತೆ ಮನವಿ ಮಾಡಿದ್ದಾರೆ.
ಇದರಿಂದ ಕೆ.ಆರ್.ಎಸ್ ಸುತ್ತ ಅಕ್ರಮ ಗಣಿಗಾರಿಕೆ ನಡೆಸುತ್ತಿರುವ ಕೆಲ ರಾಜಕೀಯ ಮುಖಂಡರ ಎದೆಯಲ್ಲಿ ನಡುಕ ಆರಂಭವಾಗಿದ್ದು, ಕೇಂದ್ರ ಸರ್ಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆಗೆ ಆದೇಶಿಸಿದರೇ ಗಣಿ ಮಾಲೀಕರು ಕಾನೂನು ಕ್ರಮ ಎದುರಿಸುವ ಆತಂಕದಲ್ಲಿದ್ದಾರೆ.