Karnataka Weather Report : ರಾಜ್ಯದ 8 ಜಿಲ್ಲೆಗಳಲ್ಲಿ ಭಾರಿ ಮಳೆಗೆ 3 ಬಲಿ : ಇಂದು ಯೆಲ್ಲೋ ಆಲರ್ಟ್‌

ಬೆಂಗಳೂರು : ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದಲೂ ಭಾರಿ ಪ್ರಮಾಣದಲ್ಲಿ ಮಳೆ ಸುರಿಯುತ್ತಿದೆ. ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಈ ಬಾರಿ ವಾಡಿಕೆಗಿಂತ ಅಧಿಕ ಮಳೆಯಾಗಿದೆ. ನಿನ್ನೆ ರಾಜ್ಯದ 8 ಜಿಲ್ಲೆಗಳಲ್ಲಿ ಮಳೆಯ ಆರ್ಭಟಕ್ಕೆ ಮೂವರು ಬಲಿಯಾಗಿದ್ದಾರೆ. ಇನ್ನು ಕರಾವಳಿ, ಮಲೆನಾಡು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿಂದು ಯೆಲ್ಲೋ ಅಲರ್ಟ್‌ ಘೋಷಿಸಲಾಗಿದೆ.

ಬೆಂಗಳೂರು, ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು, ಧಾರವಾಡ, ಮಂಡ್ಯ, ಚಾಮರಾಜನಗರ ಜಿಲ್ಲೆಗಳಲ್ಲಿ ಭಾರಿ ಪ್ರಮಾಣದಲ್ಲಿ ಮಳೆ ಸುರಿದಿದೆ. ಅಲ್ಲದೇ ಕೊಡಗು, ಬಾಗಲಕೋಟೆ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಿದೆ. ಮಳೆ ಹಲವು ಕಡೆಗಳಲ್ಲಿ ಇನ್ನಿಲ್ಲದ ಅವಾಂತರ ಸೃಷ್ಟಿಸಿದೆ. ಬೆಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೋಮವಾರ ಸುರಿದ ಮಳೆಯಿಂದಾಗಿ ವಿಮಾನ ನಿಲ್ದಾಣ ಜಲಾವೃತವಾಗಿತ್ತು. ರಸ್ತೆಯ ತುಂಬೆಲ್ಲಾ ನೀರು ಹರಿಯುತ್ತಿದ್ದು, ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.

ಭಾರಿ ಮಳೆಗೆ ಮೂವರು ಬಲಿ

ಮಳೆಯ ಆರ್ಭಟಕ್ಕೆ ಧಾರವಾಡ ಜಿಲ್ಲೆಯ ಅಣ್ಣಿಗೇರಿ ತಾಲೂಕಿನ ಸೈದಾಪುರ ನಿವಾಸಿ ರೈತ ಸಂಗಪ್ಪ ಫಕೀರಪ್ಪ ವಾರದ (45 ವರ್ಷ) ಸಾವನ್ನಪ್ಪಿದ್ರೆ, ಬಾಗಲಕೋಟೆ ಜಿಲ್ಲೆಯ ಮುಟ್ಟಿಗೇರಿ ನಿವಾಸಿ ಮಹೇಶ್‌ (19 ವರ್ಷ), ದಾವಣಗೆರೆ ನಗರದ ಭಾರತ ಕಾಲೋನಿಯ ಮನೋಜ್‌ ಮಜ್ಜಿಗೆ (23 ವರ್ಷ) ಎಂಬವರು ಹೊಂಡ ದಾಟುವ ವೇಳೆಯಲ್ಲಿ ವಿದ್ಯುತ್‌ ಕಂಬ ಸ್ಪರ್ಶಿಸಿ ಸಾವನ್ನಪ್ಪಿದ್ದಾರೆ.

ಅಪಾಯದಿಂದ 8 ಮಂದಿ ಪಾರು

ಇತ್ತೀಚಿಗಷ್ಟೇ ಬೆಳಗಾವಿ ಜಿಲ್ಲೆಯಲ್ಲಿ ಮನೆಯ ಗೋಡೆಕುಸಿದು ಒಂದೇ ಮನೆಯ ಆರು ಮಂದಿ ಸೇರಿದಂತೆ ಒಟ್ಟು ೭ ಮಂದಿ ಸಾವನ್ನಪ್ಪಿರುವ ಘಟನೆಯ ಕಹಿ ನೆನಪು ಮಾಸುವ ಮುನ್ನವೇ ಅಂತಹದ್ದೇ ಇನ್ನೊಂದು ಘಟನೆ ಬೆಳಗಾವಿ ಜಿಲ್ಲೆಯ ಅಗಸಗಿ ಗ್ರಾಮದಲ್ಲಿ ಸಂಭವಿಸಿದೆ. ಆದರೆ ಮನೆಯಲ್ಲಿದ್ದ ಎಂಟು ಮಂದಿ ಕೂಡ ಮನೆಯ ಚಾವಣಿ ಕುಸಿಯುತ್ತಿದ್ದಂತೆಯೇ ಹೊರಗಡೆ ಓಡಿ ಬಂದಿದ್ದಾರೆ. ಇದರಿಂದಾಗಿ ಸಂಭವಿಸಬಹುದಾಗಿದ್ದ ಭಾರಿ ಅನಾಹುತವೊಂದು ತಪ್ಪಿದಂತಾಗಿದೆ.

ಮಳೆಗೆ ನೆಲಕಚ್ಚಿದ ಬೆಳೆ

ಕರಾವಳಿ, ಮಲೆನಾಡು ಸೇರಿದಂತೆ ರಾಜ್ಯದಲ್ಲೀಗ ಅಕಾಲಿಕ ಮಳೆ ಸುರಿಯುತ್ತಿದೆ. ಬಹುತೇಕ ಜಿಲ್ಲೆಗಳಲ್ಲಿ ಈ ಬಾರಿ ವಾಡಿಗೆಗಿಂತ ಅಧಿಕ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಜನಜೀವನ ತತ್ತರವಾಗಿದೆ. ಕಳೆದ ಕೆಲವು ವರ್ಷಗಳಲ್ಲಿ ರಾಜ್ಯ ಮಳೆಯ ಕೊರತೆಯನ್ನು ಎದುರಿಸಿತ್ತು. ಆದ್ರೀಗ ಮಳೆಯ ಆರ್ಭಟ ಮುಂದುವರಿದಿದೆ. ಇದು ಕೃಷಿ ಚಟುವಟಿಕೆಗೆ ಹೊಡೆತವನ್ನು ಕೊಟ್ಟಿದೆ. ಕರಾವಳಿ ಭಾಗದಲ್ಲಿ ಭತ್ತದ ಪೈರು ಕಟಾವಿಗೆ ಬಂದಿದೆ. ಆದರೆ ಗದ್ದೆಗಳಲ್ಲಿ ನೀರು ತುಂಬಿರುವುದರಿಂದಾಗಿ ಕಟಾವು ಮಾಡಲಾಗದ ಸ್ಥಿತಿ ನಿರ್ಮಾಣವಾಗಿದೆ. ಇನ್ನೊಂದಡೆಯಲ್ಲಿ ಮಂಡ್ಯ, ಚಾಮರಾಜನಗರ ಜಿಲ್ಲೆಗಳಲ್ಲಿ ಕಬ್ಬು, ಚೆಂಡು ಹೂವಿನ ಬೆಳೆ ಗಾಳಿ, ಮಳೆಯಿಂದಾಗಿ ನೆಲಕಚ್ಚಿದೆ.

ಇನ್ನೂ ಮೂರು ದಿನ ಭಾರಿ ಮಳೆ

ರಾಜ್ಯದಲ್ಲಿ ಹವಾಮಾನ ಇಲಾಖೆ ನೀಡಿರುವ ಮಾಹಿತಿಯ ಪ್ರಕಾರ ಅಕ್ಟೋಬರ್‌ 15ರ ವರೆಗೂ ರಾಜ್ಯದಲ್ಲಿ ಮಳೆಯ ಆರ್ಭಟ ಮುಂದುವರಿಯುವ ಸಾಧ್ಯತೆಯಿದೆ. ರಾಜಧಾನಿ ಬೆಂಗಳೂರು, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಕೊಡಗು, ಹಾಸನ, ಚಿಕ್ಕಮಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದು ಯೆಲ್ಲೋ ಅಲರ್ಟ್‌ ಘೋಷಣೆ ಮಾಡಲಾಗಿದೆ.

(Heavy rain falls in 8 districts of the Karnataka: Yellow Alert today)

Comments are closed.