ಉಡುಪಿ : ಇಂದು ಕೃಷ್ಣ ಜನ್ಮಾಷ್ಠಮಿ. ನಾಡಿನಾದ್ಯಂತ ಜನ್ಮಾಷ್ಟಮಿಯನ್ನು ಸಂಪ್ರದಾಯಿಕವಾಗಿ ಆಚರಿಸಲಾಗುತ್ತಿದೆ. ಕೊರೊನಾ ಹಿನ್ನೆಲೆಯಲ್ಲಿ ಸಾರ್ವಜನಿಕವಾಗಿ ಕೃಷ್ಣಾಷ್ಠಮಿ ಆಚರಣೆಗೆ ಅವಕಾಶವಿಲ್ಲದ ಹಿನ್ನೆಲೆಯಲ್ಲಿ ಉಡುಪಿಯ ಶ್ರೀಕೃಷ್ಣ ಮಠ ಸೇರಿದಂತೆ ನಾಡಿನ ಕೃಷ್ಣ ದೇವಾಲಯದಲ್ಲಿ ಭಕ್ತರಿಗೆ ವಿಶೇಷ ಪೂಜೆಗೆ ಮಾತ್ರವೇ ಅವಕಾಶ ಕಲ್ಪಿಸಲಾಗಿದೆ.

ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಈ ಬಾರಿ ಸರಳವಾಗಿ ಕೃಷ್ಣ ಜನ್ಮಾಷ್ಠಮಿಯನ್ನು ಆಚರಿಸಲು ನಿರ್ಧರಿಸಲಾಗಿದೆ. ಇಂದು ಬೆಳಗ್ಗೆ ಪರ್ಯಾಯ ಮಠದ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ಲಕ್ಷ ತುಳಸಿ ಅಚರ್ಚೆಯನ್ನು ನೆರವೇರಿಸಲಿದ್ದಾರೆ. ನಂತರ ಮಹಾಪೂಜೆ ನಡೆಯಲಿದೆ. ಹಗಲು ಏಕಾದಶಿಯಂತೆ ನಿರ್ಜಲ ಉಪವಾಸವಿರಲಿದೆ.

ರಾತ್ರಿ ಪೂಜೆಯ ಬಳಿಕ ನಿವೇದನೆಗೆ ಉಂಡೆ ಕಟ್ಟುವುದಕ್ಕೆ ಸ್ವಾಮೀಜಿ ಅವರು ಮುಹೂರ್ತ ಮಾಡಲಿದ್ದಾರೆ. ಮಧ್ಯರಾತ್ರಿ ಅಷ್ಟ ಮಠದ ಸ್ವಾಮೀಜಿಗಳ ಜೊತೆಗೂಡಿ ಶ್ರೀಕೃಷ್ಣನಿಗೆ ಅರ್ಘ್ಯಪ್ರದಾನ ಮಾಡಲಿದ್ದಾರೆ. ಈ ವೇಳೆಯಲ್ಲಿ ಕೊರೊನಾ ಮಾರ್ಗಸೂಚಿಯ ಪ್ರಕಾರ ಭಕ್ತರಿಗೆ ಕೃಷ್ಣನ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.