ಕುಂದಾಪುರಕ್ಕೆ ಕಿರಣ್‌ ಕೊಡ್ಗಿ, ಕಾಪು ಗುರ್ಮೆ ಸುರೇಶ್‌ ಶೆಟ್ಟಿ

ಉಡುಪಿ (udupi) : ಕರ್ನಾಟಕ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ ತನ್ನ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ. ಕುಂದಾಪುರ ವಿಧಾನಸಭಾ ಕ್ಷೇತ್ರದಿಂದ ಕಿರಣ್‌ ಕೊಡ್ಗಿ, ಕಾಪುವಿನಿಂದ ಸುರೇಶ್‌ ಗುರ್ಮೆ ಸುರೇಶ್‌ ಶೆಟ್ಟಿ, ಕಾರ್ಕಳದಿಂದ ಸುನಿಲ್‌ ಕುಮಾರ್‌, ಉಡುಪಿ (udupi) ವಿಧಾನಸಭಾ ಕ್ಷೇತ್ರದಿಂದ ಯಶಪಾಲ್‌ ಸುವರ್ಣ ಅವರಿಗೆ ಟಿಕೆಟ್‌ ನೀಡಲಾಗಿದೆ. ಆದರೆ ಬೈಂದೂರು ವಿಧಾನಸಭಾ ಕ್ಷೇತ್ರಕ್ಕೆ ಇನ್ನೂ ಅಭ್ಯರ್ಥಿಯ ಹೆಸರನ್ನು ಅಂತಿಮಗೊಳಿಸಿಲ್ಲ.

ಇನ್ನು ದಕ್ಷಣ ಕನ್ನಡ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಯನ್ನು ಪ್ರಕಟಿಸಿದೆ. ಬೆಳ್ತಂಗಡಿಯಿಂದ ಹರೀಶ್‌ ಪೂಂಜಾ, ಮಂಗಳೂರು ನಗರದಿಂದ ಭರತ್‌ ಶೆಟ್ಟಿ, ಮಂಗಳೂರು ದಕ್ಷಿಣದಿಂದ ವೇದವ್ಯಾಸ್‌ ಕಾಮತ್‌, ಮಂಗಳೂರು ಕ್ಷೇತ್ರ (ಉಳ್ಳಾಲ) ಸತೀಶ್‌ ಕುಂಪಲ, ಪುತ್ತೂರಿನಿಂದ ಆಶಾ ತಿಮ್ಮಪ್ಪ, ಸುಳ್ಯದಿಂದ ಭಾಗಿರಥಿ ಮುರುಳಿಯಾರ್ ಅವರಿಗೆ ಟಿಕೆಟ್‌ ಘೋಷಿಸಲಾಗಿದೆ.

ಕರ್ನಾಟಕ ವಿಧಾನಸಭಾ ಚುನಾವಣೆಗೆ (Karnataka assembly election 2023) ಸಂಬಂಧಿಸಿದಂತೆ ಬಿಜೆಪಿ ಕೊನೆಗೂ ತನ್ನ 189 ಅಭ್ಯರ್ಥಿಗಳ ಪಟ್ಟಿಯನ್ನು (BJP candidate list) ಪ್ರಕಟಿಸಿದೆ. ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್‌ ಅವರು ಮೊದಲ ಹಂತದಲ್ಲಿ ಒಟ್ಟು 189 ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದ್ದು, ಉಳಿದ 35 ಕ್ಷೇತ್ರಗಳಿಗೆ ಎರಡನೇ ಪಟ್ಟಿಯಲ್ಲಿ ಪ್ರಕಟಿಸಲಿದೆ.

31 ಜಿಲ್ಲೆಗಳಲ್ಲಿನ ಒಟ್ಟು 25 ಸಾವಿರಕ್ಕೂ ಅಧಿಕ ಬಿಜೆಪಿ ಕಾರ್ಯಕರ್ತರ, ಗ್ರಾಮ ಮಟ್ಟದ ಮುಖಂಡರ ಸಭೆಯನ್ನು ಕರೆದು ಅಭಿಪ್ರಾಯ ಸಂಗ್ರಹಿಸಲಾಗಿದೆ. ಕೆಳ ಹಂತದ ಶಿಫಾರಸ್ಸುಗಳ ಬಗ್ಗೆ ಹೆಚ್ಚಿನ ಮಹತ್ವವನ್ನು ನೀಡಲಾಗಿದೆ. ನಾಲ್ಕೈದು ದಿನಗಳ ಕಾಲ ಬೆಂಗಳೂರಿನಲ್ಲಿ ಸಭೆಯನ್ನು ನಡೆಸಿ, ಅಭ್ಯರ್ಥಿಗಳ ಆಯ್ಕೆಯನ್ನು ಮಾಡಲಾಗಿದೆ ಎಂದು ಧರ್ಮೇಂದ್ರ ಪ್ರಧಾನ್‌ ತಿಳಿಸಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೈಕಮಾಂಡ್‌ ಹಲವು ಅಳೆದು ತೂಗಿ ಅಭರ್ಥಿಗಳ ಆಯ್ಕೆ ಮಾಡಿದೆ. ಬಹುತೇಕ ಹಾಲಿ ಶಾಸಕರಿಗೆ ಈ ಬಾರಿ ಕೋಕ್‌ ನೀಡಲಾಗಿದೆ. ಇನ್ನು ಗುಜರಾತ್‌ ಮಾದರಿಯನ್ನೇ ಕರ್ನಾಟಕದಲ್ಲೂ ಜಾರಿಗೆ ತರಲಾಗಿದ್ದು, ಬಹುತೇಕ ಹೊಸ ಅಭ್ಯರ್ಥಿಗಳಿಗೆ ಮಣೆ ಹಾಕಲಾಗಿದೆ. ವಿಧಾನಸಭಾ ಚುನಾವಣೆ ಘೋಷಣೆಯಾಗಿ ಹಲವು ದಿನಗಳು ಕಳೆದಿದ್ದರೂ ಕೂಡ ಬಿಜೆಪಿ ಅಭ್ಯರ್ಥಿಗಳ ಆಯ್ಕೆಗಾಗಿ ಕಸರತ್ತು ನಡೆಸುತ್ತಿತ್ತು. ಕೊನೆಗೂ ನಾಮಪತ್ರ ಸಲ್ಲಿಕೆಗೆ ಒಂದು ದಿನ ಬಾಕಿ ಇರುವಂತೆಯೇ ಬಿಜೆಪಿ ಹೈಕಮಾಂಡ್‌ ಪಟ್ಟಿಯನ್ನು ಪ್ರಕಟಿಸಿದೆ. ಚುನಾವಣೆಗೆ ಮುನ್ನವೇ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ದಾವಣಗೆರೆಯ ಎಸ್.ಎ.ರವೀಂದ್ರನಾಥ್‌, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌, ಚುನಾವಣಾ ಉಪ ಉಸ್ತುವಾರಿ ಅಣ್ಣಾಮಲೈ, ಮನ್ಸುಕ್‌ ಮಾಂಡವೀಯ ಉಪಸ್ಥಿತರಿದ್ದರು.

Comments are closed.