ಮತ್ತೆ ಮೇಕೆದಾಟು ಪಾದಯಾತ್ರೆಗೆ ಕೊರೋನಾ ಅಡ್ಡಿ? ಅನುಮತಿ ನೀಡಲ್ಲ ಎಂದ ರಾಮನಗರ ಡಿಸಿ

ಬೆಂಗಳೂರು : ಇತ್ತೀಚಿಗಷ್ಟೇ ರಾಜ್ಯ ಸರ್ಕಾರದ ಪಾಲಿಗೆ ತಲೆನೋವಾಗಿ ಪರಿಣಮಿಸಿದ್ದ ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ಮತ್ತೊಮ್ಮೆ ಕಗ್ಗಂಟಾಗುವ ಮುನ್ಸೂಚನೆ ನೀಡಿದೆ. ಕೊರೋನಾ ಕಾರಣಕ್ಕೆ ಸರ್ಕಾರ ಕಠಿಣ ನಿಯಮ ರೂಪಿಸಿ ಕಾಂಗ್ರೆಸ್ ಪಾದಯಾತ್ರೆಯನ್ನು ತಡೆಯುವಲ್ಲಿ ಯಶಸ್ವಿಯಾಗಿತ್ತು. ಆದರೆ ಈಗ ಮತ್ತೊಮ್ಮೆ ಕಾಂಗ್ರೆಸ್ ಪಾದಯಾತ್ರೆಗೆ ಸಿದ್ಧವಾಗಿದ್ದು ಈ ಭಾರಿ ಜಿಲ್ಲಾಡಳಿತವೇ ಪಾದಯಾತ್ರೆಗೆ (mekedatu padayatra corona effect) ಅಡ್ಡಿಯಾಗೋ ಸಾಧ್ಯತೆ ಇದೆ.

ಮುಂಬರುವ ವಿಧಾನಸಭೆಯಲ್ಲಿ ಗೆದ್ದು ಮುಖ್ಯಮಂತ್ರಿಯಾಗೋ‌ ಕನಸಿನಲ್ಲಿರೋ ಡಿ.ಕೆ.ಶಿವಕುಮಾರ್ ಮಹತ್ವಾಕಾಂಕ್ಷೆಯಿಂದ ಹಮ್ಮಿಕೊಂಡ ಕಾರ್ಯಕ್ರಮ ಮೇಕೆದಾಟು ಪಾದಯಾತ್ರೆ. ಆದರೆ ಈ ಪಾದಯಾತ್ರೆ ಸರಕಾರಕ್ಕೆ ಮುಜುಗರ ತರುತ್ತೆ ಅನ್ನೋ ಕಾರಣಕ್ಕೆ ನಿಯಂತ್ರಣ ಹೇರುವ ಪ್ರಯತ್ನವನ್ನು ರಾಜ್ಯ ಸರ್ಕಾರ ನಡೆಸುತ್ತಲೇ ಬಂದಿದೆ.

ಜನವರಿ 9 ರಿಂದ ಆರಂಭವಾಗಿದ್ದ ಪಾದಯಾತ್ರೆಯನ್ನು ಕೊನೆಗೂ ಸರ್ಕಾರ ಕೊರೋನಾ ಮೂರನೇ ಅಲೆಯ ಕಾರಣ ನೀಡಿ ನಿಲ್ಲಿಸುವ ಪ್ರಯತ್ನ ಮಾಡಿತು.‌ ನೊರೆಂಟು ಪ್ರಯತ್ನಗಳ ಬಳಿಕ ಕಾಂಗ್ರೆಸ್ ಹೈಕಮಾಂಡ್ ಸೂಚನೆ ಮೇರೆಗೆ ಡಿಕೆಶಿ ಮತ್ತೊಮ್ಮೆ ಪಾದಯಾತ್ರೆ ಆರಂಭಿಸುವ ಶಪಥದೊಂದಿಗೆ ಯಾತ್ರೆ ಮೊಟಕುಗೊಳಿಸಿದ್ದರು. ಈಗ ಮತ್ತೊಮ್ಮೆ ಕರೋನಾ ಪ್ರಮಾಣ ತಗ್ಗುತ್ತಿದ್ದಂತೆ ಕಾಂಗ್ರೆಸ್ ಪಾದಯಾತ್ರೆಗೆ ಸಜ್ಜಾಗಿದೆ. ಫೆ.27 ರಿಂದ ಬಾಕಿ ಉಳಿದಿರುವ 5 ದಿನಗಳ ಪಾದಯಾತ್ರೆ ರಾಮನಗರದಿಂದ ಆರಂಭಿಸುವುದಾಗಿ ಡಿಕೆಶಿ ಹೇಳಿದ್ದಾರೆ.

ಆದರೆ ಈ ಪಾದಯಾತ್ರೆಗೆ ಈಗ ರಾಮನಗರ ಜಿಲ್ಲಾಧಿಕಾರಿಗಳೇ ಅಡ್ಡಿಯಾಗುವ ಸಾಧ್ಯತೆ ಇದೆ. ನಾವು ಪಾದಯಾತ್ರೆಗೆ ಅನುಮತಿ ನೀಡಿಲ್ಲ. ಫೆ.28 ರವರೆಗೆ ಯಾವುದೇ ಪ್ರತಿಭಟನೆಗೆ ಅವಕಾಶವಿಲ್ಲ ಎಂದು ಸರ್ಕಾರ ಆದೇಶಿಸಿದೆ. ಫೆ.28 ರವರೆಗೆ ಯಾವುದೇ ಪ್ರತಿಭಟನೆ,ರ್ಯಾಲಿಗೆ ಅವಕಾಶವಿಲ್ಲ ನಿಯಮ ಜಾರಿಗೆ ತರಲಾಗಿದೆ. ಹೀಗಾಗಿ ಪಾದಯಾತ್ರೆ ಮಾಡಲು ಬರುವುದಿಲ್ಲ ಎಂದು ಡಿ.ಸಿ.ಡಾ.ಕೆ.ರಾಕೇಶ್ ಕುಮಾರ್ ಹೇಳಿದ್ದಾರೆ.

ಅಲ್ಲದೇ ತಮಗೆ ಯಾವುದೇ ಪಾದಯಾತ್ರೆಗೆ ಅನುಮತಿ ಕೋರಿ ಪತ್ರ ಬಂದಿಲ್ಲ ಎಂಬ ಸಂಗತಿಯನ್ನು ಡಿಸಿಯವರು ಬಹಿರಂಗಪಡಿಸಿದ್ದಾರೆ. ಆದರೆ ಡಿಜಿಪಿಗೆ ಪಾದಯಾತ್ರೆ ಭದ್ರತೆ ಕೋರಿ ಪತ್ರ ಬರೆದಿದ್ದಾರೆ. ಇದನ್ನು ಎಸ್ಪಿ ಕಳುಹಿಸಲಾಗಿದೆ . ಹೀಗಾಗಿ ನಾವು ಎಸ್ಪಿಯಿಂದ ಮಾಹಿತಿ ಕೋರಿದ್ದೇವೆ ಎಂದು ಡಿಸಿ ಮಾಹಿತಿ ನೀಡಿದ್ದಾರೆ. ಅಲ್ಲದೇ ನಮಗೆ ಕೊರೋನಾ ನಿಯಮ ಗಳ ನಡುವೆ ಪಾದಯಾತ್ರೆಗೆ ಅನುಮತಿ ನೀಡಲು ಅಧಿಕಾರವೇ ಇಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ಆದರೆ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಾದಯಾತ್ರೆ ಕೈಬಿಡೋದು ಅನುಮಾನ. ಹೀಗಾಗಿ ಇದೇ ಕಾರಣಕ್ಕೆ ಮತ್ತೊಮ್ಮೆ ರಾಜ್ಯದಲ್ಲಿ ಸಂಘರ್ಷಗಳು ನಡೆಯೋದು ಖಚಿತ ಎನ್ನಲಾಗ್ತಿದೆ.

ಇದನ್ನೂ ಓದಿ : ಮೇಕೆದಾಟು ಪಾದಯಾತ್ರೆ ವಿರುದ್ದ ಸರಕಾರಕ್ಕೆ ಹೈಕೋರ್ಟ್‌ ಚಾಟಿ : ಕೆಪಿಸಿಸಿಗೆ ಶೋಕಾಸ್‌ ನೋಟಿಸ್‌ ಜಾರಿ

ಇದನ್ನೂ ಓದಿ :  ಮೇಕೆದಾಟು ಪಾದಯಾತ್ರೆ: ಡಿ ಕೆ ಶಿವಕುಮಾರ್ 5 ದಿನ ಹರಿಸಿದ ಬೆವರಿಗಾದರೂ ಲಾಭವಾಯಿತೇ?

( Mekedatu padayatra corona effect, Ramanagara DC says no permission given )

Comments are closed.