ಗುಡ್ ನ್ಯೂಸ್; ಕಾಲೇಜು ವಿದ್ಯಾರ್ಥಿಯರಿಗೂ ಮುಟ್ಟಿನ ರಜೆ

Menstrual Leave for college students: ಬೆಂಗಳೂರು: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಗೆ ಮುಂದಾಗಿರುವ ಕರ್ನಾಟಕ ಸರ್ಕಾರ, ರಾಜ್ಯದ ಕಾಲೇಜು ವಿದ್ಯಾರ್ಥಿನಿಯರಿಗೆ ಪ್ರತಿ ತಿಂಗಳು ‘ಋತುಚಕ್ರದ ರಜೆ’ (Menstrual Leave) ನೀಡುವ ಕುರಿತು ಗಂಭೀರ ಚಿಂತನೆ ನಡೆಸುತ್ತಿದೆ.
ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರು ಋತುಚಕ್ರದ ಸಮಯದಲ್ಲಿ ಎದುರಿಸುವ ಆರೋಗ್ಯ ಸಮಸ್ಯೆಗಳು ಮತ್ತು ದೈಹಿಕ ಕಿರಿಕಿರಿಗಳನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರಕ್ಕೆ ಬರಲಾಗಿದೆ. ‘ದಿ ನ್ಯೂಸ್ ಮಿನಿಟ್’ ವರದಿಯ ಪ್ರಕಾರ, ಈ ಪ್ರಸ್ತಾವನೆಯು ಸದ್ಯ ಸರ್ಕಾರದ ಪರಿಶೀಲನೆಯಲ್ಲಿದೆ.
ಹಾಜರಾತಿಯಲ್ಲಿ ಸಡಿಲಿಕೆ: ಪ್ರಸ್ತುತ ವಿದ್ಯಾರ್ಥಿನಿಯರಿಗೆ ಇರುವ ಕಡ್ಡಾಯ ಹಾಜರಾತಿ ನಿಯಮದಲ್ಲಿ ಈ ರಜೆಯ ಅವಧಿಯನ್ನು ಸೇರಿಸಿ ಸಡಿಲಿಕೆ ನೀಡುವ ಬಗ್ಗೆ ಚರ್ಚೆ ನಡೆಯುತ್ತಿದೆ.
ಈಗಾಗಲೇ ಕೇರಳ ಸರ್ಕಾರವು ತನ್ನ ರಾಜ್ಯದ ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಇಂತಹ ರಜೆಯನ್ನು ಘೋಷಿಸಿದ್ದು, ಕರ್ನಾಟಕ ಕೂಡ ಅದೇ ಮಾದರಿಯನ್ನು ಅನುಸರಿಸುವ ಸಾಧ್ಯತೆಯಿದೆ.
ಆರೋಗ್ಯಕ್ಕೆ ಆದ್ಯತೆ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಈ ಬಗ್ಗೆ ಈ ಹಿಂದೆಯೇ ಸುಳಿವು ನೀಡಿದ್ದು, ವಿದ್ಯಾರ್ಥಿನಿಯರ ಆರೋಗ್ಯ ಮತ್ತು ಶೈಕ್ಷಣಿಕ ಹಿತದೃಷ್ಟಿಯಿಂದ ಇದು ಅತ್ಯಗತ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.
IPL 2026: RCB ಜೆರ್ಸಿಯಲ್ಲಿ ಮಿಂಚಲಿದೆಯೇ ‘ನಂದಿನಿ’? ಅಮೂಲ್ vs ಕೆಎಂಎಫ್ ಬಿಗ್ ಫೈಟ್!
ಕಳೆದ ಕೆಲವು ಸಮಯದಿಂದ ವಿದ್ಯಾರ್ಥಿ ಸಂಘಟನೆಗಳು ಮತ್ತು ಮಹಿಳಾ ಹಕ್ಕುಗಳ ಕಾರ್ಯಕರ್ತರು ಈ ರಜೆಗಾಗಿ ಒತ್ತಾಯಿಸುತ್ತಿದ್ದರು. ಜಾಗತಿಕ ಮಟ್ಟದಲ್ಲಿ ಮತ್ತು ಭಾರತದ ಕೆಲವು ಖಾಸಗಿ ಕಂಪನಿಗಳಲ್ಲಿ ಈಗಾಗಲೇ ಈ ನಿಯಮ ಜಾರಿಯಲ್ಲಿದೆ. ಕರ್ನಾಟಕ ಸರ್ಕಾರದ ಈ ನಡೆಯು ಮಹಿಳಾ ಸಬಲೀಕರಣ ಮತ್ತು ಆರೋಗ್ಯದ ದೃಷ್ಟಿಯಿಂದ ಅತ್ಯಂತ ಪ್ರಗತಿಪರ ಹೆಜ್ಜೆಯೆಂದು ವಿಶ್ಲೇಷಿಸಲಾಗುತ್ತಿದೆ.
ಸರ್ಕಾರವು ಈ ಕುರಿತು ತಜ್ಞರ ಸಮಿತಿಯೊಂದಿಗೆ ಚರ್ಚಿಸಿ, ಶೈಕ್ಷಣಿಕ ಕ್ಯಾಲೆಂಡರ್ನಲ್ಲಿ ಹೇಗೆ ಅಳವಡಿಸಬೇಕು ಎಂಬ ಬಗ್ಗೆ ಅಂತಿಮ ಮಾರ್ಗಸೂಚಿಗಳನ್ನು ಸಿದ್ಧಪಡಿಸಲಿದೆ. ಶಿಕ್ಷಣ ಇಲಾಖೆಯು ಅಧಿಕೃತ ಆದೇಶ ಹೊರಡಿಸಿದರೆ, ರಾಜ್ಯದ ಲಕ್ಷಾಂತರ ಕಾಲೇಜು ವಿದ್ಯಾರ್ಥಿನಿಯರಿಗೆ ಇದು ದೊಡ್ಡ ಮಟ್ಟದ ನೆಮ್ಮದಿ ನೀಡಲಿದೆ.



