Congress Protest : ಸಿಎಂ ಮನವೊಲಿಕೆಗೂ ಬಗ್ಗದ ಕೈಪಡೆ : ಉಭಯ ಸದನದಲ್ಲಿ ಕಾಂಗ್ರೆಸ್ ಅಹೋರಾತ್ರಿ ಧರಣಿ

ಬೆಂಗಳೂರು : ಭವಿಷ್ಯದಲ್ಲಿ ದೆಹಲಿಯ ಕೆಂಪುಕೋಟೆಯ ಮೇಲೆ ರಾಷ್ಟ್ರ ಧ್ವಜದ ಬದಲು ಕೇಸರಿ ಧ್ವಜ ಹಾರಿಸಲಾಗುವುದು ಎಂದು ರಾಜ್ಯ ಬಿಜೆಪಿ ಹಿರಿಯ ಸಚಿವ ಈಶ್ವರಪ್ಪ ನೀಡಿರುವ ಹೇಳಿಕೆ ಈಗ ಬಿಜೆಪಿ ಪಾಲಿಗೆ ಸಂಕಟ ತಂದಿಟ್ಟಿದೆ. ಈಶ್ವರಪ್ಪ ರಾಜೀನಾಮೆ ಹಾಗೂ ಈಶ್ವರಪ್ಪ ವಿರುದ್ಧ ದೇಶದ್ರೋಹದ ಪ್ರಕರಣಕ್ಕೆ ಪಟ್ಟು ಹಿಡಿದಿರುವ ಕಾಂಗ್ರೆಸ್ ಶಾಸಕರು ಉಭಯ ಸದನಗಳಲ್ಲಿ ಅಹೋರಾತ್ರಿ ಪ್ರತಿಭಟನೆ (Congress Protest ) ನಡೆಸಿದ್ದಾರೆ. ಇನ್ನೊಂದೆಡೆ ಮುಜುಗರ ತಪ್ಪಿಸಿಕೊಳ್ಳಲು ಸ್ವತಃ ಸಿಎಂ ಬೊಮ್ಮಾಯಿ ಸೇರಿದಂತೆ ಬಿಜೆಪಿ ಹಿರಿಯ ಶಾಸಕರು ಕಾಂಗ್ರೆಸ್ ಮುಂದೇ ಕೈಕಟ್ಟಿ ನಿಂತಿದ್ದಾರೆ.

ಈಶ್ವರಪ್ಪನವರು ರಾಜೀನಾಮೆ ಕೊಡುವ ತನಕ ಸದನದಲ್ಲಿ ಅಹೋರಾತ್ರಿ ಪ್ರತಿಭಟನೆ ನಡೆಸಿದ್ದಾರೆ. ವಿಧಾನಸಭೆಯಲ್ಲಿ ಮಾಜಿಸಿಎಂ ಹಾಗೂ ಪ್ರತಿ ಪಕ್ಷ ನಾಯಕ ಸಿದ್ಧ ರಾಮಯ್ಯ ಹಾಗೂ ವಿಧಾನಪರಿಷತ್ ನಲ್ಲಿ ಬಿ.ಕೆ.ಹರಿಪ್ರಸಾದ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಬಿಜೆಪಿ ನಾಯಕರು, ಸಚಿವರು, ಸ್ವತಃ ಈಶ್ವರಪ್ಪ ಸೇರಿದಂತೆ ಎಲ್ಲರೂ ಈಶ್ವರಪ್ಪ ರಾಜೀನಾಮೆ ನೀಡುವ ಅವಶ್ಯಕತೆಯೇ ಇಲ್ಲ ಎಂದು ವಾದಿಸಿದ್ದಾರೆ. ಸಿಎಂ ಬೊಮ್ಮಾಯಿ ಕೂಡಾ ಈಶ್ವರಪ್ಪ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.

ಇದರಿಂದ ಕೆರಳಿರುವ ಕಾಂಗ್ರೆಸ್ ನಾಯಕರು ಅಹೋರಾತ್ರಿ ಪ್ರತಿಭಟನೆಗೆ ಮುಂದಾಗಿದ್ದರು. ಈಗಾಗಲೇ ಪ್ರತಿಭಟನೆ ಗೆ ಅಗತ್ಯ ವ್ಯವಸ್ಥೆ ಹಾಗೂ ರಾತ್ರಿ ಸದನದಲ್ಲೇ ಉಳಿದುಕೊಳ್ಳಲು ಅಗತ್ಯ ಸೌಲಭ್ಯ ಒದಗಿಸಿಕೊಡುವಂತೆ ಸ್ಪೀಕರ್ ಕಚೇರಿಗೆ ಕೋರಿದ್ದಾರೆ. ಈ ಮಧ್ಯೆ ಸಿದ್ಧರಾಮಯ್ಯನವರನ್ನು ಮನವೊಲಿಸುವ ಸರ್ಕಸ್ ಕೂಡ ನಡೆದಿದ್ದು ಸ್ಪೀಕರ್ ವಿಶ್ವೇಶ್ವರ್ ಹೆಗಡೆ ಕಾಗೇರಿ ಸಿದ್ಧರಾಮಯ್ಯನವರನ್ನು ಸೌಹಾರ್ದಯುತವಾಗಿ ಭೇಟಿ ಮಾಡಿದ್ದಾರೆ. ಇನ್ನು ಸಿದ್ಧರಾಮಯ್ಯನವರ ಮನವೊಲಿಸಲು ಸಚಿವ ಆರ್. ಅಶೋಕ್, ಮಾಜಿಸಿಎಂ ಬಿಎಸ್ವೈ ಹಾಗೂ ಹಾಲಿ ಸಿಎಂ ಬಸವರಾಜ್ ಬೊಮ್ಮಾಯಿ ಎರಡು ಗಂಟೆಗಳ ಕಾಲ ಸಿದ್ಧರಾಮಯ್ಯ ಮನವೊಲಿಸಿದ್ದಾರೆ.

ಆದರೆ ಸಿದ್ಧರಾಮಯ್ಯನವರು ಯಾವುದೇ ಮನವೊಲಿಕೆಗೆ ಬಗ್ಗಿಲ್ಲ.‌ ಅಲ್ಲದೇ ಈಶ್ವರಪ್ಪನವರ ರಾಜೀನಾಮೆ ಪಡೆದು ಬಂದು ಮಾತನಾಡಿ ಎಂದು ಬಿಎಸ್ವೈ ಹಾಗೂ ಬಸವರಾಜ್ ಬೊಮ್ಮಾಯಿಗೆ ತಿರುಗೇಟು ನೀಡಿದ್ದಾರಂತೆ. ಇನ್ನು ಬಿ.ಕೆ.ಹರಿಪ್ರಸಾದ್ ಕೂಡ ಈಶ್ವರಪ್ಪ ವಿರುದ್ಧ ವಾಗ್ದಾಳಿ ನಡೆಸಿದ್ದು, ಈಶ್ವರಪ್ಪ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲು ಮಾಡಿ, ರಾಜೀನಾಮೆ ಪಡೆಯುವ ವರೆಗೂ ಹೋರಾಟ ನಡೆಯಲಿದೆ ಎಂದು ಹರಿಪ್ರಸಾದ್ ಎಚ್ಚರಿಸಿದ್ದಾರೆ. ಪರಿಷತ್ ನಲ್ಲೂ ಧರಣಿ ನಿರತರನ್ನು ಸ್ಪೀಕರ್ ಬಸವರಾಜ್ ಹೊರಟ್ಟಿ ಭೇಟಿ ಮಾಡಿದ್ದಾರೆ.

ಇನ್ನೊಂದೆಡೆ ಮನವೊಲಿಕೆ ವಿಫಲವಾಗುತ್ತಿದ್ದಂತೆ ಮಾಜಿಸಿಎಂ ಬಿಎಸ್ವೈ ಮಾಧ್ಯಮಗಳ ಜೊತೆ ಮಾತನಾಡಿದ್ದು, ಸಿಎಂ ಬೊಮ್ಮಾಯಿ, ನಾನು, ಆರ್.ಅಶೋಕ್, ಆರಗ ಜ್ಞಾನೇಂದ್ರ ಎಲ್ಲರೂ ಸೇರಿ ಸಿದ್ಧರಾಮಯ್ಯನವರ ಮನವೊಲಿಸಿದೇವು. ರಾತ್ರಿಯಿಡಿ ಧರಣಿ ಮಾಡಬೇಡಿ ಎಂದೂ ಹೇಳಿದ್ದೇವೆ. ಆದರೂ ಸಿದ್ಧರಾಮಯ್ಯನವರು ಮನಬದಲಾಯಿಸಲಿಲ್ಲ. ಇದು ಒಳ್ಳೆಯ ಬೆಳವಣಿಗೆ ಅಲ್ಲ ಎಂದೂ ಹೇಳಿದ್ದೇವೆ ಎಂದು ಬಿಎಸ್ವೈ ಹೇಳಿದರು. ಒಟ್ಟಿನಲ್ಲಿ ಬಿಜೆಪಿ ಗೆ ಈಶ್ವರಪ್ಪ ನಾಲಿಗೆಯೇ ಮತ್ತೊಮ್ಮೆ ಕಂಟಕ ತಂದಿದ್ದು ಕಾಂಗ್ರೆಸ್ ಅಹೋರಾತ್ರಿ ಪ್ರತಿಭಟನೆ ಪಕ್ಷದ ಮುಜುಗರ ಕಾರಣವಾಗಿದೆ.

ಇದನ್ನೂ ಓದಿ: ಎಲ್ಲಾದಕ್ಕೂ ಏಕೆ ಜವಾಹರಲಾಲ್ ನೆಹರೂರನ್ನೇ ಟೀಕಿಸುತ್ತೀರಿ? ಮೋದಿಗೆ ಸವಾಲೆಸೆದ ಮನಮೋಹನ್ ಸಿಂಗ್

ಇದನ್ನೂ ಓದಿ : ರಾಜ್ಯ ಹಿಬಾಜ್ ಸಂಘರ್ಷ: ಕೇಂದ್ರಕ್ಕೆ ವರದಿ ಸಲ್ಲಿಸಿದ ಗೃಹ ಇಲಾಖೆ

(Minister KS Eshwarappa resign Demand Congress Protest in Vidhan Sabha)

Comments are closed.