ನಂದಿನಿ vs ಅಮುಲ್‌ ರಣರಂಗ : ಅಮುಲ್‌ ಮಾರಾಟ ನಿಲ್ಲಿಸುವಂತೆ ಇ-ಕಾಮರ್ಸ್ ಸಂಸ್ಥೆಗಳಿಗೆ ಎಚ್ಚರಿಕೆ

ಬೆಂಗಳೂರು : (Nandini vs Amul) ಕರ್ನಾಟಕದ ಹೆಮ್ಮೆಯ ನಂದಿನಿ ಉತ್ಪನ್ನಗಳ ಅಭಾವದ ಬೆನ್ನಲ್ಲೇ ಅಮುಲ್‌ ಕರ್ನಾಟಕದಲ್ಲಿ ಹಾಲು ಮಾರಾಟ ಮಾಡಲು ಮುಂದಾಗಿದೆ. ನಂದಿನಿಯ ಜಾಗವನ್ನು ಇಂದು ಅಮುಲ್‌ ಆಕ್ರಮಿಸಲು ಮುಂದಾಗಿದೆ. ಗುಜರಾತ್‌ ಮೂಲದ ಅಮುಲ್‌ ಹಾಲು ಉತ್ಪಾದನಾ ಮಂಡಳಿ ಇದೀಗ ಕರ್ನಾಟಕದಲ್ಲೂ ಹಾಲು ಮಾರಾಟ ಮಾಡಲು ಮುಂದಾಗಿದೆ. ಕ್ವಿಕ್‌ ಕಾಮರ್ಸ್‌ ಫ್ಲಾಟ್‌ ಫಾರ್ಮ್‌ ಮೂಲಕ ಮನೆ ಬಾಗಿಲಿಗೆ ಹಾಲು, ಮೊಸರು ಪೂರೈಕೆಯನ್ನು ಮಾಡಲು ಪ್ಲ್ಯಾನ್‌ ಮಾಡುತ್ತಿದೆ. ಈ ಹಿನ್ನಲೆಯಲ್ಲಿ ಅಮುಲ್‌ ವಿರುದ್ದ ಕನ್ನಡಿಗರ ಆಕ್ರೋಶ ಮುಗಿಲು ಮುಟ್ಟಿದ್ದು, ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯದಲ್ಲಿ ಅಮುಲ್‌ ಹಾಲು, ಮೊಸರು ಮಾರಾಟ ನಿಲ್ಲಿಸುವಂತೆ ಇ-ಕಾಮರ್ಸ್ ಸಂಸ್ಥೆಗಳಿಗೆ ಎಚ್ಚರಿಕೆ ನೀಡಿದೆ

ಇ-ಕಾಮರ್ಸ್ ಅಡಿಯಲ್ಲಿ ಅಮೂಲ್ ಹಾಲು, ಮೊಸರು ಮಾರಾಟಕ್ಕೆ ಮುಂದಾದರೆ ಅಂಥ ಸಂಸ್ಥೆಗಳ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ತೀವ್ರ ಸ್ವರೂಪದ ಹೋರಾಟ ನಡೆಸಲಿದೆ. ಇ-ಕಾಮರ್ಸ್ ಸಂಸ್ಥೆಗಳು ಅಮೂಲ್ ಮಾರಾಟ ನಿಲ್ಲಿಸಬೇಕು, ಇಲ್ಲವಾದಲ್ಲಿ ಆಗುವ ಅನಾಹುತಕ್ಕೆ ಆ ಸಂಸ್ಥೆಗಳೇ ಜವಾಬ್ದಾರಿಯಾಗುತ್ತವೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಎಚ್ಚರಿಕೆಯನ್ನು ನೀಡಿದೆ. ಕರ್ನಾಟಕ ರಕ್ಷಣಾ ವೇದಿಕೆ ಈ ಹಿಂದೆ ಆಂಧ್ರಪ್ರದೇಶದ ಕಲಬೆರೆಕೆ ಹಾಲಿನ ವಿರುದ್ಧ ಹೋರಾಟ ಸಂಘಟಿಸಿ ನಿಲ್ಲಿಸುವಲ್ಲಿ ಯಶಸ್ವಿಯಾಗಿತ್ತು. ಅದೇ ರೀತಿ ಈಗ ಅಮೂಲ್ ವಿರುದ್ಧವೂ ಚಳವಳಿ ರೂಪಿಸಲಿದೆ. ನಂದಿನಿ ವಿರುದ್ಧ ನಡೆದಿರುವ ಪಿತೂರಿಗೆ ಕರವೇ ಸಂಬಂಧಪಟ್ಟವರಿಗೆ ತಕ್ಕ ಪಾಠ ಕಲಿಸಲಿದೆ ಎಂದು ಕಿಡಿಕಾರಿದ್ದಾರೆ.

ಕನ್ನಡಿಗರು ಕಷ್ಟಪಟ್ಟು ಬೆಳೆಸಿದ ನಂದಿನಿ ಬ್ರಾಂಡ್ ಅನ್ನು ಮುಗಿಸಲೆಂದೇ ಅಮೂಲ್ ಹಾಲು-ಮೊಸರನ್ನು ರಾಜ್ಯಕ್ಕೆ ತರಲಾಗುತ್ತಿದೆ. ಕರ್ನಾಟಕದ ರೈತರನ್ನು ಭಿಕ್ಷುಕರನ್ನಾಗಿಸುವ ಸಂಚು ನಡೆಯುತ್ತಿದೆ. ಕನ್ನಡಿಗರು ಸ್ವಾಭಿಮಾನಿಗಳು, ಕೆರಳಿ ನಿಂತರೆ ಇಂಥ ಸಂಚುಗಳನ್ನು ವಿಫಲಗೊಳಿಸುವುದು ಅವರಿಗೆ ಗೊತ್ತಿದೆ. ಕೇಂದ್ರ ಗೃಹಸಚಿವ ಅಮಿತ್ ಶಾ ಅಮೂಲ್ ನೊಂದಿಗೆ ನಂದಿನಿ ಸೇರಿದಂತೆ ದೇಶದ ವಿವಿಧ ಹಾಲು ಉತ್ಪಾದಕ ಸಂಸ್ಥೆಗಳನ್ನು ವಿಲೀನಗೊಳಿಸುವ ಮಾತುಗಳನ್ನು ಆಡಿದ ಬೆನ್ನಲ್ಲಿ ನಡೆಯುತ್ತಿರುವ ಘಟನೆಗಳನ್ನು ಗಮನಿಸಿದರೆ ಕೇಂದ್ರ ಸರ್ಕಾರವೇ ಪಿತೂರಿಯ ಹಿಂದಿದೆ ಎಂಬುದು ಸ್ಪಷ್ಟವಾಗುತ್ತದೆ. ಆದರೆ ಗುಜರಾತಿ ಲಾಬಿಗೆ ನಾವು ಮಣಿಯುವುದಿಲ್ಲ ಎಂದು ಟಿಎ ನಾರಾಯಣಗೌಡ್ರು ಸರಣಿ ಟ್ವೀಟ್‌ ಗಳ ಮೂಲಕ ಕಿಡಿಕಾರಿದ್ದಾರೆ.

ಕರ್ನಾಟಕದ ಬಹುಪಾಲು ರೈತರು ಹಾಲು ಉತ್ಪಾದನೆಯನ್ನು ನೆಚ್ಚಿಕೊಂಡು ಬದುಕುತ್ತಿದ್ದಾರೆ. ಅವರನ್ನು ಗುಜರಾತಿ ವ್ಯಾಪಾರಿಗಳ ಅಡಿಯಾಳಾಗಿ ಮಾಡುವ ಹುನ್ನಾರವೇ ಅಮೂಲ್-ನಂದಿನಿ‌ ವಿಲೀನದ ಪ್ರಸ್ತಾಪ. ಅದನ್ನು ಜಾರಿಗೊಳಿಸುವ ಸಲುವಾಗಿಯೇ ಅಮೂಲ್ ಹಾಲು-ಮೊಸರು ರಾಜ್ಯವನ್ನು ಪ್ರವೇಶಿಸುತ್ತಿದೆ. ಅಮೂಲ್ ಪ್ರವೇಶಕ್ಕಾಗಿಯೇ ವೇದಿಕೆ ಸಜ್ಜುಗೊಳಿಸಲಾಗಿದೆ. ಕೃತಕವಾಗಿ ನಂದಿನ ಹಾಲಿನ ಪೂರೈಕೆ ಕುಸಿಯುವಂತೆ ಮಾಡಲಾಗಿದೆ. ಇದ್ದಕ್ಕಿದ್ದಂತೆ ನಂದಿನಿ ಹಾಲಿನ ಉತ್ಪಾದನೆ ಕುಸಿಯಲು ಕಾರಣವೇನು? ನಂದಿನಿಯನ್ನು ಮುಗಿಸಲು ಕೆಎಂಎಫ್ ಅಧಿಕಾರಿಗಳಿಗೆ ಸುಪಾರಿ ನೀಡಲಾಗಿದೆಯೇ? ಎಂದು ಪ್ರಶ್ನಿಸುವ ಮೂಲಕ ಅಮುಲ್‌ ಸಂಸ್ಥೆಯ ವಿರುದ್ದ ಕಿಡಿಕಾರಿದ್ದಾರೆ.

ಇದನ್ನೂ ಓದಿ : ನಂದಿನಿ vs ಅಮುಲ್‌ : ಕಾಂಗ್ರೆಸ್‌ ಜೆಡಿಎಸ್‌ ಗೆ ಟಕ್ಕರ್‌ ಕೊಟ್ಟ ಬೊಮ್ಮಾಯಿ

ಈ ಹಿಂದೆ ಲಾಭದಲ್ಲಿದ್ದ ಕರ್ನಾಟಕದ ಬ್ಯಾಂಕುಗಳನ್ನು ನಷ್ಟದಲ್ಲಿದ್ದ ಉತ್ತರ ಭಾರತದ ಬ್ಯಾಂಕುಗಳೊಂದಿಗೆ ವಿಲೀನಗೊಳಿಸಲಾಯಿತು. ಅದೇ ರೀತಿ ಅಮೂಲ್ ಜೊತೆಗೆ ನಂದಿನಿಯನ್ನು ವಿಲೀನಗೊಳಿಸುವ ಹುನ್ನಾರ ನಡೆದಿದೆ. ಕರ್ನಾಟಕದ ರೈತರ ಬದುಕಿಗೆ ಕೊಳ್ಳಿ ಇಡಲು ಬಂದರೆ ಕನ್ನಡಿಗರು ದಂಗೆ ಏಳುತ್ತಾರೆ ಎಂಬುದನ್ನು ಮರೆಯಬೇಡಿ ಎಂದು ಕಟ್ಟುನಿಟ್ಟಾಗಿ ಕರ್ನಾಟಕ ರಕ್ಷಣಾ ವೇದಿಕೆ ಅಮುಲ್‌ ಉತ್ಪನ್ನಗಳ ಮಾರಾಟ ಮಾಡುವ ಸಂಸ್ಥೆಗಳಿಗೆ ಎಚ್ಚರಿಕೆಯನ್ನು ನೀಡಿದೆ.

Nandini vs Amul: Nandini vs Amul battle: Amul warns e-commerce firms to stop selling

Comments are closed.