ಚಾಮರಾಜನಗರ ಆಕ್ಸಿಜನ್ ದುರಂತ : ಜಿಲ್ಲಾಧಿಕಾರಿ ಡಾ.ಎಮ್. ಆರ್.ರವಿ ಎತ್ತಂಗಡಿ

ಚಾಮರಾಜನಗರ : ಆಕ್ಸಿಜನ್ ದುರಂತ ಪ್ರಕರಣದಲ್ಲಿ 24 ಮಂದಿ ಸಾವನ್ನಪ್ಪಿದ್ದ ಬೆನ್ನಲ್ಲೇ ಪ್ರಕರಣ ದೇಶದಾದ್ಯಂತ ಸಂಚಲನ ಮೂಡಿಸಿತ್ತು. ಸಾರ್ವಜನಿಕವಾಗಿ ಆಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಇದೀಗ ಚಾಮರಾಜನಗರ ಜಿಲ್ಲಾಧಿಕಾರಿ ಡಾ.ಎಮ್. ಆರ್. ರವಿ ಅವರನ್ನು ವರ್ಗಾವಣೆ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

ಆಕ್ಸಿಜನ್ ಕೊರತೆಯಿಂದಾಗಿ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ 23 ಮಂದಿ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ಓರ್ವ ಕೊರೊನಾ ಸೋಂಕಿತ ಸಾವನ್ನಪ್ಪಿದ್ದರು. ದುರಂತ ಪ್ರಕರಣ ಬೆನ್ನಲ್ಲೇ ರಾಜ್ಯ ಸರಕಾರ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದ ಆಯೋಗವನ್ನು ನೇಮಕ ಮಾಡಿತ್ತು. ನ್ಯಾಯಮೂರ್ತಿಗಳ ಆಯೋಗ ಚಾಮರಾಜನಗರ ಜಿಲ್ಲಾಧಿಕಾರಿ ಡಾ.ಎಮ್.ಆರ್.ರವಿ ಅವರ ನಿರ್ಲಕ್ಷ್ಯವೇ ಕಾರಣವೆಂದು ವರದಿ ಯನ್ನು ನೀಡಿತ್ತು. ವರದಿಯ ಬೆನ್ನಲ್ಲೇ ರಾಜ್ಯ ಸರಕಾರ ವರ್ಗಾವಣೆ ಯನ್ನು ಮಾಡಿ ಆದೇಶ ಹೊರಡಿಸಿದೆ.

ಚಾಮರಾಜನಗರ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಸತೀಶ್ ವರ್ಗಾವಣೆ ಮಾಡಲಾಗಿದೆ. ಇಂದು ನೂತನ ಜಿಲ್ಲಾಧಿಕಾರಿಗಳು ಅಧಿಕಾರ ಸ್ವೀಕರಿಸಲಿದ್ದಾರೆ. ಕಳೆದ ನಾಲ್ಕೈದು ತಿಂಗಳ ಹಿಂದೆಯೇ ಸತೀಶ್ ಅವರನ್ನು ಜಿಲ್ಲಾಧಿಕಾರಿಯಾಗಿ ರಾಜ್ಯ ಸರಕಾರ ನೇಮಕ ಮಾಡಿತ್ತು. ಆದರೆ ಡಾ.ಎಮ್.ಆರ್.ರವಿ ಅವರು ವರ್ಗಾವಣೆ ಆದೇಶಕ್ಕೆ ತಡೆಯಾಜ್ಞೆ ತಂದಿದ್ದರು. ಆದ್ರೀಗ ಆಕ್ಸಿಜನ್ ದುರಂತದ ಬೆನ್ನಲ್ಲೇ ಚಾಮರಾಜನಗರದಲ್ಲಿ ಜಿಲ್ಲಾಧಿಕಾರಿಯ ಬದಲಾವಣೆ ಯಾಗಿದೆ.

Comments are closed.