Praveen Nettaru Murder NIA Investigation : ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣ : ಪುತ್ತೂರಿಗೆ ಎನ್‌ಐಎ ಅಧಿಕಾರಿಗಳ ತಂಡ

ಪುತ್ತೂರು : (Praveen Nettaru Murder NIA Investigation) ಬಿಜೆಪಿ ಯುವ ಮುಖಂಡ ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಐಎ ತನಿಖೆಯನ್ನು ಆರಂಭಿಸಿದ್ದಾರೆ. ಆರು ಮಂದಿ ಅಧಿಕಾರಿಗಳ ತಂಡ ಪುತ್ತೂರಿಗೆ ಆಗಮಿಸಿದ್ದು, ಪ್ರಾಥಮಿಕ ಹಂತದ ತನಿಖೆಯನ್ನು ಆರಂಭಿಸಿದೆ ಎಂದು ತಿಳಿದು ಬಂದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆಯಲ್ಲಿ ಬಿಜೆಪಿ ಯುವಮೋರ್ಚಾ ಮುಖಂಡ ಪ್ರವೀಣ್‌ ಬೆಳ್ಳಾರೆ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಪ್ರಕರಣದ ತನಿಖೆಯನ್ನು ರಾಜ್ಯ ಸರಕಾರ ಎನ್‌ಐಎ ತನಿಖೆಗೆ ವಹಿಸಿದೆ. ಇದೀಗ ಬೆಂಗಳೂರು ಹಾಗೂ ಹೈದ್ರಾಬಾದ್‌ನ ಆರು ಮಂದಿ ಅಧಿಕಾರಿಗಳ ತಂಡ ದಕ್ಷಿಣ ಕನ್ನಡ ಜಿಲ್ಲೆಗೆ ಭೇಟಿಯನ್ನು ನೀಡಿದೆ.

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಅಮಿತ್‌ ಶಾ ಅವರನ್ನು ಭೇಟಿಯಾಗಿ ಪ್ರಕರಣದಲ್ಲಿ ಪಿಎಫ್‌ಐ ಕೈವಾಡವಿದೆ. ಕೇರಳದ ಮಾದರಿಯಲ್ಲಿ ಕೊಲೆ ನಡೆದಿದೆ. ಹೀಗಾಗಿ ಪ್ರಕರಣವನ್ನು ಎನ್‌ಐಎ ತನಿಖೆಗೆ ವಹಿಸುವಂತೆ ಮನವಿ ಮಾಡಿಕೊಂಡಿದ್ದರು. ಜೊತೆಗೆ ಕರಾವಳಿ ಭಾಗದಲ್ಲಿನ ಬಿಜೆಪಿ ಕಾರ್ಯಕರ್ತರು ಪ್ರಕರಣವನ್ನು ಎನ್‌ಐಎ ತನಿಖೆಗೆ ವಹಿಸುವಂತೆ ಆಗ್ರಹಿಸಿದ್ದರು. ಇದರ ಬೆನ್ನಲ್ಲೇ ರಾಜ್ಯ ಸರಕಾರ ಕೂಡ ಪ್ರಕರಣವನ್ನು ಎನ್‌ಐಎ ತನಿಖೆಗೆ ವಹಿಸಿದೆ.

ಇದೀಗ ಕೇಂದ್ರ ಸಚಿವ ಅಮಿತ್‌ ಶಾ ಅವರ ಸೂಚನೆಯ ಮೇರೆಗೆ ಎನ್‌ಐಎ ಪ್ರವೀಣ್‌ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯನ್ನು ಆರಂಭಿಸಿದೆ. ಪ್ರಕರಣದ ಕುರಿತು ಎಫ್‌ ಐಆರ್‌ ದಾಖಲು ಮಾಡುವ ಮೊದಲೇ ಎನ್‌ಐಎ ಆರು ಅಧಿಕಾರಿಗಳ ತಂಡ ಜಿಲ್ಲೆಗೆ ಭೇಟಿ ನೀಡಿದ್ದು, ಬೆಳ್ಳಾರೆ ಪೊಲೀಸರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹೃಷಿಕೇಶ ಸೋನಾವಣೆ ಅವರಿಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿಯನ್ನು ಪಡೆದುಕೊಳ್ಳಲಿದ್ದಾರೆ.

ಘಟನೆ ನಡೆದಿರುವ ಸ್ಥಳದಲ್ಲಿನ ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲನೆಯನ್ನು ನಡೆಸಲಿರುವ ಎನ್‌ಐಎ ತಂಡ ಎಫ್ಐಆರ್‌ ದಾಖಲು ಮಾಡಿಕೊಂಡು ತನಿಖೆಯನ್ನು ಆರಂಭಿಸಲಿದೆ. ಇನ್ನು ಪ್ರವೀಣ್‌ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಗಳನ್ನು ಪೊಲೀಸರು ಇನ್ನೂ ಬಂಧಿಸಿಲ್ಲ. ಇಬ್ಬರು ಪಿಎಫ್‌ಐ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದು, ಕೇರಳದಲ್ಲಿ ಓರ್ವನನ್ನು ಬಂಧಿಸಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಪೊಲೀಸರು ಈ ಬಗ್ಗೆ ಯಾವುದೇ ಖಚಿತ ಮಾಹಿತಿಯನ್ನೂ ನೀಡಿಲ್ಲ. ಇನ್ನೊಂದೆಡೆಯಲ್ಲಿ ಆರೋಪಿಗಳಿಗಾಗಿ ಕರ್ನಾಟಕ, ಕೇರಳ ಸೇರಿದಂತೆ ಹಲವು ಕಡೆಗಳಲ್ಲಿ ಶೋಧ ಕಾರ್ಯವನ್ನು ನಡೆಸಲಾಗುತ್ತಿದೆ.

ಇದೀಗ ಎನ್‌ಐಎ ಅಧಿಕಾರಿಗಳ ತಂಡ ಜಿಲ್ಲೆಗೆ ಭೇಟಿ ನೀಡಿದ್ದು ಸುಳ್ಯ, ಪುತ್ತೂರು, ಬೆಳ್ಳಾರೆ ಭಾಗಗಳಲ್ಲಿ ತನಿಖೆಯನ್ನು ನಡೆಸಲಿದೆ. ಅಲ್ಲದೇ ಪ್ರವೀಣ್‌ ಹತ್ಯೆ ಪ್ರಕರಣದ ತನಿಖೆ ಇನ್ನಷ್ಟು ಚುರುಕು ಪಡೆಯುವ ಸಾಧ್ಯತೆಯಿದೆ. ಈ ನಡುವಲ್ಲೇ ಸಂಸದೆ ಶೋಭಾ ಕರಂದ್ಲಾಜೆ ಅವರು ಪ್ರವೀಣ್‌ ಅವರ ನಿವಾಸಕ್ಕೆ ಭೇಟಿ ನೀಡಿದ್ದು, ಮೃತ ಪ್ರವೀಣ್‌ ಕುಟುಂಬಕ್ಕೆ ಐದು ಲಕ್ಷ ರೂಪಾಯಿ ಚೆಕ್‌ ವಿತರಿಸಿದ್ದು, ಸಾಂತ್ವಾನ ಹೇಳಿದ್ದಾರೆ.

ಇದನ್ನೂ ಓದಿ : Bengaluru power cut today : ಬೆಂಗಳೂರು ಇಂದು ಪವರ್‌ ಕಟ್‌ : ಯಾವೆಲ್ಲಾ ಪ್ರದೇಶಗಳಲ್ಲಿ ವಿದ್ಯುತ್‌ ಕಡಿತ, ಇಲ್ಲಿದೆ ಡಿಟೇಲ್ಸ್‌

ಇದನ್ನೂ ಓದಿ : Mangaluru Fazil murder case : ಫಾಜಿಲ್‌ ಹತ್ಯೆ ಪ್ರಕರಣ : ಐವರು ಆರೋಪಿಗಳು ಅರೆಸ್ಟ್‌ ? 8 ಕಾರುಗಳು ವಶಕ್ಕೆ

Praveen Nettaru Murder NIA Investigation : a team of NIA officers Visit Puttru

Comments are closed.