ಮದ್ಯಪ್ರಿಯರಿಗೆ ಶಾಕ್‌, ಇನ್ಮುಂದೆ ದುಬಾರಿಯಾಗಲಿದೆ ಎಣ್ಣೆದರ

ಮದ್ಯದ ಮೇಲಿನ ತೆರಿಗೆ ಪದ್ಧತಿಯಲ್ಲಿ ಮಹತ್ವದ ಬದಲಾವಣೆ ತರಲು ಮುಂದಾಗಿರುವ ಸರ್ಕಾರ, ಶೀಘ್ರದಲ್ಲೇ ಮದ್ಯದ ದರವನ್ನು ಶೇಕಡಾ 20 ರವರೆಗೆ ಏರಿಕೆ ಮಾಡುವ ಸಾಧ್ಯತೆಯಿದೆ.

ಬೆಂಗಳೂರು : ರಾಜ್ಯದಲ್ಲಿ ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಜನಸಾಮಾನ್ಯರಿಗೆ ಸರ್ಕಾರ ಈಗ ಮತ್ತೊಂದು ಶಾಕ್ ನೀಡಲು ಸಜ್ಜಾಗಿದೆ. ಮದ್ಯದ ಮೇಲಿನ ತೆರಿಗೆ ಪದ್ಧತಿಯಲ್ಲಿ ಮಹತ್ವದ ಬದಲಾವಣೆ ತರಲು ಮುಂದಾಗಿರುವ ಕರ್ನಾಟಕ ಸರ್ಕಾರ, ಶೀಘ್ರದಲ್ಲೇ ಮದ್ಯದ ದರದಲ್ಲಿ ಶೇಕಡಾ 20 ರವರೆಗೆ ಏರಿಕೆ ಮಾಡುವ ಸಾಧ್ಯತೆಯಿದೆ.

ಏನಿದು ಹೊಸ ತೆರಿಗೆ ನೀತಿ?

ಸರ್ಕಾರವು ಯುರೋಪ್ ಮಾದರಿಯ ‘ಆಲ್ಕೋಹಾಲ್-ಇನ್-ಬೆವರೇಜ್’ (AIB) ಎಂಬ ಹೊಸ ತೆರಿಗೆ ಪದ್ಧತಿಯನ್ನು ಜಾರಿಗೆ ತರಲು ಕರಡು ಅಧಿಸೂಚನೆ ಹೊರಡಿಸಿದೆ. ಇದರ ಅನ್ವಯ, ಮದ್ಯದ ಬಾಟಲಿಯ ಬೆಲೆ ಅಥವಾ ಗಾತ್ರದ ಬದಲಾಗಿ, ಅದರಲ್ಲಿರುವ ಆಲ್ಕೋಹಾಲ್ ಪ್ರಮಾಣ (Alcohol Content) ಆಧರಿಸಿ ಅಬಕಾರಿ ಸುಂಕವನ್ನು ವಿಧಿಸಲಾಗುತ್ತದೆ. ಪಾನೀಯದಲ್ಲಿ ಆಲ್ಕೋಹಾಲ್ ಅಂಶ ಎಷ್ಟು ಹೆಚ್ಚಿರುತ್ತದೆಯೋ, ಅಷ್ಟು ಹೆಚ್ಚು ತೆರಿಗೆಯನ್ನು ಗ್ರಾಹಕರು ಪಾವತಿಸಬೇಕಾಗುತ್ತದೆ.

ಯಾರ ಮೇಲೆ ಹೆಚ್ಚು ಪರಿಣಾಮ?

ಈ ಹೊಸ ನೀತಿಯಿಂದಾಗಿ ಸಾಮಾನ್ಯ ಜನರು ಮತ್ತು ಕಡಿಮೆ ಆದಾಯದ ವರ್ಗದವರು ಹೆಚ್ಚಾಗಿ ಬಳಸುವ ವಿಸ್ಕಿ, ರಮ್, ಬ್ರಾಂಡಿ ಮತ್ತು ಜಿನ್ ಬೆಲೆಯಲ್ಲಿ ಭಾರಿ ಏರಿಕೆಯಾಗಲಿದೆ. ಈ ಮಾದರಿಯ ಮದ್ಯಗಳಲ್ಲಿ ಸರಾಸರಿ ಶೇ. 42.8 ರಷ್ಟು ಆಲ್ಕೋಹಾಲ್ ಇರುವುದರಿಂದ, ಇವುಗಳ ಬೆಲೆ ಈಗಿರುವ ದರಕ್ಕಿಂತ ಸುಮಾರು ಶೇ. 20 ರಷ್ಟು ಹೆಚ್ಚಾಗುವ ನಿರೀಕ್ಷೆಯಿದೆ.

ಇದನ್ನೂ ಓದಿ : ಗೃಹಜ್ಯೋತಿ ಬಳಕೆದಾರರಿಗೆ ಗುಡ್​ನ್ಯೂಸ್​ : ಮನೆ ಶಿಫ್ಟ್​ ಮಾಡಿದರೂ ಇಲ್ಲ ಯಾವುದೇ ತೊಂದರೆ

ಮದ್ಯದ ದರ ನಿಗದಿಯಲ್ಲಿದ್ದ 16 ಸ್ಲ್ಯಾಬ್ಗಳನ್ನು 8 ಸ್ಲ್ಯಾಬ್ಗಳಿಗೆ ಇಳಿಸಲು ಸರ್ಕಾರ ನಿರ್ಧರಿಸಿದೆ.  ಹೊಸ ಸ್ಲ್ಯಾಬ್ಗಳ ಕಾರಣದಿಂದ ದುಬಾರಿ ಅಥವಾ ಪ್ರೀಮಿಯಂ ಮದ್ಯಗಳ ಬೆಲೆ ಸ್ವಲ್ಪ ಮಟ್ಟಿಗೆ ಇಳಿಕೆಯಾಗುವ ಸಾಧ್ಯತೆಯಿದೆ.

ಏಪ್ರಿಲ್ 2026 ರಿಂದ ಮದ್ಯದ ಬೆಲೆ ನಿಗದಿಯಲ್ಲಿ ಸರ್ಕಾರದ ಹಸ್ತಕ್ಷೇಪವಿರುವುದಿಲ್ಲ; ಕಂಪನಿಗಳೇ ದರ ನಿಗದಿಪಡಿಸಲು ಮುಕ್ತ ಅವಕಾಶ ನೀಡಲಾಗುತ್ತದೆ. ಸರ್ಕಾರದ ಈ ನಿರ್ಧಾರವು ಅಬಕಾರಿ ಇಲಾಖೆಯ ರಾಜಸ್ವವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದ್ದರೂ, ಸಾಮಾನ್ಯ ಮದ್ಯ ಪ್ರಿಯರ ಜೇಬಿಗೆ ಕತ್ತರಿ ಬೀಳುವುದು ಮಾತ್ರ ಖಚಿತವಾಗಿದೆ.

Meghana Pranuth | ಮೇಘನಾ ಪ್ರಣೂತ್‌

ಮೇಘನಾ ಪ್ರಣೂತ್‌ ಮೂಲತಃ ಉಡುಪಿ ಜಿಲ್ಲೆಯವರು. ಪತ್ರಿಕೋದ್ಯಮದಲ್ಲಿ ಪದವಿ ಶಿಕ್ಷಣವನ್ನು ಪಡೆದಿದ್ದು, ಕಳೆದ ನಾಲ್ಕು ವರ್ಷಗಳಿಂದ ಪತ್ರಕರ್ತರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಿನಿಮಾ, ಕ್ರೀಡೆ, ವಾಣಿಜ್ಯ, ಫ್ಯಾಷನ್‌ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದಾರೆ. ಇದೀಗ ನ್ಯೂಸ್‌ ನೆಕ್ಸ್ಟ್‌ನಲ್ಲಿ ನಿರೂಪಕರಾಗಿ, ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ.

Related Stories