Protest MLA MP Kumaraswamy : ರಸ್ತೆಗಾಗಿ ಶಾಸಕ ಮನೆಯಂಗಳದಲ್ಲೇ ಗ್ರಾಮಸ್ಥರ ಪ್ರತಿಭಟನೆ: ಶಾಸಕ ಎಂ.ಪಿ.ಕುಮಾರಸ್ವಾಮಿಗೆ ಮುಜುಗರ ತಂದ ಗ್ರಾಮಸ್ಥರು

ಚಿಕ್ಕಮಗಳೂರು : ಜನರು ಮೂಲಭೂತ ಸೌಲಭ್ಯ ಕೊರತೆಯಿಂದ ಬೇಸತ್ತು ಹೋಗಿದ್ದಾರೆ.‌ಚುನಾವಣೆಗೆ ಮತ ಹಾಕಿಸಿಕೊಂಡು ನಾಪತ್ತೆಯಾಗೋ ರಾಜಕಾರಣಿಗಳು ಮತ್ತೆ ಜನರ ಕೈಗೆ ಸಿಗೋದು ಮುಂದಿನ ಚುನಾವಣೆ ಹೊತ್ತಿಗೆ. ಉಳಿದ ಸಮಯದಲ್ಲಿ ಜನರ ಕಷ್ಟ ಕೇಳೋರಿಲ್ಲ. ಇದರಿಂದ ಬೇಸತ್ತ ಗ್ರಾಮದ ಜನರು ಶಾಸಕರ ಮನೆ ಆವರಣದಲ್ಲೇ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅಹೋರಾತ್ರಿ ಧರಣಿ (Protest MLA MP Kumaraswamy) ನಡೆಸಿದ್ದು ಶಾಸಕರ ಮುಜುಗರಕ್ಕೆ ಕಾರಣವಾಗಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಪಿ.ಕುಮಾರಸ್ವಾಮಿ ಹೀಗೆ ಗ್ರಾಮಸ್ಥರ ಆಕ್ರೋಶಕ್ಕೆ ಗುರಿಯಾದ ಶಾಸಕ. ಹಲವು ವರ್ಷಗಳಿಂದ ಶಾಸಕರ ಬಳಿ ತಮ್ಮ ಗ್ರಾಮಗಳ ಮೂಲಭೂತ ಸೌಲಭ್ಯಕ್ಕಾಗಿ ಬೇಡಿಕೆ ಇಟ್ಟು ಸೋತಿದ್ದ ಗ್ರಾಮಸ್ಥರು ರೊಚ್ಚಿಗೆದ್ದು ಶಾಸಕರ ಮನೆಯಂಗಳಕ್ಕೆ ಧಾವಿಸಿದ್ದಾರೆ. ಮಾತ್ರವಲ್ಲ ಬೇಡಿಕೆ ಈಡೇರಿಸೋವರೆಗೂ ಶಾಸಕರ ಮನೆ ಬಿಟ್ಟು ಕದಲೋದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಹೀಗಾಗಿ ಹಳ್ಳಿಗಳಲ್ಲಿ ಮಳೆಯ ಪ್ರಮಾಣ ಅಧಿಕವಾಗಿರೋದರಿಂದ ರಸ್ತೆ, ಪೂಟ್ ಬ್ರಿಡ್ಜ್ ಹಾಗೂ ಸೇತುವೆಕೊರತೆ ಎದುರಾಗಿದೆ. ಇದರಿಂದ ಶಾಲಾ ಕಾಲೇಜಿಗೆ ತೆರಳೋ ಮಕ್ಕಳಿಗೆ ಕಷ್ಟವಾಗ್ತಿತ್ತು. ಹಲವು ಭಾರಿ ಈ ಬಗ್ಗೆ ಶಾಸಕರಿಗೆ ಮನವಿ ನೀಡಿದ್ರೂ ಕ್ರಮವಾಗಿರಲಿಲ್ಲ. ಇದರಿಂದ ಬೇಸತ್ತ ಗ್ರಾಮಸ್ಥರು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೆಲ್ಲೂರು ಬಳಿಯಿರುವ ಶಾಸಕರ ನಿವಾಸಕ್ಕೆ ದಾಂಗುಡಿ ಇಟ್ಟಿದ್ದಾರೆ.

ಹಳುವಳ್ಳಿ, ಅರಳಿಮರ, ಗಂಜಲಗೋಡು, ಮತ್ತಿಕೆರೆ ರಸ್ತೆ ಅಭಿವೃದ್ಧಿಪಡಿಸುವಂತೆ ಪಟ್ಟು ಹಿಡಿದ ಜನರು ಶಾಸಕರ ಮನೆ ಅಂಗಳದಲ್ಲೆ ನಿನ್ನೆಯಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಗ್ರಾಮಸ್ಥರನ್ನು ಪೊಲೀಸರು ಮನವೊಲಿಸುವ ಪ್ರಯತ್ನ ಮಾಡಿದರು. ಆದರೆ ಪೊಲೀಸರ ಮನವೊಲಿಕೆಗೂ ಬಗ್ಗದ ಪ್ರತಿಭಟನಾಕಾರರು ಪ್ರತಿಭಟನೆ ಮುಂದುವರೆಸಿದ್ದಾರೆ. ಸುಮಾರು 50ಕ್ಕೂ ಹೆಚ್ಚು ಜನರಿಂದ ಕುಮಾರಸ್ವಾಮಿ ಮನೆ ಎದುರು ಧರಣಿ ಕೂತಿದ್ದು, ಶಾಸಕರು ಕಾಮಗಾರಿ ಆರಂಭಿಸುವುದಾಗಿ ಲಿಖಿತ ರೂಪದಲ್ಲಿ ಭರವಸೆ ಕೊಡುವವರೆಗೂ ಈ ಸ್ಥಳ ಬಿಟ್ಟು ಕದಲೋದಿಲ್ಲ ಎಂದು ಹಟ ಹಿಡಿದಿದ್ದಾರೆ.

ಈ ಹಿಂದೆ ಹಲವು ಭಾರಿ ಶಾಸಕರಿಗೆ ಮನವಿ ಸಲ್ಲಿಸಿದರೂ ಶಾಸಕರು ಭರವಸೆ ನೀಡಿ ಸುಮ್ಮನಾಗಿದ್ದಾರೆ. ಹೀಗಾಗಿ ಅವರ ಮನೆಯಂಗಳದಲ್ಲೇ ಪ್ರತಿಭಟನೆ ಆರಂಭಿಸಿದ್ದೇವೆ. ಶಾಸಕರಿಗೆ ಜನಪರ ಕಾಳಜಿ ಇದ್ದರೇ ಅವರು ಈ ಬಗ್ಗೆ ತಕ್ಷಣ ಕ್ರಮವಹಿಸಬೇಕು. ಇಲ್ಲದಿದ್ದರೆ ಅವರ ಮನೆಯ ಅಂಗಳ ವನ್ನು ಬಿಟ್ಟು ಹೋಗುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ. ಒಟ್ಟಿನಲ್ಲಿ ಈಗಾಗಲೇ ಸಾಕಷ್ಟು ವಿವಾದದಿಂದ ಮುಜುಗರಕ್ಕಿಡಾಗಿರೋ ಶಾಸಕ ಎಂ‌‌ಪಿ ಕುಮಾರಸ್ವಾಮಿಗೆ ಈಗ ಮನೆಯಂಗಳ ತಲುಪಿದ ಪ್ರತಿಭಟನೆ ಮತ್ತಷ್ಟು ಮುಜುಗರ ತಂದಿರೋದಂತು ನಿಜ.

ಇದನ್ನೂ ಓದಿ : BJP secret team visit Karnataka : ಕರ್ನಾಟಕಕ್ಕೆ ಬಿಜೆಪಿ ಸೀಕ್ರೆಟ್ ಟೀಮ್: ದೀಪಾವಳಿಗೆ ಸಿಗಲಿದ್ಯಾ ಆಕಾಂಕ್ಷಿಗಳಿಗೆ ಸಿಹಿ ಸುದ್ದಿ ?

ಇದನ್ನೂ ಓದಿ : Deepavali bus fares : ಬೆಂಗಳೂರು – ಹುಬ್ಬಳ್ಳಿ 5 ಸಾವಿರ ರೂ.: ದೀಪಾವಳಿಗೆ ಮನೆಗೆ ಹೊರಟವರಿಗೆ ಶಾಕ್

Protest in Mudigere MLA MP Kumaraswamy Home about Demand in Village Roads

Comments are closed.