ಶಿಕ್ಷಣ ಇಲಾಖೆಯಿಂದ ಮತ್ತೊಂದು ಎಡವಟ್ಟು : ಕೊರೊನಾ ನಡುವೆ ಪಿಯುಸಿ ಖಾಸಗಿ, ರಿಪೀಟರ್ಸ್ ಗೆ ಪರೀಕ್ಷೆ

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ರದ್ದು ಮಾಡಿ ಆದೇಶಿಸಿದೆ. ಆದರೆ ಶಿಕ್ಷಣ ಇಲಾಖೆ ಫ್ರೆಶರ್ಸ್ ಹಾಗೂ ರಿಫೀಟರ್ಸ್ ನಡುವೆ ತಾರತಮ್ಯ ಮಾಡಿದ್ದು, ಕೊರೊನಾ ಸೋಂಕಿನ ನಡುವಲ್ಲೇ ರಿಫಿಟರ್ಸ್ ಗೆ ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆ ಮುಂದಾಗಿದೆ.

ಕೊರೊನಾ ವೈರಸ್ ಸೋಂಕು ಹೆಚ್ಚುತ್ತಿದ್ದಂತೆಯೇ ದೇಶದಲ್ಲಿ 12ನೇ ತರಗತಿ ಪರೀಕ್ಷೆ ರದ್ದಾಗಿದೆ. ಇದರ ಬೆನ್ನಲ್ಲೇ ಕರ್ನಾಟಕದಲ್ಲಿಯೂ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ರದ್ದು ಮಾಡಿ ಸಚಿವ ಸುರೇಶ್ ಕುಮಾರ್ ಆದೇಶ ಹೊರಡಿಸಿದ್ದರು. ಪ್ರಥಮ ಪಿಯುಸಿ ಹಾಗೂ ಎಸ್ಎಸ್ಎಲ್ ಸಿಯಲ್ಲಿ ಪಡೆದ ಅಂಕಗಳ ಆಧಾರ ಮೇಲೆ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳನ್ನು ಉತ್ತೀರ್ಣಗೊಳಿಸುವುದಾಗಿ ಘೋಷಿಸಿದೆ. ಇದೀಗ ರಿಪೀಟೆರ್ಸ್ ವಿಚಾರದಲ್ಲಿ ಮಾತ್ರ ಶಿಕ್ಷಣ ಇಲಾಖೆ ಅನ್ಯಾಯವೆಸಗಿದೆ.

ದ್ವಿತೀಯ ಪಿಯುಸಿ ಪರೀಕ್ಷೆ ರದ್ದಾದರೂ ಕೂಡ ರಿಫೀಟರ್ಸ್ ಮಾತ್ರ ಪರೀಕ್ಷೆ ಬರೆಯಬೇಕಾಗಿದೆ. ಜುಲೈ ಅಂತ್ಯಕ್ಕೆ ಪರೀಕ್ಷೆ ನಡೆಸಲು ಪದವಿ ಪೂರ್ವ ಶಿಕ್ಷಣ ಇಲಾಖೆ ಸಜ್ಜಾಗಿದೆ. ಈ ಬಾರಿ ಸುಮಾರು 93 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಅದ್ರಲ್ಲೂ ಖಾಸಗಿಯಾಗಿ ಪರೀಕ್ಷೆ ಬರೆಯುವ 17,472 ಮಂದಿ ಹಾಗೂ 76,387 ವಿದ್ಯಾರ್ಥಿಗಳು ಕೊರೊನಾ ವೈರಸ್ ಸೋಂಕಿನ ಭಯದಲ್ಲಿಯೇ ಪರೀಕ್ಷೆಗೆ ಹಾಜರಾಗಬೇಕಾಗಿದೆ.

ಒಂದೊಮ್ಮೆ ಕೊರೊನಾ ಸೋಂಕು ಕಡಿಮೆಯಾದ್ರೆ ಇಲಾಖೆ ಪರೀಕ್ಷೆ ನಡೆಸೋದು ಖಚಿತ. ಒಂದೊಮ್ಮೆ ಸೋಂಕು ಮಿತಿಮೀರಿದ್ರೆ ಪರೀಕ್ಷೆಯಲ್ಲಿಯೇ ಹಲವು ಬದಲಾವಣೆಗಳನ್ನು ಮಾಡಿಕೊಳ್ಳಲು ಮುಂದಾಗಿದೆ. ಪ್ರಮುಖವಾಗಿ ಪ್ರಶ್ನೆಗಳ ಸಂಖ್ಯೆಯಲ್ಲಿ ಇಳಿಕೆ ಮಾಡಿ, ಕೇವಲ 50 ಅಂಕಗಳಿಗೆ ಪರೀಕ್ಷೆ ನಡೆಸುವ ಸಾಧ್ಯತೆಯಿದೆ. ಮೂರು ಗಂಟೆಗಳ ಪರೀಕ್ಷೆಯ ಬದಲು ಕೇವಲ ಒಂದೂವರೆ ಗಂಟೆಗಳ ಕಾಲ ಮಾತ್ರವೇ ಪರೀಕ್ಷೆಯನ್ನು ನಡೆಸುವುದು ಸೇರಿದಂತೆ ಪರಿಷ್ಕೃತ ಮಾರ್ಗಸೂಚಿಯನ್ನು ಹೊರಡಿಸಲು ರೆಡಿಯಾಗಿದೆ.

ಶಿಕ್ಷಣ ಇಲಾಖೆಯ ಕ್ರಮ ಇದೀಗ ಪುನರಾವರ್ತಿತ ಹಾಗೂ ಖಾಸಗಿಯಾಗಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ. ಇಲಾಖೆ ವಿದ್ಯಾರ್ಥಿಗಳ ಜೀವದ ಜೊತೆಗೆ ಚೆಲ್ಲಾಟವಾಡುತ್ತಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ದಿನಕ್ಕೊಂದು ನಿಯಮ ಜಾರಿಗೆ ತರುವ ಶಿಕ್ಷಣ ಇಲಾಖೆ ಮುಂದೆ ಅದ್ಯಾವ ಎಡವಟ್ಟಿನ ನಿರ್ಧಾರವನ್ನು ಕೈಗೊಳ್ಳುತ್ತೋ ಕಾದು ನೋಡಬೇಕಾಗಿದೆ.

Comments are closed.