Harsha Murder : ಶಿವಮೊಗ್ಗದ ಹಿಂದೂ ಹರ್ಷ ಕೊಲೆ ಪ್ರಕರಣ : NIA ತನಿಖೆ

ಬೆಂಗಳೂರು : ಶಿವಮೊಗ್ಗದಲ್ಲಿ ನಡೆದಿದ್ದ ಹಿಂದೂ ಸಂಘಟನೆಯ ಕಾರ್ಯಕರ್ತ ಹರ್ಷ ಕೊಲೆ (Harsha Murder) ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳ (NIA) ತನಿಖೆಗೆ ವಹಿಸಿ ಸರಕಾರ ಆದೇಶಿಸಿದೆ.

ಫೆಬ್ರವರಿ 20 ರಂದು ಶಿವಮೊಗ್ಗದ ನಗರದ ಸೀಗೆಹಟ್ಟಿಯಲ್ಲಿ ಭಜರಂಗದಳ ಕಾರ್ಯಕರ್ತ ಹರ್ಷನನ್ನು ಬರ್ಭರವಾಗಿ ಹತ್ಯೆ ಮಾಡಲಾಗಿತ್ತು. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ಪೊಲೀಸರು ತನಿಖೆಯನ್ನು ನಡೆಸಿ 10 ಮಂದಿ ಆರೋಪಿಗಳನ್ನು ಬಂಧಿಸಿದ್ದರು. ಹರ್ಷ ಕೊಲೆ ಪ್ರಕರಣವನ್ನು ಎನ್‌ಐಎ ತನಿಖೆಗೆ ವಹಿಸಬೇಕೆಂಬ ಕೂಗು ಬಲವಾಗಿ ಕೇಳಿಬಂದಿತ್ತು. ಅಷ್ಟೇ ಅಲ್ಲದೇ ಕೆಲವು ದಿನಗಳ ಹಿಂದೆಯಷ್ಟೇ ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ ಅವರು ಪ್ರಕರಣವನ್ನು ಎನ್‌ಐಎ ತನಿಖೆ ವಹಿಸುವುದಾಗಿ ತಿಳಿಸಿದ್ದರು. ಇದರ ಬೆನ್ನಲ್ಲೇ ಇದೀಗ ರಾಜ್ಯ ಸರಕಾರ ಪ್ರಕರಣವನ್ನು ಎನ್‌ಐಎ ತನಿಖೆಗೆ ವಹಿಸಿದೆ.

ಹರ್ಷ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಶಿವಮೊಗ್ಗ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ. ಈ ನಡುವಲ್ಲೇ ಎನ್‌ಐಎ ಹರ್ಷ ಕೊಲೆ ಪ್ರಕರಣದ ಕುರಿತು ಎಫ್‌ಐಆರ್‌ ದಾಖಲು ಮಾಡಿಕೊಂಡಿದ್ದು, ತನಿಖೆ ಆರಂಭಿಸಿದೆ. ಸದ್ಯದಲ್ಲಿಯೇ ಎನ್‌ಐಎ ಅಧಿಕಾರಿಗಳ ತಂಡ ಶಿವಮೊಗ್ಗಕ್ಕೆ ಭೇಟಿ ನೀಡಿ ತನಿಖೆಯನ್ನು ಕೈಗೆತ್ತಿಕೊಳ್ಳಲಿದೆ. ಸಾಮಾನ್ಯವಾಗಿ ದೇಶದ ಭದ್ರತೆ, ಉಗ್ರ ಚಟುವಟಿಕೆ ಸೇರಿದಂತೆ ದೇಶದ ರಕ್ಷಣೆಗೆ ಚ್ಯುತಿ ಬರುವ ಪ್ರಕರಣಗಳ ಕುರಿತು ಎನ್‌ಐಎ ತನಿಖೆಯನ್ನು ನಡೆಸುತ್ತದೆ. ಆದರೆ ಶಿವಮೊಗ್ಗದಲ್ಲಿ ನಡೆದಿರುವ ಕೊಲೆ ಪ್ರಕರಣದ ಹಿಂದೆ ದೇಶ ವಿರೋಧಿ ಶಕ್ತಿಗಳ ಹುನ್ನಾರವಿದೆ ಎಂದು ಬಿಜೆಪಿ ಗಂಭೀರ ಆರೋಪವನ್ನು ಮಾಡಿತ್ತು. ಈ ಹಿನ್ನೆಲೆಯಲ್ಲಿ ಸರಕಾರ ಎನ್‌ಐಎ ತನಿಖೆಗೆ ವಹಿಸಿದೆ.

ಈಗಾಗಲೇ ಎನ್‌ಐಎ ಕರ್ನಾಟಕದಲ್ಲಿ ಹಲವು ಶಂಕಿತ ಉಗ್ರರರನ್ನು ಬಂಧಿಸಿದೆ. ಅಲ್ಲದೇ ದೇಶದ ದ್ರೋಹದ ಕೃತ್ಯವನ್ನು ಎಸಗುವವರ ಕುರಿತು ಹದ್ದಿನ ಕಣ್ಣಿಟ್ಟಿದೆ. ಇದೀಗ ಹರ್ಷ ಕೊಲೆ ಪ್ರಕರಣ ರಾಷ್ಟ್ರೀಯ ತನಿಖಾ ದಳದ ಹೆಗಲಿಗೆ ವಹಿಸಿರುವುದು ಕುತೂಹಲವನ್ನು ಮೂಡಿಸಿದೆ. ಇನ್ನು ಹರ್ಷ ಕೊಲೆ ಪ್ರಕರಣದಲ್ಲಿ ಬಂಧಕ್ಕೆ ಒಳಗಾಗಿರುವ ಆರೋಪಿಗಳನ್ನು ಶಿವಮೊಗ್ಗದಲ್ಲಿರುವ ಕೇಂದ್ರ ಕಾರಾಗೃಹದಲ್ಲಿ ಪ್ರತ್ಯೇಕ ಸೆಲ್‌ನಲ್ಲಿ ಇರಿಸಲಾಗಿತ್ತು. ಆದರೆ ಇದೀಗ ನಾಲ್ವರು ಆರೋಪಿಗಳನ್ನು ಮೈಸೂರು ಕಾರಾಗೃಹ ಹಾಗೂ ನಾಲ್ಕು ಮಂದಿಯನ್ನು ಬಳ್ಳಾರಿ ಕಾರಾಗೃಹಕ್ಕೆ ಶಿಫ್ಟ್‌ ಮಾಡಲಾಗಿದೆ. ಉಳಿದಂತೆ ಇಬ್ಬರು ಆರೋಪಿಗಳು ಶಿವಮೊಗ್ಗದ ಕೇಂದ್ರ ಕಾರಾಗೃಹದಲ್ಲಿದ್ದಾರೆ.

ಇದನ್ನೂ ಓದಿ : ಮಲ್ಟಿಪ್ಲೆಕ್ಸ್ ನಿಂದ ಜೇಮ್ಸ್ ಕಿಕ್ ಔಟ್ ಗೆ ಒತ್ತಡ : ಬಿಜೆಪಿ ಶಾಸಕರ ವಿರುದ್ಧ ನಿರ್ಮಾಪಕರ ಅಸಮಧಾನ

ಇದನ್ನೂ ಓದಿ : ಡೇಂಜರ್ ಸಿನಿಮಾದ ಮೂಲಕ ಲೆಸ್ಬಿಯನ್ಸ್ ಕತೆ ಹೇಳೋಕೆ ಬರ್ತಿದ್ದಾರೆ ವರ್ಮಾ

(Shivamogga Harsha Murder case being investigated By NIA)

Comments are closed.