ಹರತಾಳು VS ಬೇಳೂರು : ಧರ್ಮಸ್ಥಳದಲ್ಲಿ ಆಣೆ ಪ್ರಮಾಣಕ್ಕೆ ಮುಂದಾದ ಹಾಲಿ, ಮಾಜಿ ಶಾಸಕರು

ಶಿವಮೊಗ್ಗ : ಸಾಗರ ವಿಧಾನ ಸಭಾ ಕ್ಷೇತ್ರದಲ್ಲೀಗ ಹಾಲಿ ಶಾಸಕ ಹರತಾಳು ಹಾಲಪ್ಪ ಹಾಗೂ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ (Halappa vs Beluru ) ಅವರ ನಡುವೆ ರಾಜಕೀಯ ಜಿದ್ದಾಜಿದ್ದಿ ಏರ್ಪಟ್ಟಿದೆ. ಅದ್ರಲ್ಲೂ ಮರಳು ವಿಚಾರವೀಗ ಆಣೆ ಪ್ರಮಾಣಕ್ಕೆ ಮುಂದಾಗಿದ್ದು, ಧರ್ಮಸ್ಥಳದಲ್ಲಿ ಆಣೆ ಮಾಡಲು ದಿನಾಂಕವನ್ನೂ ಶಾಸಕ ಹರತಾಳು ಹಾಲಪ್ಪ ನಿಗದಿ ಪಡಿಸಿದ್ದಾರೆ.

ಹೌದು, ಚುನಾವಣೆ ಸಮೀಪಿಸುತ್ತಿದ್ದಂತೆಯೇ ರಾಜಕಾರಣಿಗಳ ನಡುವಿನ ಜಗಳ ಜೋರಾಗುತ್ತಿದೆ. ಇದಕ್ಕೆ ಸಾಗರ ವಿಧಾನಸಭಾ ಕ್ಷೇತ್ರ ಕೂಡ ಹೊರತಾಗಿಲ್ಲ. ಕಳೆದ ಬಾರಿಯ ಚುನಾವಣೆಯಲ್ಲಿ ಹರತಾಳು ಹಾಲಪ್ಪ ಸಾಗರದಿಂದ ಟಿಕೆಟ್‌ ಪಡೆದು ಸ್ಪರ್ಧೆ ಮಾಡಿದ್ದರು. ಜೊತೆಗೆ ಶಾಸಕರಾಗಿ ಆಯ್ಕೆಯೂ ಆಗಿದ್ದಾರೆ. ಇನ್ನೊಂದಡೆಯಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಜಿಗಿದಿರುವ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಮುಂದಿನ ಚುನಾವಣೆಯಲ್ಲಿ ಗೆಲ್ಲಲೇ ಬೇಕೆಂಬ ಹಠಕ್ಕೆ ಬಿದ್ದಿದ್ದಾರೆ. ಇದೇ ಕಾರಣಕ್ಕೆ ಶಾಸಕ ಹರತಾಳು ಹಾಲಪ್ಪ ಅವರ ವೈಫಲ್ಯವನ್ನು ಎತ್ತಿ ಹಿಡಿಯುವ ಕಾರ್ಯವನ್ನು ಮಾಡುತ್ತಿದ್ದಾರೆ.

ಅದ್ರಲ್ಲೂ ಸಾಗರ ಕ್ಷೇತ್ರದಲ್ಲಿ ಮರಳು ಸಾಗಾಣಿಕೆಯ ವಿಚಾರದಲ್ಲಿ ಬೇಳೂರು ಗೋಪಾಲಕೃಷ್ಣ ಹಾಗೂ ಹರತಾಳು ಹಾಲಪ್ಪ ಅವರ ನಡುವೆ ಪದೇ ಪದೇ ವಾಗ್ವಾದಗಳು ನಡೆಯುತ್ತಲೇ ಇವೆ. ಇದೀಗ ಮರಳು ಸಾಗಾಣಿಕೆದಾರರಿಂದ ಹಣವನ್ನು ಪಡೆದು ಮರಳು ಸಾಗಾಟ ಮಾಡಿದ್ದಾರೆ ಅನ್ನು ಕುರಿತು ಬೇಳೂರು ಆರೋಪ ಮಾಡಿದ್ದರು. ಅಲ್ಲದೇ ಧರ್ಮಸ್ಥಳದಲ್ಲಿ ಬಂದು ಪ್ರಮಾಣ ಮಾಡುವಂತೆಯೂ ಸವಾಲು ಹಾಕಿದ್ದಾರೆ.

ಮಾಜಿ ಶಾಸಕ ಆರೋಪವನ್ನು ಗಂಭೀರವಾಗಿ ಪರಿಗಣಿಸಿರುವ ಹಾಲಿ ಶಾಸಕ ಹರತಾಳು ಹಾಲಪ್ಪ ಇಂದು ಸಾಗರದಲ್ಲಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಮರಳು ಸಾಗಾಣಿಕೆದಾರರಿಂದ ನಾನಾಗಲಿ, ನನ್ನ ಕುಟುಂಬದವರಾಗಲಿ ನಯಾ ಪೈಸೆ ಹಣವನ್ನೂ ತೆಗೆದುಕೊಂಡಿಲ್ಲ. ಈ ಕುರಿತು ಆಣೆ ಪ್ರಮಾಣ ಮಾಡಲು ಸಿದ್ದನಿದ್ದೇನೆ. ಬೇಳೂರು ಗೋಪಾಲಕೃಷ್ಣ ಅವರು ಶಾಸಕರಾಗಿದ್ದ ಅವಧಿಯಲ್ಲಿ ಇನ್ಸ್‌ಪೆಕ್ಟರ್‌ ಒಬ್ಬರನ್ನು ಮುಂದಿಟ್ಟುಕೊಂಡು ಕಮಿಷನ್‌ ಪಡೆಯುತ್ತಿದ್ದರು. ಅವರು ಶಾಸಕರಾಗಿದ್ದ ವೇಳೆಯಲ್ಲಿ ಹಣ ಪಡೆದಿಲ್ಲ ಎಂದು ಪ್ರಮಾಣ ಮಾಡಲಿ. ಫೆಬ್ರವರಿ ೧೩ರಂದು ಧರ್ಮಸ್ಥಳದ ಮಂಜುನಾಥನ ಸನ್ನಿಧಿಯಲ್ಲಿ ಪ್ರಮಾಣ ಮಾಡಲು ಸಿದ್ದ ಎಂದಿದ್ದಾರೆ.

ಒಟ್ಟಿನಲ್ಲಿ ಹಾಲಿ ಹಾಗೂ ಮಾಜಿ ಶಾಸಕರ ನಡುವಿನ ಜಿದ್ದಾಜಿದ್ದಿಯಿಂದಾಗಿ ರಾಜಕೀಯ ಭ್ರಷ್ಟಾಚಾರ ಬಯಲಿಗೆ ಬರುತ್ತಿದೆ. ಈ ಹಿಂದೆಯೂ ಹಲವು ರಾಜಕಾರಣಿಗಳು ಧರ್ಮಸ್ಥಳ ದಲ್ಲಿ ಆಣೆ ಪ್ರಮಾಣಕ್ಕೆ ಮುಂದಾಗಿದ್ದರು. ಇದೀಗ ಬೇಳೂರು ಗೋಪಾಲಕೃಷ್ಣ ಹಾಗೂ ಹರತಾಳು ಹಾಲಪ್ಪ ಆಣೆ ಪ್ರಮಾಣ ಮಾಡ್ತಾರಾ ಇಲ್ಲ ಆರೋಪ ಪ್ರತ್ಯಾರೋಪಕ್ಕೆ ಮಾತ್ರವೇ ಸೀಮಿತವಾಗ್ತಾರಾ ಅನ್ನೋದನ್ನು ಕಾದುನೋಡಬೇಕಾಗಿದೆ.

ಇದನ್ನೂ ಓದಿ : ನಿಮ್ಮ ಜೇಬಿಗೆ ಕತ್ತರಿ ಹಾಕಲಿದೆ ನಿಮ್ಮ ಮನೆ ಕಸ: ಬೆಂಗಳೂರಿನಲ್ಲಿ ಸದ್ಯದಲ್ಲೇ ಗಾರ್ಬೇಜ್ ಸೆಸ್

ಇದನ್ನೂ ಓದಿ : ಹಿಜಬ್​ ಧರಿಸಿ ಕಾಲೇಜಿಗೆ ಬಂದ ವಿದ್ಯಾರ್ಥಿನಿಯರನ್ನು ತಡೆದ ಪ್ರಾಂಶುಪಾಲ

( Swear in Dharmasthala Beluru Gopalakrishna vs Hartalu Halappa Challenge)

Comments are closed.