ಹೆಬ್ರಿ : ಭಕ್ತರಿಗೆ ಗನ್ ತೋರಿಸಿ ಜೀವಬೆದರಿಕೆ, ಮಾನಹಾನಿ : ಚರ್ಚ್ ಧರ್ಮಗುರು ವಿರುದ್ದ ದೂರು, ಪ್ರತಿದೂರು ದಾಖಲು

ಹೆಬ್ರಿ : Udupi Crime Report : ಚರ್ಚ್ ನಲ್ಲಿ ಪೂಜೆಯ ವಿಚಾರಕ್ಕೆ ಏರ್ಪಟ್ಟ ವಿವಾದಕ್ಕೆ ಸಂಬಂಧಿಸಿದಂತೆ ಚರ್ಚ್ ನ ಧರ್ಮಗುರು ಓರ್ವರು ಭಕ್ತರೋರ್ವರಿಗೆ ಗನ್ ತೋರಿಸಿ ಜೀವಬೆದರಿಕೆ ಹಾಕಿದ್ದು, ಮಾನಹಾನಿ ಮಾಡಿರುವ ಘಟನೆ ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಬೆಳ್ವೆ ಗ್ರಾಮದ ಗುಮ್ಮಹೊಲ ಸಂತ ಜೋಸೆಫರ ಚರ್ಚ್ ನಲ್ಲಿ ನಡೆದಿದೆ. ಚರ್ಚ್ ಫಾದರ್ ಅಲೆಕ್ಸಾಂಡರ್ ಲೂಯಿಸ್ ಎಂಬವರ ವಿರುದ್ದ ಇದೀಗ ಪ್ರಕರಣ ದಾಖಲಾಗಿದ್ದು, ಧರ್ಮಗುರುಗಳು ಕೂಡ ಪ್ರತಿದೂರು ದಾಖಲಿಸಿದ್ದಾರೆ.

ಗುಮ್ಮಹೊಲ ಸಂತ ಜೊಸೇಪರ್ ಚರ್ಚ್ ನ ಪೂಜೆಯ ವಿಚಾರಕ್ಕೆ ಸಂಬಂಧಿಸಿದಂತೆ ಭಕ್ತರು ಹಾಗೂ ಫಾದರ್ ಅಲೆಕ್ಸಾಂಡರ್ ಲೂಯಿಸ್ ನಡುವೆ ಸಾಕಷ್ಟು ಬಾರಿ ಗಲಾಟೆಗಳು ನಡೆದಿತ್ತು. ಈ ಕುರಿತು ಬಿಷಪ್ ಅವರಲ್ಲಿಯೂ ಸಾಕಷ್ಟು ಬಾರಿ ಮನವಿ ಮಾಡಿದ್ದರು. ಜನವರಿ 08 ರಂದು ಬೆಳಿಗ್ಗೆ ಎಂದಿನಂತೆ ಬಲಿಪೂಜೆಗೆ ಪ್ರಿಯಾ ಡಿಸೋಜಾ ಅವರು ಆಗಮಿಸಿದ್ದರು. ಈ ವೇಳೆ ಕ್ರಿಸ್ಮಸ್ ಹಬ್ಬಕ್ಕೆ ಹಾಕಿದ್ದ ನಕ್ಷತರಗಳನ್ನು ತೆಗೆಯುವ ವೇಳೆಯಲ್ಲಿ ಆರೋಪಿ ಫಾ. ಅಲೆಕ್ಸಾಂಡರ್ ಲೂಯಿಸ್ ಕೈಯಲ್ಲಿ ಬಂದೂಕು ಹಿಡಿದುಕೊಂಡು ಸ್ಥಳಕ್ಕೆ ಬಂದು ಕೆಟ್ಟ ಶಬ್ದಗಳಿಂದ ನಿಂದಿಸಿದ್ದಾರೆ. ಅಲ್ಲದೇ ನಿಮ್ಮನ್ನು ಬಂದೂಕಿನಿಂದ ಹೊಡೆದು ಸಾಯಿಸುವುದಾಗಿ ಬೆದರಿಕೆಯೊಡ್ಡಿದ್ದಾರೆ.

ಅಲ್ಲದೇ ಆರೋಪಿ ಫಾ. ಅಲೆಕ್ಸಾಂಡರ್ ಲೂಯಿಸ್ ಮತ್ತು ಚರ್ಚನ ಅಡುಗೆ ಕೆಲಸದವ ಸಮಾನ ಉದ್ದೇಶದಿಂದ ಅಕ್ರಮವಾಗಿ ತಡೆದು ನಿಲ್ಲಿಸಿ ಫಿರ್ಯಾದುದಾರರಿಗೆ ಹಾಗೂ ಇತರ ಮಹಿಳೆಯರ ಮೇಲೆ ಕೈ ಹಾಕಿ ಅವರ ಮಾನಹಾನಿ ಮಾಡಿ ಜೀವ ಬೆದರಿಕೆ ಒಡ್ಡಿರುತ್ತಾರೆ ಎಂದು ಶಂಕರನಾರಾಯಣ ಪೊಲೀಸ್ ಠಾಣೆಗೆ ಪ್ರಿಯಾ ಡಿಸೋಜಾ ಅವರು ದೂರು ನೀಡಿದ್ದು, ಐಪಿಸಿ ಕಲಂ 341,504,506,354 ಮತ್ತು 34ರ ಅಡಿಯಲ್ಲಿ ದೂರು ದಾಖಲಾಗಿದೆ.

Udupi Crime Report : ಪ್ರತಿದೂರು ದಾಖಲಿಸಿದ ಫಾ.ಅಲೆಕ್ಸಾಂಡರ್ ಲೂವಿಸ್

ಪ್ರಿಯಾ ಡಿಸೋಜಾ ಅವರು ದೂರು ದಾಖಲಿಸಿದ ಬೆನ್ನಲ್ಲೇ ಫಾ.ಅಲೆಕ್ಸಾಂಡರ್ ಲೂವಿಸ್ ಅವರು ಕೂಡ ಶಂಕರನಾರಾಯಣ ಠಾಣೆಯಲ್ಲಿ ಪ್ರತಿದೂರು ದಾಖಲಿಸಿದ್ದಾರೆ. ಹೆಬ್ರಿ ತಾಲೂಕಿನ ಬೆಳ್ವೆ ಗ್ರಾಮದ ಗುಮ್ಮಹೊಲ ಸಂತ ಜೊಸೇಪರ್ ಪ್ರಾರ್ಥನ ಮಂದಿರದ ನಿರ್ದೇಶಕರು ಚಾಫೆಲ್ ಆಗಿ ಸುಮಾರು 1 ½ ವರ್ಷದಿಂದ ಕರ್ತವ್ಯ ನಿರ್ವಹಿಸಿ ಕೊಂಡು ಬಂದಿದ್ದೇನೆ. ಆದರೆ ಇದೀಗ ಪ್ರಾರ್ಥನಾ ಮಂದಿರದ ಭಕ್ತಾಧಿಗಳು ಚರ್ಚ್ ನಲ್ಲಿ ಪೂಜಾ ವಿಧಿವಿಧಾನಗಳನ್ನು ಮಾಡಿಕೊಂಡು ಬರಲು ಬಿಡುತ್ತಿರಲಿಲ್ಲ. ಈ ಕುರಿತು ಸಾಕಷ್ಟು ಬಾರಿ ಮಾತುಕತೆ ನಡೆಸಿದ್ದರೂ ಕೂಡ ಆರೋಪಿಗಳು ಸಹಕಾರ ನೀಡುತ್ತಿರಲಿಲ್ಲ. ಪದೇ ಪದೇ ತೊಂದರೆ ನೀಡುತ್ತಿರುವ ಹಿನ್ನೆಲೆಯಲ್ಲಿ ಫಾ.ಅಲೆಕ್ಸಾಂಡರ್ ಲೂವಿಸ್ ಅವರು ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಅದರಂತೆ ಪ್ರವೀಣ ಲೋಬೊ, ಡಿಚರ್ಡ,ಸ್ಯಾಮಸನ್ ,ಸ್ಯಾಂಡ್ರ ಸ್ಯಾಮಸನ್ ಹಾಗೂ ಶಾಂತಿ ಡೇಸಾ ಹಾಗೂ ಇತರರು ಚರ್ಚ್‌ ಜಾಗಕ್ಕೆ ಬಂದು ತೊಂದರೆ ಮಾಡದಂತೆ ಕುಂದಾಪುರದ ಸಿವಿಲ್ ನ್ಯಾಯಾಲಯದಲ್ಲಿ ಇಂಜೆಕ್ಷನ್ ಆದೇಶ ತಂದಿರುತ್ತಾರೆ, ಹಾಗೂ ಮಾನ್ಯ ನ್ಯಾಯಾಲಯದಲ್ಲಿ ಓ ಎಸ್. ನಂ. 434/2022 ರಂತೆ ವಿಚಾರಣೆ ನಡೆಯುತ್ತಿದೆ.

ಆದರೆ ಸಹ ಆರೋಪಿಗಳಾದ ಬೆಳ್ವೆ ಗ್ರಾಮದ ಗುಮ್ಮಹೊಲ ಪ್ರವೀಣ ಲೋಬೊ, ಜನಾರಿ ಜೋಸ್, ಗಿಲ್ಬರ್ಟ ಡಿ’ಸೋಜಾ, ವಿಲ್ಸನ್ ಪ್ಲೊರೇಸ್, ಐವನ್ ಪ್ಲೊರೇಸ್, ಶಾಂತಿ ಡೇಸಾ, ಪ್ರಿಯಾ ಡಿಸೋಜಾ, ಸಿಲ್ವಿಯ ರೇಸ್, ನಿಶಾ ಪ್ಲೊರೇಸ್, ರೀಟಾ ಡಿಸೋಜಾ, ಅಲಿಟಾ ಡೇಸಾ, ಜೊಸೇಪ್ ಸ್ಕರಿಯ, ವಿನಿಸ್ಸ ಸ್ಕ್ರೀಯಾ, ಸ್ಯಾಂಡ್ರ ಸ್ಯಾಮಸನ್, ರಿಜರ್ಡ ಸ್ಯಾಮಸನ್ ಹಾಗೂ ಇತರರು ಗಳು ಮಾನ್ಯ ನ್ಯಾಯಾಲಯದ ಆದೇಶವನ್ನು ಉಲ್ಲಂಘನೆ ಮಾಡಿ ಆರೋಪಿ ರಿಜರ್ಡ ಸ್ಯಾಮಸನ್ ಅವರ ಪ್ರೇರಣೆಯಿಂದ ಪ್ರಾರ್ಥನಾ ಮಂದಿರದ ಪೂಜೆಗೆ ಬಂದು ತನ್ನ ಮೇಲೆ ದೈಹಿಕ ಹಲ್ಲೆ ನಡೆಸಿದ್ದಾರೆ. ಅಲ್ಲದೇ ತನ್ನ ಸಹಾಯಕ್ಕೆ ಬಂದ ಅಡುಗೆ ಸಹಾಯಕ ಮಾರ್ಕ ಮಿನೇಜಸ್ ಅವರ ಮೇಲೆಯೂ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ಇನ್ನು ರೂಂನಲ್ಲಿ ಇದ್ದ ಗನ್‌ ತೆಗೆದುಕೊಂಡು ಮಾರ್ಕ್ ಮಿನೇಜಸ್ ಅವರನ್ನು ಟೆಂಪೋದಲ್ಲಿ ಕೂರಿಸಿಕೊಂಡು ಉಡುಪಿಯ ಮದರ್ ಆಪ್ ಚರ್ಚ್ ಗೆ ಬಿಟ್ಟು ಬಂದಿದ್ದಾರೆ. ಟೆಂಪೋದಲ್ಲಿಯೂ ಹಲ್ಲೆ ನಡೆಸಿದ್ದು, ಜೀವ ಬೆದರಿಕೆ ಒಡ್ಡಿದ್ದಾರೆ. ಘಟನೆಯಿಂದಾಗಿ ಮಾರ್ಕ್ ಮಿನೇಜಸ್ ಅವರ ಮೇಲೆ ದೈಹಿಕ ಹಾಗೂ ಮಾನಸಿಕ ಹಲ್ಲೆಯಿಂದಾಗಿ ಉಡುಪಿಯ ಜಿಲ್ಲಾಸ್ಪತ್ರೆಗೆ ದಾಖಲಾಗಿರುತ್ತಾರೆ. ಘಟನೆ ನಡೆದ ದಿನದಂದು ಹಂದಿ ಮಾರಾಟದಿಂದ ಬಂದ 4,85,000ರೂ. ನಗದು ಹಾಗೂ ಮನೆಯಿಂದ ತಂದಿದ್ದ 50000ರೂ. ನಗದಿ ತನ್ನ ರೂಮಿನಲ್ಲಿ ಇತ್ತು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಶಂಕರನಾರಾಯಣ ಠಾಣೆಯ ಪೊಲೀಸರು ಇದೀಗ ಐಪಿಸಿ ಸೆಕ್ಷನ್ 143,147,448,323,109,506,341 ಜೊತೆಗೆ 149ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ನಡೆಸುತ್ತಿದ್ದಾರೆ.

ಇದನ್ನೂ ಓದಿ : Boy fall into borewell: ಬೋರ್‌ ವೆಲ್‌ ಗೆ ಬಿದ್ದ ಆರು ವರ್ಷದ ಮಗು: ರಕ್ಷಣಾ ಕಾರ್ಯಾಚರಣೆ ಆರಂಭ

ಇದನ್ನೂ ಓದಿ : Dakshina Kannada Congress Candidates: : ದಕ್ಷಿಣ ಕನ್ನಡ ಕಾಂಗ್ರೆಸ್ ನಲ್ಲಿ ಎಲ್ಲವೂ ಹೊಸಮುಖ : ಹೈಕಮಾಂಡ್ ಹೊಸ ಸೂತ್ರ ಬಹುತೇಕ ಅಂತಿಮ !

Udupi Crime Report : Hebri Threatened life of devotees with guns defamation Complaint filed against church priest counter-complaint filed

Comments are closed.