Drone attack : ಉಡುಪಿ : ಪಾದೂರು ತೈಲ ಸಂಗ್ರಹಾಲಯದ ಮೇಲೆ ಡ್ರೋನ್ ದಾಳಿ

ಉಡುಪಿ (Udupi News) : ಪಾಕಿಸ್ತಾನದ ಮೇಲೆ ಭಾರತ ದಾಳಿಯ ಬೆನ್ನಲ್ಲೇ ಉಡುಪಿ ಜಿಲ್ಲೆಯ ಪಾದೂರು ತೈಲ ಸಂಗ್ರಹಾಲಯದ (Padur strategic petroleum reserve plant ) ಮೇಲೆ ಡ್ರೋನ್ ದಾಳಿ ನಡೆದಿದೆ. ಸಂಜೆ 4 ಗಂಟೆಯ ಸುಮಾರಿಗೆ ಈ ದಾಳಿ ನಡೆದಿದ್ದು, ತೈಲ ಸಂಗ್ರಹಾಲಯದ ಒಳಗೆ ಹಾಗೂ ಹೊರ ಭಾಗಕ್ಕೆ ಹಾನಿಯಾಗಿದೆ. ಡ್ರೋನ್‌ಗಳ (Drone attack) ಮೂಲಕ ಸಿಡಿಮದ್ದು ( ಬಾಂಬ್) ದಾಳಿ ನಡೆಸಲಾಗಿದ್ದು, ಗಾಯಾಳುಗಳ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದೆ.

ಕಾಪು ಹೊರವಲಯದ ಪಾದೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಇಂಡಿಯನ್ ಸ್ಟ್ರೆಟೆಜಿಕ್ ಪೆಟ್ರೋಲಿಯಂ ರಿಸರ್ವ್ ಲಿಮಿಟೆಡ್ (ಐ. ಎಸ್.ಪಿ.ಆರ್.ಎಲ್) ಮೇಲೆ ಡ್ರೋನ್ ಮೂಲಕ ಸಿಡಿಮದ್ದು (ಬಾಂಬ್) ದಾಳಿಯಾದ ಬೆನ್ನಲ್ಲೇ ಸೈರನ್ ಮೊಳಗಿತ್ತು. ಕೂಡಲೇ ಉಡುಪಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಂಗೆ ಮಾಹಿತಿಯನ್ನು ನೀಡಲಾಗಿತ್ತು. ದಾಳಿಯ ಬೆನ್ನಲ್ಲೇ ಐಎಸ್‌ಪಿಆರ್‌ಎಲ್‌ನ ಅಗ್ನಿಶಾಮಕ ವಾಹನ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತನ್ನನ್ನು ತೊಡಗಿಸಿಕೊಂಡಿತ್ತು. ಅಷ್ಟೇ ಅಲ್ಲಾ, ಅದಾನಿ ಕಂಪನಿಯ ಫೈರ್ ಇಂಜಿನ್ ಹೊರಭಾಗದ ಬೆಂಕಿ ನಂದಿಸುವ ಕಾರ್ಯವನ್ನು ಕೈಗೊಂಡಿತು. ಅಷ್ಡೇ ಅಲ್ಲಾ ನಾಲ್ಕೈದು ನಿಮಿಷಗಳಲ್ಲಿಯೇ ಮೊದಲ ಹಂತದಲ್ಲಿ ಸಂಪೂರ್ಣ ಬೆಂಕಿ ನಂದಿಸುವಲ್ಲಿ ಯಶಸ್ವಿಯೂ ಆಗಿತ್ತು.

ಕಾರ್ಕಳದ ಅಗ್ನಿ ಶಾಮಕ ವಾಹನ ಕೂಡ ಕಾರ್ಯಾಚರಣೆಯಲ್ಲಿ ಭಾಗಿಯಾಗಿತ್ತು. ಕಾಪು ಠಾಣೆಯ ಪೊಲೀಸ್ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆ ನಡೆಸಿದ್ರು, ಪಾದೂರು ತೈಲ ಸಂಗ್ರಹಾರದ ಒಳಭಾಗದಲ್ಲಿ ಕೆಲಸ ಮಾಡುತ್ತಿದ್ದ 35 ಮಂದಿ ಗಾಯಗೊಂಡಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕೆಲಸಗಾರರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗಿದೆ. ಪೊಲೀಸರು ಸುಗಮ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದರು.

ಕಾಪು ತಾಲೂಕಿನ ಶಿರ್ವ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ತಂಡ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಪ್ರಥಮ ಚಿಕಿತ್ಸೆ ನೀಡುವ ಕೆಲಸವನ್ನು ಮಾಡಿತ್ತು. ನಂತರದಲ್ಲಿ ಅಂಬ್ಯುಲೆನ್ಸ್‌ಗಳ ಮೂಲಕ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತು. ಘಟನಾ ಸ್ಥಳಕ್ಕೆ ಬಾಂಬ್ ನಿಷ್ಕ್ರೀಯ ದಳ ಹಾಗೂ ಶ್ವಾನದಳದವರು ಆಗಮಿಸಿ ಸಜೀವ ಬಾಂಬ್‌ಗಳ ಪರಿಶೀಲನಾ ಕಾರ್ಯವನ್ನು ನಡೆಸಿದ್ದಾರೆ. ಜೊತೆಗೆ ಕ್ವಿಕ್ ರಿಯಾಕ್ಷನ್ ಫೋರ್ಸ್ನ ತಂಡದವರು ಆಗಮಿಸಿ, ಸುರಕ್ಷತೆಗೆ ಸನ್ನದ್ಧರಾದರು. ಘಟನೆ ನಡೆದ ಕೇವಲ 40 ನಿಮಿಷದ ಒಳಗಾಗಿ ಮಂಗಳೂರಿನ ಎಸ್.ಡಿ.ಆರ್.ಎಫ್ ತಂಡವು ಆಗಮಿಸಿ ಕಾರ್ಯಾಚರಣೆ ನಡೆಸಿದ್ದು ವಿಶೇಷವಾಗಿತ್ತು.

ಘಟನೆಯಲ್ಲಿ ಒಟ್ಟು ಇಬ್ಬರು ಮರಣವನ್ನಪ್ಪಿದ್ದು, 12 ಮಂದಿಗೆ ಕಾಪು ಆಸ್ಪತ್ರೆಯಲ್ಲಿ ಹಾಗೂ 20 ಮಂದಿಯನ್ನು ಶಿರ್ವದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಎರಡನೇ ಬಾರಿಗೆ ಡ್ರೋನ್ ಮೂಲಕ ವೈರಿಗಳು ಆಕ್ರಮಣಕ್ಕೆ ಮುಂದಾಗಿದ್ದರೂ ಕೂಡ ಡ್ರೋನ್ ದಾಳಿಯನ್ನು ತಪ್ಪಿಸುವಲ್ಲಿ ಡಿಎಆರ್ ಕ್ವಿಕ್ ರೆಸ್ಪಾನ್ಸ್ ತಂಡ ಯಶಸ್ವಿ ಆಯ್ತು. ಡ್ರೋನ್ ಐಎಸ್‌ಪಿಆರ್‌ಎಲ್‌ನ ಗೇಟ್ ಬಳಿ ಬಿದ್ದಿತ್ತು. ಆದರೆ ಯಾವುದೇ ಹಾನಿಯಾಗಿಲ್ಲ ಎಂದು ತಿಳಿದು ಬಂದಿದೆ.

ಉಡುಪಿ ಜಿಲ್ಲಾಧಿಕಾರಿ ಡಾ.ಕೆ ವಿದ್ಯಾಕುಮಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಗಾಯಾಳುಗಳ ಆರೋಗ್ಯದ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ. ಮಾತ್ರವಲ್ಲ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಷ್ಟಕ್ಕೂ ಪಾದೂರಿನಲ್ಲಿ ನಡೆದಿದ್ದು ನೈಜ ದಾಳಿಯಲ್ಲ, ಬದಲಾಗಿ ಇದು ಅಣುಕು ಕಾರ್ಯಾಚರಣೆ. ವಿರೋಧಿಗಳು ನಮ್ಮ ಮೇಲೆ ದಾಳಿ ನಡೆಸಿದ್ರೆ ಯಾವ ರೀತಿಯಲ್ಲಿ ಕಾರ್ಯಾಚರಣೆ ನಡೆಸಬೇಕು ಅನ್ನೋದ್ರ ತುಣಕು.

ಆಪರೇಷನ್ ಅಭ್ಯಾಸ್ ರಕ್ಷಣಾ ಕಾರ್ಯಚರಣೆಯಲ್ಲಿ ರೆವಿನ್ಯೂ ಇಲಾಖೆ, ಪೊಲೀಸ್ ಇಲಾಖೆ, ಅಗ್ನಿ ಶಾಮಕ ದಳ, ಕೈಗಾರಿಕಾ ಭದ್ರತಾ ಪಡೆ, ಕೋಸ್ಟಲ್ ಸೆಕ್ಯೂರಿಟಿ ಫೋರ್ಸ್, ಆರ್.ಟಿ.ಓ, ಆರೋಗ್ಯ ಇಲಾಖೆ, ಮೆಸ್ಕಾಂ, ಎಸ್.ಡಿ.ಆರ್.ಎಫ್ ತಂಡ, ಗೃಹರಕ್ಷಕದಳ, ಐ.ಎಸ್.ಪಿ.ಆರ್.ಎಲ್ ನ ರಕ್ಷಣಾ ಸಿಬ್ಬಂದಿಗಳು ಹಾಗೂ ಮತ್ತಿತರರು ಭಾಗವಹಿಸಿದ್ದರು.

ಕಾರ್ಯಾಚರಣೆಯಲ್ಲಿ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಅರುಣ್ ಕೆ, ಎಎಸ್‌ಪಿ ಪಿ.ಎ ಹೆಗಡೆ, ಸಹಾಯಕ ಕಮೀಷನರ್ ರಶ್ಮಿ ಎಸ್, ಐ.ಎಸ್.ಪಿ.ಆರ್.ಎಲ್ ನ ಮುಖ್ಯ ಸೈಟ್ ಇನ್‌ಚಾರ್ಜರ್ ಜಿ.ಕೆ ಯುವರಾಜ್, ಕಾಪು ತಹಶೀಲ್ದಾರ್ ಪ್ರತಿಭಾ, ಮೆಸ್ಕಾಂ ಅಧೀಕ್ಷಕ ದಿನೇಶ್ ಉಪಾಧ್ಯಾಯ, ಜಿಲ್ಲಾ ಆರ್.ಟಿ.ಓ ಅಧಿಕಾರಿ ಎಲ್.ಪಿ ನಾಯಕ್, ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತ ರವಿ ಓಜನಾಹಳ್ಳಿ, ವಿವಿಧ ಜಿಲ್ಲಾ
ಮಟ್ಟದ ಅಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Udupi: Drone attack on Padur strategic petroleum reserve plant in Kannada News



