Varadamoola Agastya Teertha lake: ವರದಾಮೂಲದ ಅಗಸ್ತ್ಯ ತೀರ್ಥದ ಹೂಳೆತ್ತುವ ಕಾರ್ಯಕ್ಕೆ ಸಾರ್ವಜನಿಕರಿಂದ ನೆರವಿಗೆ ಮನವಿ

ಪ್ರಸಿದ್ಧ ಪುಣ್ಯಕ್ಷೇತ್ರವಾದ ವರದಾಮೂಲದ ಅಗಸ್ತ್ಯ ತೀರ್ಥದ ಹೂಳೆತ್ತುವ (Varadamoola Agastya Teertha lake) ಕೆಲಸಕ್ಕೆ ಇಂದು ಸಾಗರದ ಉಪವಿಭಾಧಿಕಾರಿಗಳಾದ ಡಾ:ನಾಗರಾಜ್ ಚಾಲನೆ ನೀಡಿದರು; ಸಭೆಯ ಅಧ್ಯಕ್ಷತೆಯನ್ನು ಸ್ವಾನ್ & ಮ್ಯಾನ್ ಸಂಸ್ಥೆಯ ಅಧ್ಯಕ್ಷರಾದ ಟಿ.ವಿ.ಪಾಂಡುರಂಗ ಇವರು ವಹಿಸಿದ್ದರು. ಕೆರೆಗೆ ಸಂಬಂಧಿಸಿದ ವಿವರಗಳು ಹಾಗೂ ಹಣಕಾಸಿನ ಕ್ರೋಢೀಕರಣದ ವಿವರ ನೀಡಲಾಗಿದ್ದು ಸಾರ್ವಜನಿಕರು ಈ ಮಹತ್ವದ ಕಾರ್ಯಕ್ಕೆ ಸಹಕರಿಸುವಂತೆ ಪರಿಸರ ಕಾರ್ಯಕರ್ತ ಅಖಿಲೇಶ್ ಚಿಪ್ಪಳ್ಳಿ ಅವರು ತಿಳಿಸಿದ್ದಾರೆ. ಈಕುರಿತು ಅವರು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಬರೆದುಕೊಂಡಿದ್ದು ಬರಹದ ಪೂರ್ಣಪಾಠವನ್ನು ಕೃತಜ್ಞತಾಪೂರ್ವಕವಾಗಿ ಇಲ್ಲಿ ಪ್ರಕಟಿಸಲಾಗಿದೆ.

ಮಧ್ಯ ಪಶ್ಚಿಮಘಟ್ಟದ ತಪ್ಪಲಿನಲ್ಲಿ ಹುಟ್ಟುವ ವರದಾ ನದಿಯು ಸಾಗರ ತಾಲ್ಲೂಕಿನಲ್ಲಿ ಉಗಮವಾಗುವ ಏಕೈಕ ನದಿಯೂ ಹೌದು. ಪುರಾಣ ಪ್ರಸಿದ್ಧವಾದ ಧಾರ್ಮಿಕ ಕ್ಷೇತ್ರವೂ ಇದಾಗಿದೆ. ಐತಿಹ್ಯದ ಪ್ರಕಾರ ಬ್ರಹ್ಮನ ನಾಲ್ಕನೇ ತಲೆಯನ್ನು ಚಿವುಟಿ ತೆಗೆದ ಪರಿಣಾಮವಾಗಿ ಈಶ್ವರನಿಗೆ ಬ್ರಹ್ಮಹತ್ಯಾ ದೋಷವುಂಟಾಯಿತು. ಈ ದೋಷವನ್ನು ನಿವಾರಿಸಲು ವಿಷ್ಣು ಬಂದು ತನ್ನ ಪಾಂಚಜನ್ಯ ಎಂಬ ಶಂಖದಿಂದ ಗಂಗಾಜಲವನ್ನು ಪ್ರೋಕ್ಷಣೆ ಮಾಡಿದ ನಂತರದಲ್ಲಿ ಈಶ್ವರನಿಗೆ ದೋಷದಿಂದ ಮುಕ್ತಿ ಸಿಕ್ಕಿತು. ಪಾಂಚಜನ್ಯದಿಂದ ನೆಲಕ್ಕೆ ಬಿದ್ದ ಗಂಗಾಜಲಕ್ಕೆ ದೇವತೆಗಳು ವರ ನೀಡಿ, ಈ ತೀರ್ಥದಲ್ಲಿ ಸ್ನಾನ ಮಾಡಿದರೆ ಸಕಲ ಪಾಪಗಳು ತೊಳೆದುಹೋಗುತ್ತವೆ ಎಂಬ ಹಿನ್ನೆಲೆಯಲ್ಲಿ ವರದಾ ಎಂಬ ಹೆಸರನ್ನು ಇಟ್ಟರು. ಸಕಲ ದೋಷಗಳು ಪರಿಹಾರವಾಗುತ್ತವೆ ಎಂಬ ಹಿನ್ನೆಲೆಯಲ್ಲಿ ಆಗಿನ ಕಾಲದ ಎಲ್ಲಾ ಜನರೂ ಬಂದು ವರದಾ ತೀರ್ಥವನ್ನು ಮಲಿನಗೊಳಿಸಿದರು. ಆಗ ಅಗಸ್ತ್ಯ ಮುನಿಗಳು ಮೂಲ ವರದಾತೀರ್ಥ ಮಲಿನವಾಗಬಾರದು ಎಂದು ಅದಕ್ಕೊಂದು ಪರ್ಯಾಯ ತೀರ್ಥವನ್ನು ಸೃಷ್ಟಿ ಮಾಡಿದರು. ಅದೇ ಅಗಸ್ತ್ಯ ತೀರ್ಥವಾಯಿತು. ಆಧುನಿಕ ಕಾಲದಲ್ಲೂ ಮಾಲಿನ್ಯದ ಪ್ರಮಾಣ ಹೆಚ್ಚಾಗಿ ಅಗಸ್ತ್ಯ ತೀರ್ಥ ಶೇ.90ರಷ್ಟು ಮುಚ್ಚಿಹೋಯಿತು.

ವರದಾಮೂಲದಂತಹ ಪವಿತ್ರ ಕ್ಷೇತ್ರದಲ್ಲಿನ ತೀರ್ಥವೊಂದು ಮಲಿನವಾಗಿ ಮುಚ್ಚಿಹೋಗುತ್ತಿದೆ ಎಂದರೆ ಅದು ನಾಡಿನ ಸಾಮಾಜಿಕ ಪ್ರಜ್ಞೆಯನ್ನು ಅಪಹಾಸ್ಯ ಮಾಡಿದಂತೆ; ಈ ಪವಿತ್ರವಾದ ತೀರ್ಥವನ್ನು ಪುನಶ್ಚೇತನಗೊಳಿಸುವುದು ನಮ್ಮಗಳ ಕರ್ತವ್ಯವಾಗಿದೆ. ಈ ಹಿನ್ನೆಲೆಯಲ್ಲಿ ಪುನಶ್ಚೇತನ ಯೋಜನೆಗೆ ವೆಚ್ಚವಾಗಬಲ್ಲ 26 ಲಕ್ಷ ರೂಪಾಯಿಗಳ ಪೈಕಿ ಆರು ಲಕ್ಷಗಳನ್ನು ಕರುನಾಡಿನ ಹೆಮ್ಮೆಯ ಕರ್ಣಾಟಕ ಬ್ಯಾಂಕ್, ಪ್ರಧಾನ ಕಚೇರಿ, ಮಂಗಳೂರು ಇವರು ನೀಡಲಿದ್ದಾರೆ. ಮೂರು ಲಕ್ಷ ರೂಪಾಯಿಗಳನ್ನು ವರದಾಮೂಲದ ಗ್ರಾಮಸ್ಥರೇ ನೀಡುತ್ತಾರೆ. ಕೊರತೆಯಾಗಲಿರುವ ಸುಮಾರು ಹದಿನಾರು ಲಕ್ಷ ರೂಪಾಯಿಗಳನ್ನು ವರದಾಂಬಿಕೆಯ ಭಕ್ತರು, ಸಾರ್ವಜನಿಕರು, ದಾನಿಗಳು ಇವರಿಂದ ಭರಿಸಿ ಈ ಪುಣ್ಯ ಕಾರ್ಯವನ್ನು ಪೂರೈಸಬೇಕಿದೆ. ಆದ್ದರಿಂದ, ತೆರಿಗೆ ವಿನಾಯತಿ ಸೌಲಭ್ಯ ಹೊಂದಿದ ಈ ಕೆಳಗಿನ ಖಾತೆಗೆ ಹಣ ಸಂದಾಯ ಮಾಡಬೇಕಾಗಿ ಅಗಸ್ತ್ಯ ತೀರ್ಥದ ಪರವಾಗಿ ವಿನಂತಿಸುತ್ತೇವೆ.

SWAN and Man (R)
Indian Bank
Jog Road, Sagar-577401
Current Account Number: 6006590782
IFSC : IDIB000S003

ವಿ.ಸೂ: ಆನ್ ಲೈನ್ ಮೂಲಕ ಹಣ ಸಂದಾಯ ಮಾಡುವವರು ದಯವಿಟ್ಟು ಹಣ ಸಂದಾಯ ಮಾಡಿದ ಕುರಿತಾದ ವಿವರಗಳನ್ನು ಹಾಗೂ ಪಾನ್ ನಂಬರನ್ನು 9449718869 ನಂಬರ್ರಿನ ವ್ಯಾಟ್ಸಪ್ಪಿಗೆ ಕಳುಹಿಸಬೇಕಾಗಿ ವಿನಂತಿ ಎಂದು ಪರಿಸರ ಕಾರ್ಯಕರ್ತ ಅಖಿಲೇಶ್ ಚಿಪ್ಪಳ್ಳಿ ಅವರು ಮನವಿ ಮಾಡಿದ್ದಾರೆ.

ಇದನ್ನೂ ಓದಿ: Job Alert 2022: ತಾಳೆಗರಿ ಓಲೆಗಳ ಸಂರಕ್ಷಣೆ, ಛಾಯಾ ಡಿಜಿಟಲೀಕರಣ, ಗ್ರಂಥಸೂಚಿ ಕೆಲಸಕ್ಕೆ ಮೈಸೂರಿನಲ್ಲಿ ಇದೆ ಉದ್ಯೋಗಾವಕಾಶ

(Varadamoola Agastya Teertha lake restoration)

Comments are closed.