ನಿಮ್ಮ ನಾಯಿ, ಬೆಕ್ಕು ಮಾತಾಡುವುದನ್ನ ಕೇಳಿ ಹೌಹಾರಬೇಡಿ..! ಈ ಪೆಟ್ ಬೆಲ್ಟ್‌ನಿಂದ ಸಾಕುಪ್ರಾಣಿಗಳ ಭಾವನೆ ಬಹಿರಂಗ
ನೀವು ಎಂದಾದ್ರೂ ಕಾರ್ಟೂನ್‌ನಲ್ಲಿ ತೋರಿಸುವಂತೆ ನಿಮ್ಮ ಮನೆಯ ನಾಯಿ, ಬೆಕ್ಕು ಮಾತಾಡುವುದನ್ನ ಕೇಳಿದ್ದೀರಾ? ಚೀನಾದ ಟೆಕ್ ಕಂಪನಿಯೊಂದು ಈ ಸಾಧನೆ ಮಾಡಲು ಹೊರಟಿದೆ. ಸಾಕುಪ್ರಾಣಿಗೆ ಎಐ ಪೆಟ್ ಟ್ರಾನ್ಸ್‌ಲೇಟರ್ ಬೆಲ್ಟ್ ಕಟ್ಟಿ ಅವುಗಳ ಭಾಷೆಯನ್ನು ಅರ್ಥಮಾಡಿಕೊಳ್ಳುವ ಸಾಹಸಕ್ಕೆ ಕೈಹಾಕಿದೆ.
ನಿಮ್ಮ ಮನೆಯ ಕ್ಯೂಟ್ ಕ್ಯಾಟ್ ನಿಮ್ಮ ಸುತ್ತ ಮ್ಯಾಂವ್ ಮ್ಯಾಂವ್ ಎಂದು ಸುತ್ತುವುದಕ್ಕೆ ಅಥವಾ ನಿಮ್ಮ ನೆಚ್ಚಿನ ನಾಯಿ ಬೌ.. ಬೌ.. ಎಂದು ಕೂಗಿಕೊಳ್ಳಲು ಕಾರಣ ಏನು ಎಂದು ಯೋಚಿಸಬೇಕೆಂದಿಲ್ಲ. ಅವುಗಳ ಶಬ್ದ ಕೇಳಿ ಯಾಕಪ್ಪ..! ಇದು ಇಷ್ಟೊಂದು ಕೂಗಿಕೊಳ್ತಾ ಇದೆ, ಏನ್ ಬೇಕೋ.. ಏನೋ.. ಎಂದು ಗೊಣಗುವ ಪ್ರಮೇಯವೂ ಇಲ್ಲ. ಅದೇನಿದ್ದರೂ ಸ್ಮಾರ್ಟ್ ಆಗಿ ತನಗೆ ಏನು ಬೇಕು, ಏನು ಬೇಡ ಎನ್ನುವುದನ್ನು ಸ್ಪಷ್ಟವಾಗಿ ನಿಮಗೆ ತಿಳಿಯುವಂತೆ ಹೇಳಬಲ್ಲದು. ಏನ್ರೀ? ಪ್ರಾಣಿಗಳೆಲ್ಲಾ ಮಾತಾಡ್ತಾವಾ? ಅಂತ ಮರುಪ್ರಶ್ನೆ ಹಾಕಬೇಡಿ. ಏಕೆಂದ್ರೆ ಈಗ ಅದು ಸಾಧ್ಯ ಎನ್ನುತ್ತಿದೆ ಟೆಕ್ ಕಂಪನಿಯೊಂದು. ಹೌದು, ಚೀನಾದ ಟೆಕ್ ಕಂಪನಿಯೊಂದು ಎಐ ಪೆಟ್ ಟ್ರಾನ್ಸ್‌ಲೇಟರ್ ಒಂದನ್ನು ಕಂಡುಹಿಡಿದಿದೆಯಂತೆ. ಎಐ ಬಳಸಿಕೊಂಡು ಹೊಸ ಪೆಟ್ ಕಾಲರ್ ಬೆಲ್ಟೊಂದನ್ನು ಅದು ಅಭಿವೃದ್ಧಿಪಡಿಸಿದೆ. ಅದು ಪ್ರಾಣಿಗಳ ಧ್ವನಿ, ಬಾಡಿ ಲಾಂಗ್ವೇಜ್ ಅನ್ನು ಅರ್ಥಮಾಡಿಕೊಂಡು ಮನುಷ್ಯರಿಗೆ ಸಂದೇಶವನ್ನು ತಲುಪಿಸುತ್ತದಂತೆ.
ಚೀನಾದ ಹ್ಯಾಂಗ್‌ಝೌ ಮೂಲದ ಮೆಂಗ್ ಕ್ಸಿಯಾವೋಯಿ ಎಂಬ ಸ್ಟಾರ್ಟ್‌ಅಪ್ ಕಂಪನಿ ಎಐ ಆಧಾರಿತ ಪೆಟ್ ಟ್ರಾನ್ಸ್‌ಲೇಟರ್ ಒಂದನ್ನು ಪರಿಚಯಿಸಿದೆ. ಈ ಟ್ರಾನ್ಸ್‌ಲೇಟರ್ ನಿಮ್ಮ ಸಾಕುಪ್ರಾಣಿಗಳ ಭಾವನೆಗಳು ಮತ್ತು ಧ್ವನಿಗಳನ್ನು 95 ಪ್ರತಿಶತ ನಿಖರವಾಗಿ ಅರ್ಥಮಾಡಿಕೊಂಡು ಹೇಳುಬಲ್ಲದು ಎಂದು ಕಂಪನಿ ಹೇಳಿಕೊಂಡಿದೆ. ಇದೊಂದು ಸ್ಮಾರ್ಟ್ ಕಮ್ಯುನಿಕೇಷನ್ ಎಂದು ಕಂಪನಿ ಹೇಳುತ್ತಿದೆ. ಈ ಸಾಧನಕ್ಕಾಗಿ ಪ್ರೀ ಬುಕಿಂಗ್ ಅನ್ನು ಕಂಪನಿ ಮೇ 1 ರಂದು ತೆರೆದಿತ್ತು. ಇಲ್ಲಿಯವರೆಗೆ ಸುಮಾರು 10,000 ಅಂತರಾಷ್ಟ್ರೀಯ ಬುಕಿಂಗ್‌ಗಳಾಗಿವೆ ಎಂದು ಕಂಪನಿ ಹೇಳಿಕೊಂಡಿದೆ. ಇದರ ಬೆಲೆ ಚೀನಾದಲ್ಲಿ ಸುಮಾರು 799 ಯುವಾನ್ ಅಂದರೆ ಭಾರತದಲ್ಲಿ 11,300 ರೂ. ಆಗಬಹುದು ಎಂದು ಅಂದಾಜಿಸಲಾಗಿದೆ.
ಚೀನಾ ಕಂಪನಿ ಅಭಿವೃದ್ದಿಪಡಿಸಿರುವ ಈ ಸಾಧನವನ್ನು ಸಾಕುಪ್ರಾಣಿಗಳ ಕುತ್ತಿಗೆ ಕಾಲರ್ ಬೆಲ್ಟ್ ಆಗಿ ಕಟ್ಟಲಾಗುತ್ತದೆ. ಇದು ಆಡಿಯೊ ಸಂವೇದಕಗಳು ಮತ್ತು ಪ್ರಾಣಿಗಳ ಧ್ವನಿ, ದೇಹ ಭಾಷೆ, ಭಂಗಿ ಮತ್ತು ನಡವಳಿಕೆಯನ್ನು ರಿಯಲ್ ಟೈಮ್‌ನಲ್ಲಿ ದಾಖಲಿಸುವ ಚಲನೆಯ ಟ್ರ್ಯಾಕಿಂಗ್ ವ್ಯವಸ್ಥೆಯನ್ನು ಒಳಗೊಂಡಿದೆ. ಇದನ್ನು ಎಐಗೆ ಒಳಪಡಿಸಿದ ನಂತರ ಅದು ಪ್ರಾಣಿಗಳು ಸಂತೋಷವಾಗಿವೆಯೇ, ಹಸಿದಿವೆಯೇ, ದುಃಖದಲ್ಲಿವೆಯೇ ಅಥವಾ ಬೇರೆ ಏನಾದರೂ ಭಾವನೆಗಳನ್ನು ಹೊರಹಾಕುತ್ತಿವೆಯೇ ಎಂದೆಲ್ಲ ಪತ್ತೆ ಮಾಡುತ್ತದಂತೆ.
ಇದನ್ನೂ ಓದಿ: ಜಿಯೋ ₹199 ಪ್ಲಾನ್ Vs ಏರ್‌ಟೆಲ್ ₹199 ಪ್ಲಾನ್ : ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್‌ಗಳಲ್ಲಿ ಯಾವುದು ಬೆಸ್ಟ್?
ಈ ಅದ್ಭುತ ಸಾಧನದ ಹಿಂದೆ ಕೆಲವರು ಪ್ರಶ್ನೆ ಎತ್ತಿದ್ದಾರಂತೆ. ಕಂಪನಿ ಇದರ ನಿಖರತೆಯ ಡೇಟಾ ಬಹಿರಂಗಪಡಿಸಿಲ್ಲ, ಪೀರ್-ರಿವ್ಯೂಡ್ ಅಧ್ಯಯನಗಳು ಅಥವಾ ಸ್ವತಂತ್ರ ಪರೀಕ್ಷಾ ವರದಿಗಳನ್ನು ಬಿಡುಗಡೆ ಮಾಡಿಲ್ಲ ಎಂದೆಲ್ಲ ತಜ್ಞರು ಸಿಕ್ಕಾಪಟ್ಟೆ ಪ್ರಶ್ನೆಮಾಡಿದ್ದಾರಂತೆ.
ಅದೇನೇ ಇರಲಿ ಬಿಡಿ, ಹೊಸ ಎಐ ಪೆಟ್ ಟ್ರಾನ್ಸ್‌ಲೇಟರ್ ಮಾರುಕಟ್ಟೆಗೆ ಬಂದ್ರೆ ಕೆಲವರಿಗೆ ಅನುಕೂಲವಾದರೆ, ಉಳಿದವರಿಗೆ ತಲೆನೋವಾಗಬಹುದು. ಎಲ್ಲಕ್ಕಿಂತ ಹೆಚ್ಚಾಗಿ ಮಧ್ಯರಾತ್ರಿ ನಾಯಿ ಕೂಗಲು ಕಾರಣವೇನು ಎಂಬ ಅನಾದಿಕಾಲದ ರಹಸ್ಯಕ್ಕೆ ಉತ್ತರವೂ ದೊರಕಬಹುದು.



