ಸುರಕ್ಷತೆ, ಸ್ವಚ್ಛತೆ ದೃಷ್ಠಿಯಿಂದ ಕಾಫಿನಾಡಿನಲ್ಲಿ ಹೊಸ ರೂಲ್ಸ್..! ನಿಯಮ ಮೀರಿದ್ರೆ ದಂಡ ಗ್ಯಾರಂಟಿ..!
ರಾಜ್ಯದ ಅತ್ಯಂತ ಪ್ರಸಿದ್ಧ ಪ್ರವಾಸಿ ತಾಣಗಳ ಪೈಕಿ ಒಂದಾದ ಚಿಕ್ಕಮಗಳೂರಿಗೆ ಪ್ರವಾಸಕ್ಕೆ (Chikkamagaluru Tourist Place Rule) ತೆರಳಬೇಕು ಎಂದು ಪ್ಲಾನ್ ಮಾಡುತ್ತಿರುವವರಿಗೆ ಹೊಸ ವಿಚಾರವೊಂದು ಕಾದಿದೆ. ಎತ್ತರದ ಶಿಖರ ಮುಳ್ಳಯ್ಯನಗಿರಿ ಟ್ರೆಕ್ಕಿಂಗ್ಗೆಂದು ಕಾಫಿನಾಡಿಗೆ ಆಗಮಿಸುವ ಪ್ರವಾಸಿಗರಿಗೆ ಹೊಸ ನಿಯಮಾವಳಿಗಳನ್ನು ಚಿಕ್ಕಮಗಳೂರು ಜಿಲ್ಲಾಡಳಿತ ವಿಧಿಸಿದೆ. ಈ ನಿಯಮಗಳ ಪ್ರಕಾರ ಮೂರು ಗಂಟೆಗಳ ಸಮಯ ನಿಗದಿ ಮಾಡಲಾಗಿದೆ. ಮಾತ್ರವಲ್ಲದೇ ಮುಳ್ಳಯ್ಯನಗಿರಿ, ಸೀತಾಳಯ್ಯಗಿರಿಗಳಲ್ಲಿ ಅಡುಗೆ ಮಾಡುವುದು, ಪ್ಲಾಸ್ಟಿಕ್ ಬಳಕೆ ಮಾಡುವುದಕ್ಕೆ ನಿಷೇಧ ಹೇರಲಾಗಿದೆ.
ಮುಳ್ಳಯ್ಯನಗಿರಿ ಸೇರಿದಂತೆ ಸೀತಾಳಯ್ಯನಗಿರಿ, ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾ, ಗಾಳಿಕೆರೆ ಹೊನ್ನಮ್ಮನ ಹಳ್ಳಕ್ಕೆ ನಿತ್ಯ ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ.ಈಗ ಬೇರೆ ಶಾಲೆಗಳಿಗೆ ಬೇಸಿಗೆ ರಜೆ ಇರುವುದರಿಂದ ಇಲ್ಲಿಗೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಕೂಡ ಅಪಾರ. ಇದರಿಂದ ಜನದಟ್ಟಣೆ ಹೆಚ್ಚುವ ಸಾಧ್ಯತೆಯಿಂದಾಗಿ ಮುಂಜಾಗ್ರತಾ ಕ್ರಮವಾಗಿ ಈ ಪ್ರದೇಶಗಳಲ್ಲಿ ಹೆಚ್ಚು ಹೊತ್ತು ಕಾಲ ಕಳೆಯುವುದಕ್ಕೆ ಜಿಲ್ಲಾಡಳಿತ ನಿರ್ಬಂಧ ಹೇರಿದೆ. ಮೂರು ಗಂಟೆಗಳ ಕಾಲ ಮಾತ್ರ ಇಲ್ಲಿ ಪ್ರವಾಸಿಗರು ಕಾಲ ಕಳೆಯಬಹುದಾಗಿದೆ. ಅಲ್ಲದೇ ಇಲ್ಲಿಗೆ ಬರುವ ಪ್ರವಾಸಿಗರು ಅದೇ ಸ್ಥಳದಲ್ಲಿ ಅಡುಗೆ ಮಾಡುವುದು, ಪ್ಲಾಸ್ಟಿಕ್ ಬಳಕೆ ಮಾಡುವುದರಿಂದ ಪರಿಸರಕ್ಕೆ ಹಾನಿ ಹಿನ್ನೆಲೆಯಲ್ಲಿ ಸ್ವಚ್ಛತಾ ದೃಷ್ಠಿಯಿಂದ ಇವುಗಳಿಗೂ ನಿರ್ಬಂಧ ಹೇರಲಾಗಿದೆ.
ಇದನ್ನೂ ಓದಿ: PAN 2.0 : ಇನ್ಮುಂದೆ ಬದಲಾಗಲಿದೆ ನಿಮ್ಮ ಪಾನ್ ಕಾರ್ಡ್ ರೂಪ; ಏನಿದು ಕೇಂದ್ರದ ಹೊಸ ಯೋಜನೆ ?
ಇನ್ನು ಇವುಗಳ ಜೊತೆಯಲ್ಲಿ ಅರಣ್ಯ ಪ್ರದೇಶಗಳಲ್ಲಿ ಸಂಚರಿಸದಂತೆ ಎಲ್ಲೆಡೆ ಸೂಚನಾ ಫಲಕಗಳನ್ನು ಅಳವಡಿಕೆ ಮಾಡಲಾಗಿದೆ . ಫಾಲ್ಸ್ಗಳಿಗೆ ಕಾಲ್ನಡಿಗೆಯ ಮೂಲಕ ಸಂಚರಿಸಲು ಚಿಕ್ಕಮಗಳೂರು ಜಿಲ್ಲಾಡಳಿತ ಅನುಮತಿ ನೀಡಿದೆ.
ಚಿಕ್ಕಮಗಳೂರಿನ ಪ್ರವಾಸಿ ತಾಣಗಳ ಸೌಂದರ್ಯ ಸವಿಯುವುದೇ ಒಂದು ಆನಂದ. ಆದರೆ ಪ್ರಸ್ತುತ ಪ್ರವಾಸಿಗರ ದಂಡೇ ಕಾಫಿನಾಡಿಗೆ ಹರಿದುಬರುತ್ತಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಇಂತಹ ನಿರ್ಧಾರಗಳನ್ನು ಕೈಗೊಂಡಿರುವುದಾಗಿ ಚಿಕ್ಕಮಗಳೂರು ಜಿಲ್ಲಾಧಿಕಾರಿ ನಾಗರಾಜ್ ಹೇಳಿದ್ದಾರೆ.



