Varanga Kere Basadi : ವರಂಗದ ಕೆರೆ ಬಸದಿ ಪ್ರವಾಸಿಗರ ರಮ್ಯ ತಾಣ

ಪಶ್ಚಿಮ ಘಟ್ಟಗಳ ಹಸಿರಿನ ಸುಂದರ ಸಿಂಗಾರದ ನಡುವೆ ಹಚ್ಚ ಹಸಿರಿನ ಗದ್ದೆ, ತೋಟ. ಇವೆಲ್ಲದರ ನಡುವೆ ವಿಶಾಲವಾದ ಕೆರೆ. ಕೆರೆಯ ಮಧ್ಯೆ ಫಳಫಳಿಸುವ ಪದ್ಮಾವತಿ ದೇವಿಯ ಬಸದಿ. ನೀರಿನಲ್ಲಿ ಅಲ್ಲಾಡುವ ಮಂದಿರದ ಚಿತ್ರಕ್ಕೆ ಕಮಲದ ಹೂವುಗಳ ಸಿಂಗಾರಸಿರಿ. ಈ ಪ್ರಕೃತಿ ಸೌಂದರ್ಯ ಇರುವುದು ವರಂಗ ಕೆರೆ ಬಸದಿಯಲ್ಲಿ. ಇಲ್ಲಿಗೆ ಬೇಟಿ ನೀಡಿದವರು ಹಿಂತಿರುಗಿ ಹೋಗಲು ಬಯಸುವುದಿಲ್ಲಾ ಅಷ್ಟು ಸುಂದರ ತಾಣ ವರಂಗ ಕೆರೆ ಬಸದಿ.

ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ವರಂಗ ಎಂಬ ಪುಟ್ಟ ಹಳ್ಳಿ. 14 ಎಕರೆ ವಿಸ್ತಾರದ ತುಂಬಿ ತುಳುಕುವ ಕೆರೆಯ ನಡುವೆ ನೆಲೆ ನಿಂತಿರುವ ನಕ್ಷತ್ರಾಕಾರದ ಚತುರ್ಮುಖ ಬಸದಿ ಚೆಲುವನ್ನು ನೋಡಿಯೇ ಆನಂದಿಸಬೇಕು. ಪದ್ಮಾವತಿ ದೇವಿಯ ಸನ್ನಿಧಿಯನ್ನು ತಲುಪಲು ದೋಣಿಯೊಂದೇ ದಾರಿ. ಸುಮಾರು 100 ಮೀಟರ್‌ಗಿಂತಲೂ ಹೆಚ್ಚು ದೂರವನ್ನು ಯಾವ ಮಳೆ, ಬಿಸಿಲು ಕಾಲದಲ್ಲೂ ದೋಣಿಯ ಮೂಲಕವೇ ಕ್ರಮಿಸಬೇಕು. ಆ ದೋಣಿ ಪಯಣವೇ ಒಂದು ರೋಚಕ ಅನುಭವ.

ಇದನ್ನೂ ಓದಿ : Agumbe Ghat : ಕರ್ನಾಟಕದ ಚಿರಾಪುಂಜಿ ಆಗುಂಬೆ ಘಾಟ್‌ ಜೀವ ವೈವಿದ್ಯತೆಯ ತಾಣ

ದೋಣಿಯಲ್ಲಿ ಸಾಗಿ ಕೆರೆಬಸದಿಯ ಮೆಟ್ಟಿಲನ್ನು ಹತ್ತಿ ನಿಂತು ನೋಡಿದರೆ ಸುತ್ತಲೂ ಜಲರಾಶಿ ಚೆಲುವು. ಜೈನ ತೀರ್ಥಂಕರರಾದ ಪಾರ್ಶ್ವನಾಥ, ಅನಂತನಾಥ, ನೇಮಿನಾಥ, ಶಾಂತಿನಾಥ ವಿಗ್ರಹಗಳು ಖಡ್ಗಾಸನ ಭಂಗಿಯ ಕರಿ ಶಿಲೆಯಲ್ಲಿ ಕೆತ್ತಲ್ಪಟ್ಟವೆ. ಹೊಯ್ಸಳ ಮತ್ತು ಚಾಲುಕ್ಯ ಶೈಲಿಗಳ ಸಮ್ಮಿಶ್ರಣವಿದು. ಈ ವಿಗ್ರಹಗಳ ಎರಡೂ ಬದಿಗಳಲ್ಲಿ ಆಯಾ ತೀರ್ಥಂಕರರ ಯಕ್ಷ, ಯಕ್ಷಿಯರ ಬಿಂಬಗಳಿವೆ. ಪೂರ್ವದಲ್ಲಿರುವ ಪಾರ್ಶ್ವನಾಥ ವಿಗ್ರಹದ ಪಕ್ಕ ಪದ್ಮಾವತಿ ದೇವಿಯ ಬಿಂಬವಿದೆ. ಅವಳೇ ಇಲ್ಲಿನ ಪ್ರಧಾನ ಶಕ್ತಿ.

ಚತುರ್ಮುಖ ಗರ್ಭಗುಡಿ, ಪ್ರತ್ಯೇಕ ನಾಲ್ಕು ದ್ವಾರಗಳು, ಪ್ರತಿಯೊಂದು ದಿಕ್ಕಿಗೂ ಒಂದೇ ಅಳತೆಯ ಮುಖ ಮಂಟಪಗಳು, ಹೊರಭಾಗದಲ್ಲಿ ಪ್ರದಕ್ಷಿಣೆ ಪಥ ಮತ್ತು ನಕ್ಷತ್ರಾಕಾರದ ಜಗುಲಿ. ಇಡೀ ಬಸದಿಯನ್ನು ಕಲ್ಲಿನಿಂದ ಕಟ್ಟಲಾಗಿದೆ. ಚಾವಣಿಯೂ ಕಲ್ಲಿನದೆ. ಗುಡಿಯಲ್ಲಿರುವ ಮೂರ್ತಿಗಳು 12ನೇ ಶತಮಾನದವು ಎಂದು ನಂಬಲಾಗಿದೆ. ಆಗಲೇ ಈ ಬಸದಿಯನ್ನು ನಿರ್ಮಿಸಲಾಗಿದ್ದು, ಕೆರೆಯನ್ನು 12ನೇ ಶತಮಾನದಲ್ಲಿ ಆಳುಪ ರಾಣಿ ಜಾಕಲಿ ದೇವಿ ನಿರ್ಮಿಸಿದ್ದಾಳೆಂಬ ಖ್ಯಾತಿ ಇದೆ.

ಇದನ್ನೂ ಓದಿ: ಕೊಡಗಿನ ನಿಸರ್ಗದ ಸೌಂದರ್ಯ ರಾಣಿ ಮಂದಲ್ ಪಟ್ಟಿ

(Varanga Kere Basadi is a tourist destination)

Comments are closed.