Vistadome : ಮಂಗಳೂರು – ಬೆಂಗಳೂರಿಗೆ ವಿಸ್ಟಾಡೋಮ್‌ ರೈಲು : ವಿಶಿಷ್ಠ ರೈಲಿನ ವಿಶೇಷತೆ ನಿಮಗೆ ಗೊತ್ತಾ..?

ಮಂಗಳೂರು : ಭಾರತೀಯ ರೈಲ್ವೆಯಲ್ಲಿ ಹೊಸ ಕ್ರಾಂತಿಯೇ ನಡೆಯುತ್ತಿದೆ. ಪ್ರಯಾಣಿಕರಿಗೆ ಪ್ರಯಾಣದ ವೇಳೆಯಲ್ಲಿ ವಿಶೇಷ ಅನುಭವ ನೀಡುವ ವಿಸ್ಟಾಡೋಮ್‌ ರೈಲು ಇದೀಗ ಮಂಗಳೂರು ಮತ್ತು ಬೆಂಗಳೂರು ನಡುವೆ ಸಂಚಾರ ನಡೆಸಲಿದೆ. ಅಷ್ಟಕ್ಕೂ ಈ ರೈಲಿನ ವಿಶೇಷತೆಗಳೇನು ಅನ್ನೋದನ್ನು ನೀವೇ ನೋಡಿ.

ಪಶ್ಚಿಮಘಟದ ನಿಸರ್ಗ ಸೌಂದರ್ಯವನ್ನೇ ಹೊದ್ದು ಮಲಗಿರೋ ಮಂಗಳೂರು – ಬೆಂಗಳೂರು ರೈಲ್ವೆ ಪ್ರಯಾಣ ಈಗಾಗಲೇ ಪ್ರಯಾಣಿಕರಿಗೆ ಮುದ ನೀಡುತ್ತಿದೆ. ರಾತ್ರಿಯ ಹೊತ್ತಲ್ಲೇ ನಿಸರ್ಗ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಸಾಧ್ಯವಾಗದೇ ನಿರಾಶರಾಗಿದ್ದ ಪ್ರಕೃತಿ ಪ್ರಿಯರಿಗೆ ವಿಸ್ಟಾಡೋಮ್‌ ಕೋಚ್‌ ಹೊಸ ಅನುಭವನ್ನು ಉಣಬಡಿಸಲಿದೆ. ಹಗಲು ಹೊತ್ತಲ್ಲೇ ಸಂಚಾರ ಮಾಡೋ ವಿಸ್ಟಾಡೋಮ್‌ ಕೋಚ್‌ ಹಲವು ವೈಶಿಷ್ಠ್ಯತೆಗಳ ಜೊತೆಗೆ ಅತ್ಯಾಧುನಿಕ ಸೌಲಭ್ಯಗಳನ್ನು ಪ್ರಯಾಣಿಕರಿಗೆ ಒದಗಿಸುತ್ತಿದೆ.

ಕರಾವಳಿಯ ಪುಣ್ಯಕ್ಷೇತ್ರ, ಸಮುದ್ರ ಕಿನಾರೆಯನ್ನು ನೋಡಲು ನಿತ್ಯವೂ ಸಾವಿರಾರು ಪ್ರಯಾಣಿಕರು ಬೆಂಗಳೂರಿನಿಂದ ಬಂದರು ನಗರಿಗೆ ಆಗಮಿಸುತ್ತಾರೆ. ಹೀಗೆ ಬರುವ ಪ್ರಯಾಣಿಕರು ಇನ್ಮುಂದೆ ಆರಾಮವಾಗಿ ವಿಸ್ಟಾಡೋಮ್‌ ರೈಲಲ್ಲಿ ಪ್ರಯಾಣ ಮಾಡಬಹುದಾಗಿದೆ. ವಿಸ್ಟಾಡೋಮ್‌ ರೈಲು ಸಾಮಾನ್ಯ ರೈಲಿನಂತಲ್ಲ. ಬದಲಾಗಿ ಇಲ್ಲಿ ಸ್ವಚ್ಚತೆ, ಅತ್ಯಾಧುನಿಕ ಸೌಲಭ್ಯ, ಪ್ರಯಾಣಿಕರ ಸುರಕ್ಷತೆಯ ಜೊತೆಗೆ ಪ್ರಯಾಣದ ಜೊತೆಗೆ ಸ್ವಲ್ಪವೂ ಬೇಸರವಾಗದಂತೆ ಗಮನ ಹರಿಸಿ ವಿಸ್ಟಾಡೋಮ್‌ ಕೋಚ್‌ ಸಿದ್ದಪಡಿಸಲಾಗಿದೆ.

ಪ್ರಯಾಣಿಕರ ಸುಖಕರ ಪ್ರಯಾಣಕ್ಕೆ ಹೆಚ್ಚಿನ ಆಧ್ಯತೆಯನ್ನು ನೀಡಲಾಗಿದ್ದು, ವಿಶಿಷ್ಟ ವಿನ್ಯಾಸದ ಸೀಟುಗಳನ್ನು ಅಳವಡಿಸಲಾಗಿದೆ. ಈ ಸೀಟುಗಳನ್ನು ಪ್ರಯಾಣಿಕರು 180 ಡಿಗ್ರಿಯಷ್ಟು ತಿರುಗಿಸುವ ಅನುಕೂಲ ಕಲ್ಪಿಸಲಾಗಿದೆ. ರೈಲಿನ ಮೇಲ್ಚಾವಣೆಗೆ ಗಾಜಿನ ಹೊದಿಕೆಯನ್ನು ಅಳವಡಿಸಲಾಗಿದ್ದು, ರೈಲಿನಲ್ಲಿ ಪ್ರಯಾಣದ ಜೊತೆಗೆ ಆಕಾಶದ ಸೌಂದರ್ಯ ಜೊತೆಗೆ ಬೃಹತ್‌ ಕಿಟಕಿಗಳನ್ನು ಸಂಪೂರ್ಣವಾಗಿ ಗಾಜಿನ ಹೊದಿಕೆಯಿಂದಲೇ ಸಿದ್ದಪಡಿಸಿರೋದ್ರಿಂದ ಮಾರ್ಗದುದ್ದಕ್ಕೂ ನಿಸರ್ಗದ ನೈಜ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದಾಗಿದೆ.

ಇಷ್ಟೇ ಅಲ್ಲಾ ಪ್ರಯಾಣಿಕರ ಪ್ರತೀ ಸೀಟ್‌ ನಲ್ಲಿಯೂ ಮೊಬೈಲ್‌ ಚಾರ್ಜರ್‌, ಎಲ್‌ಇಡಿ, ಓವನ್‌, ಫ್ರಿಡ್ಜ್‌, ಮಿನಿ ಪ್ಯಾಂಟ್ರಿ, ಸ್ಟೀಲ್‌ ಲಗೇಜ್‌ ಕಪಾಟು ಹೊಂದಿದೆ. ಇನ್ನು ರೈಲಿನಲ್ಲಿ ಸ್ವಯಂ ಚಾಲಿತ ಬಾಗಿಲು ಹೊಂದಿದ್ದು, ಜೈವಿಕ ಶೌಚಾಲಯಗಳನ್ನು ರೈಲು ಒಳಗೊಂಡಿದೆ. ಹೀಗಾಗಿ ಪ್ರಯಾಣಿಕರಿಗೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ಒದಗಿಸುತ್ತಿದೆ.

ಮಂಗಳೂರು ಬೆಂಗಳೂರು ನಡುವೆ ಸಂಚರಿಸಲಿರುವ ಈ ರೈಲಿನಲ್ಲಿ ಎರಡು ಬೋಗಿಗಳಿದ್ದು ಪ್ರತೀ ಬೋಗಿಗಳಲ್ಲಿ 44 ಅಸನಗಳ ಸಾಮರ್ಥ್ಯವನ್ನು ಹೊಂದಿದೆ.ಈಗಾಗಲೇ ರೈಲಿನ ಎಲ್ಲಾ ಟಿಕೆಟ್‌ ಬುಕ್‌ ಆಗಿದೆ. ಬೆಂಗಳೂರಿನಿಂದ ಮಂಗಳೂರಿಗೆ ಪ್ರಯಾಣ ದರ 1,395ರೂ ನಿಗದಿ ಪಡಿಸಲಾಗಿದೆ. ಜುಲೈ 12ರಂದು ಈ ರೈಲು ಪ್ರಯಾಣಿಕರನ್ನು ಹೊತ್ತು ಬೆಂಗಳೂರಿನಿಂದ ಮಂಗಳೂರು ತಲುಪಲಿದೆ. ಮಂಗಳೂರಿನಿಂದ ಬೆಂಗಳೂರಿಗೆ ಹೊರಟ ವಿಸ್ಟಾಡೋಮ್‌ ರೈಲಿಗೆ ಮಂಗಳೂರಿನಲ್ಲಿ ಸಂಸದ ನಳಿನ್‌ ಕುಮಾರ್‌ ಕಟೀಲು ಚಾಲನೆ ನೀಡಿದ್ದಾರೆ.

ಬೆಂಗಳೂರಿನಿಂದ ರೈಲು ಬೆಳಗ್ಗೆ 7 ಗಂಟೆಗೆ ಹೊರಡಲಿದ್ದು, ಸಂಜೆ 5ಗಂಟೆಗೆ ಮಂಗಳೂರು ತಲುಪಲಿದೆ. ಅಲ್ಲದೇ ಮಂಗಳೂರು ಜಂಕ್ಷನ್‌ ನಿಂದ ಬೆಳಗ್ಗೆ 11.30ಕ್ಕೆ ಹೊರಡುವ ರೈಲು ರಾತ್ರಿ 8.30ಕ್ಕೆ ಯಶವಂತಪುರ ತಲುಪಲಿದೆ. ಇನ್ನು ಯಶವಂತಪುರ – ಕಾರವಾರ ವಿಶೇಷ ರೈಲು (ರೈಲ್ವೆ ನಂ. 06211 /06212 ವಾರಕ್ಕೆ 3 ಬಾರಿ ), ಯಶವಂತಪುರ- ಮಂಗಳೂರು ಜಂಕ್ಷನ್‌ ವಿಶೇಷ ರೈಲು (ರೈಲ್ವೆ ನಂ. 06575/06576 ವಾರಕ್ಕೆ ಮೂರು ಬಾರಿ), ಯಶವಂತಪುರ -ಮಂಗಳೂರು (ರೈಲ್ವೆ ನಂ. 06539) ಹಾಗೂ ಮಂಗಳೂರು ಜಂಕ್ಷನ್‌-ಯಶವಂತಪುರ ಎಕ್ಸ್‌ಪ್ರೆಸ್‌ನಲ್ಲಿ (ರೈಲ್ವೆ ನಂ. 06540 ) ರೈಲುಗಳಲ್ಲಿ ಈ ವಿಸ್ಟಾಡೋಮ್‌ ಬೋಗಿ ಸೇರ್ಪಡೆಯಾಗಲಿವೆ.

ಕರಾವಳಿಯ ಪ್ರವಾಸೋದ್ಯಮಕ್ಕೆ ವಿಸ್ಟಾಡೋಮ್‌ ಕೋಚ್‌ ಹೊಸ ಅವಕಾಶವನ್ನು ಕಲ್ಪಿಸಲಿದೆ. ಈಗಾಗಲೇ ಮುಂಬೈ, ದೆಹಲಿ ಸೇರಿದಂತೆ ರಾಷ್ಟ್ರದ ಹಲವು ಮಹಾನಗರಗಳಲ್ಲಿ ವಿಸ್ಟಾಡೋಮ್‌ ಕೋಚ್‌ ಬಳಕೆಯಾಗುತ್ತಿದ್ದು, ಪ್ರಯಾಣಿಕರು ಖುಷಿಯಿಂದಲೇ ಪ್ರಯಾಣಿಸುತ್ತಿದ್ದಾರೆ.

Comments are closed.