ಶೀರೂರು ಪರ್ಯಾಯಕ್ಕೆ ಕ್ಷಣಗಣನೆ : ವೇದವರ್ಧನ ತೀರ್ಥರ ಪೀಠಾರೋಹಣ, ಅನುದಾನ ಗೊಂದಲ

Udupi Shiroor Paryaya : ಉಡುಪಿ : ಪರ್ಯಾಯದ ಪಾರಂಪರಿಕ ಇತಿಹಾಸದಲ್ಲಿ ಮತ್ತೊಂದು ಮಹತ್ವದ ಕ್ಷಣಕ್ಕೆ ಕ್ಷಣಗಣನೆ ಶುರುವಾಗಿದೆ. ವಿವಾದಗಳ ಸುಳಿಯಲ್ಲಿ ಸಿಲುಕಿದ್ದ ಶೀರೂರು ಮಠಕ್ಕೆ ನೇಮಕಗೊಂಡಿರುವ ಯುವ ಯತಿ ವೇದವರ್ಧನ ತೀರ್ಥ ಜನವರಿ 9ರಂದು ಪುರ ಪ್ರವೇಶ ಮಾಡಲಿದ್ದಾರೆ.

ಅಷ್ಟಮಠಾಧೀಶರ ಅನುಪಸ್ಥಿತಿಯಲ್ಲಿ ಪುತ್ತಿಗೆ ಶ್ರೀ ಏಕಾಂಗಿಯಾಗಿ ಪರ್ಯಾಯ ಪೂರೈಸಿದ ಅಪರೂಪದ ಸಂದರ್ಭದ ನಡುವೆಯೇ ಈ ಬಾರಿ ಶೀರೂರು ಪರ್ಯಾಯ ನಡೆಯುತ್ತಿದೆ. ಉಡುಪಿ ಅಷ್ಟಮಠಗಳ ಪೈಕಿ ಒಂದು ಪ್ರಮುಖ ಮಠವಾಗಿರುವ ಶೀರೂರು ಮಠ, ಲಕ್ಷ್ಮೀವರ ತೀರ್ಥರ ಅಸಹಜ ಸಾವಿನ ಬಳಿಕ ಗೊಂದಲದ ಗೂಡಾಗಿತ್ತು.

ಅತ್ಯಂತ ಎಳೆಯ ಪ್ರಾಯದಲ್ಲೇ ಶೀರೂರು ಮಠದ ವೇದವರ್ಧನ ತೀರ್ಥರು (Vedavardhana Theertha Swamiji) ಪೀಠಾರೋಹಣಗೊಂಡಿದ್ದು, ಇದೀಗ ಸರ್ವಜ್ಞ ಪೀಠಾರೋಹಣದ ಮೂಲಕ ಪರ್ಯಾಯದ ಜವಾಬ್ದಾರಿ ವಹಿಸಿಕೊಳ್ಳುತ್ತಿದ್ದಾರೆ.

ಜನವರಿ 9ರಂದು ಶ್ರೀ ವೇದವರ್ಧನ ತೀರ್ಥರ ಪುರ ಪ್ರವೇಶ ನಡೆಯಲಿದೆ. ದೇಶ ಸಂಚಾರ ಮುಗಿಸಿ ಉಡುಪಿಗೆ ಆಗಮಿಸುತ್ತಿರುವ ಯತಿಗೆ ವೈಭವದ ಸ್ವಾಗತಕ್ಕೆ ನಗರ ಸಜ್ಜಾಗಿದೆ. ಕಡಿಯಾಳಿ ಮಹಿಷಮರ್ದಿನಿ ದೇವಳದಿಂದ ಪುರ ಪ್ರವೇಶ ಮೆರವಣಿಗೆ ಆರಂಭವಾಗಲಿದೆ.

Udupi Shiroor Paryaya : ಏಕಾಂಗಿಯಾಗಿ ಪರ್ಯಾಯ ಪೂರೈಸಿದ ಪುತ್ತಿಗೆ ಶ್ರೀ

ಈ ನಡುವೆ, ವಿದೇಶ ಯಾನದ ಕಾರಣದಿಂದ ಅಷ್ಟಮಠಾಧೀಶರು ದೂರವಿದ್ದ ಸಂದರ್ಭದಲ್ಲೇ ಪುತ್ತಿಗೆ ಶ್ರೀಗಳು ಏಕಾಂಗಿಯಾಗಿ ಪರ್ಯಾಯ ಪೂರೈಸಿದ್ದಾರೆ. ಪರ್ಯಾಯದ ಧಾರ್ಮಿಕ ವಿಧಿಗಳಲ್ಲಿ ಅಷ್ಟಮಠಾಧೀಶರ ಭಾಗವಹಿಸದೇ ಇರುವುದು ಅಪರೂಪದ ಘಟನೆ. ಆದರೂ ಪುತ್ತಿಗೆ ಶ್ರೀಗಳು ಅದ್ದೂರಿಯಾಗಿಯೇ ತಮ್ಮ ಪೂಜಾವಧಿ ಪೂರ್ಣಗೊಳಿಸಿದ್ದಾರೆ

ಶೀರೂರು ಪರ್ಯಾಯಕ್ಕೆ ಆಮಂತ್ರಿತ ಅಷ್ಟಮಠಾಧೀಶರಿಗೆ ಆಹ್ವಾನ ನೀಡಲಾಗಿದೆ. ಎಲ್ಲಾ ಮಠಾಧೀಶರ ಸಾನ್ನಿಧ್ಯದಲ್ಲಿ ಪರ್ಯಾಯ ನಡೆಯಲಿದೆ ಎಂಬ ನಿರೀಕ್ಷೆ ಇದೆ. ಧಾರ್ಮಿಕ ವಲಯದಲ್ಲಿ ಈ ಪರ್ಯಾಯದ ಬಗ್ಗೆ ವಿಶೇಷ ಕುತೂಹಲ ಕಂಡುಬರುತ್ತಿದೆ.

ಶಿರೂರು ಪರ್ಯಾಯಕ್ಕಿಲ್ಲ ಸರಕಾರದ ಅನುದಾನ

ಇತ್ತ, ನಾಡ ಹಬ್ಬವಾದ ಉಡುಪಿ ಪರ್ಯಾಯಕ್ಕೆ ಸರಕಾರದ ಅನುದಾನ ಇಲ್ಲದಿರುವ ಬಗ್ಗೆ ಪ್ರಶ್ನೆಗಳು ಎದ್ದಿವೆ. ಆದರೆ ಸ್ಥಳೀಯ ತೆರಿಗೆ ಸಂಗ್ರಹದ ಹಣವನ್ನು ಬಳಸಿಕೊಳ್ಳಲು ಸರಕಾರ ಅವಕಾಶ ನೀಡಿದೆ. ಉಡುಪಿ ಜಿಲ್ಲೆಯ ಐದು ಕ್ಷೇತ್ರಗಳಿಗೆ ಸಂಬಂಧಿಸಿದ ನಿಧಿಯಿಂದ ಆರು ಕೋಟಿ ರೂಪಾಯಿ ಬಳಸಿಕೊಳ್ಳಲು ಗ್ರೀನ್ ಸಿಗ್ನಲ್ ನೀಡಲಾಗಿದೆ.

ಈ ಹಣವನ್ನು ನಗರ ರಸ್ತೆ ಹಾಗೂ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಬಳಸಲಾಗುತ್ತಿದೆ. ಶೀರೂರು ಪರ್ಯಾಯ ಧಾರ್ಮಿಕ ಇತಿಹಾಸದ ಹೊಸ ಅಧ್ಯಾಯವಾಗುತ್ತಿದೆ. ಯುವ ಯತಿಯ ಪೀಠಾರೋಹಣ, ಏಕಾಂಗಿಯಾಗಿ ಪೂರ್ಣಗೊಂಡ ಪುತ್ತಿಗೆ ಪರ್ಯಾಯ ಮತ್ತು ಅನುದಾನ ಗೊಂದಲ— ಈ ಎಲ್ಲದ ನಡುವೆ ಉಡುಪಿ ಪರ್ಯಾಯಕ್ಕೆ ಕ್ಷಣಗಣನೆ ಆರಂಭವಾಗಿದೆ.

ಶೀರೂರು ಪರ್ಯಾಯ—ಪರಂಪರೆ, ಪರಿವರ್ತನೆ ಮತ್ತು ಪ್ರಶ್ನೆಗಳ ನಡುವೆ ನಾಡ ಹಬ್ಬದ ಕಿರಣ ಮತ್ತೆ ಉಡುಪಿಯಲ್ಲಿ ಮೂಡುತ್ತಿದೆ. ಶಿರೂರು ಸ್ವಾಮೀಜಿಗಳ ಪರ್ಯಾಯ ಪುರಪ್ರವೇಶದ ಹಿನ್ನೆಲೆಯಲ್ಲಿ ಉಡುಪಿ ನಗರದ ಸಂಚಾರದ ನಿಯಮದಲ್ಲಿ ಬದಲಾವಣೆಯನ್ನು ಮಾಡಲಾಗಿದೆ.

Udupi Shiroor Paryaya Countdown Vedavardhana Theertha’s enthronement, funding confusion

Ashwath Acharya | ಅಶ್ವಥ್ ಆಚಾರ್ಯ

ನ್ಯೂಸ್‌ ನೆಕ್ಸ್ಟ್‌ನ ಹಿರಿಯ ವರದಿಗಾರರಾಗಿರುವ ಅಶ್ವಥ್‌ ಆಚಾರ್ಯ ಅವರು ಪತ್ರಕರ್ತರಾಗಿ ಸುಮಾರು 20 ವರ್ಷಗಳ ಅನುಭವ ಹೊಂದಿದ್ದಾರೆ. ಕರ್ನಾಟಕದ ಪ್ರಖ್ಯಾತ ಸುದ್ದಿವಾಹಿನಿ, ಕನ್ನಡ ಪ್ರತಿಷ್ಠಿತ ದಿನ ಪತ್ರಿಕೆಗಳಲ್ಲಿ ಹಾಗೂ ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. More »

Related Stories