ಅಭಿಮತ ಸಂಭ್ರಮದಲ್ಲಿ ಪ್ರೇಕ್ಷಕರನ್ನು ಮೋಡಿ ಮಾಡಿದ “ಯಕ್ಷರ ಹೊಸ ಕಾವ್ಯ”

0
  • ರಾಮಚಂದ್ರ ಆಚಾರ್ಯ ಚೇಂಪಿ
  • ಚಿತ್ರಗಳು : ಕುಶಕುಮಾರ್ ಬನ್ನಾಡಿ

ಯಕ್ಷಲೋಕದ ಕುಚ್ಚಿಕು ಗೆಳೆಯರಾದ ತಾರಾಮೌಲ್ಯದ ಭಾಗವತ ಜೋಡಿ ಜನ್ಸಾಲೆ – ಮೊಗೆಬೆಟ್ಟು ಅವರ ಗಾನ ವೈಭವ. ಯಕ್ಷಲೋಕದ ತಾರಾ ದಂಪತಿ ಕಡಬಾಳ – ಅಶ್ವಿನಿ ಕೊಂಡದಕುಳಿ ನಾಟ್ಯ ವೈಭವ. ಸುನಿಲ್ ಭಂಡಾರಿ – ಸುಜನ ಹಾಲಾಡಿ ಚಂಡೆ – ಮದ್ದಲೆಯ ಜುಗಲ್ ಬಂಧಿ.

ಯಕ್ಷ, ನಾಟ್ಯ ವೈಭವಕ್ಕೆ ಇನ್ನೇನು ಬೇಕು ಹೇಳಿ. ಯಕ್ಷಲೋಕದಲ್ಲಿ ಮಿಂಚು ಹರಿಸಿರೋ ಯಕ್ಷಕಲಾವಿದರ ಗಾನ, ನಾಟ್ಯದ ಸೊಬಗಿಗೆ ಸಾಲಿಗ್ರಾಮ ಮಕ್ಕಳ ಮೇಳದ ನಿರ್ದೇಶಕರಾದ ಸುಜಯೀಂದ್ರ ಹಂದೆಯವರ ನವಿರಾದ ನಿರೂಪಣೆ. ಇಷ್ಟೇಲ್ಲಾ ಒಂದೇ ವೇದಿಕೆಯಲ್ಲಿ ಸಿಗುತ್ತೆ ಅಂದ್ರೆ ಆ ಕಾರ್ಯಕ್ರಮ ಯಾರಿಗೆ ತಾನೆ ಇಷ್ಟವಾಗೋದಿಲ್ಲ ಹೇಳಿ.

ಅಷ್ಟಕ್ಕೂ ಇಂತಹ ಅದ್ಬುತ ರಸಕಾವ್ಯ ಕಂಡುಬಂದಿದ್ದು ಮೂಡುಗಿಳಿಯಾರಿನಲ್ಲಿ. ಜನಸೇವಾ ಟ್ರಸ್ಟ್ ಆಯೋಜಿಸಿದ್ದ ಅಭಿಮತದ ಸಂಭ್ರಮವನ್ನು ಹೆಚ್ಚಿಸಿದ್ದು ಯಕ್ಷರ ಹೊಸ ಕಾವ್ಯ. ಗಾನ ಕೋಗಿಲೆಗಳೆಂದೇ ಪ್ರಖ್ಯಾತಿಗಳಿಸಿರೋ ರಾಘವೇಂದ್ರ ಜನ್ಸಾಲೆ ಹಾಗೂ ಪ್ರಸಾದ್ ಮೊಗೆಬೆಟ್ಟು ಗಾಯನ ಎಂತವರನ್ನೂ ಮೂಕವಿಸ್ಮಿತರನ್ನಾಗಿಸುತ್ತೆ.

ಗದಾಯುದ್ದದ ಕಪಟ ನಾಟಕ ರಂಗ ಪದ್ಯವನ್ನು ಜನ್ಸಾಲೆ ಹಾಡಿದ್ರೆ, ಕರ್ಣಾರ್ಜುನ ಕಾಳಗದ ಹರಿ ನಿನ್ನ ಮಹಿಮೆಯನು ಪದ್ಯವನ್ನು ಮೊಗೆಬೆಟ್ಟು ಹಾಡಿದ್ರು.

ಮಧುರ ಮಹಿಂದ್ರ ಪ್ರಸಂಗದ ಬಾರೆ ಬಾ ಮದನರಾಣಿ ಎಂದು ಮೊಗೆಬೆಟ್ಟು ಎತ್ತುಗಡೆ ಮಾಡಿದ್ರೆ, ಬಂದೆಯಾ ಭಾಗ್ಯನಿದಿ ಎಂದು ಜನ್ಸಾಲೆ ಹಾಡಿದ್ರು. ಹೀಗೆ ಕೃಷ್ಣಾರ್ಜುನದ ತುಂಟ ಗಾಯನ ಮತ್ತು ಬಾವ ನಿನ್ನ ಸ್ವಭಾವ, ದ್ರೌಪತಿ ಪ್ರತಾಪದ ಯಾರೆ ಧೀರೆ ಮತ್ತು ಯಾರಿಗಾಗಿ ಯಾರು ಬರುವರು ಪದ್ಯಗಳನ್ನು ಜನ್ಸಾಲೆ ಮತ್ತು ಮೊಗೆಬೆಟ್ಟು ಜಂಟಿಯಾಗಿ ಹಾಡಿದರು.

ಅದರಲ್ಲೂ ಮೀನಾಕ್ಷಿ ಕಲ್ಯಾಣ ಪ್ರಸಂಗದಲ್ಲಿ ಬರುವ ಶೂರಸೇನ ರಾಜನ ಹಾಸ್ಯಗಾರನ ಹಿಂದಿ ಭಾಷೆಯ ಪದ್ಯಗಳನ್ನು ಜಂಟಿಯಾಗಿ ಹಾಡುತ್ತಿದ್ದಂತೆಯೇ ಪ್ರೇಕ್ಷಕರು ಚಪ್ಪಾಳೆ ತಟ್ಟಿ ಬಿದ್ದು ಬಿದ್ದು ನಕ್ಕರು.

ನಂತರ ಯಕ್ಷಕವಿ ಪ್ರಸಾದ್ ಕುಮಾರ್ ಮೊಗೆಬೆಟ್ಟು ವಿರಚಿತ ರಾಧಾಕೃಷ್ಣ ನ್ರತ್ಯರೂಪಕದ- ರಂಗಸಖಿ ಎಂಬ ಯಕ್ಷಗಾನ ನಾಟ್ಯ ವೈಭವ ನಡೆಯಿತು. ಯಕ್ಷ ಸುಂದರ ಕಡಬಾಳ ಉದಯ ಹೆಗಡೆ ಮತ್ತು ಅಶ್ವಿನಿ ಕೊಂಡದಕುಳಿ ಅವರ ಅಮೋಘ ಅಭಿನಯದ ನ್ರತ್ಯ ವೈಭವ ರೂಪಕ ಆಕರ್ಷಕವಾಗಿತ್ತು.

ರಾಧಾಕೃಷ್ಣರ ಪ್ರೇಮ, ಕಾಮ, ವಿರಹದ ಪದ್ಯಗಳನ್ನು ಭಾಗವತರು ಬಹಳ ಇಂಪಾಗಿ ಹಾಡಿದಾಗ ನಿಜವಾಗಿಯೂ ದಂಪತಿಗಳಾದ ಕಡಬಾಳ- ಕೊಂಡದಕುಳಿ ಜೋಡಿ ಅದ್ಭುತವಾಗಿ ನಿರ್ವಹಣೆ ತೋರಿಸಿದರು. ಆ ಪದ್ಯದ ಸಾಹಿತ್ಯವು ಕೂಡ ಮೊಗೆಬೆಟ್ಟು ಅವರ ವಿಶೇಷ ಸಾಹಿತ್ಯ ಶಕ್ತಿಯನ್ನು ತೋರಿಸಿತು.

ಜನ್ಸಾಲೆ ಮತ್ತು ಮೊಗೆಬೆಟ್ಟು ಅವರ ಹೊಂದಾಣಿಕೆ ಅವರ ಫ್ರೆಂಡ್ ಶಿಪ್ ರೀತಿಯಲ್ಲಿಯೇ ಪ್ರೇಕ್ಷಕರಿಗೆ ಇಷ್ಟವಾಗುತ್ತಾ ಹೋಯಿತು. ಕಡಬಾಳ ದಂಪತಿಗಳ ಹೊಂದಾಣಿಕೆ ರಂಗ ಸಖಿ ಎಂಬ ಪ್ರದರ್ಶನದಲ್ಲಿ ಮೋಡಿ ಮಾಡುವಂತಿತ್ತು.

ಇನ್ನು ಸುನಿಲ್ ಭಂಡಾರಿ ಅವರ ಮದ್ದಲೆ, ಸುಜನ ಹಾಲಾಡಿಯವರ ಚಂಡೆಯ ಝೇಂಕಾರ ಪ್ರೇಕ್ಷಕರಿಗೆ ಮನರಂಜನೆಯ ರಸದೌತಣವನ್ನೇ ಉಣಬಡಿಸಿತ್ತು. ಯಕ್ಷರ ಹೊಸ ಕಾವ್ಯ ಅನ್ನೋ ಈ ವಿಶಿಷ್ಠ ಕಾರ್ಯಕ್ರಮ ನನ್ನಂತಹ ಸಾವಿರಾರು ಪ್ರೇಕ್ಷಕರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದೆ ಎಂಬುದರಲ್ಲಿ ಸಂದೇಹವಿಲ್ಲ. ಅಭಿಮತ ಸಂಭ್ರಮವನ್ನು ಸಂಘಟನೆ ಮಾಡಿದವರೆಲ್ಲರಿಗೂ ಈ ಯಶಸ್ಸು ದೊರಕಿದೆ.

Leave A Reply

Your email address will not be published.