Jansale Raghavendra Acharya : ಪಾವಂಜೆ ಮೇಳ ಕಟ್ಟಿ ಗೆದ್ದ ಪಟ್ಲ, ಹೊಸ ಮೇಳ ಕಟ್ತಾರಾ ಜನ್ಸಾಲೆ

ಕುಂದಾಪುರ : ಕರಾವಳಿಯ ಗಂಡು ಕಲೆ ಎನಿಸಿಕೊಂಡಿರುವ ಯಕ್ಷಗಾನ ಇತ್ತೀಚಿನ ವರ್ಷಗಳಲ್ಲಿ ಯುವ ಜನತೆಯನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ. ತೆಂಕು ತಿಟ್ಟಿನಲ್ಲಿ ಸತೀಶ್‌ ಪಟ್ಲ, ಬಡಗಿನಲ್ಲಿ ರಾಘವೇಂದ್ರ ಆಚಾರ್‌ ಜನ್ಸಾಲೆಯ ಗಾನ ಮಾಧುರ್ಯಕ್ಕೆ ಲಕ್ಷಾಂತರ ಮಂದಿ ಮನಸೋತಿದ್ದಾರೆ. ಕಟೀಲು ಮೇಳದಿಂದ ಹೊರ ಬಂದ ಪಟ್ಲ ಪಾವಂಜೆ ಮೇಳವನ್ನು ಕಟ್ಟಿ ಗೆಲುವು ಕಂಡಿದ್ದಾರೆ. ಇದೀಗ ಪೆರ್ಡೂರು ಮೇಳದಿಂದ ದೂರವಾಗಿರುವ ಕರಾವಳಿಯ ಗಾನ ಕೋಗಿಲೆ ರಾಘವೇಂದ್ರ ಜನ್ಸಾಲೆ (Jansale Raghavendra Acharya) ಕೂಡ ಹೊಸ ಮೇಳ ಕಟ್ಟುವ ಉತ್ಸಾಹದಲ್ಲಿದ್ದಾರೆ.

ಜನ್ಸಾಲೆ ರಾಘವೇಂದ್ರ ಆಚಾರ್‌ ಪೆರ್ಡೂರು ಮೇಳದ ಪ್ರಧಾನ ಭಾಗವತರಾಗಿ ಕಳೆದೊಂದು ದಶಕಗಳಿಂದಲೂ ಯಕ್ಷ ಪ್ರೇಮಿಗಳ ಮನ ಗೆದ್ದಿದ್ದಾರೆ. ಉಡುಪಿಯ ಯಕ್ಷಗಾನ ಕೇಂದ್ರದಲ್ಲಿ ಭಾಗವತಿಕೆಯನ್ನು ಅಭ್ಯಾಸ ಮಾಡಿರುವ ರಾಘವೇಂದ್ರ ಜನ್ಸಾಲೆ ಅವರು ಮಾರಣಕಟ್ಟೆ ಮೇಳದಲ್ಲಿ ಪ್ರಖ್ಯಾತಿಯನ್ನು ಪಡೆದುಕೊಂಡಿದ್ದರು. ತಮ್ಮ ಗಾಯನದಿಂದಲೇ ಅಪಾರ ಅಭಿಮಾನಿಗಳನ್ನು ಹೊಂದಿದ್ದ ಜನ್ಸಾಲೆ ನಂತರ ಪೆರ್ಡೂರು ಮೇಳದ ಪ್ರಧಾನ ಭಾಗವತರಾಗಿ ಗುರುತಿಸಿಕೊಂಡಿದ್ದಾರೆ. ಮೇಘರಂಜಿನಿ, ಶಂಕರಾಭರಣ, ಗಗನತಾರೆ, ಗೋಕುಲಾಷ್ಟಮಿ, ಕ್ಷಮಯಾಧರಿತ್ರಿ, ಇಂದ್ರನಾಗ, ಪುಷ್ಪ ಸಿಂಧೂರಿ, ದೇವಗಂಗೆ, ಶತಮಾನಂ ಭವತಿ, ಅಹಂ ಬ್ರಹ್ಮಾಸ್ಮಿ, ಮಾನಸಗಂಗಾ, ಶಪ್ತಭಾವಿನಿ, ಸೂರ್ಯ ಸಂಕ್ರಾಂತಿಯಂತಹ ಸೂಪರ್‌ ಹಿಟ್‌ ಪ್ರಸಂಗವನ್ನು ಪ್ರದರ್ಶನ ಮಾಡುವಲ್ಲಿ ಜನ್ಸಾಲೆ ಅವರ ಪಾತ್ರ ಮಹತ್ತರವಾದುದು.

ಆದರೆ ಇಂತಹ ಜನ್ಸಾಲೆ ರಾಘವೇಂದ್ರ ಆಚಾರ್ಯ ಅವರು ಈ ಬಾರಿ ಪೆರ್ಡೂರು ಮೇಳದಿಂದ ದೂರವಾಗಿದ್ದಾರೆ. ಮೇಳ ಬಿಟ್ಟಿರೋದಕ್ಕೆ ಕಾರಣವನ್ನೂ NEWS NEXT ಕನ್ನಡದ ಜೊತೆಗೆ ಬಿಚ್ಚಿಟ್ಟಿದ್ದಾರೆ. ಜನ್ಸಾಲೆ ಅವರನ್ನು ಮೇಳದಿಂದ ಕೈ ಬಿಟ್ಟಿರೋ ವಿಚಾರ ತಿಳಿಯುತ್ತಲೇ ಅಭಿಮಾನಿಗಳು ಬೇಸರಗೊಂಡಿದ್ದಾರೆ. ಸಾವಿರಾರು ಮಂದಿ ಅಭಿಮಾನಿಗಳು ಈಗಾಗಲೇ ಜನ್ಸಾಲೆ ಅವರಿಗೆ ಕರೆ ಮಾಡಿ ಹೊಸ ಮೇಳ ಕಟ್ಟುವಂತೆ ಆಹ್ವಾನ ನೀಡಿದ್ದಾರಂತೆ. ಕಟೀಲು ಮೇಳದ ರಂಗಸ್ಥಳದಿಂದ ಕೆಳಗೆ ಇಳಿಸಿ ಅವಮಾನಕ್ಕೆ ಒಳಗಾದ ಪಟ್ಲ ಸತೀಶ್‌ ಶೆಟ್ಟಿ ಅವರು ಕೇವಲ ಒಂದೇ ವರ್ಷದಲ್ಲಿ ಪಾವಂಜೆ ಮೇಳವನ್ನು ಕಟ್ಟಿ ಬೆಳೆಸಿದ್ದು, ಸಮರ್ಥ ಕಲಾವಿದರಿಂದಲೇ ಮೇಳ ಈಗಾಗಲೇ ಪ್ರಖ್ಯಾತಿಯನ್ನು ಪಡೆದುಕೊಂಡಿದೆ. ಮೊದಲ ವರ್ಷದಲ್ಲೇ ಎರಡನೇ ವರ್ಷಕ್ಕೆ ಸಾಕಾಗುವಷ್ಟು ಆಟ ಬುಕ್ಕಿಂಗ್‌ ಆಗಿತ್ತು. ಅಲ್ಲದೇ ಕಲಾವಿದರಿಗೆ ಸಕಲ ಸೌಕರ್ಯಗಳನ್ನೂ ಒದಗಿಸುವ ಮೂಲಕ ಇತರ ಮೇಳದ ಯಜಮಾನರಿಗೆ ಮಾದರಿಯಾಗಿದ್ದಾರೆ.

ಇದೀಗ ರಾಘವೇಂದ್ರ ಆಚಾರ್‌ ಜನ್ಸಾಲೆ ಅವರು ಕೂಡ ಇದೇ ಹಾದಿಯಲ್ಲಿ ಸಾಗುತ್ತಾರೆಂಬ ಚರ್ಚೆ ನಡೆಯುತ್ತಿದೆ. ಅಲ್ಲದೇ ಬಡಗಿನಲ್ಲಿ ಒಂದು ಮೇಳವನ್ನು ಕಟ್ಟಬೇಕೆಂಬ ಕೂಗು ಸಾಮಾಜಿಕ ಜಾಲತಾಣಗಳಲ್ಲಿ, ಅವರ ಅಭಿಮಾನಿ ವಲಯದಲ್ಲಿ ಕೇಳಿಬರುತ್ತಿದೆ. ಬಡಗುತಿಟ್ಟಿನಲ್ಲಿ ಬಯಲಾಟದ ಯಕ್ಷಗಾನ ಮೇಳಗಳ ಸಂಖ್ಯೆ ಸಾಕಷ್ಟಿವೆ. ಆದರೆ ಡೇರೆ ಮೇಳಗಳ ಸಂಖ್ಯೆ ಇರುವುದು ಕೇವಲ ಎರಡು ಮಾತ್ರ. ಸಾಲಿಗ್ರಾಮ ಮೇಳ ಐವತ್ತು ವರ್ಷಗಳ ತಿರುಗಾಟವನ್ನು ಪೂರೈಸಿದ್ರೆ, ಪೆರ್ಡೂರು ಮೇಳ ಮೂವತ್ತೈದು ವರ್ಷದ ತಿರುಗಾಟವನ್ನು ಪೂರೈಸಿದೆ. ಕಳೆದ ಮೂರು ವರ್ಷಗಳ ಹಿಂದೆ ಆರಂಭಗೊಂಡಿದ್ದ ವಿದ್ಯಾಧರ ಜಲವಳ್ಳಿ ಅವರ ಜಲವಳ್ಳಿ ಮೇಳ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿತ್ತಾದರೂ ಪ್ರಸ್ತುತ ಡೇರೆ ಮೇಳವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಈ ಹಿಂದೆ ಅಮೃತೇಶ್ವರಿ, ಶಿರಸಿ, ಮಂಗಳಾದೇವಿ ಮೇಳಗಳು ಡೇರೆ ಮೇಳಗಳಾಗಿ ತಿರುಗಾಟ ನಡೆಸಿವೆ. ಹೀಗಾಗಿ ತೆಂಕು ಬಡಗಿಗೆ ಮತ್ತೊಂದು ಡೇರೆ ಮೇಳ ಬೇಕು ಅನ್ನೋ ಬಗ್ಗೆಯೂ ಯಕ್ಷ ಪ್ರಿಯರಲ್ಲಿ ಚರ್ಚೆ ಶುರುವಾಗಿದೆ.

ಬಯಲಾಟ, ಡೇರೆ ಮೇಳಗಳ ಅಭಿಮಾನಿಗಳ ಅಭಿರುಚಿಯನ್ನು ಚೆನ್ನಾಗಿಯೇ ಅರಿತಿರುವ ರಾಘವೇಂದ್ರ ಆಚಾರ್‌ ಜನ್ಸಾಲೆ ಅವರು ಮತ್ತೊಂದು ಮೇಳ ಕಟ್ಟುವುದು ಕಷ್ಟದ ಕೆಲಸವೇನಲ್ಲ. ಸಮರ್ಥ ಹಿಮ್ಮೇಳದ ಜೊತೆಗೆ ಮುಮ್ಮೇಳವನ್ನು ಸಂಘಟಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಕರಾವಳಿ ಭಾಗದಲ್ಲಿ ಜನ್ಸಾಲೆ ಅವರ ಜನಪ್ರಿಯತೆಯಿಂದಾಗಿ ಸಕ್ಸಸ್‌ ಆಗೋದು ಅಷ್ಟು ಕಷ್ಟದ ಕೆಲಸವೇನಲ್ಲ. ಎರಡು ವರ್ಷಗಳ ಕಾಲ ಕೊರೊನಾ ಸಂಕಷ್ಟ ಎದುರಾಗಿದ್ದರೂ ಕೂಡ ಡೇರೆ ಮೇಳಗಳು ತಿರುಗಾಟವನ್ನು ಮುಗಿಸಿವೆ. ಪ್ರಸ್ತುತ ವರ್ಷ ಎರಡೂ ಮೇಳಗಳಿಗೂ ಸಾಕಷ್ಟು ಆಟಗಳು ಆರಂಭದಲ್ಲಿಯೇ ಬುಕ್‌ ಆಗಿವೆಯಂತೆ. ಹೀಗಾಗಿ ಮತ್ತೊಂದು ಡೇರೆ ಮೇಳ ಕರಾವಳಿ ಭಾಗಕ್ಕೆ ಅಗತ್ಯವಿದೆ ಅನ್ನೋ ಮಾತುಗಳೂ ಇವೆ. ಬಡಗುತಿಟ್ಟಿನಲ್ಲಿ ಎರಡು ಡೇರೆ ಮೇಳಗಳಿದ್ದರೂ ಕೂಡ, ತೆಂಕು ತಿಟ್ಟಿನಲ್ಲಿ ಸದ್ಯ ಯಾವುದೇ ಡೇರೆ ಮೇಳಗಳಿಲ್ಲ. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ ಜಿಲ್ಲೆಗಳಲ್ಲಿ ಹೆಚ್ಚು ಯಕ್ಷಗಾನ ಪ್ರಿಯರಿದ್ದಾರೆ. ಹೀಗಾಗಿ ಜನ್ಸಾಲೆ ಅವರು ಹೊಸ ಸಾಹಸಕ್ಕೆ ಕೈ ಹಾಕಿದ್ರೆ ಗೆಲುವು ಕಾಣಬಹುದು ಅನ್ನೋದು ಯಕ್ಷಗಾನ ವಿದ್ವಾಂಸರ ಅಭಿಪ್ರಾಯ.

ಹೊಸ ಮೇಳ ಆರಂಭವಾದ್ರೆ ಸಾಕಷ್ಟು ಕಲಾವಿದರಿಗೂ ಅನುಕೂಲವಾಗಲಿದೆ. ಇನ್ನೊಂದೆಡೆಯಲ್ಲಿ ಜನ್ಸಾಲೆ ಅವರಿಗಾಗಿಯೇ ಕಾದು ಕುಳಿತಿರುವ ಅಭಿಮಾನಿಗಳಿಗೆ ರಸದೌತಣ ಸಿಗಲಿದೆ. ಬೇರೆ ಯಜಮಾನರ ಕೈಗೊಂಬೆಯಾಗಿರುವ ಬದಲು ಸ್ವತಃ ಮೇಳವನ್ನು ಕಟ್ಟುವ ಉತ್ಸಾಹ ಜನ್ಸಾಲೆ ಅವರಿಗೆ ಇದ್ದಂತಿದೆ. ಇನ್ನೊಂದೆಡೆಯಲ್ಲಿ ಪಾವಂಜೆ ಮೇಳವನ್ನು ಕಟ್ಟಿ ಬೆಳೆಸಿರುವ ಸತೀಶ್‌ ಪಟ್ಲ ಅವರು ಕೂಡ ಜನ್ಸಾಲೆ ಅವರ ಹೊಸ ಸಾಹಸಕ್ಕೆ ಕೈ ಜೋಡಿಸುತ್ತಾರೆ ಅನ್ನೋ ಮಾತಿದೆ. ಈಗಾಗಲೇ ತೆಂಕು ತಿಟ್ಟಿನಲ್ಲಿ ಗೆಲುವಿನ ನಗೆಯನ್ನು ಬೀರಿರುವ ಪಟ್ಲ ಅವರು ಜನ್ಸಾಲೆ ಅವರಿಗೂ ಇದೇ ಸಲಹೆ ನೀಡಿದ್ದಾರೆ ಎನ್ನಲಾಗುತ್ತಿದೆ. ಜನ್ಸಾಲೆ ಅವರು ಈ ಬಾರಿ ಪೆರ್ಡೂರು ಮೇಳದಲ್ಲಿ ಇಲ್ಲಾ ಅನ್ನೋ ಸುದ್ದಿ ತಿಳಿಯುತ್ತಲೇ ಸಾಕಷ್ಟು ಮೇಳದ ಯಜಮಾನರು ಜನ್ಸಾಲೆ ಅವರನ್ನು ತಮ್ಮ ಮೇಳಕ್ಕೆ ಆಹ್ವಾನಿಸಿದ್ದಾರಂತೆ. ಆದರೆ ಜನ್ಸಾಲೆ ಅವರು ಈ ಬಾರಿ ಯಾವುದೇ ಮೇಳದಲ್ಲಿಯೂ ಪ್ರಧಾನ ಭಾಗವತರಾಗಿ ಕಾಣಿಸಿಕೊಳ್ಳುವುದಿಲ್ಲ ಎಂದಿದ್ದಾರೆ.

ಯಕ್ಷಗಾನರಂಗದಲ್ಲಿ ತನ್ನದೇ ಆದ ಅಭಿಮಾನಿ ಬಳಗವನ್ನು ಹೊಂದಿರುವ ರಾಘವೇಂದ್ರ ಆಚಾರ್‌ ಜನ್ಸಾಲೆ ಅವರನ್ನು NEWS NEXT ಕನ್ನಡದ ಮಾತನಾಡಿಸಿದ ಸಂದರ್ಭ ದಲ್ಲಿಯೂ ಹೊಸ ಮೇಳ ಕಟ್ಟುವ ಒತ್ತಾಯ ಅಭಿಮಾನಿಗಳ ವಲಯದಿಂದ ಕೇಳಿಬರುತ್ತಿದೆ. ಆದರೆ ನಾನು ಯಾವುದೇ ನಿರ್ಧಾರವನ್ನೂ ಕೈಗೊಂಡಿಲ್ಲ. ಈ ರೀತಿಯ ಚಿಂತನೆಯೂ ಇದೆ ಎಂದಿದ್ದಾರೆ. ಏನೇ ಆಗಲಿ ಜನ್ಸಾಲೆ ಅವರಂತಹ ಅಪ್ರತಿಮ ಕಲಾವಿದರ ಹೊಸ ಕನಸು ಕೈಗೂಡಲಿ ಅನ್ನೋದೆ ನಮ್ಮ ಆಶಯ.

ಇದನ್ನೂ ಓದಿ : Jansale : ಸತೀಶ್‌ ಪಟ್ಲರಿಗಾದ ಅನ್ಯಾಯ ರಾಘವೇಂದ್ರ ಜನ್ಸಾಲೆ ಅವರಿಗೂ ಆಯ್ತಾ ?

ಇದನ್ನೂ ಓದಿ : ರಾಘವೇಂದ್ರ ಜನ್ಸಾಲೆ ಅವರ ಸ್ಥಾನಕ್ಕೆ ಧಾರೇಶ್ವರ : ಪೆರ್ಡೂರು ಮೇಳದಲ್ಲಿ ಭಾರೀ ಬದಲಾವಣೆ

(Jansale Raghavendra Acharya Start New Yakshagana Mela )

Comments are closed.