Jansale : ಸತೀಶ್‌ ಪಟ್ಲರಿಗಾದ ಅನ್ಯಾಯ ರಾಘವೇಂದ್ರ ಜನ್ಸಾಲೆ ಅವರಿಗೂ ಆಯ್ತಾ ?

ಜನ್ಸಾಲೆ ರಾಘವೇಂದ್ರ ಆಚಾರ್‌ (Jansale Raghavendra Acharya). ಬಡಗುತಿಟ್ಟಿನ ಯಕ್ಷಗಾನ ಲೋಕದಲ್ಲಿ ಅಚ್ಚಳಿಯದ ಹೆಸರು. ಗುಂಡ್ಮಿ ಕಾಳಿಂಗ ನಾವಡರ ನಂತರದಲ್ಲಿ ಬಡಗುತಿಟ್ಟಿನ ಭಾಗವತಿಕೆಗೆ ಹೊಸ ಭಾಷ್ಯ ಬರೆದ ಅಪ್ರತಿಮ ಕಲಾವಿದ. ಬಯಲಾಟ, ಡೇರೆ ಮೇಳಗಳೆರಡರಲ್ಲೂ ಸೈ ಎನಿಸಿಕೊಂಡು ತಮ್ಮ ಗಾಯನ ದಿಂದಲೇ ಲಕ್ಷಾಂತರ ಮಂದಿಯ ಮನಗೆದ್ದವರು. ಪೆರ್ಡೂರು ಮೇಳವೆಂದ್ರೆ ಸಾಕು ಜನ್ಸಾಲೆ ಅನ್ನುವಷ್ಟರ ಮಟ್ಟಕ್ಕೆ ಪ್ರಸಿದ್ದಿ ಪಡೆದಿದ್ದವರು. ಆದ್ರೀಗ ಪೆರ್ಡೂರು ಮೇಳದಿಂದ ಜನ್ಸಾಲೆ ದೂರವಾಗಿದ್ದಾರೆ. ತೆಂಕು ತಿಟ್ಟಿನಲ್ಲಿ ಗಾನಗಂಧರ್ವ ಸತೀಶ್‌ ಪಟ್ಲರಿಗೆ (Sathish Patla) ಆದ ಅನ್ಯಾಯವೇ ಇದೀಗ ಜನ್ಸಾಲೆ ಅವರಿಗೂ ಆಯ್ತಾ ಅನ್ನೋ ಚರ್ಚೆ ಶುರುವಾಗಿದೆ.

ಹೌದು. ಕಟೀಲು ಮೇಳದ ಪ್ರಧಾನ ಭಾಗವತರಾಗಿದ್ದ ಪಟ್ಲ ಸತೀಶ್‌ ಶೆಟ್ಟಿ ( Sathish Patla ) ಅವರು ಕಟೀಲು ಮೇಳದ ರಂಗಮಂಚದಲ್ಲಿ ಕುಳಿತು ಭಾಗವತಿಕೆ ಮಾಡುತ್ತಿದ್ದ ಸಂದರ್ಭದಲ್ಲಿ ಅವರನ್ನು ಮೇಳದ ಯಜಮಾನರು ರಂಗಸ್ಥಳದಿಂದ ಹೊರ ನಡೆಯುವಂತೆ ಸೂಚನೆಯನ್ನು ನೀಡಿದ್ದರು. ಈ ಮೂಲಕ ಪಟ್ಲ ಅವರನ್ನು ಅವಮಾನಿಸಿ ಮೇಳದಿಂದ ಹೊರ ಹಾಕಲಾಗಿತ್ತು. ಇದರಿಂದ ಮನನೊಂದು ಪಟ್ಲ ಸತೀಶ್‌ ಶೆಟ್ಟಿ ಅವರು ನೇರವಾಗಿ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ದೇವಿಗೆ ಕೈ ಮುಗಿದು ತಾಳವನ್ನು ಕೆಳಗಿಟ್ಟಿದ್ದರು. ನಂತರದಲ್ಲಿ ಪಟ್ಲ ಅವರು ಪಾವಂಜೆ ಮೇಳವನ್ನು ಕಟ್ಟಿ ಸಕ್ಸಸ್‌ ಆಗಿರೋದು ಇತಿಹಾಸ. ಸತೀಶ್‌ ಪಟ್ಲ ಅವರಿಗೆ ಅನ್ಯಾಯವಾದಾಗ ಬಡಗು ತಿಟ್ಟಿನ ಕಲಾವಿದರ ಪೈಕಿ ಮೊದಲು ವಿರೋಧ ಮಾಡಿದ್ದು ಖ್ಯಾತ ಭಾಗವತರಾದ ಜನ್ಸಾಲೆ ರಾಘವೇಂದ್ರ ಆಚಾರ್.‌ ಆದ್ರೀಗ ಪಟ್ಲ ( Sathish Patla ) ರಂತೆ ಜನ್ಸಾಲೆ (Jansale) ಅವರಿಗೂ ಇಂತಹದ್ದೇ ಅನ್ಯಾಯವಾಗಿದೆ ಅನ್ನೋ ಮಾತು ಅಭಿಮಾನಿ ವಲಯದಲ್ಲಿ ಕೇಳಿಬರುತ್ತಿದೆ. ಈ ಕುರಿತು News Next ಕನ್ನಡದ ಜೊತೆ ಮಾತನಾಡಿರುವ ಜನ್ಸಾಲೆ ಅವರು ತಮ್ಮ ಮನದ ನೋವನ್ನು ಹಂಚಿಕೊಂಡಿದ್ದಾರೆ.

ನಿನ್ನ ದಾರಿ ನೋಡಿಕೋ ಎಂದ್ರು ಯಜಮಾನ್ರು !

ಸುಮಾರು ನಾಲ್ಕು ತಿಂಗಳ ಹಿಂದೆ ಮೇಳದ ಯಜಮಾನರು ನನ್ನ ಬಳಿಯಲ್ಲಿ ಕಲಾವಿದರು ಈ ಬಾರಿ ಮೇಳದ ಆಟ ಬಿಟ್ಟು ಇತರ ಕಾರ್ಯಕ್ರಮದಲ್ಲಿ ಭಾಗವಹಿಸುವಂತಿಲ್ಲ ಎಂದು ಹೇಳಿದ್ದರು. ಆದರೆ ನಾನೊಬ್ಬ ಬಡ ಕಲಾವಿದ, ಸಾಕಷ್ಟು ಹಣದ ಸಮಸ್ಯೆ ಇದೆ. ಹೀಗಾಗಿಯೇ ರಾತ್ರಿಯ ವೇಳೆಯಲ್ಲಿ ಪೆರ್ಡೂರು ಮೇಳದಲ್ಲಿ ಪ್ರಧಾನ ಭಾಗವತನಾಗಿ ಪ್ರಾಮಾಣಿಕ ವಾಗಿ ಕೆಲಸ ಮಾಡುತ್ತಿದ್ದೇನೆ. ಹಗಲಿನ ವೇಳೆಯಲ್ಲಿ ಅಭಿಮಾನಿಗಳು ಪ್ರೀತಿಯಿಂದ ಕರೆದ ಕಾರ್ಯಕ್ರಮಗಳಲ್ಲಿಯೂ ಭಾಗವಹಿಸುತ್ತಿದ್ದೇನೆ. ಇದರಿಂದ ಬರುತ್ತಿದ್ದ ಆದಾಯ ನನ್ನ ಕುಟುಂಬದ ನಿರ್ವಹಣೆ ಅನುಕೂಲವಾಗುತ್ತಿದೆ. ಹೀಗಾಗಿ ಅವಕಾಶವನ್ನು ನೀಡಿದ್ರೆ ನನಗೆ ಅನುಕೂಲವಾಗುತ್ತೆ ಅಂತಾ ಯಜಮಾನರ ಬಳಿಯಲ್ಲಿ ವಿನಂತಿಸಿಕೊಂಡಿದ್ದೆ. ಯಜಮಾನ್ರು ಆಯ್ತು, ಆದರೆ ಕಾರ್ಯಕ್ರಮದ ಸಂಘಟಕರು ನನ್ನನ್ನು ಸಂಪರ್ಕಿಸಿದ್ರೆ ನಾನೇ ನಿನ್ನನ್ನು ಕಳುಹಿಸುವ ವ್ಯವಸ್ಥೆಯನ್ನು ಮಾಡುತ್ತೇನೆ. ನನ್ನ ಗಮನಕ್ಕೆ ಬಾರದೆ ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸುವಂತಿಲ್ಲ ಎಂದು ತಿಳಿಸಿದ್ದರು.

ನಾನು ಅವರ ಕಂಡಿಷನ್‌ಗೆ ಒಪ್ಪಿ ಕೊಂಡಿದ್ದೆ. ಈ ನಡುವಲ್ಲೇ ಕಾರ್ಯಕ್ರಮವೊಂದರ ಆಯೋಜಕರು ನನಗೆ ಕರೆ ಮಾಡಿ ಕಾರ್ಯಕ್ರಮಕ್ಕೆ ಬರಬೇಕು ಅಂತಾ ಆಹ್ವಾನ ನೀಡಿದ್ರು. ಈ ವರ್ಷದ ಮಟ್ಟಿಗೆ ನಾನು ನಿಮ್ಮ ಕಾರ್ಯಕ್ರಮಕ್ಕೆ ಬರಬೇಕಾದ್ರೆ, ನಮ್ಮ ಯಜಮಾನರ ಬಳಿಯಲ್ಲಿ ಮಾತಾಡಬೇಕು. ಅವರೇ ಕಳುಹಿಸಿಕೊಡುವ ವ್ಯವಸ್ಥೆ ಮಾಡಿದ್ದಾರೆ. ಹೀಗಾಗಿ ನೀವು ಅವರ ಜೊತೆ ಮಾತನಾಡಿ ಅಂತಾ ಹೇಳಿದ್ದೆ. ಹೀಗಾಗಿ ಕಾರ್ಯಕ್ರಮದ ಸಂಯೋಜಕರು ಯಜಮಾನರಿಗೆ ಕರೆ ಮಾಡಿ ಮಾತನಾಡಿದ್ದಾರೆ. ಈ ವೇಳೆಯಲ್ಲಿ ಯಜಮಾನರು ಕಳುಹಿಸೋದಕ್ಕೆ ಆಗೋದಿಲ್ಲ. ಮೇಳಕ್ಕೆ ಹೊಡೆತ ಬೀಳುತ್ತೆ. ಇವತ್ತು ನೀವು ಕರೆ ಮಾಡ್ತೀರಿ, ನಾಳೆ ಇನ್ನೊಬ್ಬರು ಕರೆಯುತ್ತಾರೆ ಎಂದು ಹೇಳಿದ್ದರಂತೆ. ಅವರು ನೊಂದು ಕೊಂಡು ನನಗೆ ವಿಷಯ ಹೇಳಿದ್ರು.

ಹೀಗಾಗಿ ನಾನು ಯಜಮಾನರ ಬಳಿಯಲ್ಲಿ ಮಾತನಾಡಿದೆ. ಅಭಿಮಾನದಿಂದ ಕರೆಯುವಾಗ ಬರೋದಿಲ್ಲಾ ಅಂತ ಹೇಳಿದ್ರೆ ಅಭಿಮಾನಿಗಳು ಕಲಾವಿದರ ಬಗ್ಗೆ ತಪ್ಪಾಗಿ ತಿಳಿಯುತ್ತಾರೆ ಅಂತಾ ಹೇಳಿದೆ. ಆದರೆ ಯಜಮಾನವರು ಹಗಲಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸೋದಕ್ಕೆ ಸಾಧ್ಯವಿಲ್ಲ ಅಂತಾ ಹೇಳಿದ್ರು. ಈ ವೇಳೆಯಲ್ಲಿ ಇಬ್ಬರಿಗೂ ಒಂದೆರಡು ಮಾತೂ ಆಗಿತ್ತು. ನಂತರದಲ್ಲಿ ನಾನೂ ಈ ವರ್ಷ ಮೇಳದ ಆಟ ಬಿಟ್ಟು ಬೇರೆ ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸಬಾರದು ಎಂದು ಅಂದು ಕೊಂಡಿದ್ದೆ. ಮೇಳದ ಯಜಮಾನರಾದ ಕರುಣಾಕರ ಶೆಟ್ಟಿ ಅವರಿಗೆ ಮಾತು ಕೊಡುವುದು ಒಂದೇ ಪೆರ್ಡೂರು ಅನಂತ ಪದ್ಮನಾಭನಿಗೆ ಮಾತು ಕೊಡುವುದು ಒಂದೇ ಅಂತಾ ಭಾವಿಸಿಕೊಂಡು ಪೆರ್ಡೂರು ಮೇಳದಲ್ಲಿಯೇ ಸೇವೆ ಮುಂದುವರಿಸಬೇಕು ಅಂತಾ ನಿರ್ಧಾರ ಮಾಡಿಕೊಂಡಿದ್ದೆ.

ಈ ನಡುವಲ್ಲೇ ಸಾಕಷ್ಟು ಅಭಿಮಾನಿಗಳು ಕೂಡ ಯಾವುದೇ ಕಾರಣಕ್ಕೂ ನೀವು ಮೇಳ ಬಿಡಬೇಡಿ ಅಂತಾ ಹೇಳಿದ್ದರು. ಆದರೆ ಮೇಳದ ಯಜಮಾನರು ನನಗೆ ಮರು ದಿನ ಕರೆ ಮಾಡಿದ್ರು. ನಮ್ಮ ಮೇಳದಲ್ಲಿದ್ರೆ ನಿನಗೆ ಬೇರೆ ಕಾರ್ಯಕ್ರಮಕ್ಕೆ ಹೋಗೋದಕ್ಕೆ ಕಷ್ಟವಾಗುತ್ತೆ. ನೀನು ಮುಖ ಕಪ್ಪು ಮಾಡಿಕೊಂಡು ನನ್ನ ಮೇಳದಲ್ಲಿ ಇರುವುದು ಬೇಡಾ. ನಿನ್ನ ದಾರಿ ನೀನು ನೋಡಿಕೋ ಎಂದು ಹೇಳಿದ್ರು. ನಾನು ಟ್ರಯಲ್ಸ್‌ಗೆ ಬರ್ತೇನೆ ಅಂತಾ ಹೇಳಿದೆ, ನೀನು ಬರೋದು ಬೇಡಾ ಅಂತಾ ಹೇಳಿ ಪೋನ್‌ ಕಟ್‌ ಮಾಡಿದ್ರು. ಹಗಲಿನ ವೇಳೆಯಲ್ಲಿ ಎಷ್ಟೇ ಕಾರ್ಯಕ್ರಮಗಳು ಇದ್ದರೂ ಕೂಡ ರಾತ್ರಿ 1.30 ನಿಮಿಷಕ್ಕೆ ನಾನು ಪೆರ್ಡೂರು ಮೇಳದ ರಂಗಸ್ಥಳದಲ್ಲಿ ಹಾಜರಿರುತ್ತಿದ್ದೆ. ಯಾವುದೇ ಕಾರಣಕ್ಕೂ ಪೆರ್ಡೂರು ಮೇಳಕ್ಕೆ ಅನ್ಯಾಯ ಮಾಡಿಲ್ಲ. ನಾನು ಮೇಳಕ್ಕಾಗಿ, ಹೊಸ ಪ್ರಸಂಗವನ್ನು ಗೆಲ್ಲಿಸೋದಕ್ಕೆ ಸಾಕಷ್ಟು ಶ್ರಮವಹಿಸಿದ್ದೇನೆ ಎಂದು ನೊಂದು ನುಡಿಯುತ್ತಾರೆ ಜನ್ಸಾಲೆ.

ಬೇರೆ ಕಲಾವಿದರಿಗೆ ಅನ್ಯಾಯ ಮಾಡಲಾರೆ, ಈ ವರ್ಷ ಯಾವುದೇ ಮೇಳಕ್ಕೂ ಹೋಗಲಾರೆ

ಪೆರ್ಡೂರು ಮೇಳದಲ್ಲಿ ನಾನು ಈ ಬಾರಿ ಭಾಗವಹಿಸುತ್ತಿಲ್ಲ ಅನ್ನೋ ಸುದ್ದಿ ತಿಳಿಯುತ್ತಲೇ ಸುಮಾರು ಎರಡು ಸಾವಿರಕ್ಕೂ ಅಧಿಕ ಮಂದಿ ಕರೆ ಮಾಡಿದ್ದಾರೆ. ಕಲಾವಿದರು, ಅಭಿಮಾನಿಗಳು ನನ್ನೊಂದಿಗೆ ಪ್ರೀತಿಯಿಂದ ಮಾತನಾಡಿದ್ದಾರೆ. ಅದ್ರಲ್ಲೂ ಬಹುತೇಕ ಮೇಳಗಳಿಂದ ನನಗೆ ಆಫರ್‌ ಬಂದಿದೆ. ಆದರೆ ಎಲ್ಲರಲ್ಲಿಯೂ ಒಂದೇ ಮಾತನ್ನು ಹೇಳಿದ್ದೇನೆ. ಈಗಾಗಲೇ ಕಲಾವಿದರನ್ನು ನೇಮಕ ಮಾಡಿಕೊಂಡು ಸೇವೆ ನೀಡಲು ಸಜ್ಜಾಗಿದ್ದೀರಿ, ಈ ಹೊತ್ತಲ್ಲಿ ನಾನು ನಿಮ್ಮ ಮೇಳಕ್ಕೆ ಬಂದು ಇತರ ಕಲಾವಿದರ ತುತ್ತನ್ನು ಕಸಿದುಕೊಳ್ಳಲಾರೆ. ಹೀಗಾಗಿ ಈ ಒಂದು ವರ್ಷದ ಮಟ್ಟಿಗೆ ಯಾವುದೇ ಮೇಳಕ್ಕೆ ನಾನು ಬರುವುದಿಲ್ಲ. ಒಂದೊಮ್ಮೆ ಕಲಾವಿದರಿಗೆ ಯಾವುದೇ ಸಮಸ್ಯೆ ಇಲ್ಲ ಅಂತಾದ್ರೆ ಅತಿಥಿಯಾಗಿ, ಗೌರವಯುತವಾಗಿ ಬರುತ್ತೇನೆ ಎಂದು ತಿಳಿಸಿದ್ದೇನೆ. ನಾನು ಈ ಬಾರಿ ಯಾವುದೇ ಮೇಳಕ್ಕೆ ಪ್ರಧಾನ ಭಾಗವತನಾಗಿ ಹೋದ್ರು ಓರ್ವ ಕಲಾವಿದನಾಗಿ ನನ್ನದು ತಪ್ಪಾಗುತ್ತೆ ಎಂದಿದ್ದಾರೆ.

ಓರ್ವ ಕಲಾವಿದನಾಗಿ ಮತ್ತೋರ್ವ ಕಲಾವಿದನಿಗೆ ಅನ್ಯಾಯವಾಗ ಬಾರದು ಅನ್ನೋ ಜನ್ಸಾಲೆ ಅವರ ಮಾತನ್ನು ನಿಜಕ್ಕೂ ಮೆಚ್ಚಲೇ ಬೇಕು. ಮೇಳ ತಿರುಗಾಟಕ್ಕೆ ಹೊರಡುವ ಒಂದು ವಾರದ ಮೊದಲು ಜನ್ಸಾಲೆ (Jansale) ಅವರನ್ನು ಮೇಳದಿಂದ ತೆಗೆದಿರುವುದು ಲಕ್ಷಾಂತರ ಅಭಿಮಾನಿಗಳಿಗೆ ಬೇಸರವನ್ನುಂಟು ಮಾಡಿದೆ. ಸತೀಶ್‌ ಪಟ್ಲ ಅವರನ್ನು ರಂಗಸ್ಥಳದಿಂದಲೇ ಕೆಳಗೆ ಇಳಿಸಿದ್ರೆ ಜನ್ಸಾಲೆ ಅವರನ್ನು ಮೇಳ ಹೊರಡುವುದಕ್ಕೆ ಮೊದಲು ಹೊರ ನಡೆಯುವಂತೆ ಮಾಡುವ ಮೂಲಕ ಅನ್ಯಾಯವೆಸಗಲಾಗಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಎಲ್ಲಾ ರಂಗದಲ್ಲಿಯೂ ಮನಸ್ಥಾಪಗಳು ಸಹಜ, ವೀಳ್ಯ ಪಡೆದ ಮೇಲೆ ಒಂದು ವರ್ಷದ ಮಟ್ಟಿಗಾದರೂ ಜನ್ಸಾಲೆ ಅವರನ್ನು ಮುಂದುವರಿಸಬಹುದಿತ್ತು. ಆದರೆ ನಡು ನೀರಲ್ಲಿ ಕೈ ಬಿಟ್ಟಿರುವುದು ಸರಿಯಲ್ಲ ಅನ್ನೋ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಯಕ್ಷಗಾನದಲ್ಲಿ ಅತ್ಯಂತ ಶಿಸ್ತನ್ನು ಮೈಗೂಡಿಸಿಕೊಂಡಿದ್ದ ಜನ್ಸಾಲೆ ಅವರು, ತನ್ನ ಕಲಾನೈಪುಣ್ಯತೆಯಿಂದಲೇ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವ ಕಲೆಯನ್ನು ಕರಗತ ಮಾಡಿಕೊಂಡಿದ್ದರು. ಎದುರಲ್ಲಿ ಎಷ್ಟೇ ಪ್ರೇಕ್ಷಕರಿದ್ದರೂ ಕೂಡ ತಮ್ಮ ಸ್ವರ ಮಾಧುರ್ಯವನ್ನು ಒಂದು ದಿನವೂ ಬದಲಾಯಿಸಿದವರಲ್ಲ, ಡೇರೆ ಆಟವೇ ಇರಲಿ, ಬಯಲಾಟವೇ ಇರಲಿ ಕಲಾಮಾತೆಯ ಸೇವೆಯನ್ನು ಪ್ರಾಮಾಣಿಕತೆಯಿಂದ ಮಾಡಿದ್ದಾರೆ. ಒಟ್ಟಿನಲ್ಲಿ ತಮ್ಮ ಗಾಯನದ ಮೂಲಕವೇ ಕರ್ನಾಟಕ ಮಾತ್ರವಲ್ಲದೇ ದೇಶ, ವಿದೇಶಗಳಲ್ಲಿಯೂ ಪ್ರಖ್ಯಾತಿ ಪಡೆದಿರುವ ಜನ್ಸಾಲೆಯಂತಹ ಅಪ್ರತಿಮ, ಪ್ರಾಮಾಣಿಕ ಕಲಾವಿದರಿಗೆ ಹೀಗೆ ಆಗಿರುವುದು ನಿಜಕ್ಕೂ ದುರಂತವೇ ಸರಿ.

ಇದನ್ನೂ ಓದಿ : ಆರಾಧ್ಯ ಗಾನದೇವತೆಯೇ ಮತ್ತೊಮ್ಮೆ ನಮಗಾಗಿ ಹುಟ್ಟಿ ಬರುವಿರಾ

ಇದನ್ನೂ ಓದಿ : ಗಿಡನೆಟ್ಟು ಸರಳವಾಗಿ ಹುಟ್ಟುಹಬ್ಬ ಆಚರಣೆ : ಕರಾವಳಿಯಲ್ಲಿ ವೃಕ್ಷ ಪ್ರೇಮಿ ಪೊಲೀಸ್‌ ಅಧಿಕಾರಿ

(Raghavendra Jansale is also Injustice to Bhagavata Satish Patla in the Yakshagana)

Comments are closed.