ಚಿಕ್ಕಬಳ್ಳಾಪುರ : ನೋಡೋದಕ್ಕೆ ಅದೊಂದು ಅಂಗನವಾಡಿ ಕೇಂದ್ರ. ಆದರೆ ಇಕ್ಕಟ್ಟಾದ ಕೋಣೆಯಲ್ಲಿ ಮಕ್ಕಳು ಕಷ್ಟಪಟ್ಟು ವಿದ್ಯಾಭ್ಯಾಸ ನಡೆಸುತ್ತಿದ್ದಾರೆ. ಚಿಕ್ಕಬಳ್ಳಾಪುರ ನಗರದ (Chikkaballapur Town) ವಾಪಸಂದ್ರದಲ್ಲಿರುವ ಅಂಗನವಾಡಿ ಕೇಂದ್ರಕ್ಕೆ (Vapasandra Anganavadi Center) ಹಿರಿಯ ಸಿವಿಲ್ ನ್ಯಾಯಾಧೀಶರಾದ ಅರುಣಾ ಕುಮಾರಿ ( Senior Civil Judge Aruna Kumari) ಅವರು ಭೇಟಿ ನೀಡಿ, ಮಕ್ಕಳ ದುಸ್ಥಿತಿ ಕಂಡು ಮರುಗಿದ್ದಾರೆ.
ಇಕ್ಕಟ್ಟಾದ ಕೊಠಡಿಯಲ್ಲಿ ಕುಳಿತು ಪಾಠ ಕೇಳುತ್ತಿರುವ ಮಕ್ಕಳು. ಎಲ್ಲೆಂದರಲ್ಲಿ ಬಿದ್ದಿರುವ ಆಹಾರ ಸಾಮಗ್ರಿಗಳು. ಆಟವಾಡಲು ಸಾಧ್ಯವಾಗದೇ ಅಸಹಾಯಕರಾಗಿ ಕುಳಿತ ಪುಟಾಣಿಗಳು. ಇಂತಹ ದಯನೀಯ ಸ್ಥಿತಿ ಕಂಡು ಬಂದಿರುವುದು ಚಿಕ್ಕಬಳ್ಳಾಪುರದ ವಾಪಸಂದ್ರ ಅಂಗನವಾಡಿ ಕೇಂದ್ರದಲ್ಲಿ.
ಚಿಕ್ಕಬಳ್ಳಾಪುರದ ವಾಪಸಂದ್ರ ಅಂಗನವಾಡಿ ಕೇಂದ್ರಕ್ಕೆ ಚಿಕ್ಕಬಳ್ಳಾಪುರ ಜಿಲ್ಲಾ ಕಾನೂನು ಮತ್ತು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾಯಾಧೀಶೆ ಅರುಣಾ ಕುಮಾರಿ ಅವರು ದಿಢೀರ್ ಭೇಟಿ ನೀಡಿದ್ದಾರೆ. ಅಲ್ಲದೇ ಅಂಗನವಾಡಿ ಕೇಂದ್ರದಲ್ಲಿರುವ ಮಕ್ಕಳಿಂದ ಸಮಸ್ಯೆಯನ್ನು ಆಲಿಸಿದ್ದಾರೆ.
ಇದನ್ನೂ ಓದಿ : ಟ್ಯೂಶನ್ ಮಾಫಿಯಾಗೆ ಬೀಳುತ್ತಾ ಕಡಿವಾಣ: ಸರ್ಕಾರದಿಂದ ಹೊರಬಿತ್ತು ಖಡಕ್ ಆದೇಶ
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿದ್ದೇನೆ. ಈ ವೇಳೆಯಲ್ಲಿ ಮಕ್ಕಳು ತಮ್ಮ ಸಮಸ್ಯೆಯನ್ನು ಹೇಳಿಕೊಂಡಿದ್ದಾರೆ. ಹಂದಿಗೂಡಿನಂತಹ ಕೊಠಡಿಯಲ್ಲಿ ಮಕ್ಕಳು ವಿದ್ಯಾಭ್ಯಾಸವನ್ನು ಪಡೆಯುತ್ತಿದ್ದಾರೆ. ಆಟದ ಮೈದಾನವಿಲ್ಲದ ಹಿನ್ನೆಲೆಯಲ್ಲಿ ಆಟವಾಡಲು ಆಗುತ್ತಿಲ್ಲ.
ಮಕ್ಕಳು ಸಣ್ಣ ಕೊಠಡಿಯಲ್ಲಿ ಶೂರೂಂನಲ್ಲಿ ಇರಿಸಿರುವ ಗೊಂಬೆಗಳ ರೀತಿಯಲ್ಲಿ ಕಾಣಿಸುತ್ತಿದ್ದಾರೆ. ಅಂಗನವಾಡಿ ಕೇಂದ್ರ ಆರಂಭಿಸಲು ಕೇವಲ ೩ ರಿಂದ ೪ ಸಾವಿರ ರೂಪಾಯಿ ಅನುದಾನವನ್ನು ಬಿಡುಗಡೆ ಮಾಡಲಾಗಿತ್ತು. ಇದೇ ಕಾರಣಕ್ಕೆ ಕನಿಷ್ಠ ಅನುದಾನದಲ್ಲಿ ಸಿಕ್ಕ ಕಟ್ಟಡದಲ್ಲಿ ಅಂಗನವಾಡಿ ಆರಂಭಿಸಲಾಗಿದೆ. ಆದರೆ ೨೦ ಮಕ್ಕಳಿಗೆ ಇಷ್ಟು ಸಣ್ಣ ಕೊಠಡಿಯಲ್ಲಿ ಇರೋದಕ್ಕೆ ಕಷ್ಟಕರವಾಗುತ್ತಿದೆ ಎಂದಿದ್ದಾರೆ.
ಅಂಗನಾಡಿ ಕೇಂದ್ರದಲ್ಲಿ ಆಹಾರ ಸಾಮಗ್ರಿಗಳ ಜೊತೆಗೆ ಗ್ಯಾಸ್ ಸ್ಟೌವ್ ಇರಿಸಲಾಗಿದೆ. ಈ ವೇಳೆಯಲ್ಲಿ ಅಂಗನವಾಡಿ ಶಿಕ್ಷಕರು ಹಾಗೂ ಸಹಾಯಕಿಯಿಂದಲೂ ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ಮಕ್ಕಳಿಗೆ ಸುಸಜ್ಜಿತವಾದ ವ್ಯವಸ್ಥೆಯನ್ನು ಕಲ್ಪಿಸುವಂತೆ ನ್ಯಾಯಾಧೀಶರಾದ ಅರುಣಾ ಕುಮಾರಿ ಅವರು ಸೂಚನೆಯನ್ನು ನೀಡಿದ್ದಾರೆ.
ಇದನ್ನೂ ಓದಿ : ರೇಷನ್ ಕಾರ್ಡ್ ತಿದ್ದುಪಡಿಗೆ ಈ ದಾಖಲೆಗಳು ಕಡ್ಡಾಯ
ಚಿಕ್ಕಬಳ್ಳಾಪುರ ನಗರದಲ್ಲಿರುವ ವಾಪಸಂದ್ರ ಅಂಗನಾಡಿ ಕೇಂದ್ರ ಮಾತ್ರವಲ್ಲ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಇಂತಹ ಸಾಕಷ್ಟು ಅಂಗನವಾಡಿ ಕೇಂದ್ರಗಳು ಸಮಸ್ಯೆಯನ್ನು ಎದುರಿಸುತ್ತಿವೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕರು ಸೇರಿದಂತೆ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸಬೇಕಾದ ಅಗತ್ಯವಿದೆ.
ಬಡ ಮಕ್ಕಳಿಗೆ ಶಾಲಾ ಶಿಕ್ಷಣಕ್ಕೂ ಪೂರ್ವದಲ್ಲೇ ಅಕ್ಷರದ ಜ್ಞಾನ ಕಲಿಸುವ ಸಲುವಾಗಿ ರಾಜ್ಯ ಸರಕಾರ ಅಂಗನಾಡಿ ಕೇಂದ್ರಗಳನ್ನು ಆರಂಭಿಸಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಈ ಅಂಗನವಾಡಿ ಕೇಂದ್ರಗಳ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದೆ. ಆದರೆ ಅಧಿಕಾರಿಗಳ ಅಸಡ್ಡೆಯಿಂದಾಗಿ ಅಂಗನವಾಡಿ ಕೇಂದ್ರಗಳು ಬಾಗಿಲು ಮುಚ್ಚುವ ಸ್ಥಿತಿಯಲ್ಲಿವೆ.
ಆಂಗ್ಲ ಮಾಧ್ಯಮ ಶಿಕ್ಷಣದಿಂದಾಗಿ ಕನ್ನಡ ಸರಕಾರಿ ಶಾಲೆಗಳು ಬಾಗಿಲು ಮುಚ್ಚುವ ಪರಿಸ್ಥಿತಿಯಿದೆ. ಅಂಗನವಾಡಿ ಕೇಂದ್ರಗಳ ಮೂಲಕ ಕನ್ನಡ ಸರಕಾರಿ ಶಾಲೆಗಳತ್ತ ಮಕ್ಕಳನ್ನು ಆಕರ್ಷಿಸಲು ಸಾಧ್ಯವಾಗುತ್ತಿದೆ. ಈ ನಿಟ್ಟಿನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಮಾತ್ರವಲ್ಲ ಶಿಕ್ಷಣ ಇಲಾಖೆ ಕೂಡ ಈ ಕಡೆಗೆ ಗಮನ ಹರಿಸಬೇಕಾಗಿದೆ.
Chikkaballapur Town Vapasandra Anganavadi Center Visit Senior Civil Judge Aruna Kumari