ಮರೆಯಾದ ಮೂಕಪ್ಪಜ್ಜ, ಕಲಿಯುಗದ ಪ್ರತ್ಯಕ್ಷ ನಂದಿ ಇನ್ನಿಲ್ಲ

ಹುಬ್ಬಳ್ಳಿ-ಧಾರವಾಡ ಹೈವೇಯಲ್ಲಿ ಹೋಗುವಾಗ ಕಾಣಸಿಗೋ ದೇಗುಲ ಧಾರವತಿ. ಇದು ಆಂಜನೇಯನಿಗೆ ಸಮರ್ಪಣೆ ಆಗಿರುವ ದೇಗುಲ, ಆದರೆ ಇಲ್ಲಿ ಆಂಜನೇಯನಿಗಿಂತ ಪ್ರಖ್ಯಾತಿ ಪಡೆದಿದ್ದು ಒಂದು ಎತ್ತು! ಹೌದು, ಅದರ ಹೆಸರು ಮೂಕಪ್ಪಜ್ಜ ಎಂದು.
ಹೌದು, ಕಳೆದ ಎಂಟು ವರ್ಷಗಳ ಹಿಂದೆ ಒಬ್ಬ ಭಕ್ತರು ಇಲ್ಲಿ ಎತ್ತನ್ನು ಹರಕೆಯ ರೂಪದಲ್ಲಿ ತಂದು ಕಟ್ಟಿ ಹೋಗಿದ್ದರು. ಅರ್ಚಕ ನಾಗಪ್ಪ ಪೂಜಾರಿಯ ಆರೈಕೆಯಲ್ಲಿ ಬೆಳೆದ ಎತ್ತು ಚಮತ್ಕಾರವೆಂಬಂತೆ ದಿನವೂ ದೇಗುಲದ ಪ್ರದಕ್ಷಿಣೆ, ಗರ್ಭಗುಡಿಗೆ ಹೋಗಿ ಆಂಜನೇಯನ ಕಾಲಿಗೆ ಬೀಳುವುದು, ಉದ್ದಂಡ ನಮಸ್ಕಾರ, ದೀರ್ಘ ದಂಡ ನಮಸ್ಕಾರ ಮಾಡಲು ಶುರು ಮಾಡಿತು.
ಋಷಿಯಾದ ಜಡಭರತ ಕೊನೆಗಾಲದಲ್ಲಿ ಒಂದು ಜಿಂಕೆಯ ಸ್ಮರಣೆ ಮಾಡಿ ಜಿಂಕೆಯಾಗಿಯೇ ಮರುಜನ್ಮ ಪಡೆದನಂತೆ ಇದು ಭಾಗವತದ ಉಲ್ಲೇಖ. ಹಾಗೆಯೇ ಯಾವುದೋ ಕಾಲದ ಆಂಜನೇಯ ಭಕ್ತನಾಗಿದ್ದ ಸಾತ್ವಿಕ ಸಿದ್ಧಿ ಪುರುಷನೇ ಈ ಎತ್ತಿನ ರೂಪದಲ್ಲಿ ಹುಟ್ಟಿರಬಹುದು ಎಂದು ಜನ ಮಾತನಾಡಿಕೊಳ್ಳುತ್ತಿದ್ದರು.
ಈ ಎತ್ತು ಇಲ್ಲಿ ಬಂದವರಿಗೆ ಕಾಲುಗಳನ್ನೆತ್ತಿ ಆಶೀರ್ವಾದ ಮಾಡುತ್ತಿತ್ತು, ಏನಾದರೂ ಹರಕೆ ಬೇಡಿಕೊಂಡು ಇದರ ಕಾಲಡಿ ಮಲಗಿಕೊಂಡರೆ, ಮೂಕಪಜ್ಜ ನಿಮ್ಮನ್ನು ದಾಟಿದನೆಂದರೆ ನೀವು ಗೆದ್ದಿರಿ ಎಂದರ್ಥ. ಅಷ್ಟೆಲ್ಲಾ ಪವಾಡಗಳನ್ನು ಮಾಡಿತ್ತು..
ಧಾರಾವತಿಗೆ ಬಂದರೆ ಗರುಡಗಂಭದ ಪಕ್ಕದಲ್ಲೇ ಈ ಎತ್ತಿನ ಆವಾಸ, ಈ ರೀತಿಯ ಸಾತ್ವಿಕ ಗುಣದ ಬಂದವರಿಗೆಲ್ಲಾ ಒಳ್ಳೆಯದನ್ನೇ ಮಾಡಿದ ಸಂತನ ರೂಪದ ಎತ್ತೊಂದು ಇಂದು ನಮ್ಮನ್ನೆಲ್ಲಾ ಬಿಟ್ಟು ಅಗಲಿದೆ. ಹೌದು ಮೊನ್ನೆ ಕಟ್ಟಿದಲ್ಲೇ ಹೃದಯಾಘಾತವಾಗಿ ಜೀವ ಬಿಟ್ಟ ಈ ನಂದಿಗೆ ಇಂದು ಧಾರವಾಡ ಸೇರಿದಂತೆ ಉತ್ತರ ಕರ್ನಾಟಕ ಕಂಬನಿ ಮಿಡಿದಿದೆ.
ನಿನ್ನೆಯಿಂದಲೇ ಸಾಗರೋಪಾದಿಯಲ್ಲಿ ನಂದಿಯ ಭಕ್ತರು ಜಮಾಯಿಸುತ್ತಿದ್ದು ತಮ್ಮ ಜೀವನಕ್ಕೆ ಒಳ್ಳೆಯದನ್ನು ಮಾಡಿದ ಮೂಕಪ್ಪಜ್ಜನ ಕೊನೆಯ ದರ್ಶನ ಪಡೆಯುತ್ತಿದ್ದಾರೆ. ಕೇವಲ 8 ವರ್ಷದ ಪ್ರಾಯದಲ್ಲಿ ಜಗತ್ತಿನ ಕಲ್ಯಾಣ ಮಾಡಿ ಕೈಲಾಸಕ್ಕೆ ಸಂದಿದ ಈ ಪ್ರಾಣಿ ಮನುಷ್ಯರಿಗೆ ಆದರ್ಶ ಅಲ್ಲದೇ ನಾವು ಪುರಾಣ-ಪುಣ್ಯಕಥೆಗಳಲ್ಲಿ ಓದುವ ಕಾರ್ಣಿಕದ ಕಥೆಗಳ ಸಾದೃಶ ರೂಪ.
ಇನ್ನು ಮೇಲೆ ಧಾರಾವತಿಯಲ್ಲಿ ಮೂಕಪ್ಪಜ್ಜ ದೈಹಿಕವಾಗಿ ಇರೋದಿಲ್ಲ. ಆದರೆ ಆ ದೈವೀಕ ನಂದಿಯ ಪ್ರಭಾ ವಲಯ ನಿಮ್ಮನ್ನು ತಾಕದೇ ಇರದು. ಅಲ್ಲಿಯೇ ಈ ನಂದಿಗೆ ಗುಡಿ ಕಟ್ಟಲು ಯೋಚನೆ ಮಾಡಲಾಗುತ್ತಿದೆ. ಒಟ್ಟಿನಲ್ಲಿ ಇದು ಹೃದಯ ಭಾರವಾಗಿಸುವ ಸಂಗತಿ ಎಂದರೆ ತಪ್ಪಿಲ್ಲ!



