Elephant Died: ರಾಮನಗರದ ಹಾರೋಬೆಲೆ ಆಣೆಕಟ್ಟಿನ ಹಿನ್ನೀರಿನಲ್ಲಿ 2 ಕಾಡಾನೆಗಳು ಬಲಿ
ರಾಮನಗರ/ಕನಕಪುರ: ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನಲ್ಲಿ ಒಂದು ದುಃಖಕರ ಘಟನೆ ವರದಿಯಾಗಿದ್ದು, ಅರ್ಕಾವತಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಹಾರೋಬೆಲೆ ಡ್ಯಾಂನ ಹಿನ್ನೀರಿನಲ್ಲಿ ಮುಳುಗಿ ಎರಡು ಕಾಡಾನೆಗಳು ಸಾವನ್ನಪ್ಪಿವೆ.
ಕನಕಪುರ ತಾಲೂಕಿನ ಸಾತನೂರು ಅರಣ್ಯ ವ್ಯಾಪ್ತಿಯ ಕೂನೂರು ಗ್ರಾಮದ ಬಳಿಯ ಜಲಾಶಯದ ಹಿನ್ನೀರಿನಲ್ಲಿ ಎರಡು ಗಂಡಾನೆಗಳ ಕಳೇಬರ ಪತ್ತೆಯಾಗಿದ್ದು, ಸ್ಥಳೀಯರಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ. ಸಾಮಾನ್ಯವಾಗಿ ಆಹಾರ ಮತ್ತು ನೀರನ್ನು ಅರಸಿ ನಾಡಿನ ಕಡೆ ಬರುವ ಈ ಆನೆಗಳು, ಒಂದು ವಾರದಿಂದ ಈ ಪ್ರದೇಶದ ಸುತ್ತಮುತ್ತ ಸಂಚರಿಸುತ್ತಿದ್ದವು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ವರದಿಗಳ ಪ್ರಕಾರ, ಈ ಎರಡು ಗಂಡಾನೆಗಳು ನದಿ ದಾಟಲು ಪ್ರಯತ್ನಿಸುತ್ತಿದ್ದಾಗ ನೀರಿನಲ್ಲಿ ಹುಲುಸಾಗಿ ಬೆಳೆದಿದ್ದ ದಟ್ಟವಾದ ಜೊಂಡು (ಜಲಸಸ್ಯ) ಅಥವಾ ಕೆಸರಿನಲ್ಲಿ ಸಿಲುಕಿಕೊಂಡಿವೆ. ಇದರಿಂದಾಗಿ ಅವುಗಳಿಗೆ ಈಜಿ ದಡ ಸೇರಲು ಸಾಧ್ಯವಾಗದೆ ಉಸಿರುಗಟ್ಟಿ ಸಾವನ್ನಪ್ಪಿರುವ ಸಾಧ್ಯತೆ ಇದೆ. ಈ ಆನೆಗಳ ವಯಸ್ಸು ಸುಮಾರು ಹದಿನೈದರಿಂದ ಇಪ್ಪತ್ತು ವರ್ಷಗಳಿರಬಹುದು ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ: ಐಪಿಎಲ್ ಬಗ್ಗೆ ಬಿಗ್ ಅಪ್‌ಡೇಟ್
ಸಾವಿನ ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ, ಗ್ರಾಮಸ್ಥರ ಸಹಕಾರದೊಂದಿಗೆ ಕಳೇಬರಗಳನ್ನು ನೀರಿನಿಂದ ಹೊರತೆಗೆಯುವ ಕಾರ್ಯವನ್ನು ನಡೆಸಿದರು. ವನ್ಯಜೀವಿ ತಜ್ಞರ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ, ಆನೆಗಳ ಸಾವಿಗೆ ನಿಖರ ಕಾರಣವನ್ನು ದೃಢಪಡಿಸಲಾಗುವುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಕಾಡಾನೆಗಳ ಸಾವಿನ ಕುರಿತು ಸೂಕ್ತ ತನಿಖೆ ನಡೆಸಲು ಸ್ಥಳದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಬೀಡುಬಿಟ್ಟಿದ್ದಾರೆ.



