ಚಿಕ್ಕಬಳ್ಳಾಪುರದಲ್ಲಿ ಪಾಕಿಸ್ತಾನಿಯರ ಬಂಧನ; ವೋಟರ್ ಐಡಿ, ರೇಷನ್ ಕಾರ್ಡ್ ಜಪ್ತಿ!

Pakistan citizens arrested in Chikkaballapur: ಬಂಧಿತರನ್ನು ಪಾಕಿಸ್ತಾನ ಮೂಲದ ಮಹಿಳೆ ಫರ್ಹಾನಾಜ್ ಮತ್ತು ಆಕೆಯ ಮಗ ಮೊಹಮ್ಮದ್ ಫರ್ದಿನ್ ಖಾನ್ ಎಂದು ಗುರುತಿಸಲಾಗಿದೆ.

ಚಿಕ್ಕಬಳ್ಳಾಪುರ, ಜುಲೈ 12: ಜಿಲ್ಲೆಯ ಬಾಗೇಪಲ್ಲಿ ತಾಲೂಕಿನಲ್ಲಿ ಕಾನೂನುಬಾಹಿರವಾಗಿ ವಾಸಿಸುತ್ತಿದ್ದ ಹಾಗೂ ಭಾರತೀಯ ಗುರುತಿನ ಚೀಟಿಗಳನ್ನು ಹೊಂದಿದ್ದ ಇಬ್ಬರು ಪಾಕಿಸ್ತಾನಿ ಪ್ರಜೆಗಳನ್ನು (Pakistan citizens arrested in Chikkaballapur) ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಪಾಕಿಸ್ತಾನ ಮೂಲದ ಮಹಿಳೆ ಫರ್ಹಾನಾಜ್ ಮತ್ತು ಆಕೆಯ ಮಗ ಮೊಹಮ್ಮದ್ ಫರ್ದಿನ್ ಖಾನ್ ಎಂದು ಗುರುತಿಸಲಾಗಿದೆ. ಇವರು ಬಾಗೇಪಲ್ಲಿಯ ಸ್ಥಳೀಯ ನಿವಾಸಿಯಾದ, ಸದ್ಯ ಗಲ್ಫ್ ದೇಶವೊಂದರಲ್ಲಿ ಬಸ್ ಚಾಲಕರಾಗಿ ಕೆಲಸ ಮಾಡುತ್ತಿರುವ ಅಯೂಬ್ ಖಾನ್ ಎಂಬಾತನನ್ನು ವಿವಾಹವಾಗಿದ್ದರು. ಈ ದಂಪತಿಯ ಮೂವರು ಮಕ್ಕಳು ಮತ್ತು ಅಯೂಬ್ ಖಾನ್ ಭಾರತೀಯ ನಾಗರಿಕರಾಗಿದ್ದು, ಫರ್ಹಾನಾಜ್ ಹಾಗೂ ಆಕೆಯ ಈ ಒಬ್ಬ ಮಗ ಮಾತ್ರ ಪಾಕಿಸ್ತಾನಿ ಪ್ರಜೆಗಳಾಗಿದ್ದಾರೆ.

ಬಂಧನಕ್ಕೆ ಮುಖ್ಯ ಕಾರಣಗಳೇನು?

ಬಾಗೇಪಲ್ಲಿ ತಹಶೀಲ್ದಾರ್ ಮನಿಷಾ ಎನ್. ಪತ್ರಿ ಅವರು ನೀಡಿದ ಅಧಿಕೃತ ದೂರಿನ ಮೇರೆಗೆ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಜಿಲ್ಲಾಧಿಕಾರಿಗಳು ಅವರ ಅಕ್ರಮ ರೇಷನ್ ಕಾರ್ಡ್ ಅನ್ನು ಹಾಗೂ ಚುನಾವಣಾ ಅಧಿಕಾರಿಯು ವೋಟರ್ ಐಡಿಯನ್ನು ತಕ್ಷಣವೇ ಜಾರಿಗೆ ಬರುವಂತೆ ರದ್ದುಗೊಳಿಸಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಕುಶಾಲ್ ಚೌಕ್ಸೆ ಅವರ ಮಾರ್ಗದರ್ಶನದಲ್ಲಿ ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS), ವಿದೇಶಿಯರ ಕಾಯ್ದೆ (Foreigners Act) ಮತ್ತು ಜನಪ್ರತಿನಿಧಿ ಕಾಯ್ದೆಯಡಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ. ಈ ಪಾಕಿಸ್ತಾನಿ ಪ್ರಜೆಗಳಿಗೆ ಭಾರತೀಯ ಗುರುತಿನ ಚೀಟಿಗಳನ್ನು ನೀಡಲು ಸ್ಥಳೀಯವಾಗಿ ಯಾರು ಸಹಾಯ ಮಾಡಿದರು ಎಂಬ ಬಗ್ಗೆ ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ.

Vidhya | ವಿದ್ಯಾಶ್ರೀ

ವಿದ್ಯಾಶ್ರೀ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡ ( Kannada News Next) ದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ನ್ಯೂಸ್‌ ಚಾನೆಲ್‌, ದಿನ ಪತ್ರಿಕೆ ಹಾಗೂ ಡಿಜಿಟಲ್‌ ಮಾಧ್ಯಮದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.