ಮೊಬೈಲ್ ಟೆಲಿಕಾಂ ಕ್ಷೇತ್ರಕ್ಕೆ ಎಲಾನ್ ಮಸ್ಕ್? ಮೊಬೈಲ್ ನೆಟ್‌ವರ್ಕ್ ಶುರು ಮಾಡುತ್ತಾ ಸ್ಟಾರ್‌ಲಿಂಕ್?
ಪ್ರಪಂಚದಾದ್ಯಂತ ಉಪಗ್ರಹಗಳ ಮೂಲಕ ಇಂಟರ್ನೆಟ್ ಒದಗಿಸುತ್ತಿರುವ ಎಲಾನ್ ಮಸ್ಕ್ ಒಡೆತನದ ಸ್ಪೇಸ್‌ಎಕ್ಸ್ (SpaceX) ಕಂಪನಿಯು ಈಗ ನೇರವಾಗಿ ಮೊಬೈಲ್ ನೆಟ್‌ವರ್ಕ್ ಕ್ಷೇತ್ರಕ್ಕೆ ಇಳಿಯುವ ಲಕ್ಷಣಗಳು ಕಂಡುಬರುತ್ತಿವೆ. ಸ್ಪೇಸ್‌ಎಕ್ಸ್ ಇತ್ತೀಚೆಗೆ ‘ಸ್ಟಾರ್‌ಲಿಂಕ್ ಮೊಬೈಲ್’ (Starlink Mobile) ಎಂಬ ಟ್ರೇಡ್‌ಮಾರ್ಕ್‌ಗಾಗಿ ಅರ್ಜಿ ಸಲ್ಲಿಸಿದ್ದು, ಇದು ಕಂಪನಿಯು ಪ್ರಸ್ತುತ ಇರುವ ಟೆಲಿಕಾಂ ಕಂಪನಿಗಳಾದ AT&T ಮತ್ತು ವೆರಿಝೋನ್‌ನಂತಹ ದೈತ್ಯರಿಗೆ ನೇರ ಪ್ರತಿಸ್ಪರ್ಧಿಯಾಗಲು ಸಿದ್ಧವಾಗುತ್ತಿದೆಯೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.
ಸೆಲ್ಯುಲಾರ್ ಸೇವೆಗಳತ್ತ ಸ್ಪೇಸ್‌ಎಕ್ಸ್‌ನ ಹೆಜ್ಜೆ
ಯುಎಸ್ ಪೇಟೆಂಟ್ ಮತ್ತು ಟ್ರೇಡ್‌ಮಾರ್ಕ್ ಕಚೇರಿಗೆ ಅಕ್ಟೋಬರ್ 16 ರಂದು ಸಲ್ಲಿಸಲಾದ ಈ ಅರ್ಜಿಯಲ್ಲಿ, ‘ಸ್ಟಾರ್‌ಲಿಂಕ್ ಮೊಬೈಲ್’ ಅನ್ನು ವೈಯಕ್ತಿಕ ಸೆಲ್ಯುಲಾರ್ ಸೇವೆಗಳು (Personal Cellular Services), ಹಾಗೂ ಧ್ವನಿ ಮತ್ತು ಆಡಿಯೊದ ದ್ವಿಮುಖ ಪ್ರಸರಣ (Two-way transmission of text, voice and audio) ಸೇರಿದಂತೆ ಟೆಲಿಕಮ್ಯುನಿಕೇಷನ್ ಸೇವೆಗಳಿಗಾಗಿ ಬಳಸಲು ಉದ್ದೇಶಿಸಲಾಗಿದೆ ಎಂದು ಉಲ್ಲೇಖಿಸಲಾಗಿದೆ.
ಸದ್ಯಕ್ಕೆ, ಸ್ಪೇಸ್‌ಎಕ್ಸ್ ತನ್ನ ಸ್ಟಾರ್‌ಲಿಂಕ್ ನೆಟ್‌ವರ್ಕ್ ಅನ್ನು ಬಳಸಿಕೊಂಡು ಪ್ರಮುಖ ಮೊಬೈಲ್ ವಾಹಕಗಳಾದ ಟಿ-ಮೊಬೈಲ್ ಯುಎಸ್ ಇಂಕ್. ಜೊತೆಗೆ ಸಹಭಾಗಿತ್ವದಲ್ಲಿದೆ. ಈ ಸಹಭಾಗಿತ್ವವು ಸಾಂಪ್ರದಾಯಿಕ ಸೆಲ್ ಸೇವೆಗಳು ತಲುಪದ ‘ಡೆಡ್ ಝೋನ್’ಗಳಲ್ಲಿ ಉಪಗ್ರಹ ಆಧಾರಿತ ಸಂಪರ್ಕವನ್ನು ಒದಗಿಸುವ ಗುರಿ ಹೊಂದಿದೆ.
ಆದರೆ, ಎಲಾನ್ ಮಸ್ಕ್ ಅವರು ಈ ಹಿಂದೆ ಒಂದು ಪಾಡ್‌ಕಾಸ್ಟ್‌ನಲ್ಲಿ ಮಾತನಾಡುತ್ತಾ, ತಮ್ಮದೇ ಆದ ಸ್ವತಂತ್ರ ಮೊಬೈಲ್ ವಾಹಕವನ್ನು ಸ್ಥಾಪಿಸುವುದು “ಆಯ್ಕೆಗಳಲ್ಲಿ ಒಂದಾಗಿರಬಹುದು” ಎಂದು ಸುಳಿವು ನೀಡಿದ್ದರು. ಇತ್ತೀಚೆಗೆ EchoStar Corp ನಿಂದ ವೈರ್‌ಲೆಸ್ ಸ್ಪೆಕ್ಟ್ರಮ್ ಅನ್ನು ಸ್ವಾಧೀನಪಡಿಸಿಕೊಳ್ಳಲು ಸ್ಪೇಸ್‌ಎಕ್ಸ್ $17 ಬಿಲಿಯನ್ ಡಾಲರ್ ಒಪ್ಪಂದವನ್ನು ಪೂರ್ಣಗೊಳಿಸಿದ್ದು, ಇದು ನೇರವಾಗಿ ಗ್ರಾಹಕರಿಗೆ ಮೊಬೈಲ್ ಸೇವೆಗಳನ್ನು ಒದಗಿಸುವ ಸ್ಟಾರ್‌ಲಿಂಕ್‌ನ ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚಿಸಿದೆ.
ಇದನ್ನೂ ಓದಿ: ಕಪ್ಪು ಹಣ ತಡೆಯಲು ಕೇಂದ್ರದ ಪ್ಲಾನ್!
‘ಸ್ಟಾರ್‌ಲಿಂಕ್ ಮೊಬೈಲ್’ ಟ್ರೇಡ್‌ಮಾರ್ಕ್ ಸಲ್ಲಿಕೆಯು, ಎಲಾನ್ ಮಸ್ಕ್ ಅವರು ಕೇವಲ ಇಂಟರ್ನೆಟ್ ಪ್ರೊವೈಡರ್ ಆಗಿ ಉಳಿಯದೆ, ಜಾಗತಿಕ ಮೊಬೈಲ್ ಟೆಲಿಕಾಂ ಮಾರುಕಟ್ಟೆಯಲ್ಲಿಯೇ ದೊಡ್ಡ ಬದಲಾವಣೆ ತರಲು ಸಿದ್ಧರಾಗುತ್ತಿದ್ದಾರೆ ಎಂಬುದನ್ನು ಸೂಚಿಸುತ್ತದೆ.


