ಕೊಲ್ಲೂರು ದೇಗುಲದಲ್ಲಿ ಆನುವಂಶಿಕವಲ್ಲದ ಅರ್ಚಕರಿಗೆ ಹೋಮ ನಡೆಸಲು ಅವಕಾಶ : ಕೋರ್ಟ್ ಮೇಟ್ಟಿಲೇರಿದ ತಂತ್ರಿಗಳು
ಇತಿಹಾಸ ಪ್ರಸಿದ್ಧ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ವಂಶಪಾರಂಪರಿಕ ಅರ್ಚಕರನ್ನು ಹೊರತುಪಡಿಸಿ ಅನ್ಯ ಅರ್ಚಕರಿಗೂ ಹೋಮ ಹವನ ನಡೆಸಲು ಅವಕಾಶ ನೀಡುತ್ತಿರುವ ದೇವಸ್ಥಾನದ ಆಡಳಿತ ಮಂಡಳಿಯ ನಿರ್ಧಾರವನ್ನು ಪ್ರಶ್ನಿಸಿ ವಂಶಪಾರಂಪರ್ಯ ಕುಟುಂಬದ ಅರ್ಚಕರು ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಕೊಲ್ಲೂರು ಶ್ರೀ ಮೂಕಾಂಬಿಕಾ ಕ್ಷೇತ್ರದ ಆಡಳಿತ ಮಂಡಳಿಯು ಕಾರ್ಯನಿರ್ವಾಹಕ ಅಧಿಕಾರಿಯ ಸೂಚನೆಯಂತೆ ಬೇರೆ ಅರ್ಚಕರಿಗೆ ಚಂಡಿಕಾ ಹೋಮ ನಡೆಸಲು ಅವಕಾಶ ಮಾಡಿಕೊಟ್ಟಿದೆ. ಇದು ವಂಶಪಾರಂಪರ್ಯ ಪುರೋಹಿತರ ಕೆಂಗೆಣ್ಣಿಗೆ ಗುರಿಯಾಗಿತ್ತು. ಈ ಹಿನ್ನೆಲೆಯಲ್ಲಿ ಆನುವಂಶಿಕ ಅರ್ಚಕರಾದ ಶ್ರೀ ವಿಘ್ನೇಶ್ವರ ಅಡಿಗ, ಕೆ.ಎನ್ ಸುಬ್ರಹ್ಮಣ್ಯ ಅಡಿಗ ಹಾಗೂ ಕೆ. ನಿತ್ಯಾನಂದ ಅಡಿಗ ಎಂಬವರು ಇದೀಗ ದೇಗುಲದ ಆಡಳಿತ ಮಂಡಳಿ ವಿರುದ್ಧ ನ್ಯಾಯಾಂಗ ಹೋರಾಟಕ್ಕೆ ಇಳಿದಿದ್ದಾರೆ.
ಈ ಸಂಬಂಧ ನ್ಯಾಯಮೂರ್ತಿ ಸೂರಜ್ ಗೋವಿಂದ್ ರಾಜ್ ನೇತೃತ್ವದ ಏಕ ಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ಕೈಗೆತ್ತಿಕೊಂಡಿದೆ. ಹೋಮ ಹವನಗಳನ್ನು ನಡೆಸಿದ ಅರ್ಚಕರನ್ನು ಪ್ರತಿವಾದಿಗಳನ್ನಾಗಿಸಿ ಎಂದು ಅರ್ಜಿದಾರರಿಗೆ ಸೂಚನೆ ನೀಡಿದೆ. ಹಾಗೂ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ, ವ್ಯವಸ್ಥಾಪನಾ ಮಂಡಳಿ ಹಾಗೂ ಮುಜರಾಯಿ ಇಲಾಖೆಗೆ ನೋಟಿಸ್ ನೀಡಿದೆ. ದೇವಸ್ಥಾನದಲ್ಲಿ ಕಾರ್ಯನಿರ್ವಾಹಕರ ಆದೇಶಕ್ಕೆ ತಡೆ ನೀಡಲು ಮುಂದಾದ ಹೈಕೋರ್ಟ್ ಬಳಿಕ ಬೇರೆ ಅರ್ಚಕರ ಪ್ರತಿವಾದವನ್ನೂ ಆಲಿಸುವ ಅವಶ್ಯಕತೆ ಇದೆ ಎಂಬುದನ್ನು ಮನಗಂಡು ಅವರನ್ನು ಪ್ರತಿವಾದಿಗಳನ್ನಾಗಿ ಮಾಡಿ ಎಂದು ಅರ್ಜಿದಾರರಿಗೆ ಸೂಚಿಸಿ ವಿಚಾರಣೆಯನ್ನು ಮುಂದೂಡಿದೆ.
ಇದನ್ನೂ ಓದಿ: ಚೈತ್ರಾ ಕುಂದಾಪುರ ತಂದೆಗೆ ಹಿಂಸೆ ನಿಷೇಧ: ಮನೆಯಲ್ಲಿ ನಿರ್ಭೀತಿಯಿಂದ ವಾಸಕ್ಕೆ ಅವಕಾಶ ನೀಡುವಂತೆ ಆದೇಶ
ಏನಿದು ಪ್ರಕರಣ ?
2001ರ ಫೆಬ್ರವರಿ ತಿಂಗಳಲ್ಲಿ ವ್ಯವಸ್ಥಾಪನಾ ಸಮಿತಿಯು ಆನುವಂಶಿಕ ಅರ್ಚಕರ ಅನುಮತಿ ಕೇಳದೇ ಹೋಮಗಳನ್ನು ನಡೆಸಬಹುದು ಎಂದಿತ್ತು. ಈ ಸಂಬಂಧ ಹೈಕೋರ್ಟ್ ಮೆಟ್ಟಿಲೇರಿದ ಆನುವಂಶಿಕ ಅರ್ಚಕರು ಮುನ್ನಡೆ ಸಾಧಿಸಿದ್ದರು. ಇದಾದ ಬಳಿಕ 2002ರಲ್ಲಿ ದೇವಸ್ಥಾನದ ಚಂಡಿಕಾ ಹೋಮದಂತಹ ಪ್ರಮುಖ ಹೋಮಗಳನ್ನು ಕೇವಲ ದೇವಸ್ಥಾನದ ತಂತ್ರಿಗಳೇ ನಡೆಸಬೇಕೆಂದು ಸೂಚನೆ ಹೊರಡಿಸಲಾಯಿತು. ಆದರೆ ಇತ್ತೀಚಿನ ದಿನಗಳಲ್ಲಿ ಬೇರೆ ಅರ್ಚಕರು ಭಕ್ತರನ್ನು ಹೋಮ ನಡೆಸಲು ಸಂಪರ್ಕಿಸುತ್ತಿರುವುದು ಗಮನಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ 2023ರಲ್ಲಿ ಆನುವಂಶಿಕ ಅರ್ಚಕರು ದೂರು ನೀಡಿದ್ದರು. ಈಗಂತು ಕಾರ್ಯನಿರ್ವಾಹಕ ಅಧಿಕಾರಿಗೆ ವಿವೇಚನೆಯ ನಿರ್ಧಾರ ಕೈಗೊಳ್ಳಲು ವ್ಯವಸ್ಥಾಪನಾ ಸಮಿತಿ ನಿರ್ದೇಶಿಸಲಾಗಿತ್ತು. ಇದಾದ ಬಳಿಕ ಕಾರ್ಯನಿರ್ವಾಹಕ ಅಧಿಕಾರಿ ಆನುವಂಶಿಕ ಅಲ್ಲದ ಪುರೋಹಿತರಿಗೂ ಚಂಡಿಕಾ ಹೋಮ ನಡೆಸಲು ಅವಕಾಶ ನೀಡಿದ್ದರು.



