ಭಾರತ ವಿರೋಧಿ‌ ಇನ್ನೋರ್ವ ನಾಯಕ ಸಿಕಂದರ್ ತಲೆಗೆ ಗುಂಡಿಕ್ಕಿ ಹತ್ಯೆ!

ಢಾಕಾ: ಬಾಂಗ್ಲಾದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ತಾರಕಕ್ಕೇರಿದೆ. ಇಂಕ್ವಿಲಾಬ್ ಮಂಚ್‌ನ ಉಸ್ಮಾನ್ ಹಾದಿ ಹತ್ಯೆಯಿಂದ ಉಂಟಾದ ಹಿಂಸಾಚಾರದ (Bangladesh Violence) ಬೆನ್ನಲ್ಲೇ, ವಿದ್ಯಾರ್ಥಿಗಳ ನೇತೃತ್ವದ ನ್ಯಾಷನಲ್ ಸಿಟಿಜನ್ ಪಾರ್ಟಿಯ (NCP) ಹಿರಿಯ ನಾಯಕ ಮುಹಮ್ಮದ್ ಮೊತಾಲೆಬ್ ಸಿಕಂದರ್‌ನನ್ನು (Muhammad Motaleb Sikdar) ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.

ಬಾಂಗ್ಲಾದೇಶದ ಮಾಧ್ಯಮ ವರದಿಗಳ ಪ್ರಕಾರ, ಎನ್‌ಸಿಪಿಯ ಕಾರ್ಮಿಕ ಸಂಘಟನೆಯ ಕೇಂದ್ರ ನಾಯಕರಾಗಿದ್ದ ಮೊತಾಲೆಬ್ ಸಿಕಂದರ್ ಮೇಲೆ ಖುಲ್ನಾ ಜಿಲ್ಲೆಯಲ್ಲಿ ದಾಳಿ ನಡೆದಿದೆ. ಅನಾಮಧೇಯ ಬಂದೂಕುಧಾರಿಗಳು ಸಿಕಂದರ್‌ನನ್ನು ಗುರಿಯಾಗಿಸಿಕೊಂಡು ಅತಿ ಸಮೀಪದಿಂದ ತಲೆಗೆ ಗುಂಡು ಹಾರಿಸಿದ್ದಾರೆ. ತೀವ್ರ ರಕ್ತಸ್ರಾವದಿಂದಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಹತ್ಯೆಯ ಹಿನ್ನೆಲೆ

ಹತ್ಯೆಗೀಡಾದ ಮೊತಾಲೆಬ್ ಸಿಕಂದರ್ ಮತ್ತು ಉಸ್ಮಾನ್ ಹಾದಿ ಇಬ್ಬರೂ ಬಾಂಗ್ಲಾದೇಶದ ಇತ್ತೀಚಿನ ರಾಜಕೀಯ ಬದಲಾವಣೆಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದ. ವಿಶೇಷವಾಗಿ ಇವರು ಭಾರತ ವಿರೋಧಿ ಧೋರಣೆ ಮತ್ತು ಪ್ರಚೋದನಾಕಾರಿ ಭಾಷಣಗಳ ಮೂಲಕ ಸಕ್ರಿಯರಾಗಿದ್ದರು. ಶೇಖ್ ಹಸೀನಾ ಸರ್ಕಾರ ಪತನದ ನಂತರ ದೇಶದಲ್ಲಿ ಸಂವಿಧಾನಾತ್ಮಕ ಬದಲಾವಣೆ ಮತ್ತು ಭಾರತದ ಪ್ರಭಾವದ ವಿರುದ್ಧ ಧ್ವನಿ ಎತ್ತಿದ್ದ ವಿದ್ಯಾರ್ಥಿ ನಾಯಕರಲ್ಲಿ ಇವರು ಮುಂಚೂಣಿಯಲ್ಲಿದ್ದರು.

ಬಾಂಗ್ಲಾದಲ್ಲಿ ಅರಾಜಕತೆ:

ಒಂದೆಡೆ ಇಂಕ್ವಿಲಾಬ್ ಮಂಚ್ ವಕ್ತಾರನ ಹತ್ಯೆಯಿಂದ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ. ಈ ಬೆನ್ನಲ್ಲೇ ಸಿಕಂದರ್ ಹತ್ಯೆಯಾಗಿರುವುದು ಬಾಂಗ್ಲಾದೇಶವನ್ನು ಮತ್ತಷ್ಟು ಅರಾಜಕತೆಗೆ ತಳ್ಳಿದೆ. ಚುನಾವಣೆ ಹತ್ತಿರವಾಗುತ್ತಿರುವ ಸಮಯದಲ್ಲಿ ಈ ರೀತಿಯ ಸರಣಿ ರಾಜಕೀಯ ಹತ್ಯೆಗಳು ನಡೆಯುತ್ತಿರುವುದು ಅಲ್ಲಿನ ಮಧ್ಯಂತರ ಸರ್ಕಾರದ ಭದ್ರತಾ ವೈಫಲ್ಯವನ್ನು ಎತ್ತಿ ತೋರಿಸುತ್ತಿದೆ.

ಇದನ್ನೂ ಓದಿ: ಮಹಿಳೆಯರೇ ಸ್ವಂತ ಉದ್ಯೋಗ ಆರಂಭಿಸಿ; ಈ ಯೋಜನೆಯಡಿ ಸಾಲ, ಸಬ್ಸಿಡಿ ಪಡೆಯಿರಿ

ಬಾಂಗ್ಲಾದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದ್ದು, ಈ ಕೊಲೆಗಳ ಹಿಂದೆ ಯಾರ ಕೈವಾಡವಿದೆ ಎಂಬುದು ಇನ್ನೂ ನಿಗೂಢವಾಗಿದೆ. ಸೇನೆ ಮತ್ತು ಪೊಲೀಸರು ಹೈ ಅಲರ್ಟ್ ಘೋಷಿಸಿದ್ದರೂ ಹಿಂಸಾಚಾರ ನಿಲ್ಲುತ್ತಿಲ್ಲ.

Vidhya | ವಿದ್ಯಾಶ್ರೀ

ವಿದ್ಯಾಶ್ರೀ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡ ( Kannada News Next) ದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ನ್ಯೂಸ್‌ ಚಾನೆಲ್‌, ದಿನ ಪತ್ರಿಕೆ ಹಾಗೂ ಡಿಜಿಟಲ್‌ ಮಾಧ್ಯಮದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

Related Stories