ಕಾರವಾರದಲ್ಲಿ ಕರಾವಳಿ ಉತ್ಸವದ ಸಂಭ್ರಮ: ಡಿಸೆಂಬರ್ 28 ರವರೆಗೆ ಸೋನು ನಿಗಮ್, ಶಂಕರ್ ಮಹಾದೇವನ್ ಸಂಗೀತ ಸಂಜೆ
ಕಾರವಾರ: ಪ್ರಕೃತಿ ಸೌಂದರ್ಯದ ನಡುವೆ ಉತ್ತರ ಕನ್ನಡ ಜಿಲ್ಲೆಯ ಕಲೆ, ಸಂಸ್ಕೃತಿ ಮತ್ತು ಕ್ರೀಡೆಯನ್ನು ಬಿಂಬಿಸುವ ಐತಿಹಾಸಿಕ ‘ಕರಾವಳಿ ಉತ್ಸವ-2025’ಕ್ಕೆ ಕಾರವಾರದ (Karavali Utsava Karwar) ರವೀಂದ್ರನಾಥ ಠಾಗೋರ್ ಕಡಲತೀರ ಸಜ್ಜಾಗಿದೆ. ಡಿಸೆಂಬರ್ 22 ರಿಂದ 28 ರವರೆಗೆ ಏಳು ದಿನಗಳ ಕಾಲ ನಡೆಯಲಿರುವ ಈ ಉತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲು ಜಿಲ್ಲಾಡಳಿತ ಮತ್ತು ಉಸ್ತುವಾರಿ ಸಚಿವ ಮಂಕಾಳ ಎಸ್. ವೈದ್ಯ ಸಕಲ ಸಿದ್ಧತೆಗಳನ್ನು ಪೂರ್ಣಗೊಳಿಸಿದ್ದಾರೆ.
ದಿಗ್ಗಜ ಕಲಾವಿದರ ಸಂಗೀತ ರಸದೌತಣ
ಈ ಬಾರಿಯ ಉತ್ಸವದ ಪ್ರಮುಖ ಆಕರ್ಷಣೆಯೇ ಸಂಗೀತ ಸಂಜೆ. ದೇಶದ ಖ್ಯಾತ ಗಾಯಕರು ಕಡಲತೀರದಲ್ಲಿ ನೆರೆದ ಜನರನ್ನು ರಂಜಿಸಲಿದ್ದಾರೆ. ಜೊತೆಗೆ ಪ್ರತಿದಿನ ಸಂಜೆ 5:30 ರಿಂದ 7:30 ರವರೆಗೆ ಸ್ಥಳೀಯ ಕಲಾವಿದರ ಕಾರ್ಯಕ್ರಮ ಇರಲಿದೆ.
- ಡಿ. 22: ಶಂಕರ್ ಮಹಾದೇವನ್ ತಂಡ
- ಡಿ. 23: ಮೀಕಾ ಸಿಂಗ್
- ಡಿ. 24: ಸೋನು ನಿಗಮ್
- ಡಿ. 25: ರಫ್ತಾರ್
- ಡಿ. 27: ಮೊಹಮ್ಮದ್ ದಾನೀಶ್
- ಡಿ. 28: ದಲೇರ್ ಮೆಹಂದಿ ತಂಡ
ಐತಿಹಾಸಿಕ ಛಾಯಾಚಿತ್ರ ಪ್ರದರ್ಶನಕ್ಕೆ ಅವಕಾಶ
ಉತ್ತರ ಕನ್ನಡ ಜಿಲ್ಲೆಯ ಹಳೆಯ ವೈಭವವನ್ನು ನೆನಪಿಸಲು ಜಿಲ್ಲಾಡಳಿತವು ಪುರಾತನ ಐತಿಹಾಸಿಕ ಸ್ಥಳಗಳು ಮತ್ತು ಜಿಲ್ಲೆಗೆ ಭೇಟಿ ನೀಡಿದ್ದ ಗಣ್ಯ ವ್ಯಕ್ತಿಗಳ ಹಳೆಯ ಛಾಯಾಚಿತ್ರಗಳ ಪ್ರದರ್ಶನವನ್ನು ಆಯೋಜಿಸಿದೆ.
ಕ್ರೀಡೆ ಮತ್ತು ಸಾಹಸ ಚಟುವಟಿಕೆಗಳು
- ಮ್ಯಾರಾಥಾನ್ ಓಟ: ಡಿ. 26 ರಂದು ಬೆಳಿಗ್ಗೆ 6 ಗಂಟೆಗೆ 21 ಕಿ.ಮೀ, 10 ಕಿ.ಮೀ ಮತ್ತು 5 ಕಿ.ಮೀ ವಿಭಾಗಗಳಲ್ಲಿ ಮ್ಯಾರಾಥಾನ್ ನಡೆಯಲಿದೆ. ಭಾಗವಹಿಸುವವರಿಗೆ ಟಿ-ಶರ್ಟ್, ಪದಕ ಮತ್ತು ನಗದು ಬಹುಮಾನ ಇರಲಿದೆ.
- ಗುಂಪು ಕ್ರೀಡೆಗಳು: ಡಿ. 26 ರಂದು ಹಗ್ಗಜಗ್ಗಾಟ, ವಾಲಿಬಾಲ್ ಮತ್ತು ಕಬಡ್ಡಿ ಪಂದ್ಯಾವಳಿಗಳು ನಡೆಯಲಿವೆ. ಆಸಕ್ತರು ಡಿ. 24 ರ ಸಂಜೆ 6 ಗಂಟೆಯೊಳಗೆ ಆನ್‌ಲೈನ್ ಲಿಂಕ್ ಮೂಲಕ ಹೆಸರು ನೋಂದಾಯಿಸಿಕೊಳ್ಳಬೇಕು.
- ವಿಶೇಷ ಚೇತನರ ಕ್ರೀಡೆ: ಡಿ. 18 ರಂದು ವಿಕಲಚೇತನರಿಗಾಗಿ ಜಿಲ್ಲಾ ಮಟ್ಟದ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನು ಮಾಲಾದೇವಿ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಇದನ್ನೂ ಓದಿ: ದಕ್ಷಿಣ ಭಾರತದ ಪ್ರಸಿದ್ಧ ಶಿರಸಿ ಮಾರಿಕಾಂಬಾ ದೇಗುಲದ ಜಾತ್ರಾ ದಿನಾಂಕ ಪ್ರಕಟ
ಇತರ ಆಕರ್ಷಣೆಗಳು
ಉತ್ಸವದ ಭಾಗವಾಗಿ ರಂಗೋಲಿ ಸ್ಪರ್ಧೆ, ಅಡುಗೆ ಸ್ಪರ್ಧೆ, ಮ್ಯಾರಾಥಾನ್, ಶ್ವಾನ ಪ್ರದರ್ಶನ (ಡಿ. 27) ಮತ್ತು ಗೋಡೆ ಚಿತ್ರಕಲಾ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಉದ್ಘಾಟನಾ ದಿನವಾದ ಡಿ. 22 ರಂದು ಸುಮಾರು 20 ಕಲಾ ತಂಡಗಳಿಂದ ಭವ್ಯ ಮೆರವಣಿಗೆ ಮತ್ತು ಮೀನುಗಾರರಿಂದ ‘ದೀಪ ಮೆರವಣಿಗೆ’ ನಡೆಯಲಿದೆ. ಉತ್ಸವಕ್ಕಾಗಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದಿಂದ 1 ಕೋಟಿ ರೂ. ಮತ್ತು ಕನ್ನಡ ಹಾಗೂ ಸಂಸ್ಕೃತಿ ಇಲಾಖೆಯಿಂದ 5 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ. ಸಚಿವ ಮಂಕಾಳ ವೈದ್ಯ ಅವರು ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಅಧಿಕೃತವಾಗಿ ಆಹ್ವಾನ ನೀಡಿದ್ದಾರೆ.



