ಸಿದ್ದರಾಮಯ್ಯ ರಾಜೀನಾಮೆ-ಡಿಕೆ ಶಿವಕುಮಾರ್‌ ಸಿಎಂ ಬಗ್ಗೆ ಕೋಡಿ ಶ್ರೀಗಳ ಸ್ಫೋಟಕ ಭವಿಷ್ಯ

Siddaramaiah-DK Shivakumar-Kodi Mutt Prediction: ಬೆಳಗಾವಿ: ಕಳೆದ ಎರಡು ತಿಂಗಳಿಂದ ಕರ್ನಾಟಕ ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ನಾಯಕತ್ವ ಬದಲಾವಣೆಯ ಚರ್ಚೆಗಳು ದಿನಕ್ಕೊಂದು ತಿರುವು ಪಡೆಯುತ್ತಿವೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುತ್ತಾರೆ ಎಂಬ ವದಂತಿಗಳ ಬೆನ್ನಲ್ಲೇ ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು ನೀಡಿರುವ ಹೇಳಿಕೆ ಈಗ ಹೊಸ ಚರ್ಚೆಗೆ ನಾಂದಿ ಹಾಡಿದೆ.

ಅಧಿಕಾರ ಕಿತ್ತುಕೊಳ್ಳುವುದು ಕಷ್ಟ:
ಬೆಳಗಾವಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕೋಡಿ ಶ್ರೀಗಳು, ಹಾಲುಮತ ಸಮಾಜದ ಪ್ರಬಲ ನಾಯಕರಾಗಿರುವ ಸಿದ್ದರಾಮಯ್ಯ ಅವರಿಂದ ಅಧಿಕಾರವನ್ನು ಬಲವಂತವಾಗಿ ಕಿತ್ತುಕೊಳ್ಳುವುದು ಸುಲಭವಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. “ಹಾಲುಮತದವರಿಂದ ಅಧಿಕಾರ ಹೋಗುವುದು ಕಷ್ಟ ಕಷ್ಟ. ಸಿದ್ದರಾಮಯ್ಯ ಅವರು ತಾವಾಗಿಯೇ ಮನಸ್ಸು ಮಾಡಿ ಅಧಿಕಾರ ಬಿಟ್ಟುಕೊಟ್ಟರೆ ಮಾತ್ರ ಬೇರೆಯವರಿಗೆ ಆ ಕುರ್ಚಿ ಏರುವ ಅವಕಾಶ ಸಿಗಬಹುದು” ಎಂದು ಪರೋಕ್ಷವಾಗಿ ಭವಿಷ್ಯ ನುಡಿದಿದ್ದಾರೆ.

ಡಿಕೆ ಶಿವಕುಮಾರ್ ಹಾದಿಗೆ ಮುಳ್ಳಾದ ಹಣೆಬರಹ?
ಮುಖ್ಯಮಂತ್ರಿ ಹುದ್ದೆಯ ಮೇಲೆ ಕಣ್ಣಿಟ್ಟಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಶ್ರೀಗಳ ಈ ಭವಿಷ್ಯ ತುಸು ನಿರಾಸೆ ಮೂಡಿಸುವಂತಿದೆ. ಸಿದ್ದರಾಮಯ್ಯ ಅವರು ಸ್ವಯಂಪ್ರೇರಿತರಾಗಿ ಕುರ್ಚಿ ಬಿಡದ ಹೊರತು ಹೈಕಮಾಂಡ್ ಹಸ್ತಕ್ಷೇಪ ಅಥವಾ ಬೇರೆ ಯಾವುದೇ ರಾಜಕೀಯ ತಂತ್ರಗಳು ಫಲ ನೀಡಲಾರವು ಎಂಬರ್ಥದಲ್ಲಿ ಶ್ರೀಗಳು ಮಾತನಾಡಿದ್ದಾರೆ. ಹೈಕಮಾಂಡ್‌ನಿಂದ ಯಾವುದೇ ಸ್ಪಷ್ಟ ಸೂಚನೆ ಬಾರದಿರುವುದು ಮತ್ತು ಡಿಕೆ ಬ್ರದರ್ಸ್‌ಗೆ ದೆಹಲಿ ನಾಯಕರ ಭೇಟಿ ಅಷ್ಟು ಸುಲಭವಾಗಿ ಸಿಗದಿರುವುದು ಈ ಭವಿಷ್ಯಕ್ಕೆ ಪೂರಕವಾಗಿ ಕಾಣುತ್ತಿದೆ.

ಇದನ್ನೂ ಓದಿ: 10,000ಕ್ಕೆ ಬೆಸ್ಟ್ 5G ಸ್ಮಾರ್ಟ್‌ಫೋನ್‌ಗಳು: ಸ್ಯಾಮ್‌ಸಂಗ್, ರೆಡ್ಮಿ ಮತ್ತು ಪೊಕೊ ಯಾವುದು ಬೆಸ್ಟ್?

ಅಹಿಂದ ವರ್ಸಸ್ ಒಕ್ಕಲಿಗ:
ರಾಜ್ಯ ರಾಜಕೀಯದಲ್ಲಿ ಒಂದು ಕಡೆ ‘ಅಹಿಂದ’ (ಹಿಂದುಳಿದ ವರ್ಗಗಳು) ನಾಯಕ ಸಿದ್ದರಾಮಯ್ಯ ಅವರ ಪರವಾಗಿ ಕೂಗು ಜೋರಾಗಿದ್ದರೆ, ಮತ್ತೊಂದೆಡೆ ಒಕ್ಕಲಿಗ ಸಮುದಾಯದ ಪ್ರಬಲ ನಾಯಕ ಡಿ.ಕೆ. ಶಿವಕುಮಾರ್ ಪರವಾದ ಪ್ರಯತ್ನಗಳು ನಡೆಯುತ್ತಿವೆ. ಬ್ರೇಕ್‌ಫಾಸ್ಟ್ ಹಾಗೂ ಡಿನ್ನರ್ ಮೀಟಿಂಗ್‌ಗಳ ಮೂಲಕ ಶಾಸಕರನ್ನು ಸೆಳೆಯುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿದ್ದರೂ, ಕುರ್ಚಿ ಸರ್ಕಸ್‌ಗೆ ಅಂತಿಮ ತೆರೆ ಬಿದ್ದಿಲ್ಲ.

ಕೋಡಿಮಠದ ಶ್ರೀಗಳ ಈ ಭವಿಷ್ಯವು ಸದ್ಯದ ರಾಜಕೀಯ ಅನಿಶ್ಚಿತತೆಯನ್ನು ಮತ್ತಷ್ಟು ಗೋಜಲಾಗಿಸಿದೆ. ಸಿದ್ದರಾಮಯ್ಯ ಅವರು ತಮ್ಮ ಅಧಿಕಾರ ಅವಧಿಯನ್ನು ಪೂರ್ಣಗೊಳಿಸುತ್ತಾರೋ ಅಥವಾ ಶ್ರೀಗಳು ಹೇಳಿದಂತೆ ‘ಸ್ವಯಂಪ್ರೇರಿತ’ ತ್ಯಾಗ ಮಾಡುತ್ತಾರೋ ಎಂಬುದು ಕಾದು ನೋಡಬೇಕಿದೆ.

Vidhya | ವಿದ್ಯಾಶ್ರೀ

ವಿದ್ಯಾಶ್ರೀ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡ ( Kannada News Next) ದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ನ್ಯೂಸ್‌ ಚಾನೆಲ್‌, ದಿನ ಪತ್ರಿಕೆ ಹಾಗೂ ಡಿಜಿಟಲ್‌ ಮಾಧ್ಯಮದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

Related Stories