ಕಿಚ್ಚ ಸುದೀಪ್ ಬಳಿ ಕ್ಷಮೆ ಕೋರಿದ ಆರ್ಯವರ್ಧನ್ ಗುರೂಜಿ; ಕಾರಣ ದರ್ಶನ್!
Kiccha Sudeepa-Darshan- Aryavardhan Guruji Controversy: ಬೆಂಗಳೂರು: ‘ನಾನು ಅಂದ್ರೆ ನಂಬರ್, ನಂಬರ್ ಅಂದ್ರೆ ನಾನು’ ಎಂಬ ಡೈಲಾಗ್ ಮೂಲಕವೇ ಮನೆಮಾತಾಗಿರುವ ಸಂಖ್ಯಾ ಶಾಸ್ತ್ರಜ್ಞ ಆರ್ಯವರ್ಧನ್ ಗುರೂಜಿ, ಇದೀಗ ನಟ ಕಿಚ್ಚ ಸುದೀಪ್ ಹಾಗೂ ಅವರ ಅಭಿಮಾನಿಗಳ ಬಳಿ ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ. ಇತ್ತೀಚೆಗೆ ಸುದೀಪ್ ಅವರ ಕುರಿತು ಗುರೂಜಿ ನೀಡಿದ್ದ ವಿವಾದಾತ್ಮಕ ಹೇಳಿಕೆಯು ತೀವ್ರ ಆಕ್ರೋಶಕ್ಕೆ ಕಾರಣವಾದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ವಿವಾದಕ್ಕೆ ಕಾರಣವಾಗಿದ್ದ ಆ ಮಾತುಗಳೇನು?
ಬಿಗ್ ಬಾಸ್ ಕನ್ನಡ ಸೀಸನ್ 9ರ ಸ್ಪರ್ಧಿಯಾಗಿದ್ದ ಕಾಲದಿಂದಲೂ ಆರ್ಯವರ್ಧನ್ ಗುರೂಜಿ ಮತ್ತು ಸುದೀಪ್ ನಡುವೆ ಸಣ್ಣಪುಟ್ಟ ಮಾತಿನ ಚಕಮಕಿಗಳು ನಡೆಯುತ್ತಲೇ ಇವೆ. ಆದರೆ, ಇತ್ತೀಚೆಗೆ ಸಂದರ್ಶನವೊಂದರಲ್ಲಿ ಗುರೂಜಿ ಅವರು, “ದರ್ಶನ್ ಜೈಲಿಗೆ ಹೋದ ಮೇಲೆ ಸುದೀಪ್ ಹೆಚ್ಚಾಗಿ ಎಗರಾಡುತ್ತಿದ್ದಾರೆ” ಎಂಬ ಅರ್ಥದ ಹೇಳಿಕೆ ನೀಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಕಿಚ್ಚನ ಅಭಿಮಾನಿಗಳು ಕೆಂಡಾಮಂಡಲವಾಗಿದ್ದರು.
ಬಿಗ್ ಬಾಸ್ ಕಹಿನೆನಪು: ಈ ಹಿಂದೆ ಬಿಗ್ ಬಾಸ್ ವೇದಿಕೆಯಲ್ಲೇ ‘ಅನುಪಮಾ ಗೌಡ ಅವರನ್ನು ಉಳಿಸಲು ಶೋ ಮ್ಯಾಚ್ ಫಿಕ್ಸಿಂಗ್ ಮಾಡುತ್ತಿದೆ’ ಎಂದು ಸುದೀಪ್ ಎದುರೇ ಗುರೂಜಿ ಆರೋಪಿಸಿದ್ದರು. ಆಗ ಸುದೀಪ್ ಖಡಕ್ ಆಗಿಯೇ ಕ್ಲಾಸ್ ತೆಗೆದುಕೊಂಡಿದ್ದರು.
ಬಹಿರಂಗವಾಗಿ ಕ್ಷಮೆ ಕೇಳಿದ ಗುರೂಜಿ
ಅಭಿಮಾನಿಗಳ ಆಕ್ರೋಶ ಮತ್ತು ಸಾರ್ವಜನಿಕ ವಲಯದಲ್ಲಿ ವ್ಯಕ್ತವಾದ ವಿರೋಧದ ತೀವ್ರತೆಯನ್ನು ಅರಿತ ಆರ್ಯವರ್ಧನ್ ಗುರೂಜಿ, ಈಗ ವಿಡಿಯೋ ಮೂಲಕ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ.
“ಸುದೀಪ್ ಅವರಿಗೆ ನಮಸ್ಕಾರ. ನಾನು ಅವರ ಜೊತೆ ಕೆಲಸ ಮಾಡಿದ್ದೇನೆ. ಮಾತನಾಡುವ ಭರದಲ್ಲಿ ಯಾವುದೋ ಕ್ಷಣದಲ್ಲಿ ಕೆಲವು ಮಾತುಗಳು ಹೊರಬಂದಿವೆ. ಇದರಿಂದ ಸುದೀಪ್ ಅವರಿಗೆ ಹಾಗೂ ಅವರ ಅಭಿಮಾನಿಗಳಿಗೆ ನೋವಾಗಿದ್ದರೆ ನಾನು ಬಹಿರಂಗವಾಗಿ ‘ಸಾರಿ, ಸಾರಿ, ಸಾರಿ’ ಎಂದು ಕೇಳುತ್ತೇನೆ. ಅವರ ಮೇಲೆ ನನಗೆ ಅಪಾರ ಗೌರವವಿದೆ. ದೇವರು ಸುದೀಪ್ ಮತ್ತು ಅವರ ಕುಟುಂಬವನ್ನು ಚೆನ್ನಾಗಿ ಇಟ್ಟಿರಲಿ” ಎಂದು ಗುರೂಜಿ ಭಾವುಕರಾಗಿ ನುಡಿದಿದ್ದಾರೆ.
ಇದನ್ನೂ ಓದಿ: ಇಸ್ಲಾಮಿಕ್ ‘ಸುಲ್ತಾನರ’ ನಡುವೆ ಬಿರುಕು: ಸೌದಿ ಅರೇಬಿಯಾ vs ಯುಎಇ ಮಹಾಯುದ್ಧ
ದರ್ಶನ್ ಮತ್ತು ಸುದೀಪ್ ಅಭಿಮಾನಿಗಳ ನಡುವಿನ ಶೀತಲ ಸಮರದ ನಡುವೆ ಗುರೂಜಿ ಅವರ ಈ ಹೇಳಿಕೆ ಬೆಂಕಿ ಸುರಿದಂತಾಗಿತ್ತು. ಆದರೆ, ಈಗ ಅವರೇ ಕ್ಷಮೆ ಕೋರಿರುವುದರಿಂದ ಈ ವಿವಾದ ಸದ್ಯಕ್ಕೆ ತಣ್ಣಗಾಗುವ ಲಕ್ಷಣಗಳು ಕಂಡುಬರುತ್ತಿವೆ. ಸುದೀಪ್ ಅವರು ಈ ಕ್ಷಮೆಯನ್ನು ಹೇಗೆ ಸ್ವೀಕರಿಸುತ್ತಾರೆ ಅಥವಾ ಪರೋಕ್ಷವಾಗಿ ಏನಾದರೂ ಪ್ರತಿಕ್ರಿಯೆ ನೀಡುತ್ತಾರೆಯೇ ಎಂಬುದು ಸ್ಯಾಂಡಲ್‌ವುಡ್‌ನಲ್ಲಿ ಕುತೂಹಲ ಮೂಡಿಸಿದೆ.



