ರಾಕಿಂಗ್ ಸ್ಟಾರ್ ಯಶ್ ತಾಯಿ ಪುಷ್ಪಾ ಅರುಣ್ ಕುಮಾರ್ ಮನೆ ಕಾಂಪೌಂಡ್ ನೆಲಸಮ
Rocking Star Yash mother Pushpa: ಹಾಸನ: ಸ್ಯಾಂಡಲ್ವುಡ್ ನಟ ಯಶ್ ಅವರ ತಾಯಿ ಪುಷ್ಪಾ ಅರುಣ್ ಕುಮಾರ್ ಅವರು ಮತ್ತೊಮ್ಮೆ ಕಾನೂನು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಾಸನದ ವಿದ್ಯಾನಗರದಲ್ಲಿರುವ ಅವರ ನಿವಾಸದ ಕಾಂಪೌಂಡ್ ಗೋಡೆಯನ್ನು ಭೂ ಒತ್ತುವರಿ ಆರೋಪದ ಹಿನ್ನೆಲೆಯಲ್ಲಿ ಕೋರ್ಟ್ ಆದೇಶದಂತೆ ಇಂದು ಧ್ವಂಸಗೊಳಿಸಲಾಗಿದೆ.
ವಿವಾದದ ಹಿನ್ನೆಲೆ ಏನು?
ಲಕ್ಷ್ಮಮ್ಮ ಎಂಬುವವರಿಗೆ ಸೇರಿದ ಸುಮಾರು 1,500 ಚದರ ಅಡಿ ಜಾಗವನ್ನು ಪುಷ್ಪಾ ಅವರು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಕಾಂಪೌಂಡ್ ನಿರ್ಮಿಸಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಕುರಿತು ಜಿಪಿಎ ಹೋಲ್ಡರ್ ದೇವರಾಜು ಎಂಬುವವರು ನ್ಯಾಯಾಲಯದ ಮೊರೆ ಹೋಗಿದ್ದರು. ಸುದೀರ್ಘ ಕಾನೂನು ಹೋರಾಟದ ನಂತರ, ಸದರಿ ಜಾಗವು ಪುಷ್ಪಾ ಅವರಿಗೆ ಸೇರಿದ್ದಲ್ಲ ಎಂಬುದು ಸಾಬೀತಾದ ಹಿನ್ನೆಲೆಯಲ್ಲಿ ಕೋರ್ಟ್ ತೆರವಿಗೆ ಸೂಚಿಸಿತ್ತು.
ಕಾರ್ಯಾಚರಣೆಯ ವಿವರ:
ನ್ಯಾಯಾಲಯದ ಆದೇಶವನ್ನು ಜಾರಿಗೆ ತರಲು ಇಂದು ಅಧಿಕಾರಿಗಳ ಸಮ್ಮುಖದಲ್ಲಿ ಜೆಸಿಬಿ ಮೂಲಕ ಅಕ್ರಮವಾಗಿ ನಿರ್ಮಿಸಲಾಗಿದ್ದ ಕಾಂಪೌಂಡ್ ಗೋಡೆಯನ್ನು ನೆಲಸಮ ಮಾಡಲಾಯಿತು. ದೂರುದಾರ ದೇವರಾಜು ಅವರು ಸ್ವತಃ ಸ್ಥಳದಲ್ಲಿದ್ದು ತೆರವು ಕಾರ್ಯದ ಉಸ್ತುವಾರಿ ವಹಿಸಿದ್ದರು. ಈ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿತ್ತು.
‘ಮುಲ್ಲಾಗಳು ತೊಲಗಲಿ’; ಇರಾನ್ನಲ್ಲಿ ಭುಗಿಲೆದ್ದ ಜನಾಕ್ರೋಶ: 15ಕ್ಕೂ ಹೆಚ್ಚು ಮಂದಿ ಬಲಿ
ಪದೇ ಪದೇ ವಿವಾದದಲ್ಲಿ ಯಶ್ ತಾಯಿ:
ನಟ ಯಶ್ ಅವರ ತಾಯಿ ಪುಷ್ಪಾ ಅವರು ವಿವಾದಕ್ಕೆ ಸಿಲುಕುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಬೆಂಗಳೂರಿನಲ್ಲಿ ಬಾಡಿಗೆ ಮನೆ ಖಾಲಿ ಮಾಡುವ ವಿಚಾರ ಹಾಗೂ ಜಮೀನು ವ್ಯವಹಾರಗಳಿಗೆ ಸಂಬಂಧಿಸಿದಂತೆ ಹಲವು ಬಾರಿ ಸುದ್ದಿಯಾಗಿದ್ದರು. ಈಗ ಹಾಸನದ ಈ ಒತ್ತುವರಿ ಪ್ರಕರಣವು ಅವರ ಕುಟುಂಬಕ್ಕೆ ಮತ್ತಷ್ಟು ಮುಜುಗರ ತಂದಿಟ್ಟಿದೆ.



